Karnataka MLC Elections: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ 6 ಸ್ಥಾನಗಳಿಗೆ ಇಂದು ಮತದಾನ
Karntaka Politics ಕರ್ನಾಟಕದ ವಿಧಾನಪರಿಷತ್‌ನ ಶಿಕ್ಷಕರು ಹಾಗೂ ಪದವೀಧರರ ಆರು ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಈಗ ಚುನಾವಣೆ ಪರ್ವ. ಈಗಷ್ಟೇ ನಡೆದಿರುವ ಲೋಕಸಭೆ ಚುನಾವಣೆಗೆ ಫಲಿತಾಂಶ ಎದುರು ನೋಡುತ್ತಿರುವ ನಡುವೆಯೇ ಕರ್ನಾಟಕ ವಿಧಾನಪರಿಷತ್ತಿನ ಚುನಾವಣೆಗಳೂ ನಡೆಯುತ್ತಿವೆ. ಅದರಲ್ಲೂ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ಆರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬೆಂಗಳೂರು ಪದವೀಧರರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ಈಶಾನ್ಯ ಪದವೀಧರರ ಕ್ಷೇತ್ರ, ನೈರುತ್ಯ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ಸೋಮವಾರ ನಡೆಯಲಿದೆ. ಇದಕ್ಕಾಗಿ ಹದಿನೈಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ ಬೆಂಗಳೂರು ಪದವೀಧರರ ಕ್ಷೇತ್ರಕ್ಕೂ ಚುನಾವಣೆ ನಡೆದಿದೆ. ಇಲ್ಲಿ ಬಿಜೆಪಿಯಿಂದ ಹಾಲಿ ಸದಸ್ಯ ಎ.ದೇವೇಗೌಡ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಕಳೆದ ಬಾರಿಯೂ ಸೋತಿದ್ ಆನೆಕಲ್ ರಾಮೋಜಿರಾವ್ ಅವರು ಮತ್ತೆ ಕಣಕ್ಕೆ ಇಳಿದಿದ್ದಾರೆ. ಇಲ್ಲಿಯೂ ಇಬ್ಬರ ನಡುವೆ ನೇರ ಹಣಾಹಣಿಯೇ ಇದೆ.
ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಸದಸ್ಯ ಹಾಗೂ ನಾಲ್ಕು ಬಾರಿ ಗೆದ್ದಿರುವ ಮರಿತಿಬ್ಬೇಗೌಡ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಕೆ.ವಿವೇಕಾನಂದ ಕಣದಲ್ಲಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಶಿಕ್ಷಕರು ಇಲ್ಲಿನ ಮತದಾರರು.
ತುಮಕೂರು ಕೇಂದ್ರಿತ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಸತತವಾಗಿ ಮೂರು ಅವಧಿಯಲ್ಲಿ ಗೆದ್ದಿರುವ ವೈ.ಎ.ನಾರಾಯಣಸ್ವಾಮಿ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಬಿಜೆಪಿಯಲ್ಲಿದ್ದು ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಕೃಷ್ಣಪ್ಪ ಅವರ ಪತಿ ಡಿ.ಟಿ.ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿ. ಕಳೆದ ಪದವೀಧರರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದೇ ಬಂಡಾಯವಾಗಿ ಅವರು ಕಣಕ್ಕಿಳಿದು ಸೋತಿದ್ದರು. ಇಬ್ಬರ ನಡುವೆಯೆ ನೇರ ಹಣಾಹಣಿಯಿದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ. ಕೋಲಾರ ವ್ಯಾಪ್ತಿಯ ಶಿಕ್ಷಕರು ಮತದಾರರು.
ಶಿವಮೊಗ್ಗ ಕೇಂದ್ರಿತ ನೈರುತ್ಯ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ,ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲ್ಲೂಕಿನ ಪದವೀಧರರು ಹಾಗೂ ಶಿಕ್ಷಕರು ಎರಡು ಸ್ಥಾನಗಳಿಗೆ ಮತದಾರರು. ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನ ಹಾಲಿ ಸದಸ್ಯ ಎಸ್.ಎಲ್.ಬೋಜೇಗೌಡ ಹಾಗೂ ಕಾಂಗ್ರೆಸ್ ನ ಮಂಜುನಾಥ್ ಕುಮಾರ್ ನಡುವೆ ಸ್ಪರ್ಧೆಯಿದೆ. ಇನ್ನು ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಧನಂಜಯ ಸರ್ಜಿ, ಕಾಂಗ್ರೆಸ್‌ನಿಂದ ಹಾಲಿ ಸದಸ್ಯ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಉಡುಪಿಯ ರಘುಪತಿ ಭಟ್, ಕಾಂಗ್ರೆಸ್ ನಿಂದ ದಿನೇಶ್ ಬಂಡಾಯವಾಗಿ ಕಣದಲ್ಲಿದ್ದಾರೆ.
ಇನ್ನು ಕಲಬುರಗಿ ಕೇಂದ್ರಿತ ಈಶಾನ್ಯ ವಿಭಾಗದ ಪದವೀಧರರ ಚುನಾವಣೆಯೂ ಇದೆ. ಇಲ್ಲಿ ಕಾಂಗ್ರೆಸ್ ನಿಂದ ಹಾಲಿ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ್ ಹಾಗೂ ಬಿಜೆಪಿಯಿಂದ ಅಮರನಾಥ ಪಾಟೀಲ್ ಕಣದಲ್ಲಿದ್ದಾರೆ. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯನ್ನೂ ಕ್ಷೇತ್ರ ಒಳಗೊಂಡಿದೆ.
