Date Extended: ನೀವಿನ್ನೂ ನಿಗಮ ಮಂಡಳಿ ಸೌಲಭ್ಯ ಪಡೆದಿಲ್ಲವೇ; ಗಮನಿಸಿ, ಸೆಪ್ಟಂಬರ್ 15ರವರೆಗೆ ದಿನಾಂಕ ವಿಸ್ತರಣೆ
ಕರ್ನಾಟಕದ ಹತ್ತಕ್ಕೂ ಹೆಚ್ಚು ನಿಗಮಗಳಿಂದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಪ್ರಸಕ್ತ (2024-25) ಸಾಲಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಇದರಡಿಯಲ್ಲಿ ಬರುವ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ, ಗಳಲ್ಲಿ ಅನುಷ್ಟಾನಗೊಳಿಸುತ್ತಿರುವ ಎಲ್ಲಾ ಯೋಜನೆಗಳಿಗೆ ಸೇವಾ ಸಿಂಧು ತಂತ್ರಾಂಶದ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಆಯಾ ನಿಗಮಗಳ ಮೂಲಕ ಒಕ್ಕಲಿಗ, ಲಿಂಗಾಯಿತ, ವಿಶ್ವಕರ್ಮ, ಸವಿತಾ ಸಮಾಜ ಸಹಿತ ವಿವಿಧ ಸಮುದಾಯಗಳಿಗೆ ಆರ್ಥಿಕ ನೆರವು, ಸಹಾಯಧನ, ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೀಗೆ
ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಆಗಿರಬೇಕು. ನಿಗಮವು ಅನುಷ್ಠಾನಗೊಳಿಸುವ ಯೋಜನೆಗಳಲ್ಲಿ ಸರ್ಕಾರದ ಮತ್ತು ನಿರ್ದೇಶಕ ಮಂಡಳಿ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ.
ಒಂದು ಕುಟುಂಬದ ಒಬ್ಬರಿಗೆ ಮಾತ್ರ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿದ್ದು, ಸೌಲಭ್ಯ ಒದಗಿಸಲಾಗುವುದು. ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕಳೆದ ಮೂರು ವರ್ಷದಿಂದ ಸರ್ಕಾರದ ಯಾವುದೇ ನಿಗಮ/ಇಲಾಖೆಗಳಲ್ಲಿ ಯೋಜನೆಯ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ರಾಜ್ಯ ಸರ್ಕಾರದ/ ನಿಗಮದ ಯೋಜನೆಗಳ ವಿವರ
ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಯೋಜನೆಗಳು: ಪಂಚವೃತ್ತಿ ಅಭಿವೃದ್ದಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು-ಶೈಕ್ಷಣಿಕ ನೇರಸಾಲ ಯೋಜನೆ (ಹೊಸದು), ಅರಿವು-ಶೈಕ್ಷಣಿಕ ನೇರಸಾಲ ಯೋಜನೆ (ನವೀಕರಣ),
ಗಂಗಾ ಕಲ್ಯಾಣ ಯೋಜನೆ. ಈ ಯೋಜನೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು ಇತರೇ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹೊಂದಿರಬೇಕು.
ಸ್ವಯಂ ಉದ್ಯೋಗ ನೇರಸಾಲ(ಬ್ಯಾಂಕ್‍ಗಳ ಸಹಯೋಗದೊಂದಿಗೆ), ಸ್ವಾವಲಂಬಿ ಸಾರಥಿ ಯೋಜನೆ. ವಿದೇಶಿ ವ್ಯಾಸಂಗ ಯೋಜನೆ-ಈ ಯೋಜನೆಯಡಿ ವಾರ್ಷಿಕ ವರಮಾನವು ರೂ.8 ಲಕ್ಷಗಳ ಮಿತಿಯಲ್ಲಿರಬೇಕು. ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆ-ಈ ಯೋಜನೆಯಡಿ ಅರ್ಜಿಯನ್ನು www.kaushalkar.com ನಲ್ಲಿ ಸಲ್ಲಿಸಬೇಕು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಎಲ್ಲಾ ನಿಗಮಗಳ ಯೋಜನೆಯಡಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 15 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.