Employment Bill: ಖಾಸಗಿ ಉದ್ಯೋಗಗಳಲ್ಲಿ ಶೇ.50-75ರಷ್ಟು ಕನ್ನಡಿಗರನ್ನು ಕಡ್ಡಾಯಗೊಳಿಸುವ ಮಸೂದೆಗೆ ಸಂಪುಟದ ಅನುಮೋದನೆ-bangalore news karnataka cabinet approves bill to mandate inclusion of 50 to 75 percentage kannadigas in private job kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Employment Bill: ಖಾಸಗಿ ಉದ್ಯೋಗಗಳಲ್ಲಿ ಶೇ.50-75ರಷ್ಟು ಕನ್ನಡಿಗರನ್ನು ಕಡ್ಡಾಯಗೊಳಿಸುವ ಮಸೂದೆಗೆ ಸಂಪುಟದ ಅನುಮೋದನೆ

Employment Bill: ಖಾಸಗಿ ಉದ್ಯೋಗಗಳಲ್ಲಿ ಶೇ.50-75ರಷ್ಟು ಕನ್ನಡಿಗರನ್ನು ಕಡ್ಡಾಯಗೊಳಿಸುವ ಮಸೂದೆಗೆ ಸಂಪುಟದ ಅನುಮೋದನೆ

Private Employment ಖಾಸಗಿ ಉದ್ಯೋಗಗಳಲ್ಲಿ ಶೇ.50-75ರಷ್ಟು ಕನ್ನಡಿಗರನ್ನು ಕಡ್ಡಾಯಗೊಳಿಸುವ ಮಸೂದೆ ಐಟಿ ವಲಯ ಸೇರಿದಂತೆ ಕರ್ನಾಟಕದ ಸಂಪೂರ್ಣ ಖಾಸಗಿ ವಲಯವನ್ನು ಒಳಗೊಂಡಿದೆ ಮತ್ತು ಇದನ್ನು ಪ್ರಸ್ತುತ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗುವುದು.

ಕರ್ನಾಟಕದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಕಡ್ಡಾಯಗೊಳಿಸುವ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕರ್ನಾಟಕದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಕಡ್ಡಾಯಗೊಳಿಸುವ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ. ಅದರಲ್ಲೂ ಉದ್ಯೋಗದಲ್ಲಿ ಮೊದಲ ಆದ್ಯತೆ ಸಿಗಬೇಕು ಎನ್ನುವುದು ಹಳೆಯ ಬೇಡಿಕೆ. ಈಗಾಗಲೇ ಸರೋಜಿನಿ ಮಹಿಷಿ ವರದಿಯೂ ಈ ನಿಟ್ಟಿನಲ್ಲಿ ಜಾರಿಯಲ್ಲಿದೆ. ಆದರೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಹೆಚ್ಚಿನ ಉದ್ಯೋಗ ಬಲ ಸಿಗಬೇಕು ಎನ್ನುವ ಕಾರಣದಿಂದ ಕರ್ನಾಟಕ ಸರ್ಕಾರವು ಹೊಸ ವಿಧೇಯಕ ಜಾರಿಗೆ ತಂದಿದೆ. ರಾಜ್ಯದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಕ್ರಮದಲ್ಲಿ, ಕೈಗಾರಿಕಾ ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ರಾಜ್ಯ ಉದ್ಯೋಗ ಮಸೂದೆಯ ಕರಡಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಖಾಸಗಿ ಉದ್ಯೋಗಗಳಲ್ಲಿ ಶೇ.50-75ರಷ್ಟು ಕನ್ನಡಿಗರನ್ನು ಕಡ್ಡಾಯಗೊಳಿಸುವ ಮಸೂದೆಗೆ ಸಂಪುಟದ ಅನುಮೋದನೆ ಕೊಟ್ಟಿದೆ.ಇದು ನಿರ್ವಹಣಾ ವಲಯದ ಉದ್ಯೋಗಗಳಲ್ಲಿ ಶೇಕಡಾ 50 ರಷ್ಟು ಮತ್ತು ನಿರ್ವಹಣೆಯೇತರ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುತ್ತದೆ. ಈ ಮಸೂದೆಯು ಐಟಿ ವಲಯ ಸೇರಿದಂತೆ ಸಂಪೂರ್ಣ ಖಾಸಗಿ ವಲಯಗಳನ್ನು ಒಳಗೊಂಡಿದೆ. ಇದನ್ನು ಪ್ರಸ್ತುತ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿರುವುದು ಸಂತಸ ತಂದಿದೆ. ಈ ಮಸೂದೆ ಜಾರಿಯಿಂದ ರಾಜ್ಯದ ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.50ರಿಂದ ಶೇ.75ರಷ್ಟು ಮೀಸಲಾತಿ ಸಿಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಭಾರೀ ದಂಡ

ಈ ಮಸೂದೆಯು ರಾಜ್ಯದಲ್ಲಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡದ ಕಂಪನಿಗಳಿಗೆ ದಂಡವನ್ನು ವಿಧಿಸಲು ಅವಕಾಶ ನೀಡಲಿದೆ. ವಿಧೇಯಕದಲ್ಲಿನ ನಿಬಂಧನೆಗಳನ್ನು ಅನುಸರಿಸದ ಕಂಪನಿಗಳಿಗೆ 10,000 ರಿಂದ 25,000 ರೂ.ಗಳವರೆಗೆ ದಂಡ ವಿಧಿಸಲಾಗುವುದು. ಆನಂತರವೂ ಇದೇ ದೂರು ಇದ್ದರೆ ಜಾರಿ ಆಗುವವರೆಗೆ ಪ್ರತಿದಿನ 100 ರೂ.ಗಳನ್ನು ಸಂಗ್ರಹಿಸಲಾಗುತ್ತದೆ ಎನ್ನುವುದನ್ನು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದಲ್ಲಿ ಸ್ಥಳೀಯ ಅಭ್ಯರ್ಥಿ ಯಾರು?

ಕರಡು ಮಸೂದೆಯ ಪ್ರಕಾರ, ಕನ್ನಡ ಮಾತನಾಡುವುದರಿಂದ ಒಬ್ಬನನ್ನು ಕನ್ನಡಿಗನನ್ನಾಗಿ ಮಾಡುವುದಿಲ್ಲ. ಅರ್ಹತೆ ಪಡೆಯಲು, ಒಬ್ಬ ವ್ಯಕ್ತಿಯು 15 ವರ್ಷಗಳ ಕಾಲ ರಾಜ್ಯದಲ್ಲಿ ವಾಸಿಸಿರಬೇಕು ಮತ್ತು ನೋಡಲ್ ಏಜೆನ್ಸಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಸಂಸ್ಥೆಗಳು ವಿನಾಯಿತಿಗಳಿಗಾಗಿ ಅರ್ಜಿ ಸಲ್ಲಿಸಬಹುದು, ಮತ್ತು ಸರ್ಕಾರವು ಕೆಲವು ಷರತ್ತುಗಳ ಅಡಿಯಲ್ಲಿ ಕೆಲವು ಸಡಿಲಿಕೆಗಳನ್ನು ಅನುಮತಿಸುತ್ತದೆ. ಆದರೆ, ಎಲ್ಲಾ ಖಾಸಗಿ ಸಂಸ್ಥೆಗಳು ಗ್ರೂಪ್ 'ಸಿ' ಮತ್ತು 'ಡಿ' ಬ್ಲೂ ಕಾಲರ್ ಉದ್ಯೋಗಗಳಿಗೆ ಕನ್ನಡಿಗರನ್ನು ಮಾತ್ರ ನೇಮಿಸಿಕೊಳ್ಳಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಕನ್ನಡ ಫಲಕ

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ಸೂಚನಾ ಫಲಕಗಳಲ್ಲಿ ಕನ್ನಡಿಗರ ಸಂಖ್ಯೆಯನ್ನು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸೂಚನೆ ನೀಡಿದ್ದಾರೆ. ಈ ಅವಶ್ಯಕತೆಯನ್ನು ಅನುಸರಿಸಲು ವಿಫಲವಾದರೆ ಈ ಕಂಪನಿಗಳಿಗೆ ನೀಡಲಾದ ಅನುಮತಿಗಳನ್ನು ಹಿಂತೆಗೆದುಕೊಳ್ಳಬಹುದು ಎಂದು ಅವರು ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಹೇಳಿದರು.