ಬರದ ನಡುವೆ ಗ್ಯಾರಂಟಿ ಜಾರಿ, ಪರಿಹಾರದ ಚೊಂಬು; ಸಿದ್ದರಾಮಯ್ಯ- ಡಿಕೆಶಿ ಜೋಡಿ ಸರ್ಕಾರಕ್ಕೆ ವರ್ಷ, ಹೇಗಿತ್ತು ಈ ಹಾದಿ, 10 ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಬರದ ನಡುವೆ ಗ್ಯಾರಂಟಿ ಜಾರಿ, ಪರಿಹಾರದ ಚೊಂಬು; ಸಿದ್ದರಾಮಯ್ಯ- ಡಿಕೆಶಿ ಜೋಡಿ ಸರ್ಕಾರಕ್ಕೆ ವರ್ಷ, ಹೇಗಿತ್ತು ಈ ಹಾದಿ, 10 ಅಂಶಗಳು

ಬರದ ನಡುವೆ ಗ್ಯಾರಂಟಿ ಜಾರಿ, ಪರಿಹಾರದ ಚೊಂಬು; ಸಿದ್ದರಾಮಯ್ಯ- ಡಿಕೆಶಿ ಜೋಡಿ ಸರ್ಕಾರಕ್ಕೆ ವರ್ಷ, ಹೇಗಿತ್ತು ಈ ಹಾದಿ, 10 ಅಂಶಗಳು

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಒಂದು ವರ್ಷ. ಸಿದ್ದರಾಮಯ್ಯ(Cm Siddaramaiah) ಹಾಗೂ ಡಿಕೆ ಶಿವಕುಮಾರ್‌( Dcm DK Shivakumar) ಜೋಡಿ ಸರ್ಕಾರದ ಸಾಧನೆ ಹೇಗಿತ್ತು. ಇಲ್ಲಿದೆ ವಿಶ್ಲೇಷಣೆ.

ಕರ್ನಾಟಕದಲ್ಲಿನ ಸರ್ಕಾರದ ಒಂದು ವರ್ಷದ ಜೋಡಿ ನಗು
ಕರ್ನಾಟಕದಲ್ಲಿನ ಸರ್ಕಾರದ ಒಂದು ವರ್ಷದ ಜೋಡಿ ನಗು

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವೇ ಕಳೆದುಕೊಂಡು ಹೋಯಿತು. ಚುನಾವಣೆಗೂ ಮುನ್ನ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಏಳು ತಿಂಗಳೊಳಗೆ ಸಂಪೂರ್ಣ ಜಾರಿಗೊಳಿಸಿದ ಸಮಾಧಾನದ ನಡುವೆಯೂ ಅಭಿವೃದ್ದಿಗೆ ಅನುದಾನದ ಕೊರತೆ, ಶಾಸಕರ ಅಸಮಾಧಾನಗಳ ನಡುವೆಯೂ ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿಕೆಶಿವಕುಮಾರ್‌ ಜೋಡಿ ವರ್ಷ ಪೂರೈಸಿತು. ಬರ, ಬರಪರಿಹಾರ, ತೆರಿಗೆ ಹಂಚಿಕೆಗಳ ಸಂಘರ್ಷಗಳೂ ಕೂಡ ಈ ಸರ್ಕಾರವನ್ನು ಸಾಕಷ್ಟು ಕಾಡಿದವು. ಕರ್ನಾಟಕದಲ್ಲಿ ನಡೆದ ಹುಬ್ಬಳ್ಳಿಯಲ್ಲಿ ಇಬ್ಬರು ಯುವತಿಯರ ಹತ್ಯೆ, ಹಾಸನದ ಲೈಂಗಿಕ ದೌರ್ಜನ್ಯದ ಪ್ರಕರಣಗಳೂ ಕೂಡ ಸದ್ದು ಮಾಡಿದವು. ಲೋಕಸಭೆ ಚುನಾವಣೆಯೂ ಬಂದು ಗ್ಯಾರಂಟಿ ಯೋಜನೆಗಳ ಭವಿಷ್ಯದ ಕುರಿತು ಮಾತಿನ ಮಂಟಪಕ್ಕೆ ಪ್ರಚಾರ ಸಭೆಗಳೇ ವೇದಿಕೆಗಳೂ ಆದವು. ಒಂದು ವರ್ಷದ ಈ ಹಾದಿ ಹೇಗಿತ್ತು ಎನ್ನುವ ಚರ್ಚೆಗಳಂತೂ ನಡೆದಿವೆ.

  1. ಸಿದ್ದು ಡಿಕೆಶಿ ಜೋಡೆತ್ತು

ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬರುತ್ತಲೇ ಯಾರು ಸಿಎಂ ಎನ್ನುವ ಚರ್ಚೆಗಳು ನಡೆದವು. ಸಿದ್ದರಾಮಯ್ಯ ಅವರಿಗೆ ಹುದ್ದೆಯೋ, ಡಿಕೆಶಿಗೆ ಚುಕ್ಕಾಣಿಯೋ ಎನ್ನುವ ಕುತೂಹಲಗಳಿದ್ದವು. ಕೊನೆಗೂ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಹುದ್ದೆಯನ್ನು ಹಿರಿತನದ ಆಧಾರದ ಮೇಲೆ ಪಡೆದರು. ಡಿಕೆಶಿ ಕೊನೆಗೂ ಡಿಸಿಎಂ ಗಾದಿಯನ್ನು ಕೆಪಿಸಿಸಿ ಆಧ್ಯಕ್ಷ ಸ್ಥಾನದೊಂದಿಗೆ ಉಳಿಸಿಕೊಂಡರು. ಜೋಡೆತ್ತುಗಳ ರೀತಿಯಲ್ಲಿಯೇ ಇಬ್ಬರ ಸರ್ಕಾರ ವರ್ಷ ಪೂರೈಸಿದೆ. ಆರ್ಥಿಕ ಶಿಸ್ತಿನ ಚರ್ಚೆಗಳ ನಡುವೆ ಸಿದ್ದರಾಮಯ್ಯ ವರ್ಷದ ಆಡಳಿತವನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ.

2. ಗ್ಯಾರಂಟಿ ಯೋಜನೆಗಳು

ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿತ್ತು. ಉಚಿತ ಬಸ್‌ ಪ್ರಯಾಣ, ವಿದ್ಯುತ್‌, ಮಹಿಳೆಯರಿಗೆ ಸಹಾಯಧನ, ಅನ್ನಭಾಗ್ಯ, ಯುವ ನಿರುದ್ಯೋಗಿಗಳಿಗೆ ನೆರವು ನೀಡುವ ಯೋಜನೆಗಳು ಕರ್ನಾಟಕದಲ್ಲಿ ಫಲ ನೀಡಿದ್ದವು. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತಿದ್ದಂತೆ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳು ಅನುಷ್ಠಾನಕ್ಕೆ ಬಂದವು. ಈವರೆಗೂ 36 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಾಗಿ ಖರ್ಚು ಮಾಡಲಾಗಿದೆ. ಕರ್ನಾಟಕ ಮಾದರಿಯಲ್ಲಿ ತೆಲಂಗಾಣದಲ್ಲೂ ಗ್ಯಾರಂಟಿ ಯೋಜನೆಗಳೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತು. ಗ್ಯಾರಂಟಿ ಯೋಜನೆಯ ಫಲವಂತೂ ಹೆಚ್ಚಿನ ಜನರಿಗೆ ದೊರೆತ ಸಮಾಧಾನ ನಡುವೆಯೂ ಇದರ ಭವಿಷ್ಯದ ಅನಿಶ್ಚಿತತೆಗಳು ಕೂಡ ಪ್ರತಿಪಕ್ಷಗಳ ಟೀಕೆ ನಡುವೆಯೂ ಮುಂದುವರಿದಿದೆ.

3. ತೆರಿಗೆ ಹಂಚಿಕೆ

ಕರ್ನಾಟಕ ಈ ಬಾರಿ ಎದುರಿಸಿದ್ದು ತೆರಿಗೆ ಸಂಕಷ್ಟ. ಕರ್ನಾಟಕದಲ್ಲಿ ಜಿಎಸ್‌ ಟಿ ಆದಾಯ ಉತ್ತಮವಾಗಿದ್ದರೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿದ ತೆರಿಗೆ ಪ್ರಮಾಣದ ಕುರಿತು ಸಂಘರ್ಷಗಳೂ ನಡೆದವು. ಕೇಂದ್ರದ ವಿರುದ್ದ ಕರ್ನಾಟಕ ನಿರಂತರವಾಗಿ ದಾಳಿ ಮಾಡಿತು. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಹೆಚ್ಚಿನ ತೆರಿಗೆ ಪಾಲು ಸಿಗಲಿಲ್ಲ. ಕೇಂದ್ರದಲ್ಲಿ ಸಚಿವರನ್ನು ಭೇಟಿ ಮಾಡಿದರೂ ಸ್ಪಂದನೆ ಸಿಗಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದರೂ ಹೆಚ್ಚಿನ ತೆರಿಗೆ ಪಾಲು ಸಿಗಲೇ ಇಲ್ಲ.

4. ಬರದ ವಾತಾವರಣ

ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದಾಗ ಬರ ಕಾಯಂ ಆನಂತರ ಸಮೃದ್ದತೆ ಎನ್ನುವ ಮಾತು ಮೊದಲಿನಿಂದಲೂ ಇದೆ. ಹಿಂದೆಯೂ ಈ ರೀತಿ ಆದ ಉದಾಹರಣೆ ಇದೆ. ಈ ಬಾರಿಯೂ ಸಿದ್ದರಾಮಯ್ಯ ಸರ್ಕಾರ ಬರುತ್ತಲೇ ಬರದ ಛಾಯೆ ಕೊಂಚ ಜೋರಾಗಿಯೇ ಕಾಣಿಸಿಕೊಂಡಿತು. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿ 35,162 ಕೋಟಿ ರೂಪಾಯಿಗಳಷ್ಟು ನಷ್ಟವಾಯಿತು. ಮಳೆ ಕೊರತೆಯಿಂದ ಜಲಾಶಯಗಳು ತುಂಬಲಿಲ್ಲ. ಬೆಂಗಳೂರು ನಗರಕ್ಕೂ ಎರಡು ತಿಂಗಳ ಕಾಲ ನೀರಿನ ಸಮಸ್ಯೆ ಕಾಡಿತು. ಹಲವು ಭಾಗದಲ್ಲಿ ಇಂತಹದೇ ವಾತಾವರಣವಿತ್ತು. ಪೂರ್ವ ಮುಂಗಾರಿನ ಪ್ರವೇಶದಿಂದ ಈಗ ಪರಿಸ್ಥಿತಿ ಸುಧಾರಿಸುತ್ತಿದೆ.

5. ಬರ ಪರಿಹಾರದ ಚೊಂಬು

ಕರ್ನಾಟಕದಲ್ಲಿ ಬರದ ವಾತಾವರಣವಿದ್ದರೂ ಕೇಂದ್ರ ಸರ್ಕಾರ ನೆರವು ನೀಡುವಂತೆ ಎಡತಾಕಿದರೂ ಅತ್ತ ಕಡೆಯಿಂದ ನಿರೀಕ್ಷಿತ ಸ್ಪಂದನೆ ಬರಲೇ ಇಲ್ಲ. ಪ್ರಧಾನಿಯನ್ನು ಭೇಟಿ ಮಾಡಿದರೂ ಪರಿಹಾರ ಬಾರದೇ ಕರ್ನಾಟಕ ಸರ್ಕಾರವೇ ಮೊದಲ ಕಂತಿನ ಪರಿಹಾರ ನೀಡಿತ್ತು. ಕೊನೆಗೆ ಕರ್ನಾಟಕ ಸುಪ್ರೀಂಕೋರ್ಟ್‌ ಮೊರೆ ಹೋಗಬೇಕಾಯಿತು. ನ್ಯಾಯಾಲಯದ ಸೂಚನೆಯಂತೆ ಅಲ್ಪ ಪರಿಹಾರ ಬಿಡುಗಡೆಯಾಯಿತು. ಎನ್ ಡಿ ಆರ್ ಎಫ್ ನಿಯಮಾವಳಿ ಪ್ರಕಾರ ರಾಜ್ಯಕ್ಕೆ ರೂ.18,171 ಕೋಟಿ ನೀಡಬೇಕಾಗಿದ್ದರೂ ಕೇಂದ್ರ ಸರ್ಕಾರ ಕೇವಲ ರೂ. 3498.98 ಕೋಟಿಗೆ ಅನುಮೋದನೆ ನೀಡಿ, ರೂ. 3,454 ಕೋಟಿ ಬಿಡುಗಡೆ ಮಾಡಿತು. ಪರಿಹಾರ, ತೆರಿಗೆ ವಿಚಾರದಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆಯನ್ನು ಕರ್ನಾಟಕ ನಡೆಸಿದ ನಂತರ ಕೇರಳ ಕೂಡ ಇದೇ ಹಾದಿ ಹಿಡಿಯಿತು. ಬರ ಪರಿಹಾರ ವಿಚಾರದಲ್ಲಿ ಚೊಂಬಿನ ಪ್ರಚಾರ ಭಾರೀ ಸದ್ದು ಮಾಡಿತು.

6. ಮೀಸಲಾತಿ

ಕರ್ನಾಟಕದಲ್ಲಿ ಮೀಸಲು ಹಾಗೂ ಜಾತಿ ಗಣತಿ ವಿಚಾರಗಳೂ ಭಾರೀ ಸದ್ದು ಮಾಡಿದವು. ಹಿಂದಿನ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಈಡೇರಿಸುವ ಉದ್ದೇಶದಿಂದ ಮುಸ್ಲಿಂಮರಿಗಿದ್ದ ಶೇ. 4 ಮೀಸಲಾತಿಯನ್ನು ತೆಗೆದು ಈ ಸಮುದಾಯಗಳಿಗೆ ಹಂಚಿಕೆ ಮಾಡಿದ್ದರು. ನಂತರ ಸರ್ಕಾರದ ಈ ನಿರ್ಧಾರದ ವಿರುದ್ಧ ಮುಸ್ಲಿಂ ಸಮುದಾಯಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು. ಮೀಸಲು ಮುಂದುವರೆಸುವ ತೀರ್ಮಾನವನ್ನು ಕಾಂಗ್ರೆಸ್‌ ಮಾಡಿತು. ಆದರೂ ಚುನಾವಣೆ ವೇಳೆ ಇದು ಸದ್ದು ಕೂಡ ಮಾಡಿತು. ಅದೇ ರೀತಿ ಜಾತಿಗಣತಿ ವಿಚಾರದಲ್ಲೂ ಪರ ವಿರೋಧದ ಹೇಳಿಕೆಗಳು ಬಂದವು. ಸಿದ್ದರಾಮಯ್ಯ ಅವರು ಮೊದಲ ಆಡಳಿತದಲ್ಲಿ ರಚಿಸಿದ್ದ ಕಾಂತರಾಜು ವರದಿ ನಂತರ, ಜಯಪ್ರಕಾಶ ಹೆಗ್ಡೆ ಆಯೋಗವು ಅಂತಿಮ ವರದಿಯನ್ನು ಸಲ್ಲಿಸಿತು.

7. ಲೋಕಸಭೆ ಚುನಾವಣೆ ಸವಾಲು

ಕಾಂಗ್ರೆಸ್‌ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಆಧಾರದ ಮೇಲೆಯೇ ಈ ಬಾರಿಯ ಲೋಕಸಭೆ ಚುನಾವಣೆಯನ್ನೂ ಎದುರಿಸಿತು. ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳು ಹೆಚ್ಚಿನ ಸ್ಥಾನ ಪಡೆಯಬೇಕು ಎನ್ನುವ ಜಿದ್ದಾಜಿದ್ದಿನೊಂದಿಗೆ ಸ್ಪರ್ಧೆಯೂ ನಡೆಯಿತು. ಕರ್ನಾಟಕದಲ್ಲಿ ಆರು ಮಂದಿ ಸಚಿವರ ಪತ್ನಿ, ಮಕ್ಕಳೇ ಅಭ್ಯರ್ಥಿಗಳಾಗಿದ್ದಾರೆ. ಹೆಚ್ಚು ಸ್ಥಾನ ಗೆಲ್ಲುವ ಉಮೇದನ್ನು ಕಾಂಗ್ರೆಸ್‌ ಇಟ್ಟುಕೊಂಡಿದೆ.

8. ಅಪರಾಧ ಪ್ರಕರಣಗಳು

ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ನಂತರ ಅಪರಾಧ ಪ್ರಕರಣಗಳೂ ಸದ್ದು ಮಾಡಿವೆ. ಕೊಲೆ. ಅತ್ಯಾಚಾರದಂತ ಪ್ರಕರಣಗಳು ಗಮನ ಸೆಳೆದಿವೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣ ಧರ್ಮದ ಬಣ್ಣ ಪಡೆಯಿತು. ಸಾಕಷ್ಟು ಸದ್ದೂ ಮಾಡಿತು. ಅದೇ ರೀತಿ ಅಂಜಲಿ ಅಂಬಿಗೇರ ಎಂಬಾಕೆಯ ಕೊಲೆ ಪ್ರಕರಣ ಕೂಡ ಚರ್ಚೆ ಹುಟ್ಟು ಹಾಕಿತು. ಇದರೊಟ್ಟಿಗೆ ಹಾಸನ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್‌ ಪ್ರಕರಣ ಜಾಗತಿಕ ಮಟ್ಟದಲ್ಲೂ ಸದ್ದು ಮಾಡಿತು. ಕಾಂಗ್ರೆಸ್‌ ಸರ್ಕಾರದ ಪ್ರಮುಖರೇ ಪೆನ್‌ಡ್ರೈವ್‌ ರೂಪಿಸಿ ಬಿಡುಗಡೆ ಮಾಡಿರುವ ಹಿಂದೆ ಇದ್ದಾರೆ ಎನ್ನುವ ಆರೋಪಗಳಿಗೂ ತಿರುಗಿ ಇನ್ನೂ ಮುಂದುವರಿದಿದೆ.

9. ಶೈಕ್ಷಣಿಕ ಆದೇಶದ ಗೊಂದಲಗಳು

ಕರ್ನಾಟಕದಲ್ಲಿ ಎಲ್ಲಾ ಇಲಾಖೆಗಳಲ್ಲಿ ಒಂದು ವರ್ಷದಲ್ಲಿ ಚರ್ಚೆಯಾಗಿದ್ದು ಶಿಕ್ಷಣ ಇಲಾಖೆ. ಹಿಂದಿನ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಜಾರಿಗೊಳಿಸಿದ ಬದಲಾವಣೆಗಳನ್ನು ಮರು ಸ್ಥಾಪಿಸಲಾಯಿತು. ಪಠ್ಯ ಬದಲಾವಣೆ, ಶೈಕ್ಷಣಿಕ ವರ್ಷಗಳ ಇಳಿಕೆ, ಪರೀಕ್ಷೆಗಳಲ್ಲಿನ ಗೊಂದಲಗಳು ಸಾಕಷ್ಟು ವಿವಾದವನ್ನಂತೂ ಸೃಷ್ಟಿಸಿದವು.

10.ಸಚಿವರ ಕಾರ್ಯವೈಖರಿ

ಇದರ ನಡುವೆ ಸರ್ಕಾರದ ಸಚಿವರ ಕಾರ್ಯವೈಖರಿ ಬಗ್ಗೆಯೇ ಚರ್ಚೆಗಳಾದವು. ಎಚ್‌.ಕೆ.ಪಾಟೀಲ್‌. ಎಂ.ಬಿ.ಪಾಟೀಲ್‌, ಕೃಷ್ಣಬೈರೇಗೌಡ, ದಿನೇಶ್‌ ಗುಂಡೂರಾವ್‌, ಈಶ್ವರ ಖಂಡ್ರೆ, ಚಲುವರಾಯಸ್ವಾಮಿ, ಪ್ರಿಯಾಂಕ್‌ ಖರ್ಗೆ ಅವರಂತಹ ಕೆಲವೇ ಸಚಿವರು ವರ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದನ್ನು ಬಿಟ್ಟರೆ ಇತರೆ ಸಚಿವರು ಜಿಲ್ಲೆಗೆ ಇಲ್ಲವೇ ಕ್ಷೇತ್ರಕ್ಕೆ ಸೀಮಿತವಾದ ಆರೋಪಗಳೂ ಕೇಳಿ ಬಂದವು. ಸಚಿವರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತವಾಯಿತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)

Whats_app_banner