ಕರ್ನಾಟಕ ಬಜೆಟ್ 2024: ರಾಮನಿಗೆ ಸಿದ್ದರಾಮಯ್ಯ ಕೊಟ್ಟಿದ್ದೇನು, ಹುಲಿಗೆಮ್ಮ, ಘಾಟಿ ಸುಬ್ರಹ್ಮಣ್ಯ ಪ್ರಾಧಿಕಾರ, ಅಂಜನಾದ್ರಿಗೆ 100 ಕೋಟಿ ರೂ.
Temples ಕರ್ನಾಟಕದ ಹಲವಾರು ದೇಗುಲಗಳು, ಹೊರ ರಾಜ್ಯದಲ್ಲಿರುವ ಪ್ರಮುಖ ದೇಗುಲಗಳ ಅಭಿವೃದ್ದಿಗೂ ಸಿದ್ದರಾಮಯ್ಯ ಕರ್ನಾಟಕ ಬಜೆಟ್ 2024 ರಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ.
ಬೆಂಗಳೂರು: ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ಕರ್ನಾಟಕದಲ್ಲೂ ಪ್ರಮುಖ ರಾಮನ ದೇಗುಲಗಳ ಅಭಿವೃದ್ದಿಗೆ ಸಿದ್ದರಾಮಯ್ಯ ಅನುದಾನ ನೀಡುತ್ತಾರೆ ಎನ್ನುವ ಚರ್ಚೆಗಳಿದ್ದವು. ಆದರೆ ಪ್ರತ್ಯೇಕ ರಾಮನ ದೇಗುಲಗಳಿಗೆ ಯಾವುದೇ ಅನುದಾನವನ್ನು ಕರ್ನಾಟಕ ಬಜೆಟ್ 2024ನಲ್ಲಿ ಒದಗಿಸಿಲ್ಲ. ಬದಲಿಗೆ ಪುರಾತನ ಹಾಗೂ ಶಕ್ತಿ ದೇಗುಲಗಳೆಂದೇ ಕರೆಯಿಸಿಕೊಳ್ಳಿ ಸವದತ್ತಿ, ಅಂಜನಾದ್ರಿ ಪ್ರಗತಿಗೆ ಒತ್ತು,ಕೊಪ್ಪಳದ ಹುಲಿಗೆಮ್ಮೆ ಹಾಗೂ ಬೆಂಗಳೂರಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಗಳ ಪ್ರಗತಿಗೆ ಪ್ರತ್ಯೇಕ ಪ್ರಾಧಿಕಾರ ನೀಡಿದ್ಧಾರೆ. ಕಾಶಿ, ಮಂತ್ರಾಲಯ, ಗುಡ್ಡಾಪುರ, ತಿರುಪತಿಯಲ್ಲಿ ಭಕ್ತರ ಮೂಲಸೌಕರ್ಯಕ್ಕೆ ಅನುದಾನ ಒದಗಿಸಿದ್ದಾರೆ.
ಬಿಜೆಪಿಯ ಕಟು ಟೀಕೆಗಳ ನಡುವೆಯೂ ನಾನೇನೂ ಹಿಂದೂ ವಿರೋಧಿಯಿಲ್ಲ ಎನ್ನುವ ಸಾರುವ ಪ್ರಯತ್ನವನ್ನು ಸಿದ್ದರಾಮಯ್ಯ ತಮ್ಮ ಬಜೆಟ್ ಮೂಲಕ ಮಾಡಿರುವುದು ಕಾಣುತ್ತದೆ. ವಿಶೇಷವಾಗಿ ಬಿಜೆಪಿಯವರ ಭಾಷಣದಲ್ಲಿ ಹೆಚ್ಚು ಕಂಡು ಬಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಭಾರೀ ಅನುದಾನವೇ ದೊರೆತಿದೆ.
ಏನೇನಿದೆ ದೇಗುಲಗಳಿಗೆ ಬಜೆಟ್‌ನಲ್ಲಿ..
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರಗಳ ರಚನೆ
- ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ಕ್ಷೇತ್ರ ರೇಣುಕಾ ಯಲ್ಲಮ್ಮನ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಿ ಅಧಿಸೂಚನೆ.
- ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು 100 ಕೋಟಿ ರೂ.ಗಳ ಮೀಸಲು
- ಹೊರ ರಾಜ್ಯಗಳಲ್ಲಿನ ಪವಿತ್ರ ಪುಣ್ಯಕ್ಷೇತ್ರಗಳಾದ ತಿರುಮಲ, ಶ್ರೀಶೈಲ, ವಾರಣಾಸಿ ಮತ್ತು ವಿಜಯಪುರ ಸಮೀಪವಿರು ಮಹಾರಾಷ್ಟ್ರದ ಗುಡ್ಡಾಪುರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತಾಧಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ಸಂಕೀರ್ಣಗಳ ನಿರ್ಮಾಣ
- ತಿರುಮಲದಲ್ಲಿ 200 ಕೋಟಿ ರೂ.ಗಳ ಕಾಮಗಾರಿ ಅಂತಿಮ ಹಂತ, ಶ್ರೀಶೈಲದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಮತ್ತು ಗುಡ್ಡಾಪುರದಲ್ಲಿ 11 ಕೋಟಿ ರೂ. ವೆಚ್ಚದ ಕಾಮಗಾರಿಗಳ ಪ್ರಗತಿ, ಪ್ರಸಕ್ತ ಸಾಲಿನಲ್ಲಿ ವಾರಣಾಸಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಅವಕಾಶ.
- ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಬ್ರಿಡ್ಜ್-ಕಂ-ಬ್ಯಾರೇಜ್ ಅನ್ನು ಲೋಕೋಪಯೋಗಿ ಇಲಾಖೆ ವತಿಯಿಂದ 158 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಆದ್ಯತೆ
- ಯಾವುದೇ ಆದಾಯವಿಲ್ಲದ 34,165 ʻಸಿʼ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾಜದ ಗಣ್ಯರು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ವಿಷನ್ ಗ್ರೂಪ್ ರಚನೆ.
- ಇನಾಂ/ಇನಾಂಯೇತರ ಜಮೀನು ಕಳೆದುಕೊಂಡಂತಹ 29,523 ʻಸಿʼ ವರ್ಗದ ದೇವಾಲಯಗಳ ಅರ್ಚಕರುಗಳಿಗೆ ಇನ್ನು ಮುಂದೆ ತಸ್ತಿಕ್ ಮೊತ್ತವನ್ನು ಅರ್ಚಕರ ಬ್ಯಾಂಕ್ ಖಾತೆಗೆ ಜಮೆ ಮಾಡಲು ಕ್ರಮ.