ಕನ್ನಡ ಸುದ್ದಿ  /  ಕರ್ನಾಟಕ  /  Waste Awareness: ಕರ್ನಾಟಕದಲ್ಲಿ ಇನ್ನು ಮುಂದೆ ತ್ಯಾಜ್ಯ ನಿಯಂತ್ರಣ, ನಿರ್ವಹಣೆಗೆ ಶುರುವಾಗಲಿದೆ ಜಾಗೃತಿ, ಯಾವ ತಿಂಗಳಲ್ಲಿ ಏನೇನು ಚಟುವಟಿಕೆ

Waste Awareness: ಕರ್ನಾಟಕದಲ್ಲಿ ಇನ್ನು ಮುಂದೆ ತ್ಯಾಜ್ಯ ನಿಯಂತ್ರಣ, ನಿರ್ವಹಣೆಗೆ ಶುರುವಾಗಲಿದೆ ಜಾಗೃತಿ, ಯಾವ ತಿಂಗಳಲ್ಲಿ ಏನೇನು ಚಟುವಟಿಕೆ

Waste Management ತ್ಯಾಜ್ಯ ನಿರ್ವಹಣೆ( Karnataka Waste Management) ಕುರಿತು ಜಾಗೃತಿ ಮೂಡಿಸಲು ಪರಿಸರ ಇಲಾಖೆಯು ತಿಂಗಳ ಆಧರಿತ ಕಾರ್ಯಕ್ರಮ ರೂಪಿಸಿದೆ.

ತ್ಯಾಜ್ಯ ನಿರ್ವಹಣೆಗೆ ಮಾಸಾಚರಣೆ ಆಯೋಜಿಸಲು ಸಚಿವ ಈಶ್ವರಖಂಡ್ರೆ ಸೂಚಿಸಿದ್ದಾರೆ.
ತ್ಯಾಜ್ಯ ನಿರ್ವಹಣೆಗೆ ಮಾಸಾಚರಣೆ ಆಯೋಜಿಸಲು ಸಚಿವ ಈಶ್ವರಖಂಡ್ರೆ ಸೂಚಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದಲ್ಲಿ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಿನ ಕೆಲಸವೇ. ಈಗಂತೂ ನಗರೀಕರಣದ ಪ್ರಭಾವದಿಂದಾಗಿ ತ್ಯಾಜ್ಯ ಎನ್ನುವುದು ಹೆಮ್ಮರವಾಗಿ ಬೆಳೆಯುತ್ತಿದೆ. ಅದರಲ್ಲೂ ಪ್ಲಾಸ್ಟಿಕ್‌ ಸಹಿತ ಹಲವು ವಸ್ತುಗಳ ನಿರ್ವಹಣೆಗೆ ದೊಡ್ಡ ಯೋಜನೆಗಳು ಬೇಕೇಬೇಕು. ಈಗಾಗಲೇ ಕರ್ನಾಟಕದಲ್ಲಿ ಪರಿಸರ ಅದಾಲತ್‌ ಮೂಲಕ ಕಸ ನಿರ್ವಹಣೆ ಹಾಗೂ ಸಂಸ್ಕರಣೆಗೆ ಒತ್ತು ನೀಡಲಾಗಿದೆ. ಆದರೂ ಕಸ ನಿರ್ವಹಣೆಗೆ ಕಾಲಕಾಲಕ್ಕೆ ಜನರಿಗೆ ಜಾಗೃತಿ, ಅಧಿಕಾರಿಗಳಿಗೆ ಪುನಶ್ಚೇತನದಂತಹ ಚಟುವಟಿಕೆ ಆಗಲೇಬೇಕು. ಇದೇ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಗಳು ಪ್ಲಾಸ್ಟಿಕ್ ತ್ಯಾಜ್ಯ, ಇ-ತ್ಯಾಜ್ಯ, ಜೈವಿಕ ವೈದ್ಯಕೀಯ ತ್ಯಾಜ್ಯ, ಘನ ತ್ಯಾಜ್ಯಗಳ ನಿಯಂತ್ರಣ, ನಿರ್ವಹಣೆಗೆ ತಿಂಗಳಿಗೆ ಒಂದರಂತೆ 12 ಜಾಗೃತಿ ಮಾಸ ಆಚರಣೆ ನಡೆಸಲು ಯೋಜನೆ ರೂಪಿಸಿದೆ, ಇದಕ್ಕಾಗಿ ಇಂತಹ ತಿಂಗಳಿನಂದೂ ಈ ಜಾಗೃತಿ ಎನ್ನುವ ಪಟ್ಟಿಯನ್ನು ಸಿದ್ದಪಡಿಸಿದೆ. ಈ ತಿಂಗಳಿನಿಂದಲೇ ಇದು ಕರ್ನಾಟಕದಲ್ಲಿ ಆರಂಭವಾಗುತ್ತಿದೆ.

ಜನವರಿಯಲ್ಲಿ ಜೈವಿಕ, ವೈದ್ಯಕೀಯ ತ್ಯಾಜ್ಯ ನಿಯಂತ್ರಣ ಮಾಸ, ಫೆಬ್ರವರಿಯಲ್ಲಿ ಇ-ತ್ಯಾಜ್ಯ ನಿಯಂತ್ರಣ ಮಾಸ, ಮಾರ್ಚ್ ನಲ್ಲಿ ಶುದ್ಧ ಜಲ ಸುರಕ್ಷತೆ ಜಾಗೃತಿ ಮಾಸ, ಏಪ್ರಿಲ್ ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಮಾಸ, ಮೇ ತಿಂಗಳಲ್ಲಿ ಜೀವ-ವೈವಿಧ್ಯತೆ ಮತ್ತು ಪರಿಸರ ಜಾಗೃತಿ ಮಾಸ, ಜೂನ್ ನಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರಕೃತಿ ಪರಿಸರ ಸಂರಕ್ಷಣೆ ಮಾಸ, ಜುಲೈನಲ್ಲಿ ಘನ ತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯ ನಿರ್ವಹಣೆ ಮಾಸಾಚರಣೆ, ಆಗಸ್ಟ್ ನಲ್ಲಿ ವಾಯು ಮಾಲಿನ್ಯ ತಡೆ ಕುರಿತ ಜಾಗೃತಿ ಮತ್ತು ನಿಯಂತ್ರಣ ಮಾಸಾಚರಣೆ, ಸೆಪ್ಟೆಂಬರ್ ನಲ್ಲಿ ಪರಿಸರ ಸ್ನೇಹಿ ಗಣಪತಿ ಪೂಜೆಗೆ ಉತ್ತೇಜನ ಮತ್ತು ಪಿಓಪಿ ಮೂರ್ತಿಗಳ ನಿಯಂತ್ರಣ ಮಾಸಾಚರಣೆ, ಅಕ್ಟೋಬರ್ ನಲ್ಲಿ ಜಲ ಮಾಲಿನ್ಯ ತಡೆ ಮಾಸಾಚರಣೆ, ನವೆಂಬರ್ ನಲ್ಲಿ ಪರಿಸರ ಸ್ನೇಹಿ ದೀಪಾವಳಿ ಮತ್ತು ಭಾರಲೋಹ ಹಾಗೂ ಅಪಾಯಕಾರಿ ರಾಸಾಯನಿಕ ಪಟಾಕಿ ನಿಗ್ರಹ ಮಾಸಾಚರಣೆ ಹಾಗೂ ಡಿಸೆಂಬರ್ ನಲ್ಲಿ ಗೃಹಬಳಕೆಯ ಕಲುಷಿತ ನೀರು ನಿಯಂತ್ರಣ, ನಿರ್ವಹಣೆ ಮಾಸಾಚರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಆಯಾ ತಿಂಗಳಲ್ಲಿ ನಡೆಯುವ ಕೆಲವು ಉತ್ಸವ, ಕಾರ್ಯಕ್ರಮ, ಹಬ್ಬ ಆಧರಿಸಿ ಜಾಗೃತಿ ಮೂಡಿಸುವನ್ನು ಜೋಡಿಸಲಾಗಿದೆ. ಅರಣ್ಯ, ಪರಿಸರ ಇಲಾಖೆಗಳ ಜತೆಗೆ ಇತರೆ ಇಲಾಖೆಗಳ ಸಹಯೋಗ ಪಡೆಯಬೇಕು. ಆಯಾ ಭಾಗದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಬೇಕು. ಇದರಿಂದ ಆಗಿರುವ ಬದಲಾವಣೆ, ಆಗಬೇಕಾಗಿರುವ ಚಟುವಟಿಕೆಗಳು., ಮುಂದಿನ ಗುರಿ ಹೇಗಿರಬೇಕು ಎನ್ನುವುದೂ ಸೇರಿದಂತೆ ಸಮಗ್ರ ವರದಿಯನ್ನು ಇಲಾಖೆ ಪಡೆದು ಮುಂದಿನ ವರ್ಷ ಮತ್ತಷ್ಟು ಪರಿಣಾಮಕಾರಿಯಾಗಿ ಚಟುವಟಿಕೆ ರೂಪಿಸಲಿದೆ ಎನ್ನುವುದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಗಳ ಸಚಿವ ಈಶ್ವರ ಬಿ ಖಂಡ್ರೆ ಅವರು ನೀಡುವ ವಿವರಣೆ.

ಈ 12 ತಿಂಗಳಲ್ಲಿ ಆಯಾ ತಿಂಗಳ ಘೋಷಿತ ತ್ಯಾಜ್ಯಕ್ಕೆ ಹೆಚ್ಚಿನ ಒತ್ತು ನೀಡಿ, ಅವುಗಳ ವೈಜ್ಞಾನಿಕ ನಿರ್ವಹಣೆ, ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಮತ್ತು ತಪಾಸಣೆ ನಡೆಸಿ, ದಂಡವನ್ನೂ ವಿಧಿಸಲಾಗುವುದು ಎನ್ನುತ್ತಾರೆ ಸಚಿವ ಖಂಡ್ರೆ.

12ನೇ ಶತಮಾನದಲ್ಲಿಯೇ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು ಒಲೆ ಹೊತ್ತಿ ಉರಿದರೆ ನಿಲಬಹುದಲ್ಲದೆ, ಧರೆ ಹೊತ್ತಿ ಉರಿದರೆ ನಿಲಬಹುದೇ ಎಂದು ಎಚ್ಚರಿಕೆ ನೀಡಿದ್ದರು. ಇಂದು ಅಕ್ಷರಶಃ ಧರೆ ಹೊತ್ತಿ ಉರಿಯುತ್ತಿದೆ. ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ, ಇತ್ತೀಚೆಗೆ ಅತಿಯಾದ ಬಿಸಿಲ ತಾಪದಿಂದಾಗಿ ಭಾರತದಲ್ಲೂ ಸಾವಿರಾರು ಜನರು ಸೌರಾಘಾತಕ್ಕೆ ಈಡಾದರು, ನೂರಾರು ಜನರು ಮೃತಪಟ್ಟರು, ಹಜ್ ಯಾತ್ರೆಗೆ ಹೋದ ಸಾವಿರಕ್ಕೂ ಹೆಚ್ಚು ಜನರು ಉರಿಬಿಸಿಲ ತಾಪಕ್ಕೆ ಅಸುನೀಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಮರ ಬೆಳೆಸುವ ಮೂಲಕ ತಾಪಮಾನ ಏರಿಕೆಯನ್ನು ತಡೆಯಬೇಕು. ಇದರ ಭಾಗವಾಗಿಯೇ ಪರಿಸರದ ಕುರಿತು ಜಾಗೃತಿಯನ್ನು ಜನರಲ್ಲಿ ಮೂಡಿಸಲಾಗುತ್ತಿದೆ. ಯುವ ಪೀಳಿಗೆ ಗಮನದಲ್ಲಿಟ್ಟುಕೊಂಡು ಚಟುವಟಿಕೆ ನಡೆಯಲಿವೆ ಎನ್ನುತ್ತಾರೆ ಸಚಿವರು.

ಈ ಭೂಮಿಯಲ್ಲಿ ನಮ್ಮಂತೆಯೇ ಸಕಲ ಜೀವ ರಾಶಿಗೂ ಬದುಕುವ ಹಕ್ಕಿದೆ. ಮನುಷ್ಯ ಅವಲಂಬಿಸಿರುವ ಗಾಳಿ, ನೀರು ಹಾಗೂ ಆಶ್ರಯ ನೀಡಿರುವ ಭೂಮಿ ಎಲ್ಲವೂ ಶುದ್ಧವಾಗಿ ಸಮತೋಲನದಿಂದ ಇದ್ದರೆ ಮಾತ್ರ್ತ ಬದಕು ಹಸನಾಗಲು ಸಾಧ್ಯ. ಪರಿಸರ ಸಂರಕ್ಷಣೆಯಲ್ಲಿ ಸರ್ಕಾರಿ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು, ಮಕ್ಕಳು, ಜನ ಸಾಮಾನ್ಯರು ಹಾಗೂ ಮಾಧ್ಯಮದ ಪಾತ್ರ ಮಹತ್ವವಾದ್ದು. ಎಲ್ಲರ ಸಹಕಾರದಿಂದ ಮಾತ್ರ ನಾವು ಪ್ರಕೃತಿ ಪರಿಸರ ಉಳಿಸಲು ಸಾಧ್ಯ ಎನ್ನುವುದು ಅವರ ಸಲಹೆ.

ಈ ಬಾರಿಯ ವಿಶ್ವ ಪರಿಸರ ದಿನದ ಧ್ಯೇಯ ಭೂ ಪುನಶ್ಚೇತನ, ಬರ ನಿರ್ವಹಣೆ ಮತ್ತು ಬರಡು ಭೂಮಿ ಚೇತರಿಕೆ ಎಂಬುದಾಗಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವನಾದ ಬಳಿಕ ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಿಸಲು 5 ಕೋಟಿ ಸಸಿ ನೆಡುವ ಘೋಷಣೆ ಮಾಡಿದ್ದೆ, ಇಲಾಖೆ ಸುಮಾರು 5 ಕೋಟಿ 43ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದೆ. ಆದರೆ ಹೀಗೆ ನೆಟ್ಟ ಸಸಿಗಳ ಪೈಕಿ ಎಷ್ಟು ಬದುಕುಳಿದಿದೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದು, ಆಡಿಟ್ ಕೂಡ ಮಾಡಿಸಲಾಗುತ್ತಿದೆ. ಅಗತ್ಯ ಬಿದ್ದರೆ ಮೂರನೇ ಪಕ್ಷಕಾರರಿಂದಲೂ ಪರಿಶೀಲನೆ ಮಾಡಿಸಲಾಗುವುದು. ಈ ಮೂಲಕ ಪರಿಸರ ಸಮತೋಲನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಚಿವರು ಹೇಳುತ್ತಾರೆ.