Bengaluru News: ಬೆಸ್ಕಾಂ ಸೇರಿ ಐದೂ ಎಸ್ಕಾಂಗಳ ಸಬ್ ಸ್ಟೇಷನ್‌ಗಳಲ್ಲಿ ಬರಲಿವೆ ಸೋಲಾರ್ ಪಾರ್ಕ್
Solar power generation ಕರ್ನಾಟಕದಲ್ಲಿ ಸೋಲಾರ್ ಉತ್ಪಾದನೆಗೆ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ. ಕರ್ನಾಟಕದ ಎಲ್ಲಾ ಎಸ್ಕಾಂ( Escom) ಮೂಲಕವೂ ಸೋಲಾರ್ ವಿದ್ಯುತ್ ಉತ್ಪಾದನೆ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್( George) ಸಭೆ ನಡೆಸಿದ್ದಾರೆ.
ಬೆಂಗಳೂರು: ಸ್ವಚ್ಛ ಮತ್ತು ಹಸಿರು ಇಂಧನದ ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಸಬ್ ಸ್ಟೇಷನ್‌ಗಳ ಬಳಿ ಸೋಲಾರ್ ಪಾರ್ಕ್‌ಗಳ ಸ್ಥಾಪನೆ ಮಾಡುವ ಮಹತ್ವದ ನಿರ್ಧಾರವನ್ನು ಇಂಧನ ಇಲಾಖೆ ತೆಗೆದುಕೊಂಡಿದೆ.
ಈ ಸಂಬಂಧ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಎಲ್ಲಾಐದು ಎಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕಾಲಮಿತಿಯೊಳಗೆ ಈ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
ಈಗಾಗಲೇ ಕೆಲವು ಎಸ್ಕಾಂಗಳಲ್ಲಿ ಜಾಗವನ್ನು ಗುರುತಿಸಲಾಗಿದೆ. ಇನ್ನೂ ಕೆಲವು ಕಡೆ ಜಾಗ ಗುರುತಿಸಿ ಯೋಜನೆಯನ್ನು ಇನ್ನಷ್ಟೇ ಆರಂಭಿಸಬೇಕಾಗಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಸಚಿವ ಕೆ.ಜೆ.ಜಾರ್ಜ್ ಅವರಿಗೆ ನೀಡಿದರು.
ಈಗಾಗಲೇ ಕರ್ನಾಟಕದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ರೈತರೂ ತಮ್ಮ ಜಮೀನುಗಳಲ್ಲಿ, ಸಾರ್ವಜನಿಕರೂ ತಮ್ಮ ಮನೆಗಳ ಮೇಲೆ ಸೋಲಾರ್ ಉತ್ಪಾದಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಈಗ ವಿದ್ಯುತ್ ವಿತರಣಾ ಕೇಂದ್ರಗಳಲ್ಲೂ ಸೋಲಾರ್ ಪಾರ್ಕ್ ಮೂಲಕ ಉತ್ಪಾದನೆ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ.
ಕೇಂದ್ರ ಸರ್ಕಾರವೂ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಸಹಾಯಧನ ಯೋಜನೆಗಳು ಸೋಲಾರ್ ವಿದ್ಯುತ್ ಉತ್ಪಾದನೆಗೆ ನೀಡುತ್ತಿರುವುದರಿಂದ ಅದರ ಉಪಯೋಗ ಪಡೆಯುವ ಪ್ರಯತ್ನಗಳೂ ನಡೆದಿವೆ.
ವಿದ್ಯುತ್ ಪೂರೈಕೆಗೆ ಸಹಕಾರಿ
ಬೆಂಗಳೂರಿನ ಬೆಳಕು ಭವನದಲ್ಲಿ ಆಯೋಜಿಸಿದ್ದ ಸಭೆಯ ನೇತೃತ್ವ ವಹಿಸಿದ್ದ ಸಚಿವರು, ಈ ಯೋಜನೆಯ ಅನುಷ್ಠಾನದಿಂದ ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಹೆಚ್ಚುತ್ತದೆ.ಇದರಿಂದಾಗಿ ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಪ್ರಗತಿಯಲ್ಲಿ ಇಂಧನವು ಮಹತ್ವದ ಪಾತ್ರವನ್ನು ವಹಿಸುತ್ತದೆ, ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂರಕ್ಷಿಸಬೇಕು. ಸೌರಶಕ್ತಿಯ ಸುಲಭ ಸ್ಥಾಪನೆ ಮತ್ತು ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿವಾಗುತ್ತಿದೆ ಎಂದರು.
ಎಸ್ಕಾಂಗಳಲ್ಲಿ ತಯಾರಿ
ಐದು ವಿದ್ಯುತ್ ಸರಬರಾಜು ಕಂಪನಿಗಳ ಪೈಕಿ ಬೆಸ್ಕಾಂ, ಸೆಸ್ಕಾಂ ಮತ್ತು ಹೆಸ್ಕಾಂ ಈಗಾಗಲೇ ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸಲು ಭೂಮಿ ಗುರುತಿಸಿವೆ. ಉಳಿದ ವಿದ್ಯುತ್ ಸರಬರಾಜು ಕಂಪನಿಗಳು ಭೂಮಿ ಗುರುತಿಸುವ ಪ್ರಕ್ರಿಯೆಯಲ್ಲಿವೆ ಎಂದು ತಿಳಿಸಿದರು.
ಇದೇ ವೇಳೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್ (ಐಪಿ) ತಯಾರಕರೊಂದಿಗೆ ಸಭೆ ನಡೆಸಿದ ಸಚಿವರು, ಸೋಲಾರ್ ಪಂಪ್ ಸೆಟ್ ಅಳವಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯನ್ನು ಪರಿಶೀಲಿಸಲು ಸೂಚಿಸಿದರು.
ಸೋಲಾರ್ ಪಂಪ್ ಸೆಟ್
ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಧನ ಸಹಾಯದೊಂದಿಗೆ ರಾಜ್ಯದಲ್ಲಿ 2014-15ರಲ್ಲಿ ಸೌರ ಚಾಲಿತ ಪಂಪ್ ಸೆಟ್ ಯೋಜನೆ ಪ್ರಾರಂಭಿಸಲಾಯಿತು. ಇಂಧನ ಸಚಿವಾಲಯವು ರಾಜ್ಯದಲ್ಲಿ ಒಟ್ಟು 4369 ಸೋಲಾರ್ ಪಂಪ್ ಸೆಟ್‌ಗಳನ್ನು ಸ್ಥಾಪಿಸಿದೆ.
ಪ್ರಧಾನ ಮಂತ್ರಿ ಕುಸುಮ್ ಯೋಜನೆಯಡಿ ಗ್ರಿಡ್ ಪೂರೈಕೆ ಲಭ್ಯವಿಲ್ಲದಿರುವಲ್ಲಿ ಡೀಸೆಲ್ ಕೃಷಿ ಪಂಪ್‌ಗಳು/ನೀರಾವರಿ ವ್ಯವಸ್ಥೆ ಬದಲಿಗೆ 7.5 ಹೆಚ್‌ಪಿ ವರೆಗಿನ ಸೌರ ಕೃಷಿ ಪಂಪ್ ಸೆಟ್‌ಗಳನ್ನು ಸ್ಥಾಪಿಸಲು ರೈತರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.
ಸಭೆಯಲ್ಲಿ ಇಂಧನ ಮತ್ತು ಮೂಲಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.