Bangalore News: ಕ್ರಿಪ್ಟೋ ಕರೆನ್ಸಿ ಹಗರಣ, ಚಾರ್ಜ್ ಶೀಟ್ ಸಲ್ಲಿಸಲಿರುವ ವಿಶೇಷ ತನಿಖಾ ದಳ; ಪತ್ತೆಯಾಗದ ಪೊಲೀಸ್ ಆಧಿಕಾರಿಗಳು
ಕರ್ನಾಟಕದಲ್ಲಿ ನಡೆದಿರುವ ಕ್ರಿಪ್ಟೋ ಕರೆನ್ಸಿ ವಹಿವಾಟಿನ ವಿಚಾರದಲ್ಲಿ ಸಿಐಡಿ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಕೋಟ್ಯಂತರ ರೂ. ವಹಿವಾಟಿಗೆ ದಾರಿ ಮಾಡಿಕೊಟ್ಟು 2017 ರಲ್ಲಿ ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾದ ಕ್ರಿಪ್ಟೋ ಕರೆನ್ಸಿ ಹಗರಣ ಮತ್ತೆ ಸದ್ದು ಮಾಡತೊಡಗಿದೆ. ಕ್ರಿಪ್ಟೊ ಕರೆನ್ಸಿ ವ್ಯವಹಾರ ನಡೆಸುತ್ತಿದ್ದ ಯೂನೋಕಾಯಿನ್ ಟೆಕ್ನಾಲಜೀಸ್ 2017, ಜೂನ್ 13 ರಂದು 60.6 ಕ್ರಿಪ್ಟೋ ಕರೆನ್ಸಿಗಳನ್ನು ಹ್ಯಾಕರ್ ಗಳು ಕಳವು ಮಾಡಿದ್ದಾರೆ ಎಂದು ದೂರು ಸಲ್ಲಿಸಿದೆ. ಈ ಪ್ರಕರಣದಲ್ಲಿ 2020ರಲ್ಲಿ ಸಿಐಡಿ ಪೊಲೀಸರು ಹ್ಯಾಕರ್ ಶ್ರೀಕಿ ಆಲಿಯಾಸ್ ಶ್ರೀಕೃಷ್ಣ ಎಂಬಾತನನ್ನು ಬಂಧಿಸಿದ್ದರೂ ಕ್ರಿಪ್ಟೋ ಕರೆನ್ಸಿ ವಿನಿಮಯ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿಲ್ಲ ಎಂದು ಮಧ್ಯಂತರ ಚಾರ್ಜ್‌ಶೀಟ್ ಸಲ್ಲಿಸಿತ್ತು. ಈಗ ಪೂರ್ಣ ಜಾರ್ಜ್ ಶೀಟ್ ಸಲ್ಲಿಕೆಗೆ ಸಿಐಡಿ ಸಿದ್ದತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.
ಕ್ರಿಪ್ಟೋ ಕರೆನ್ಸಿ ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿ 29 ವರ್ಷದ ಶ್ರೀಕಿ ಎಂಬಾತನನ್ನು ಬೆಂಗಳೂರು ಅಪರಾಧ ವಿಭಾಗ 2020 ರಲ್ಲಿ ಬಂಧಿಸಿತ್ತು. ಆದರೆ ಈ ಪ್ರಕರಣವನ್ನು ಭೇದಿಸಲಾಗಿಲ್ಲ ಎಂಬ ಕಾರಣಕ್ಕೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.
2017, ಜುಲೈ 17 ರಂದು ಯೂನೋಕಾಯಿನ್ ಟೆಕ್ನಾಲಜೀಸ್ ಸಹ ಸಂಸ್ಥಾಪಕ ಬಿವಿ ಹರೀಶ್ ಎಂಬುವರು ತುಮಕೂರಿನಲ್ಲಿ 2017, ಜೂನ್ 23 ರಂದು 60.6 ಬಿಟ್ ಕಾಯಿನ್ ಗಳನ್ನು ಕಳವು ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದರು. ಪ್ರತಿ ಬಿಟ್ ಕಾಯಿನ್ ಗೆ 1.67 ಲಕ್ಷ ರೂ.ಗಳಂತೆ ಕಳವಾದ ಬಿಟ್ ಕಾಯಿನ್ ಗಳ ಮೌಲ್ಯ ಸುಮಾರು 1.14 ಕೋಟಿ ರೂಪಾಯಿ ಎಂದು ಅಂದಾಜಿಲಾಗಿತ್ತು. ಇವುಗಳನ್ನು ಎರಡು ಪ್ರತ್ಯೇಕ ಆನ್ ಲೈನ್ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶ್ರೀಕಿ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ಕುರಿತು ತನಿಖೆ ನಡೆಸಲು ಜೂನ್ 2023ರಲ್ಲಿ ವಿಶೇಷ ತನಿಖಾ ದಳವನ್ನು ಸಿಐಡಿ ರಚಿಸಿದೆ. ಆದರೆ ಈ ತಂಡವು ಯಾವುದೆ ಬಿಟ್ ಕಾಯಿನ್ ಗಳನ್ನು ವಶಪಡಿಸಿಕೊಂಡಿಲ್ಲ. ಬದಲಾಗಿ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ಕಾಣಿಸಲು ಇತರ ಮಾರ್ಗಗಳನ್ನು ಅನುಸರಿಸುತ್ತಿದೆ.ಎಂದು ತಿಳಿದು ಬಂದಿದೆ.
ಯೂನೋ ಕಾಯಿನ ಪ್ರಕರಣದಲ್ಲಿ ಶ್ರೀಕಿಯಿಂದ ಕಳವಾದ ಬಿಟ್ ಕಾಯಿನ್ ಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಯೊಬ್ಬರಿಗೆ 7 ಲಕ್ಷ ರೂಪಾಯಿ ನೀಡಿದ್ದಾರೆ ಎನ್ನುವುದನ್ನು ಸಿ ಐಡಿಯ ಎಸ್ ಐಟಿ ಪತ್ತೆ ಹಚ್ಚಿದೆ.
ಅಪರಾಧ ವಿಭಾಗದ ಅಧಿಕಾರಿ ಪ್ರಶಾಂತ್ ಬಾಬು ಎಂಬುವರಿಗೆ ಹಣ ನೀಡಲಾಗಿದೆ ಎಂದು ಜನವರಿ 24ರಂದು ನ್ಯಾಯಾಲಯಕ್ಕೆ ತಿಳಿಸಿದೆ. ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಡಿವೈಎಸ್ ಪಿ ಶ್ರೀಧರ್ ಪೂಜಾರಿ ತಲೆ ಮರೆಸಿಕೊಂಡಿದ್ದು ಇವರ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಸಿಐಡಿ ತಿಳಿಸಿದೆ.
2020-21ರ ಅವಧಿಯಲ್ಲಿ ಯಾವುದೇ ಬಿಟ್ ಕಾಯಿನ್ ಗಳನ್ನು ವಶಪಡಿಸಿಕೊಂಡಿಲ್ಲ ಎಂದು ತನಿಖಾ ವರದಿಗಳು ಹೇಳುತ್ತಿವೆ. ತುಮಕೂರಿನಲ್ಲಿ ದಾಖಲಾದ ಪ್ರಕರಣವನ್ನು ಬೇಧಿಸಲಾಗಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹರೀಶ್ ಜೊತೆಗೆ ಮತ್ತೊಬ್ಬ ಸಹ ಸಂಸ್ಥಾಪಕ ಸಾತ್ವಿಕ್ ಇಬ್ಬರಿಗೂ ಫೆಬ್ರವರಿಯಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಹಗರಣ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಹಗರಣದಲ್ಲಿ ಖ್ಯಾತ ರಾಜಕಾರಣಿಗಳ ಪುತ್ರರು, ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರ ಹೆಸರು ಕೇಳಿ ಬಂದಿತ್ತು. ಈಗಲೂ ತನಿಖೆ ಮುಂದುವರೆದಿದೆ.
ವರದಿ: ಎಚ್. ಮಾರುತಿ, ಬೆಂಗಳೂರು