ಕನ್ನಡ ಸುದ್ದಿ  /  Karnataka  /  Bangalore News Karnataka Backward Class Commission Submitted Karnataka Caste Census Report To Government Kub

Karnataka Caste Census: ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕದ ಜಾತಿ ಗಣತಿ ವರದಿ ಸಲ್ಲಿಕೆ, 2 ಮೂಟೆ ಸ್ವೀಕರಿಸಿದ ಸಿಎಂ

ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಕರ್ನಾಟಕ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಜಾತಿ ಗಣತಿ ವರದಿಯನ್ನು ಬರೋಬ್ಬರಿ ಎರಡು ಮೂಟೆಗಳಲ್ಲಿ ಸಲ್ಲಿಸಿದೆ.

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಾತಿ ಗಣತಿ ವರದಿಯನ್ನು ಜಯಪ್ರಕಾಶ್‌ ಹೆಗ್ಡೆ ಎರಡು ಮೂಟೆಗಳಲ್ಲಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಾತಿ ಗಣತಿ ವರದಿಯನ್ನು ಜಯಪ್ರಕಾಶ್‌ ಹೆಗ್ಡೆ ಎರಡು ಮೂಟೆಗಳಲ್ಲಿ ಸಲ್ಲಿಸಿದರು.

ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿರುವ ನಡುವೆಯೇ ಬಹು ಚರ್ಚಿತ ಕರ್ನಾಟಕ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ (ಜಾತಿ ಗಣತಿ) ಸಲ್ಲಿಕೆಯಾಗಿದೆ. ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಅವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಮೂಟೆಗಳಲ್ಲಿ ಸಲ್ಲಿಸಿದರು. ಕೆಲ ದಿನಗಳಿಂದಲೂ ಜಾತಿ ಗಣತಿ ವರದಿ ಸಲ್ಲಿಕೆಯಾಗಬಹುದು ಎನ್ನುವ ಚರ್ಚೆಗಳ ನಡುವೆ ಇದನ್ನು ಸಲ್ಲಿಸಲಾಗದ್ದು, ಚುನಾವಣೆಗೂ ಮುನ್ನ ಬಹಿರಂಗಗೊಂಡರೆ ಸಾಕಷ್ಟು ವಿವಾದ ಸೃಷ್ಟಿಸುವ ಸಾಧ್ಯತೆಗಳಿವೆ.

10 ವರ್ಷದ ಹಿಂದೆಯೇ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕರ್ನಾಟಕದಲ್ಲಿನ ಜಾತಿ ಗಣತಿಗೆ ಆದೇಶ ನೀಡಿದ್ದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಕಾಂತರಾಜು ಅವರನ್ನು ನೇಮಿಸಿ ಈ ಜವಾಬ್ದಾರಿಯನ್ನು ವಹಿಸಿದ್ದರು. ಆಗ ಆಯೋಗವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಾತಿವಾರು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಮಾಹಿತಿಯನ್ನು ಕಲೆ ಹಾಕಿತ್ತು. ಆನಂತರ ಕಾಂತರಾಜು ಅವರು ಜಾತಿ ಗಣತಿಯ ಮಧ್ಯಂತರ ವರದಿಯನ್ನು ನೀಡಿದ್ದರು. ಪೂರ್ಣ ವರದಿ ಸಲ್ಲಿಕೆ ಆಗಿರಲಿಲ್ಲ. ಇದಾದ ಬಳಿಕ ಬಿಜೆಪಿ ಸರ್ಕಾರ ಜಯಪ್ರಕಾಶ್‌ ಹೆಗ್ಡೆ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಆಗ ಅವಧಿ ವಿಸ್ತರಿಸುವಂತೆ ಹೆಗ್ಡೆ ಕೇಳಿಕೊಂಡಿದ್ದರು. ಇದಾದ ನಂತರ ವರದಿಯನ್ನು ಅಂತಿಮಗೊಳಿಸಿ ಈಗ ಸಲ್ಲಿಸಲಾಗಿದೆ.\

ವರದಿಯಲ್ಲಿ ಲಿಂಗಾಯಿತರು ಹಾಗೂ ಒಕ್ಕಲಿಗರ ಸಂಖ್ಯೆ ಕಡಿಮೆಯಾಗಿದ್ದು, ವರದಿ ಜಾರಿಯಾದರೆ ಈ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.

ಸಿಎಂ ಹೇಳಿದ್ದೇನು

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಹಾಗೂ ಇತರ ಸದಸ್ಯರು ಕರ್ನಾಟಕ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ (ಜಾತಿ ಗಣತಿ) ಯನ್ನು ಸಲ್ಲಿಸಿದ್ದಾರೆ. ವರದಿಯಲ್ಲಿ ಏನಿದೆ ಎನ್ನುವುದು ಗೊತ್ತಿಲ್ಲ. ಇದನ್ನು ಹಿಂದುಳಿದ ವರ್ಗಗಳ ಇಲಾಖೆಗೆ ನೀಡಲಾಗಿದೆ. ವರದಿಯನ್ನು ಸಚಿವ ಸಂಪುಟದ ಮುಂದೆ ಇಡಬೇಕಾಗುತ್ತದೆ. ಸಂಪುಟದಲ್ಲಿ ಒಪ್ಪಿಗೆ ಪಡೆದ ನಂತರ ಜಾರಿ ಕುರಿತು ತೀರ್ಮಾನಿಸಲಾಗುವುದು ಎಂದು ವರದಿ ಸ್ವೀಕರಿಸಿದ ಬಳಿಕ ಸುದ್ದಿಗಾರರಿಗೆ ಸಿಎಂ ಸಿದ್ದರಾಮಯ್ಯ ಹೇಳಿದರು.

ಇದೇ ವೇಳೆ ಮಾತನಾಡಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರು 2014ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಎಚ್‌.ಕಾಂತರಾಜು ಅವರು ಜಾತಿ ಗಣತಿ ಕೈಗೊಂಡರು. ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ಹೊರತುಪಡಿಸಿ ಇತರೆ ವರ್ಗಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಕಾಂತರಾಜು ಅವರು ಕಾರಣಾಂತರಗಳಿಂದ ವರದಿಯನ್ನು ಸಲ್ಲಿಸಲು ಆಗಲಿಲ್ಲ. ಮೂರು ವರ್ಷದಿಂದ ಇದನ್ನು ಅಂತಿಮಗೊಳಿಸಿ ಈಗ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.

ವರದಿಯಲ್ಲಿ ಏನಿದೆ ಎನ್ನುವುದನ್ನು ನಾವು ತಿಳಿಸಲು ಆಗುವುದಿಲ್ಲ. ವರದಿಯನ್ನು ಸಂಪುಟದ ಮುಂದೆ ಇಟ್ಟ ನಂತರ ಅಲ್ಲಿ ಅನುಮತಿ ಪಡೆದು ಬಳಿಕ ವರದಿ ಜಾರಿ ಕುರಿತು ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ನಾಳೆ ವಿಚಾರಣೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಜಾರಿಗೊಳಿಸದಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ಓದನಹಳ್ಳಿಯ ವಕೀಲ ಓ.ಕೆ.ರಘು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರಕ್ಕೆ ಮುಂದೂಡಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ವರದಿ ಮಂಡಿಸುತ್ತಿರುವುದರ ಹಿಂದೆ ರಾಜಕೀಯ ದುರುದ್ದೇಶಗಳು ಇರಬಹುದು.ಈ ವರದಿ ಬಹಿರಂಗವಾಗಲು ಅವಕಾಶ ನೀಡದಂತೆ ನಿರ್ಬಂಧಿಸಬೇಕು ಎಂದು ಅರ್ಜಿದಾರರು ತಿಳಿಸಿದ್ದಾರೆ.