ಕನ್ನಡ ಸುದ್ದಿ  /  Karnataka  /  Bangalore News Karnataka Government Woman Employees Separate Association Inaugurated In Bangalore Kub

ಕರ್ನಾಟಕದಲ್ಲಿದ್ದಾರೆ ಶೇ. 52ರಷ್ಟು ಮಹಿಳಾ ರಾಜ್ಯ ಸರ್ಕಾರಿ ನೌಕರರು, ಪ್ರತ್ಯೇಕ ಮಹಿಳಾ ಸಂಘಕ್ಕೆ ಚಾಲನೆ

ಬೆಂಗಳೂರಿನಲ್ಲಿ ಶುಕ್ರವಾರ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವನ್ನು ಉದ್ಘಾಟಿಸಲಾಯಿತು.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಉದ್ಘಾಟನೆ ಸಮಾರಂಭ.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಉದ್ಘಾಟನೆ ಸಮಾರಂಭ.

ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವಿತ್ತು. ಈಗ ಮಹಿಳೆಯರ ಸಂಘವೂ ಆರಂಭಗೊಂಡಿದೆ. ಕರ್ನಾಟಕದಲ್ಲಿರುವ ರಾಜ್ಯ ಸರ್ಕಾರಿ ನೌಕರರಾದ ಮಹಿಳೆಯರು ಒಟ್ಟುಗೂಡಿ ಸಂಘವನ್ನು ಶುರು ಮಾಡಿದ್ದಾರೆ. ಕರ್ನಾಟಕದಲ್ಲಿರುವ ಮಹಿಳಾ ರಾಜ್ಯ ಸರ್ಕಾರಿ ನೌಕರರ ಸಂಖ್ಯೆಯೇ ಶೇ. 52. ಬೆಂಗಳೂರಿನ ಟೌನ್ ಹಾಲ್ ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌, ವಿಧಾನಪರಿಷತ್ತಿನ ಸಭಾಪತಿ ಬಸವರಾಜ್‌ ಹೊರಟ್ಟಿ ಮತ್ತಿತರರು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ , ಮಹಿಳೆ ಎಲ್ಲಾ ರಂಗದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಇಂದು ನಾನು ಉದ್ಘಾಟಿಸಿರುವ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಪಕ್ಷಾತೀತವಾಗಿ ನಡೆಯಲಿ. ರಾಜಕೀಯ ಚಟುವಟಿಕೆಯಿಂದ ಸಂಪೂರ್ಣ ದೂರ ಇರಲಿ ಎಂದು ಹೇಳಿದರು.

ಇದೊಂದು ಅರ್ಥಪೂರ್ಣ ಸಂಘಟನೆಯಾಗಲಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಕ್ಕೂ ಸಂಘಟನೆ ವಿಸ್ತರಣೆಯಾಗಲಿ ಎಂದು ಹಾರೈಸಿದರು. ಸಾಮಾಜಿಕ ಕಾಳಜಿ ಬದ್ಧತೆಯಿಂದ ಕೆಲಸ ಮಾಡಿ, ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗಿ, ಧೈರ್ಯದಿಂದ ಮುಂದೆ ಹೋಗಿ. ಸಂಘದೊಂದಿಗೆ ನಾವಿದ್ದೇವೆ. ಹೋರಾಟಕ್ಕೆ ಮತ್ತೊಂದು ಹೆಸರೇ ಹೆಣ್ಣು ಎಂದು ಕಿವಿಮಾತು ಹೇಳಿದರು.

ಸರ್ಕಾರದ ಬಹುನಿರೀಕ್ಷಿತ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಲು ಸರ್ಕಾರಿ ನೌಕರರ ಶ್ರಮ ಸಾಕಷ್ಟಿದೆ. ನೌಕರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ ಫಲವಾಗಿ ಇಂದು ಯೋಜನೆಗಳು ಯಶಸ್ವಿಯಾಗಿವೆ ಎಂದು ಹೇಳಿದರು. ನಮ್ಮ ರಾಜ್ಯದಲ್ಲಿ ಶೇ. 52 ರಷ್ಟು ಸರ್ಕಾರಿ ಮಹಿಳಾ ನೌಕರರು ಇದ್ದು, ಇದು ಇಡೀ ದೇಶಕ್ಕೆ ಮಾದರಿಯಾಗಿರುವ ವಿಚಾರ ಎಂದು ಸಚಿವರು ಹೇಳಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ಉತ್ತಮ ಸ್ಥಾನ ನೀಡಿದ್ದರು. ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ. ಬಸವ ತತ್ವದಡಿಯಲ್ಲಿಯೇ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಹೀಗಾಗಿ ಬಸವಣ್ಣನವರನ್ನು ಸರ್ಕಾರ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಗಳಾದ ಬಸವರಾಜ್ ಹೊರಟ್ಟಿ, ಮಾಜಿ ಸಚಿವೆ ಶ್ರೀಮತಿ ಮೋಟಮ್ಮ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ರೋಶನಿ ಗೌಡ, ಗೌರವಾಧ್ಯಕ್ಷರಾದ ಗೀತಾಮಣಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಸೇರಿದಂತೆ ಸಂಘದ ಪದಾಧಿಕಾರಿಗಳು, ನೂರಾರು ಮಹಿಳಾ ನೌಕರರು ಉಪಸ್ಥಿತರಿದ್ದರು.

IPL_Entry_Point

ವಿಭಾಗ