Breaking News: ಕರ್ನಾಟಕದಲ್ಲಿ ವಿದ್ಯುತ್‌ ದರ ಇಳಿಕೆ, ಗೃಹೋಪಯೋಗಿ ದರವೂ ಕಡಿಮೆ-bangalore news karnataka electricity regulation authority orders to cut down power rate kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಕರ್ನಾಟಕದಲ್ಲಿ ವಿದ್ಯುತ್‌ ದರ ಇಳಿಕೆ, ಗೃಹೋಪಯೋಗಿ ದರವೂ ಕಡಿಮೆ

Breaking News: ಕರ್ನಾಟಕದಲ್ಲಿ ವಿದ್ಯುತ್‌ ದರ ಇಳಿಕೆ, ಗೃಹೋಪಯೋಗಿ ದರವೂ ಕಡಿಮೆ

ಕರ್ನಾಟಕದಲ್ಲಿ ಕಳೆದ ವಾರ ವಿದ್ಯುತ್‌ ದರ ಏರಿಕೆ ಅಹವಾಲು ಆಲಿಸಿದ್ದ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಹ( KERC) ವಿದ್ಯುತ್‌ ದರ ಇಳಿಕೆಗೆ ಆದೇಶ ಹೊರಡಿಸಿದೆ.(ವರದಿ: ಎಚ್.ಮಾರುತಿ, ಬೆಂಗಳೂರು)

ಕರ್ನಾಟಕದಲ್ಲಿ ವಿದ್ಯುತ್‌ ದರ ಇಳಿಕೆ ಆದೇಶ ಜಾರಿಯಾಗಿದೆ.
ಕರ್ನಾಟಕದಲ್ಲಿ ವಿದ್ಯುತ್‌ ದರ ಇಳಿಕೆ ಆದೇಶ ಜಾರಿಯಾಗಿದೆ.

ಬೆಂಗಳೂರು: ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ ಪ್ರಕಟಿಸಿದ 2024-25 ದರ ಪರಿಷ್ಕರಣೆ ಆದೇಶದಲ್ಲಿ ಗೃಹೊಪಯೋಗಿ, ಕೈಗಾರಿಕೆ, ವಾಣಿಜ್ಯ ಹಾಗೂ ಇತರೆ ಎಲ್ಲಾ ವರ್ಗದ ಗ್ರಾಹಕರಿಗೆ 40 ಪೈಸೆಯಿಂದ 2 ರೂಪಾಯಿ ವರಗೆ ಪ್ರತಿ ಯೂನಿಟ್‌ ದರವನ್ನು ಕಡಿತಗೊಳಿಸಿ ಪರಿಷ್ಕರಿಸಿದೆ. ಗೃಹ ಬಳಕೆ ವಿದ್ಯುತ್‌ ದರವನ್ನು ಯೂನಿಟ್‌ಗೆ 1.10 ರಷ್ಟನ್ನು ಇಳಿಕೆ ಮಾಡಲಾಗಿದೆ.

ಎಂಎಸ್‌ಎಂಇ ನೊಂದಾಯಿತ ಸಣ್ಣ ಕೈಗಾರಿಕೆಗಳ ಯೂನಿಟ್‌ ಗೆ 50 ಪೈಸೆ ರಿಯಾಯಿತಿ ಹಿಂಪಡೆದು ಎಲ್ಲಾ ಸಣ್ಣ ಕೈಗಾರಿಕೆಗಳಿಗೆ ಒಂದು ರೂಪಾಯಿ ಕಡಿತಗೊಳಿಸಿರುವುದು ಬೇಡಿಕೆಯ ಪ್ರಮುಖ ಅಂಶವಾಗಿತ್ತು. ಸಿಎಸ್‌ಸಿ ಸೆಂಟರ್‌, ಸಾಮಾನ್ಯ ಸೌಲಭ್ಯ ಕೇಂದ್ರಗಳು ಮತ್ತು ಡಾಟ ಸೆಂಟರ್‌ಗಳ ಕೈಗಾರಿಕಾ ದರ ಯಥಾರೀತಿ ಮುಂದುವರೆದಿದೆ

ಗ್ರಾಮಪಂಚಾಯ್ತಿ ವ್ಯಾಪ್ತಿಯ ಎಲ್.ಟಿ 5 ಸಂಪರ್ಕದ ಕೈಗಾರಿಕೆಗಳು, ವಾಣಿಜ್ಯ ಮತ್ತು ವಿದ್ಯಾಸಂಸ್ಥೆಗಳಿಗೆ 30 ಪೈಸೆ ರಿಯಾಯಿತಿ ಸೌಲಭ್ಯ ಮುಂದುವರೆದಿದೆ.

ಒಂದೇ ಅವರಣದಲ್ಲಿ ಎಲ್.ಟಿ 5 ಹಲವು ಸಂಪರ್ಕಗಳನ್ನು ಪಡೆಯಲು ಮುಕ್ತ ಅವಕಾಶ ಇದು ಸಣ್ಣ ಕೈಗಾರಿಕೆಗಳ ಸಮುಚ್ಚಯಗಳಿಗೆ ಬಹು ಸಹಕಾರಿಯಾಗಿದೆ ಎನ್ನುವುದು ಕೈಗಾರಿಕಾ ವಲಯದ ಅಭಿಪ್ರಾಯ.

ದರ ಇಳಿಕೆ ಲೆಕ್ಕಾಚಾರ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆ ಇ ಆರ್ ಸಿ) 2024-25ನೇ ಸಾಲಿನ ವಿದ್ಯುಚ್ಛಕ್ತಿ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಅವಧಿಗೂ ಮುನ್ನವೇ ದರ ಪರಿಷ್ಕರಣೆ ಮಾಡಿರುವ ಕೆಇ ಆರ್ ಸಿ ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆಗಳ ವಿದ್ಯುತ್ ದರವನ್ನು ಕಡಿಮೆ ಮಾಡಿದೆ. ಇದರಿಂದ ಎಲ್ಲ ವರ್ಗದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

100 ಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರಿಗೆ ಅನುಕೂಲವಾಗಲಿದೆ.

ಎಲ್. ಟಿ. ಗೃಹ ಬಳಕೆಯ ಗ್ರಾಹಕರಿಗೆ 100 ಯೂನಿಟ್ ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‌ಗೆ 110 ಪೈಸೆ ಇಳಿಕೆ ಮಾಡಲಾಗಿದೆ. ಎಲ್.ಟಿ. ವಾಣಿಜ್ಯ ಸ್ಥಾವರಗಳ ಇಂಧನಬಳಕೆ ಶುಲ್ಕವನ್ನು ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಸಲಾಗಿದೆ.

ಹೆಚ್.ಟಿ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ 125 ಪೈಸೆ ಕಡಿಮೆ ಮಾಡಲಾಗಿದೆ. ಹೆಚ್.ಟಿ ಕೈಗಾರಿಕೆಗಳ ಇಂಧನ ಬಳಕೆ ಶುಲ್ಕವನ್ನು ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಸಲಾಗಿದೆ.

ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ. 10 ಕಡಿಮೆ ಮಾಡಲಾಗಿದೆ. ಹೆಚ್.ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 40 ಪೈಸೆ; ಹೆಚ್.ಟಿ ಖಾಸಗಿ ಏತ ನೀರಾವರಿ: ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 200 ಪೈಸೆ ಇಳಿಕೆ; ಹೆಚ್.ಟಿ ಅಪಾರ್ಟ್‌ಮೆಂಟ್ ಗಳ ಇಂಧನ ಬಳಕೆ ಶುಲ್ಕ ಪ್ರತಿ ಕೆವಿಎಗೆ ಡಿಮಾಂಡ್ ಶುಲ್ಕವನ್ನು ರೂ 10ರಷ್ಟು ಇಳಿಕೆ ಮಾಡಲಾಗಿದೆ.

ಎಲ್.ಟಿ. ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ; ಎಲ್.ಟಿ. ಕೈಗಾರಿಕಾ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 100 ಪೈಸೆ ಇಳಿಕೆ ಮತ್ತು ಎಲ್.ಟಿ. ವಾಣಿಜ್ಯ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ಇವಿ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಪ್ರತಿ ಯೂನಿಟ್‌ಗೆ ರೂ.4.50 ರಂತೆ ಇಳಿಕೆಯಾಗಿದ್ದ ವಿದ್ಯುತ್ ಬಳಕೆ ಶುಲ್ಕವನ್ನು ಮುಂದುವರೆಸಲಾಗಿದೆ.

ಈ ಹಿಂದಿನ ಆದೇಶದಲ್ಲಿ ನಗರ ಮತ್ತು ಗ್ರಾಮೀಣ ಪವರ್ಗಗಳನ್ನು ಒಂದೇ ಪ್ರವರ್ಗಕ್ಕೆ ವಿಲೀನಗೊಳಿಸಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್.ಟಿ. ವಾಣಿಜ್ಯ ಎಲ್.ಟಿ. ಕೈಗಾರಿಕೆ, ಎಲ್.ಟಿ. ಖಾಸಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಪ್ರತಿ ಯೂನಿಟ್‌ಗೆ 30 ಪೈಸೆ ರಿಯಾಯಿತಿಯನ್ನು ಮುಂದುವರೆಸಲಾಗಿದೆ.

2024-25 ನೇ ಸಾಲಿಗೆ ಎಲ್ಲಾ ಎಸ್ಕಾಂಗಳು ವಾರ್ಷಿಕ 69,474.75 ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದ್ದವು. ಕೆಇ ಆರ್ ಸಿ 64,944,54 ಕೋಟಿ ರೂಪಾಯಿಗಳಿಗೆ ಅನುಮೋದನೆ ನೀಡಿದೆ.

ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿದ್ದ ಎಸ್ಕಾಂಗಳು

ಇದೇ ವರ್ಷದ ಜನವರಿ 4 ರಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ), ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ), ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕ್-ಮೈಸೂರು) ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿದ್ದವು.

ಕಲ್ಲಿದ್ದಲು ಖರೀದಿ, ವಿದ್ಯುತ್ ಖರೀದಿ ಹಾಗೂ ವಿದ್ಯುತ್ ಸರಬರಾಜು ವೆಚ್ಚ ಸೇರಿದಂತೆ ಹಲವು ಕಾರಣಗಳಿಂದ ನಿರ್ವಹಣೆಗೆ ಹೊರೆಯಾಗುತ್ತಿದೆ. ಹೀಗಾಗಿ ನಷ್ಟ ಸರಿದೂಗಿಸಲು 2024-25ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಕೆಇಆರ್‌ಸಿಗೆ ಮನವಿ ಮಾಡಿಕೊಂಡಿದ್ದವು.

2023ರಲ್ಲಿ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಈ ವರ್ಷವೂ ಪ್ರತಿ ಯೂನಿಟ್‌ಗೆ 50-60 ಪೈಸೆ ಏರಿಕೆಗೆ ಎಸ್ಕಾಂಗಳು ಕೆಇಆರ್‌ಸಿ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದವು.

ಯಾವ ದರ ಎಷ್ಟು ಇಳಿಕೆ

⦁ ಎಲ್.ಟಿ ಗೃಹೊಪಯೋಗಿ ವಿದ್ಯುತ್‌ ದರ ಪ್ರತಿ ಯೂನಿಟ್ ಗೆ ರೂಪಾಯಿ 1.10 ಇಳಿಕೆ

⦁ ಹೆಚ್.ಟಿ ವಾಣಿಜ್ಯ ವಿದ್ಯುತ್‌ ದರ ಪ್ರತಿ ಯೂನಿಟ್ ಗೆ ರೂಪಾಯಿ 1.25 ಇಳಿಕೆ

⦁ ಹೆಚ್.ಟಿ ಕೈಗಾರಿಕೆ ವಿದ್ಯುತ್‌ ದರ ಪ್ರತಿ ಯೂನಿಟ್ ಗೆ ರೂಪಾಯಿ 0.50 ಇಳಿಕೆ

⦁ ಹೆಚ್.ಟಿ ಆಸ್ಪತ್ರೆ, ವಿದ್ಯಾ ಸಂಸ್ಥೆಗಳ ವಿದ್ಯುತ್‌ ದರ ಪ್ರತಿ ಯೂನಿಟ್ ಗೆ ರೂಪಾಯಿ 0.40 ಇಳಿಕೆ

⦁ ಹೆಚ್.ಟಿ ಖಾಸಗಿ ಏತ ನೀರಾವರಿ ವಿದ್ಯುತ್‌ ದರ ಪ್ರತಿ ಯೂನಿಟ್ ಗೆ ರೂಪಾಯಿ 2 ಇಳಿಕೆ

⦁ ಹೆಚ್.ಟಿ ವಸತಿ ಅಪಾರ್ಟಮೆಂಟ್‌ ನಿಗದಿತ ವಿದ್ಯುತ್‌ ಶುಲ್ಕ ಪ್ರತಿ ಕೆ.ವಿ.ಎ ಗೆ ರೂಪಾಯಿ 10 ಇಳಿಕೆ

⦁ ಎಲ್.ಟಿ ಆಸ್ಪತ್ರೆ, ವಿದ್ಯಾ ಸಂಸ್ಥೆಗಳ ವಿದ್ಯುತ್‌ ದರ ಪ್ರತಿ ಯೂನಿಟ್ ಗೆ ರೂಪಾಯಿ 0.50 ಇಳಿಕೆ

⦁ ಎಲ್.ಟಿ ಕೈಗಾರಿಕೆ ವಿದ್ಯುತ್‌ ದರ ಪ್ರತಿ ಯೂನಿಟ್ ಗೆ ರೂಪಾಯಿ 1 ಇಳಿಕೆ

⦁ ಎಲ್.ಟಿ ವಾಣಿಜ್ಯ ವಿದ್ಯುತ್‌ ದರ ಪ್ರತಿ ಯೂನಿಟ್ ಗೆ ರೂಪಾಯಿ 1.25 ಇಳಿಕೆ

(ವರದಿ: ಎಚ್.ಮಾರುತಿ, ಬೆಂಗಳೂರು)