ಕನ್ನಡ ಸುದ್ದಿ  /  Karnataka  /  Bangalore News Karnataka Cm Siddaramaiah Dares Bjp To Prove Amount Received From Contractors Over Issuing Loc Kub

ಸಿಎಂ ಆದ 2 ಅವಧಿಯಲ್ಲೂ ಗುತ್ತಿಗೆದಾರರಿಂದ ಎಲ್‌ಒಸಿಗೆ ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯ ಸಮಾವೇಶ ನಡೆಯಿತು. ಗುತ್ತಿಗೆದಾರರ ಹಲವು ಬೇಡಿಕೆಗಳಿಗೆ ಸರ್ಕಾರ ಪೂರಕವಾಗಿಯೇ ಸ್ಪಂದಿಸಿತು.

ಬೆಂಗಳೂರಿನಲ್ಲಿ ನಡೆದ ಗುತ್ತಿಗೆದಾರರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತಿತರರು ಪಾಲ್ಗೊಂಡರು.
ಬೆಂಗಳೂರಿನಲ್ಲಿ ನಡೆದ ಗುತ್ತಿಗೆದಾರರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತಿತರರು ಪಾಲ್ಗೊಂಡರು.

ಬೆಂಗಳೂರು: 2013-2018 ರ ಅವಧಿಯಲ್ಲಾಗಲೀ, ಎರಡನೇ ಬಾರಿ ಮುಖ್ಯಮಂತ್ರಿಯ ಆಗಿರುವ ಅವಧಿಯಲ್ಲಾಗಲೀ ಎಲ್‌ಒಸಿ( ಲೆಟರ್‌ ಆಫ್‌ ಕ್ರೆಡಿಟ್‌) ಗೆ ಐದು ಪೈಸೆ ಲಂಚ ಯಾರಾದರೂ ನನಗೆ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಸಮ್ಮೇಳವನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರು ಈ ವಿಷಯವನ್ನು ಖುದ್ದು ಪ್ರಸ್ತಾಪಿಸಿದರು. ಬಿಜೆಪಿಯವರು ಟೀಕೆ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಭಾಷಣದಲ್ಲಿ ಲಂಚ ತೆಗೆದುಕೊಂಡಿಲ್ಲ ಎಂದು ಒತ್ತಿ ಹೇಳಿದರು.

2013-2018 ರವರೆಗಿನ ಮೊದಲ ಅವಧಿಯಲ್ಲಾಗಲೀ, ಈ ಒಂದು ವರ್ಷದಿಂದ ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವ ಅವಧಿಯಲ್ಲಿ ಗುತ್ತಿಗೆದಾರರದಿಂದ ಲಂಚ ಪಡೆದಿಲ್ಲ. ಅದರಲ್ಲೂ ಗುತ್ತಿಗೆದಾರರಿಗೆ ಸರ್ಕಾರದಿಂದ ನೀಡಲಾಗುವ ಎಲ್‌ಒಸಿ ನೀಡಲು ಐದು ಪೈಸೆ ಲಂಚ ಯಾರಾದರೂ ನನಗೆ ಕೊಟ್ಟಿದ್ದು ಸಾಬೀತು ಪಡಿಸಿದರೆ ಈಗಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿಯವರ ಟೀಕೆಗಳಿಗೆ ಸಿ.ಎಂ ಸವಾಲು ಹಾಕಿದರು.

ಹಿಂದಿನ ಸರ್ಕಾರದಲ್ಲಿ ಲಂಚದ ಪ್ರಮಾಣ ಶೇ.40ರಷ್ಟಿತ್ತು ಎನ್ನುವ ಗಂಭೀರ ಆರೋಪಗಳು ಬಂದಿದ್ದವು. ಆದರೆ ಅದಕ್ಕೆ ನಾವು ಆಸ್ಪದ ನೀಡದೇ ಗುತ್ತಿಗೆದಾರರ ಹಿಂದಿನ ಬಾಕಿಯನ್ನೆಲ್ಲಾ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೂ ಬಜೆಟ್ ನಲ್ಲೇ ಘೋಷಿಸಿದರು. ಆದರೆ ಇವತ್ತಿನವರೆಗೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಎಷ್ಟೇ ಅಸಹಕಾರ ಕೊಟ್ಟರೂ ಗುತ್ತಿಗೆದಾರರ ಅಷ್ಟೂ ಹಣವನ್ನು ನಾವೇ ಹಂತ ಹಂತವಾಗಿ ಪಾವತಿಸುತ್ತೇವೆ ಎಂದರು.

ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ 4 ಸಾವಿರ ಕೋಟಿ ರೂಪಾಯಿಯ ಕಾಮಗಾರಿಯನ್ನು ಪ್ಯಾಕೇಜ್ ಇಲ್ಲದೆ ನೀಡಲು ಲೋಕೋಪಯೋಗಿ ಸಚಿವರಿಗೆ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ಯಾಕೇಜ್ ಪದ್ದತಿ ರದ್ದುಗೊಳಿಸುವುದು, ಬಾಕಿ ಮೊತ್ತವನ್ನು ಪಾವತಿಸುವುದು ಸೇರಿದಂತೆ ಗುತ್ತಿಗೆದಾರರು ಮುಂದಿಟ್ಟ ಎಲ್ಲಾ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಕಾಲ ಮಿತಿಯೊಳಗೆ ಜಾರಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡುವ ಮೂಲಕ ಕಾಮಗಾರಿಗಳು ಜನರಿಗೆ ಹೆಚ್ಚು ದಿನ ಸಿಗುವಂತೆ ನೋಡಿಕೊಳ್ಳಬೇಕು. ತೆರಿಗೆದಾರರ ಹಣವನ್ನು ಸಮರ್ಪವಾಗಿ ಬಳಕೆ ಮಾಡಿದಾಗ ಮಾತ್ರ ವಿನಿಯೋಗ ಮಾಡಿದ್ದಕ್ಕೂ ಅರ್ಥ ಬರುತ್ತದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಬೋಸ್ ರಾಜು, ಜಮೀರ್ ಅಹಮದ್ ಖಾನ್, ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

IPL_Entry_Point