Salary Hike: ಕರ್ನಾಟಕದ ಗ್ರಾಮ ಸಹಾಯಕರ ವೇತನದಲ್ಲಿ ಏರಿಕೆ, ಎಷ್ಟು ಹೆಚ್ಚಳ
ಕಾಯಂ ಸೇರಿದಂತೆ ಹಲವಾರು ಬೇಡಿಕೆಗಳೊಂದಿಗೆ ಹೋರಾಟ ಮಾಡುತ್ತಿದ್ದ ಗ್ರಾಮ ಸಹಾಯಕರ ಭಾಗಶಃ ಬೇಡಿಕೆಗೆ ಸರ್ಕಾರ ಒಪ್ಪಿ ವೇತನ ಹೆಚ್ಚಳಕ್ಕೆ ಮುಂದಾಗಿದೆ.

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ತಾತ್ಕಾಲಿಕವಾಗಿ ಮಂಜೂರು ಮಾಡಲಾಗಿದ್ದು, ಅವರ ವೇತನವನ್ನು ಹೆಚ್ಚಳ ಮಾಡಲಾಗಿದೆ. ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 9903 ಗ್ರಾಮ ಸಹಾಯಕರ ಮಿತವೇತನವನ್ನು 2024ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮಾಸಿಕ ರೂ.13,000/- ಗಳಿಂದ ರೂ.15,000/- ಗಳಿಗೆ ಪರಿಷ್ಕರಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿದೆ.
ಈ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದ್ದು,ಇದೀಗ ಇಲಾಖೆಯಲ್ಲಿ ಮತ್ತಷ್ಟು ಸುಧಾರಣಾ ಕೆಲಸಕ್ಕೆ ಮುಂದಾಗಿದ್ದು, ಹೆಚ್ಚುವರಿ ಗ್ರಾಮ ಸಹಾಯಕರ ನೇಮಕಾತಿಯ ಜೊತೆಗೆ ಅವರ ಗೌರವಧನವನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಗ್ರಾಮ ಸಹಾಯಕರಿಗೆ ಗೌರವಧನ ಹೆಚ್ಚಳ, ಸೇವಾ ಭದ್ರತೆ ಹಾಗೂ 'ಡಿ ದರ್ಜೆ ನೌಕರರೆಂದು ಪರಿಗಣಿಸುವ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ವಿವರಿಸಿದ್ದಾರೆ.
ಗ್ರಾಮ ಸಹಾಯಕರಿಗೆ ಸೇವಾ ನಿಯಮಾವಳಿಯನ್ನು ರೂಪಿಸಿ ಸೇವಾ ಭದ್ರತೆಯನ್ನು ನೀಡುವ ಬಗ್ಗೆ ಇಲಾಖೆಯ ಹಂತದಲ್ಲಿ ಪರಿಶೀಲಿಸಿ, ಇದೇ ರೀತಿ ಗೌರವಧನ (ಸಂಚಿತ ವೇತನ) ಪಡೆಯುತ್ತಿರುವ ನೌಕರರುಗಳಿಗೆ ಇತರೆ ಇಲಾಖೆಗಳಲ್ಲಿ ಸೇವಾ ಭದ್ರತೆಗಾಗಿ ಯಾವ ರೀತಿ ನಿಯಮಾವಳಿ ರೂಪಿಸಿದ್ದಾರೆ ಎಂಬುದನ್ನು ಪರಿಶೀಲಿಸಿ ನಿರ್ದಿಷ್ಟ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆರ್ಥಿಕ ಇಲಾಖೆ ತಿಳಿಸಿದೆ. ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸುವ ಪ್ರಸ್ತಾವನೆಯನ್ನು ಸಧ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲವೆಂದು ಆರ್ಥಿಕ ಇಲಾಖೆ ತಿಳಿಸಿದೆ. ಇದರಿಂದ ಕಾಯಂ ಮಾಡುವ ಬದಲು ವೇತನ ಹೆಚ್ಚಳ, ಇತರೆ ಸೌಲಭ್ಯಗಳ ಕಡೆಗೆ ಗಮನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಕೆಲಸಗಳಿಗೆ ಮತ್ತಷ್ಟು ವೇಗ ನೀಡುವ ಹಾಗೂ ಜನರಿಗೆ ಸರಳ-ಸುಲಭ ಆಡಳಿತ ನೀಡುವ ನಿಟ್ಟಿನಲ್ಲಿ 1000 ಗ್ರಾಮ ಲೆಕ್ಕಾಧಿಕಾರಿಗಳನ್ನು ಶೀಘ್ರ ನೇಮಕ ಮಾಡಲಾಗುವುದು ಎಂದು ಈ ಹಿಂದೆ ಬೆಳಗಾವಿಯ ಚಳಿಗಾಲದ ಅಧಿವೇಶದಲ್ಲಿ ನಾನು ಕರ್ನಾಟಕದ ಜನತೆಗೆ ಮಾತು ನೀಡಿದ್ದೆ. ನೀಡಿದ ಮಾತಿನಂತೆ ಕಳೆದ ವಾರ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ನ್ಯಾಯ ಸಮ್ಮತವಾಗಿ ಪರೀಕ್ಷೆ ನಡೆಸಿ ಅರ್ಹರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಕರ್ನಾಟಕದ ಗ್ರಾಮ ಸಹಾಯಕರು ಪ್ರತಿಭಟನೆ ನಡೆಸಿ ಸೇವೆ ಕಾಯಂ ಸೇರಿ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಖುದ್ದು ಕೃಷ್ಣಬೈರೇಗೌಡ ಅವರೇ ಮನವಿ ಸ್ವೀಕರಿಸಿದ್ದರು. ಅಲ್ಲದೇ ಹಲವಾರು ವರ್ಷಗಳಿಂದಲೂ ಈ ಬೇಡಿಕೆಯಿತ್ತು.

ವಿಭಾಗ