ಕನ್ನಡ ಸುದ್ದಿ  /  Karnataka  /  Bangalore News Karnataka First Grade College Assistant Professor Candidates Protest For Early Handover Of Orders Kub

Bangalore protest: ಸಚಿವ ಸುಧಾಕರ್‌ ಅನಗತ್ಯ ವಿಳಂಬಕ್ಕೆ ಆಕ್ರೋಶ, ನೇಮಕ ಪತ್ರಕ್ಕಾಗಿ ಸಹಾಯಕ ಪ್ರಾಧ್ಯಾಪಕರ ಪ್ರತಿಭಟನೆ

ಬೇಗನೇ ನೇಮಕಾತಿ ಪತ್ರ ನೀಡುವಂತೆ ಆಗ್ರಹಿಸಿ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಪ್ರತಿಭಟನೆ ಶುರುವಾಗಿದೆ.
ಬೆಂಗಳೂರಿನಲ್ಲಿ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಪ್ರತಿಭಟನೆ ಶುರುವಾಗಿದೆ.

ಬೆಂಗಳೂರು: ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸಕಾರಣವಿಲ್ಲದೇ ಪ್ರಥಮದರ್ಜೆ ಕಾಲೇಜುಗಳಿಗೆ ನೇಮಕಗೊಂಡಿರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶ ನೀಡುವುದನ್ನು ವಿಳಂಬ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಒಂದು ವರ್ಷದ ಹಿಂದೆಯೇ ಸಂದರ್ಶನ ಸಹಿತ ಎಲ್ಲಾ ಪ್ರಕ್ರಿಯೆಗಳನು ಮುಗಿಸಿದರೂ ಆದೇಶ ನೀಡಲು ಮೀನ ಮೇಷ ಮಾಡಲಾಗುತ್ತಿದೆ ಎಂದು ಬೇಸರಗೊಂಡ ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಹಿಂದೆಯೂ ಪ್ರಕ್ರಿಯೆ ಬೇಗನೇ ಮುಗಿಸುವಂತೆ ಹೋರಾಟ ಮಾಡಿದ್ದರು.

2021ರಲ್ಲಿ ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ 26 ವಿಷಯಗಳ ಒಟ್ಟು 1242 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಆಗಿ ಅಂತಿಮ ಆಯ್ಕೆ ಪಟ್ಟಿಯನ್ನೂ ಪ್ರಕಟಿಲಾಗಿತ್ತು ಆದರೆ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಅಧಿಕೃತ ಜ್ಞಾಪನ ಪತ್ರವನ್ನು ಉನ್ನತ ಶಿಕ್ಷಣ ಇಲಾಖೆ ಒಂದೇ ದಿನದಲ್ಲಿ ಹಿಂಪಡೆದಿತ್ತು. ಇದರಿಂದ ತೊಂದರೆಯಾಗುತ್ತಿದೆ ಎಂದು ಆಕಾಂಕ್ಷಿಗಳು ದೂರಿದರು.

ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್‌ ಅವರು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿರುವವರ ಆದೇಶ ಕೊಡುವುದನ್ನು ವಿಳಂಬ ಮಾಡುತ್ತಿದ್ದಾರೆ. ಸರಿಯಾದ ಕಾರಣವನ್ನೂ ಇಲಾಖೆಯವರು ನೀಡುತ್ತಿಲ್ಲ. ಇದರಿಂದ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.

ಈಗಾಗಲೇ ಹುದ್ದೆಗಳಲ್ಲಿನ ಮೀಸಲಾತಿ ಹಂಚಿಕೆ ಸಹಿತ ಹಲವು ವಿಚಾರಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೆಟ್ಟಿಲೇರಿದ್ದವು. ಈಗಾಗಲೇ ನ್ಯಾಯ ಮಂಡಳಿಯೂ ಎಲ್ಲಾ ಗೊಂದಲ ಬಗೆಹರಿಸಿ ಆದೇಶ ಪತ್ರ ವಿತರಣೆಗೆ ಇದ್ದ ಅಡೆತಡೆಗಳನ್ನು ಬಗೆಹರಿಸಿದೆ. ಹೀಗಿದ್ದರೂ ಸುಮ್ಮನೇ ವಿಳಂಬ ಮಾಡುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ನವೆಂಬರ್‌ನಲ್ಲಿಯೇ ಎಲ್ಲಾ ಪ್ರಕ್ರಿಯೆಗಳು ಮುಗಿದು ಆದೇಶ ಪತ್ರ ಕೈ ಸೇರಿತು ಎನ್ನುವಾಗಲೇ ಬೆಂಗಳೂರು ವಿಧಾನಪರಿಷತ್‌ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ತಡೆ ಹಿಡಿಯಲಾಯಿತು. ಚುನಾವಣೆ ಮುಗಿದು ಇಪ್ಪತ್ತು ದಿನಗಳೇ ಕಳೆದರೂ ಇನ್ನೂ ಆದೇಶ ನಮ್ಮ ಕೈ ಸೇರಿಲ್ಲ. ಈಗ 2024ರ ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಬಹುದು ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಇಡೀ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿ ತೊಂದರೆಯಾಗಲಿದೆ ಎಂಬುದು ಹೋರಾಟ ನಡೆಸುತ್ತಿರುವವರ ಅಭಿಪ್ರಾಯ.

ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಗಮನಿಸಿದ ಹಲವರು ಆಗಲೇ ಕೆಲಸ ಬಿಟ್ಟಿದ್ಧಾರೆ. ಆ ಹುದ್ದೆಗಳಿಗೆ ಬೇರೆಯವರನ್ನೂ ತುಂಬಿಕೊಳ್ಳಲಾಗಿದೆ. ಕೆಲವು ಕಡೆ ಅರ್ಧದಲ್ಲೇ ಬಿಟ್ಟು ಹೋದರು ಎಂದು ಅವಕಾಶ ಕೊಡುತ್ತಿಲ್ಲ. ಹೀಗಿದ್ದರೂ ಉನ್ನತ ಶಿಕ್ಷಣ ಇಲಾಖೆ ಆದೇಶ ಪತ್ರ ನೀಡಿದೇ ಹಲವರು ಅತ್ತ ಉದ್ಯೋಗವೂ ಇಲ್ಲದೇ ವೇತನವೂ ಇಲ್ಲದೇ ಬದುಕು ಸಂಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಅವರ ಬೇಡಿಕೆಗಳೇನು

  • ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಮತ್ತಷ್ಟು ವಿಳಂಬ ಮಾಡಬೇಡಿ
  • ಇಲ್ಲಿ ಕೆಲಸ ಸಿಕ್ಕಿದೆ ಎಂದು ಈಗಿದ್ದ ಕೆಲಸ ಬಿಟ್ಟವರು ತೊಂದರೆಗೆ ಸಿಲುಕಿದ್ದಾರೆ
  • ಈಗಾಗಲೇ ಎಲ್ಲಾ ಗೊಂದಲಗಳು ಬಗೆಹರಿದಿರುವುದರಿಂದ ಇನ್ನಷ್ಟು ಗೊಂದಲ ಬೇಡ
  • ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಮುನ್ನವೇ ಪ್ರಕ್ರಿಯೆ ಮುಗಿಸಿ
  • ಉನ್ನತ ಶಿಕ್ಷಣ ಸಚಿವರು ಅನಗತ್ಯ ವಿಳಂಬ ಮಾಡದಂತೆ ಮನವಿ ಮಾಡುತ್ತೇವೆ