Bangalore News: ಬೆಂಗಳೂರು ಸುತ್ತಮುತ್ತಲ ವಾಹನಗಳಿಗೆ ದಂಡ ವಿಧಿಸುವ ಪ್ರಕರಣ ಹೆಚ್ಚಿಸಲು ಸೂಚನೆ, ನಿಮ್ಮ ದಾಖಲೆ ಸರಿಯಾಗಿಟ್ಟುಕೊಳ್ಳಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಸುತ್ತಮುತ್ತಲ ವಾಹನಗಳಿಗೆ ದಂಡ ವಿಧಿಸುವ ಪ್ರಕರಣ ಹೆಚ್ಚಿಸಲು ಸೂಚನೆ, ನಿಮ್ಮ ದಾಖಲೆ ಸರಿಯಾಗಿಟ್ಟುಕೊಳ್ಳಿ

Bangalore News: ಬೆಂಗಳೂರು ಸುತ್ತಮುತ್ತಲ ವಾಹನಗಳಿಗೆ ದಂಡ ವಿಧಿಸುವ ಪ್ರಕರಣ ಹೆಚ್ಚಿಸಲು ಸೂಚನೆ, ನಿಮ್ಮ ದಾಖಲೆ ಸರಿಯಾಗಿಟ್ಟುಕೊಳ್ಳಿ

ನಿಮ್ಮ ವಾಹನಗಳ ದಾಖಲೆಗಳು ಸರಿಯಾಗಿವೆಯೇ, ನಿಮ್ಮ ಚಾಲನಾ ಪತ್ರ ಇತರೆ ದಾಖಲೆಗಳನ್ನು ಇಟ್ಟುಕೊಂಡಿದ್ದೀರಾ, ಏಕೆಂದರೆ ಕರ್ನಾಟಕದ ಸಾರಿಗೆ ಇಲಾಖೆ( Karnataka Transport Department) ತಪಾಸಣೆ ಚುರುಕುಗೊಳಿಸಿ ದಂಡ ವಿಧಿಸಲಿದೆ.

ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಆರ್‌ಟಿಒ ತಪಾಸಣೆ ಚುರುಕುಗೊಳ್ಳಲಿದೆ.
ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಆರ್‌ಟಿಒ ತಪಾಸಣೆ ಚುರುಕುಗೊಳ್ಳಲಿದೆ.

ಬೆಂಗಳೂರು: ಬೊಕ್ಕಸವನ್ನು ತುಂಬಿಸಲು ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವ ಪ್ರಕರಣಗಳನ್ನು ಹೆಚ್ಚಿಸಲು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಒಂದು ಕಡೆ ನಿಮ್ಮ ವಾಹನಗಳು ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕಾದದ್ದು ಒಂದು ಕಡೆಯಾದರೂ ತಪ್ಪಿದರೆ ಭಾರೀ ದಂಡವನ್ನೇ ತೆರಬೇಕಾಗುತ್ತದೆ. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳಿಗೆ ದಂಡ ವಸೂಲಿ ಮಾಡುವ ಪ್ರಕರಣಗಳನ್ನು ಹೆಚ್ಚಿಸಲು ಬ್ರೇಕ್ ಇನ್‌ಸ್ಪೆಕ್ಟರ್‌ಗಳಿಗೆ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಆದಾಯ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಕುಡಿದು ಚಾಲನೆ ಮಾಡುವುದನ್ನು ಪತ್ತೆಹಚ್ಚಲು ಹೆಚ್ಚು ಒತ್ತು ನೀಡಬೇಕು ಎಂದೂ ಖಡಕ್ ಸೂಚನೆ ನೀಡಲಾಗಿದೆ.

ಕುಡಿದು ವಾಹನ ಚಾಲನೆ, ಓವರ್ ಲೋಡ್, ವಾಹನದ ಫಿಟ್‌ನೆಸ್ ಪ್ರಮಾಣ ಪತ್ರ ಇಲ್ಲದಿರುವುದು, ಪರ್ಮಿಟ್ ಇಲ್ಲದಿರುವುದು, ವಾಯು ಮಾಲಿನ್ಯ ಪತ್ರ, ಶಬ್ದ ಮಾಲಿನ್ಯ ಉಂಟು ಮಾಡುವುದು ಸೇರಿದಂತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವ ಪ್ರಕರಣಗಳನ್ನು ಹೆಚ್ಚಿಸಬೇಕು ಎಂದು ಸೂಚನೆ ನೀಡಲಾಗಿದೆ.

ಇದುವರೆಗೂ ಪ್ರತಿ ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ತಿಂಗಳಿಗೆ 250 ರಿಂದ 300 ಪ್ರಕರಣಗಳನ್ನು ದಾಖಲಿಸುವ ಗುರಿ ನೀಡಲಾಗಿತ್ತು. ಈಗ ಆ ಗುರಿಯನ್ನು 400 ಪ್ರಕರಣಗಳಿಗೆ ಏರಿಸಲಾಗಿದೆ. ಸರ್ಕಾರದ ಆದಾಯ ಹೆಚ್ಚಿಸುವುದರ ಜೊತೆಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ಕಡಿಮೆ ಮಾಡಲು ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಸಾರಿಗೆ ಜಂಟಿ ಆಯುಕ್ತೆ ಶೋಭಾ ತಿಳಿಸಿದ್ದಾರೆ.

ಯಾವ ಯಾವ ಆರ್‌ಟಿಒ ಕಚೇರಿಗೆ ಟಾರ್ಗೆಟ್?

ಬೆಂಗಳೂರು ನಗರದ ರಾಜಾಜಿನಗರ, ಯಶವಂತಪುರ, ಇಂದಿರಾನಗರ, ಜಯನಗರ, ಜ್ಞಾನಭಾರತಿ ಕೋರಮಂಗಲ, ಚಂದಾಪುರ, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಕೆ.ಆರ್.ಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಆರ್‌ಟಿಒ ಕಚೇರಿಗಳಿಗೆ ಈ ಗುರಿ ನಿಗದಿಪಡಿಸಲಾಗಿದೆ.

ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ಮೇಲೆ ದಾಖಲಿಸುವ ಪ್ರಕರಣ ಹೆಚ್ಚಿಸಬೇಕು ಎಂದು ಸೂಚನೆ ನೀಡಿರುವುದಕ್ಕೆ ಬ್ರೇಕ್ ಇನ್‌ಸ್ಪೆಕ್ಟರ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುರಿ ತಲುಪುವುದು ಸುಲಭದ ಕೆಲಸ ಅಲ್ಲ. ಇದರಿಂದ ಒತ್ತಡ ಹೆಚ್ಚುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಅಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿ ಆರ್‌ಟಿಒ ಕಚೇರಿಗಳಲ್ಲಿ ಬ್ರೇಕ್ ಇನ್‌ಸ್ಪೆಕ್ಟರ್‌ಗಳ ಕೊರತೆ ಇದೆ. ದಂಡ ವಸೂಲಿ ಮಾಡುವ ಅಧಿಕಾರ ಬ್ರೇಕ್ ಇನ್‌ಸ್ಪೆಕ್ಟರ್‌ಗಳಿಗೆ ಮಾತ್ರ ಇರುತ್ತದೆ. ಕೆಲವು ಅಧಿಕಾರಿಗಳಿಗೆ ಎರಡು ಮೂರು ಕಚೇರಿಗಳ ನಿರ್ವಹಣೆ ಅಧಿಕಾರ ನೀಡಲಾಗಿದೆ. 2023-2 4ನೇ ಸಾಲಿನಲ್ಲಿ ರೂಪಾಯಿ 11,500 ಕೋಟಿ ಆದಾಯವನ್ನು ಸಂಗ್ರಹಿಸಿ ನೀಡುವ ಗುರಿ ನೀಡಲಾಗಿತ್ತು. 2024-25 ನೇ ಸಾಲಿಗೆ ರೂಪಾಯಿ 13,000 ಕೋಟಿ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ. ಪ್ರಾದೇಶಿಕ ಕಚೇರಿಗಳಿಗೂ ಗುರಿ ನಿಗದಿಪಡಿಸುವುದು ಸಹಜ ಪ್ರಕ್ರಿಯೆಯಾಗಿದೆ. ಅಧಿಕಾರಿಗಳನ್ನು ಎಚ್ಚರವಾಗಿ ಇಡಲು ಇಂತಹ ನಿಯಮಗಳನ್ನು ಜಾರಿ ಮಾಡಲಾಗುತ್ತಿರುತ್ತದೆ.

ಇದರಿಂದ ಬಡ ಮಧ್ಯಮ ವರ್ಗದ ಜನರು, ಬೀದಿ ಬದಿ ವ್ಯಾಪಾರಿಗಳು, ತರಕಾರಿ, ಹಣ್ಣು ವ್ಯಾಪಾರಿಗಳು, ಕೂಲಿ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

(ವರದಿ: ಎಚ್.ಮಾರುತಿ, ಬೆಂಗಳೂರು)