ಯುವನಿಧಿ ಯೋಜನೆಗೆ ಈವರೆಗೆ 33 ಸಾವಿರ ಮಂದಿ ನೋಂದಣಿ; ಫಲಾನುಭವಿಗಳ ಖಾತೆಗೆ ಹಣ ಯಾವಾಗ ಬರುತ್ತೆ
ಯುವನಿಧಿ ಯೋಜನೆಗೆ ಜನವರಿ 5ರ ಸಂಜೆ 6 ಗಂಟೆಯವರೆಗೆ 38,730 ಅರ್ಜಿಗಳು ಸಲ್ಲಿಕೆಯಾಗಿವೆ. ಇದನ್ನು 5 ಲಕ್ಷಕ್ಕೆ ಹೆಚ್ಚಿಸಬೇಕೆಂದು ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಬೆಂಗಳೂರು: ಕಳೆದ ಡಿಸೆಂಬರ್ ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ 5ನೇ ಗ್ಯಾರಂಟಿ ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ನೀಡಿದ್ದರು. 2024ರ ಜನವರಿ 5ರ ಸಂಜೆ 6 ಗಂಟೆಯವರೆಗೆ 38,730 ಅರ್ಜಿಗಳು ಸಲ್ಲಿಕೆಯಾಗಿವೆ.
ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವ ಜಿಲ್ಲೆಗಳ ಪೈಕಿ ಬೆಳಗಾವಿ ಅಗ್ರ ಸ್ಥಾನದಲ್ಲಿದೆ. ಈವರೆಗೆ ಬೆಳಗಾವಿಯಲ್ಲಿ 3,900 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನ 2ನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ 2,853 ಅರ್ಜಿಗಳು ಸಲ್ಲಿಕೆಯಾಗಿವೆ. ಯೋಜನೆಗೆ ಚಾಲನೆ ದೊರೆತ ಮೊದಲ ಹತ್ತು ದಿನಗಳಲ್ಲಿ 32,184 ಅರ್ಜಿಗಳು ಸಲ್ಲಿಕೆಯಾಗಿವೆ. ಇದು ಪ್ರಸಕ್ತ ಸಾಲಿನ ಪದವೀಧರರಲ್ಲಿ ಶೇ. 6 ರಷ್ಟು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.
ಕೌಶಲಾಭಿವೃದ್ಧಿ ಇಲಾಖೆ ಮೂಲಗಳ ಪ್ರಕಾರ 1,943 ಅರ್ಜಿ ಸಲ್ಲಿಕೆಯಾಗಿರುವ ಬಾಗಲಕೋಟೆ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ 1,741 ಮತ್ತು ರಾಯಚೂರು ಜಿಲ್ಲೆಯಲ್ಲಿ 1,714 ನೋಂದಣಿಯಾಗಿವೆ. ಆದರೆ ಉಡುಪಿ ಜಿಲ್ಲೆಯಲ್ಲಿ 236 ಮತ್ತು ಕೊಡಗಿನಲ್ಲಿ 120, ಚಾಮರಾಜನಗರದಲ್ಲಿ 237 ಮತ್ತು ರಾಮನಗರದಲ್ಲಿ 329 ಪದವಿ ಮತ್ತು ಡಿಪ್ಲೊಮಾ ಉತ್ತೀರ್ಣರಾದವರು ನೋಂದಣಿ ಮಾಡಿಕೊಂಡಿದ್ದಾರೆ. ಹಾಗಾದರೆ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಏಕೆ ನೋಂದಣಿ ಹೆಚ್ಚಾಗಿದೆ ಎಂದು ಕೆದಕಿದಾಗ ಇಲಾಖೆಯ ಮೂಲಗಳ ಪ್ರಕಾರ ಈ ಎರಡೂ ಜಿಲ್ಲೆಗಳಲ್ಲಿ ಕಾಲೇಜುಗಳು ಅಧಿಕ ಸಂಖ್ಯೆಯಲ್ಲಿರುವುದು ಕಾರಣ ಎಂದು ಗೊತ್ತಾಗಿದೆ. 2022-23ರಲ್ಲಿ 4.81 ಲಕ್ಷ ಪದವೀಧರರು ಹಾಗೂ 48,153 ಡಿಪ್ಲೊಮಾ ಪದವೀಧರರು ಸೇರಿ 5,29,153 ಯುವಕರು ಪದವಿ ಮತ್ತು ಡಿಪ್ಲೊಮಾ ಪಡೆದಿದ್ದಾರೆ.
ಯುವ ನಿಧಿಗೆ ಯಾರು ಅರ್ಹರು?
ಕಾಂಗ್ರೆಸ್ ಸರ್ಕಾರದ 5ನೇ ಮತ್ತು ಕೊನೆಯ ಗ್ಯಾರಂಟಿ ಯುವ ನಿಧಿಯಾಗಿದೆ. 2022-23 ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದವರು ಪದವಿ ಪಡೆದು ಆರು ತಿಂಗಳು ಕಳೆದರೂ ಉದ್ಯೋಗ ಲಭಿಸದಿದ್ದರೆ ಮಾಸಿಕ ಭತ್ಯೆ ಪಡೆಯಲು ಅರ್ಹರಾಗುತ್ತಾರೆ.
ಯುವ ನಿಧಿ ಯೋಜನೆಗೆ ಸರ್ಕಾರ ಎಷ್ಟು ಹಣ ಮೀಸಲಿಟ್ಟಿದೆ?
ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. 2023-24ರ ಶೈಕ್ಷಣಿಕ ವರ್ಷದಲ್ಲಿ ರೂ. 1,250 ಕೋಟಿ ಮತ್ತು ಅದರ ಮುಂದಿನ ವರ್ಷದಲ್ಲಿ2,500 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ.
ಯುವ ನಿಧಿಗೆ ಯಾವಾಗ, ಎಲ್ಲಿ ಚಾಲನೆ ನೀಡಲಾಗುತ್ತೆ?
ಜನವರಿ 12, ಸ್ವಾಮಿ ವಿವೇಕಾನಂದ ಜಯಂತಿಯಂದು ಶಿವಮೊಗ್ಗದಲ್ಲಿ ಈ ಯೋಜನೆಗೆ ಚಾಲನೆ ದೊರಕಲಿದೆ. ಪದವೀಧರರಿಗೆ ಮಾಸಿಕ 3000ರೂ. ಮತ್ತು ಡಿಪ್ಲೊಮಾ ಪಡೆದವರಿಗೆ ಮಾಸಿಕ 1,500 ಮಾಸಿಕ ಭತ್ಯೆ ಲಭ್ಯವಾಗಲಿದೆ. ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಲಭಿಸದಿದ್ದರೆ ಈ ಮಾಸಿಕ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಉದ್ಯೋಗ ಲಭಿಸದಿದ್ದರೆ 2 ವರ್ಷಗಳವರೆಗೆ ಈ ಭತ್ಯೆ ಪಡೆಯಬಹುದಾಗಿದೆ. ಒಂದು ವೇಳೆ ಮುಂಚಿತವಾಗಿಯೇ ಉದ್ಯೋಗ ಲಭಿಸಿದರೆ ಮಾಸಿಕ ಭತ್ಯೆ ನಿಂತು ಹೋಗುತ್ತದೆ.
ಯುವ ನಿಧಿಗೆ ಯಾರು ಅರ್ಹರಲ್ಲ?
ಎಲ್ಲ ಪದವೀಧರರಿಗೂ ಮಾಸಿಕ ಭತ್ಯೆ ಲಭ್ಯವಾಗುವುದಿಲ್ಲ. ಸ್ವಯಂ ಉದ್ಯೋಗಕ್ಕೆ ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಆರ್ಥಿಕ ಸಹಾಯ ಪಡೆದವರು, ತರಬೇತಿ ಭತ್ಯೆ ಪಡೆಯುತ್ತಿರುವವರು, ಸರ್ಕಾರಿ ಅಥವಾ ಖಾಸಗಿ ಉದ್ಯೋಗ ನಿರ್ವಹಿಸುತ್ತಿರುವವರು ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾದವರು ಯುವನಿಧಿಗೆ ಅರ್ಹರಾಗಿರುವುದಿಲ್ಲ.
ನೋಂದಣಿ ಚುರುಕುಗೊಳಿಸಲು ಸಚಿವರ ಸೂಚನೆ:
ಯುವನಿಧಿಗೆ ಅರ್ಹ ಫಲಾನುಭವಿಗಳನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಲು ಕ್ರಮ ತೆಗೆದುಕೊಳ್ಳಬೇಕು. ಈ ಸಂದರ್ಭದಲ್ಲಿ ನಕಲಿ ಪ್ರಮಾಣಪತ್ರ ಸಲ್ಲಿಕೆಯಾಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಕೌಶಲಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿದ ಅವರು ಈ ಸೂಚನೆ ನೀಡಿದ್ದಾರೆ. ವಿಶ್ವವಿದ್ಯಾನಿಲಯಗಳು, ಡಿಪ್ಲೊಮಾ, ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಲೋಪಗಳಾದರೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿ ಆಗಿಲ್ಲ. ಆದ್ದರಿಂದ ಅಧಿಕಾರಿಗಳು ನೋಂದಣಿಗೆ ಹೆಚ್ಚು ಒತ್ತು ನೀಡಬೇಕು. ಪದವಿ ಕಾಲೇಜುಗಳು, ಡಿಪ್ಲೊಮಾ, ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರ ಜೊತೆ ಕೂಡಲೇ ಸಭೆ ನಡೆಸಿ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಸಬೇಕು ಎಂದೂ ಸಚಿವರು ತಿಳಿಸಿದ್ದಾರೆ.
ಯೋಜನೆ ಕುರಿತು ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಮೂಲಕ ವ್ಯಾಪಕ ಪ್ರಚಾರ ನಡೆಸಬೇಕು. ಸಾಮಾಜಿಕ ಜಾಲತಾಣಗಳನ್ನು ಅಧಿಕಾರಿಗಳು ಹೆಚ್ಚು ಬಳಸಿಕೊಳ್ಳಬೇಕು. ಎಲ್ಲ ಕಾಲೇಜುಗಳ ಮುಂಭಾಗದಲ್ಲಿ ಕಟೌಟ್, ಹೋರ್ಡಿಂಗ್ ಹಾಕಬೇಕು. ಗ್ರಾಮಗಳಲ್ಲಿ ಫ್ಲೆಕ್ಸ್ ಅಳವಡಿಸಿ ಯೋಜನೆಯ ಲಾಭದ ಬಗ್ಗೆಯೂ ಮನವರಿಕೆ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.
