Breaking News: 5,8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅನುಮತಿ; ಹೊಸ ಪರೀಕ್ಷಾ ವೇಳಾಪಟ್ಟಿ ಹೀಗಿದೆ
ಬೋರ್ಡ್ ಪರೀಕ್ಷೆ ವಿಚಾರದಲ್ಲಿ ಕರ್ನಾಟಕದಲ್ಲಿ ಇದ್ದ ಗೊಂದಲವನ್ನು ಹೈಕೋರ್ಟ್ ಬಗೆಹರಿಸಿದೆ. ಇದರಿಂದ ಬೋರ್ಡ್ ಪರೀಕ್ಷೆಯನ್ನು ನಡೆಸಲು ಶಿಕ್ಷಣ ಇಲಾಖೆ ವೇಳಾಪಟ್ಟಿ ಹೊರಡಿಸಿದೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5,8, ಮತ್ತು 9ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. ಬೋರ್ಡ್ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರಕಾರ ಈ ಹಿಂದೆ ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ರದ್ದುಪಡಿಸಿತ್ತು. ಈ ಕುರಿತು ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿ ಆದೇಶ ಹೊರಡಿಸಿದೆ. ರಾಜ್ಯ ಸರಕಾರ ಬೋರ್ಡ್ ಪರೀಕ್ಷೆಯನ್ನು ನಡೆಸಬಹುದಾಗಿದ್ದು, ಪರೀಕ್ಷೆ ಪ್ರಕ್ರಿಯೆ ಸ್ಥಗಿತಗೊಂಡ ಹಂತದಿಂದ ಮುಂದುವರೆಸುವಂತೆ ಹೈಕೋರ್ಟ್ ತಿಳಿಸಿತ್ತು. ಅದರಂತೆ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಇದೀಗ ಶಾಲಾ ಶಿಕ್ಷಣ ಇಲಾಖೆ ಮುಂದೂಡಲಾಗಿದ್ದ ಮೌಲ್ಯಾಂಕನ ಪರೀಕ್ಷೆಗಳಿಗೆ ದಿನಾಂಕವನ್ನು ನಿಗಧಿಪಡಿಸಿದೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಈ ಪರೀಕ್ಷೆಗಳನ್ನು ನಡೆಸಲಿದೆ.
ಮಾರ್ಚ್ 2024 ರ 5ನೇ ತರಗತಿ ಮೌಲ್ಯಾಂಕನ ವೇಳಾಪಟ್ಟಿ ಹೀಗಿದೆ.
ಮಾರ್ಚ್ 25, 2024 ಸೋಮವಾರ ಮಧ್ಯಾಹ್ನ 2.30ರಿಂದ 4.30ರವರೆಗೆ ಪರಿಸರ ಅಧ್ಯಯನ ಕುರಿತು ಮೌಲ್ಯಾಂಕನ ನಡೆಯಲಿದೆ.
ಮಾರ್ಚ್ 26, 2024 ಮಂಗಳವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಗಣಿತ ಕುರಿತು ಮೌಲ್ಯಾಂಕನ ನಡೆಯಲಿದೆ. ಈ ಎರಡೂ ಪರೀಕ್ಷೆಗಳಿಗೆ ತಲಾ 40 ಅಂಕಗಳನ್ನು ನಿಗದಿಪಡಿಸಲಾಗಿದೆ.
8ನೇ ತರಗತಿಯ ಮೌಲಾಂಕನ ಪರಿಷ್ಕೃತ ವೇಳಾಪಟ್ಟಿ ಹೀಗಿದೆ.
ಮಾರ್ಚ್ 25-03-2024 ಸೋಮವಾರ ಮಧ್ಯಾಹ್ನ 2.30 ರಿಂದ 5 ಗಂಟೆಯವರೆಗೆ ತೃತೀಯ ಭಾಷೆ ವಿಷಯದ ಮೌಲ್ಯಾಂಕನ ನಡೆಯಲಿದೆ.
ಮಾರ್ಚ್ 26, 2024 ಮಂಗಳವಾರ ಬೆಳಗ್ಗೆ 10 ಗಂಟೆಯಿಂದ 12.30ರವರೆಗೆ ಗಣಿತ ಕುರಿತು ಮೌಲ್ಯಾಂಕನ ನಡೆಯಲಿದೆ.
ಮಾರ್ಚ್ 27 2034 ಬುಧವಾರ ಮಧ್ಯಾಹ್ನ 2.30ರಿಂದ 5 ಗಂಟೆಯವರೆಗೆ ವಿಜ್ಞಾನ ವಿಷಯದ ಮೌಲ್ಯಾಂಕನ ನಡೆಯಲಿದೆ.
ಮಾರ್ಚ್ 28 ,2024 ಗುರುವಾರ ಬೆಳಗ್ಗೆ 10 ಗಂಟೆಯಿಂದ 12.30ರವರೆಗೆ ಸಮಾಜ ವಿಜ್ಞಾನ ಕುರಿತು ಮೌಲ್ಯಾಂಕನ ನಡೆಯಲಿದೆ. ಈ ಮೂರೂ ಮೌಲ್ಯಾಂಕನ ಪರೀಕ್ಷೆಗಳಿಗೆ ತಲಾ 50 ಅಂಕಗಳನ್ನು ನಿಗಧಿಪಡಿಸಲಾಗಿದೆ.
9ನೇ ತರಗತಿಯ ಮೌಲ್ಯಾಂಕನ ಪರಿಷ್ಕೃತ ವೇಳಾಪಟ್ಟಿ ಹೀಗಿದೆ.
ಮಾರ್ಚ್ 25, 2024 ಸೋಮವಾರ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ತೃತೀಯ ಭಾಷೆ ವಿಷಯದ ಮೌಲ್ಯಾಂಕನ ನಡೆಯಲಿದೆ.
ಮಾರ್ಚ್ 26 2024 ಮಂಗಳವಾರ ಬೆಳಗ್ಗೆ 10 ಗಂಟೆಯಿಂದ 1.15ರವರೆಗೆ ಗಣಿತ ಕುರಿತುಮೌಲ್ಯಾಂಕನ ನಡೆಯಲಿದೆ.
ಮಾರ್ಚ್ 27, 2034ಬುಧವಾರ ಮಧ್ಯಾಹ್ನ 2 ಗಂಟೆಯಿಂದ 5.15 ಗಂಟೆಯವರೆಗೆ ವಿಜ್ಞಾನ ವಿಷಯದ ಮೌಲ್ಯಾಂಕನ ನಡೆಯಲಿದೆ.
ಮಾರ್ಚ್ 28 2024 ಗುರುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15 ರವರೆಗೆ ಸಮಾಜ ವಿಜ್ಞಾನ ಕುರಿತು ಮೌಲ್ಯಾಂಕನ ನಡೆಯಲಿದೆ. ಈ ಮೂರೂ ಮೌಲ್ಯಾಂಕನ ಪರಿಕ್ಷೆಗಳಿಗೆ ತಲಾ 80 ಅಂಕಗಳನ್ನು ನಿಗದಿಪಡಿಸಲಾಗಿದೆ.
ದಿನಾಂಕ ಮಾರ್ಚ್ 25 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ಮಾರ್ಚ್ 25 ಸೋಮವಾರ ಮತ್ತು 27 ಬುಧವಾರ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇರುವುದರಿಂದ ಮಧ್ಯಾಹ್ನದ ಅವಧಿಯಲ್ಲಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇಲ್ಲದಿರುವ ಮಾರ್ಚ್ 26 ಮಂಗಳವಾರ ಮತ್ತು 28 ಗುರುವಾರದಂದು ಬೆಳಗಿನ ಅವಧಿಯಲ್ಲಿ 5, 8 ಮತ್ತು 9 ನೇ ತರಗತಿಯ ಮೌಲ್ಯಾಂಕನವನ್ನು ನಡೆಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
(ವರದಿ: ಎಚ್.ಮಾರುತಿ. ಬೆಂಗಳೂರು)
