Guarantee Schemes: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಭವಿಷ್ಯವೇನು?; ಸಚಿವರ ಹೇಳಿಕೆ ಬಯಲು ಮಾಡಿದ ಬದಲಾವಣೆ ಹಾದಿ, ಯಾರು ಏನು ಹೇಳಿದರು?-bangalore news karnataka guarantee schemes congress planning to restructure ministers differ in opinion kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Guarantee Schemes: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಭವಿಷ್ಯವೇನು?; ಸಚಿವರ ಹೇಳಿಕೆ ಬಯಲು ಮಾಡಿದ ಬದಲಾವಣೆ ಹಾದಿ, ಯಾರು ಏನು ಹೇಳಿದರು?

Guarantee Schemes: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಭವಿಷ್ಯವೇನು?; ಸಚಿವರ ಹೇಳಿಕೆ ಬಯಲು ಮಾಡಿದ ಬದಲಾವಣೆ ಹಾದಿ, ಯಾರು ಏನು ಹೇಳಿದರು?

ಕರ್ನಾಟಕದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಕುರಿತು ಗಂಭೀರ ಚರ್ಚೆಗಳು ಶುರುವಾಗಿವೆ. ಈ ಕುರಿತು ಸಚಿವರು ಹೇಳಿದ್ದೇನು.. ಇಲ್ಲಿದೆ ವರದಿ.

ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆ ಪರಿಷ್ಕರಣೆ ಕುರಿತು ಚರ್ಚೆಗಳು ಮತ್ತೆ ಶುರುವಾಗಿವೆ.
ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆ ಪರಿಷ್ಕರಣೆ ಕುರಿತು ಚರ್ಚೆಗಳು ಮತ್ತೆ ಶುರುವಾಗಿವೆ.

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ಭವಿಷ್ಯದ ಕುರಿತು ಸುಳಿವು ದೊರೆತಿತ್ತು.ಕೆಲವು ಸಚಿವರು, ಶಾಸಕರು ಲೋಕಸಭೆ ಚುನಾವಣೆ ಬಳಿಕ ಯೋಜನೆ ಏನಾದರೂ ಆಗಬಹುದು ಎಂದು ಹೇಳಿದ್ದರು. ಆನಂತರ ಆ ಚರ್ಚೆಗಳು ನಿಂತಿದ್ದವು. ಚುನಾವಣೆ ಮುಗಿದ ಎರಡು ತಿಂಗಳ ಬಳಿಕ ಈಗ ಗ್ಯಾರಂಟಿ ಯೋಜನೆಗಳ ಕುರಿತು ಗಂಭೀರ ಚರ್ಚೆಗಳು ಶುರುವಾಗಿದೆ. ಈ ಕುರಿತು ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಕೆಲವು ಸಚಿವರು, ಪ್ರಮುಖರು ಗ್ಯಾರಂಟಿ ಯೋಜನೆಗಳ ಕುರಿತು ಹೈಕಮಾಂಡ್‌ ಕೇಳಿದ ಅಭಿಪ್ರಾಯಕ್ಕೆ ಸಲಹೆ ಸೂಚನೆ ನೀಡಿದಾರೆ. ಸಚಿವರು ಯೋಜನೆ ಸ್ಥಗಿತಗೊಳಿಸುವುದು ಬೇಡ.ಬದಲಿಗೆ ಪರಿಷ್ಕರಣೆ ಆಗಲಿ ಎಂದು ಸಲಹೆ ನೀಡಿದ್ದಾರೆ. ಈ ಕುರಿತು ಕರ್ನಾಟಕದ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳು ಬಡವರ ಜತೆಗೆ ಉಳ್ಳವರಿಗೂ ಸಿಗುತ್ತಿವೆ. ಉಳ್ಳವರಿಗೆ ಕೊಟ್ಟರೆ ನಮಗೆ ಮತ ಬರುವುದಿಲ್ಲ. ಅದರ ಬದಲು ಮತ ಬಾರದೇ ಇದ್ದರೂ ಪರವಾಗಿಲ್ಲ. ಅರ್ಹರಿಗೆ ಈ ಸೌಲಭ್ಯ ಸಿಗಬೇಕು. ಇದಕ್ಕಾಗಿ ಶಕ್ತಿ ಯೋಜನೆ ಹೊರತುಪಡಿಸಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಕೆಲವು ಮಿತಿಗಳನ್ನು ಹಾಕಿ ಕಡಿತ ಮಾಡಬೇಕು. ಇದರಿಂದ ಅರ್ಹರಿಗೆ ಮಾತ್ರ ಸವಲತ್ತು ಸಿಕ್ಕಂತೆ ಆಗಲಿದೆ. ಅನಗತ್ಯ ಖರ್ಚು ತಪ್ಪಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ರದ್ದು ಬೇಡ, ಪರಿಷ್ಕರಣೆ ಆಗಲಿ: ಸತೀಶ ಜಾರಕಿಹೊಳಿ

ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಬೆಂಗಳೂರಿಗೆ ಹಿಂದಿರುಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಗ್ಯಾರಂಟಿ ಯೋಜನೆಗಳ ಕುರಿತು ನಿಖರವಾಗಿಯೇ ಮಾತನಾಡಿದ್ದಾರೆ.

ಗ್ಯಾರಂಟಿ ಯೋಜನೆ ಸ್ಥಗಿತ ಮಾಡಿ ಎಂದು ನಾನು ಹೇಳಿಲ್ಲ. ಗ್ಯಾರಂಟಿ ಪರಿಷ್ಕರಣೆ ಮಾಡಿ ಎಂದು ಸಲಹೆ ನೀಡಿದ್ದೇನೆ. ಜನರ ಅಭಿಪ್ರಾಯವನ್ನ ಹೈಕಮಾಂಡ್ ಗೆ ತಿಳಿಸಿದ್ದೇನೆ ಅಷ್ಟೇ. ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಿದರೆ 10 ಸಾವಿರ ಕೋಟಿ ರೂ. ಉಳಿಯುತ್ತೆ ಎನ್ನುವುದು ನನ್ನ ಸಲಹೆ. ಆದರೆ ವಿರೋಧ ಪಕ್ಷದವರ ರೀತಿ ನಾನು ಗ್ಯಾರಂಟಿ ನಿಲ್ಲಿಸಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕರಿಗೆ ಅನುದಾನದ ಕೊರತೆ ಆಗುತ್ತದೆ. ಆರ್ಥಿಕವಾಗಿ ಸಬಲರಾಗಿರುವವರನ್ನ ಗ್ಯಾರಂಟಿ ಯೋಜನೆಗಳಿಂದ ಕೈಬಿಡಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವೂ ಹೌದು. ಅರ್ಹರಿಗೆ ಸರ್ಕಾರಿ ಗ್ಯಾರಂಟಿ ಯೋಜನೆ ತಲುಪಬೇಕು ಎನ್ನುವ ಕಾರಣಕ್ಕೆ ಈ ಸಲಹೆ ನೀಡಲಾಗಿದೆ. ಇದು ಪಕ್ಷದ ವರಿಷ್ಠರು ಹಾಗೂ ಸಿಎಂ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.

ಶಕ್ತಿ ಯೋಜನೆ ಬಿಟ್ಟು ಉಳಿದವು ಪರಿಷ್ಕರಣೆ ಯೋಗ್ಯ: ಕೆ.ಎಚ್ ಮುನಿಯಪ್ಪ

ಶಕ್ತಿ ಯೋಜನೆ ಎಲ್ಲರಿಗೂ ಉಪಯೋಗವಾಗುತ್ತಿದೆ. ಇದನ್ನು ಹೊರತುಪಡಿಸಿ ನಾಲ್ಕೂ ಯೋಜನೆಗಳನ್ನೂ ಅರ್ಹರಿಗೆ ನೀಡುವಂತಾಗಲಿ, ಈ ಬಗ್ಗೆ ಆಯಾ ಯೋಜನೆಯಡಿ ಬರುವ ಸಚಿವರ ಅಭಿಪ್ರಾಯವನ್ನು ತಿಳಿಸಲಿ. ಮುಖ್ಯವಾಗಿ ಗೃಹ ಲಕ್ಷ್ಮೀ ಯೋಜನೆ ಪರಿಷ್ಕರಣೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಬೇಕು ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.

ಅರ್ಹರಿಗೆ ಮಾತ್ರ ಅನ್ನಭಾಗ್ಯ ಕೊಡಲು ತೀರ್ಮಾನ ಮಾಡಲಾಗಿದೆ. ಗ್ಯಾರಂಟಿ ಯೋಜನೆಯನ್ನ ಬಡವರಿಗೆಂದೇ ಜಾರಿ ಮಾಡಲಾಗಿದೆ. ಬಡತನದಲ್ಲಿ ಇರುವವರಿಗೆ ಗ್ಯಾರಂಟಿಗಳು ಅವಶ್ಯಕ. ನಾವು ಗ್ಯಾರಂಟಿಗೆ ಕತ್ತರಿ ಹಾಕಬೇಕೆಂದು ಹೇಳಲ್ಲ. ಶಕ್ತಿಯೋಜನೆ ಬಿಟ್ಟು ಉಳಿದ ಯೋಜನೆ ಪರಿಷ್ಕರಣೆ ಮಾಡಬೇಕಿದೆ ಎನ್ನುವುದು ಮುನಿಯಪ್ಪ ಸಲಹೆ.

ಪರಿಷ್ಕರಣೆಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ: ಡಾ. ಪರಮೇಶ್ವರ

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ‌ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು, ಮುಖಂಡರು ದೆಹಲಿಗೆ ಹೋದಾಗ ಎಐಸಿಸಿ ಕಚೇರಿಗೆ ಭೇಟಿ ನೀಡುವುದು ಸಂಪ್ರದಾಯ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ತಲುಪಬೇಕು ಎಂಬುದು ಬಹಳ ಜನರ ಅಭಿಪ್ರಾಯವಾಗಿದೆ. ಈಗಾಗಲೇ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ರೂ. 56 ಸಾವಿರ ಕೋಟಿ ಮೀಸಲಿಡಲಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುವುದು ಸಾಧ್ಯವಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಚರ್ಚೆಗಳಾಗುತ್ತಿರುವುದು ನಿಜ. ಶಾಸಕರು, ಕಾರ್ಯಕರ್ತರು ಸಾರ್ವಜನಿಕವಾಗಿ ಅಲ್ಲಲ್ಲಿ ಮಾತನಾಡಿರಬಹುದು. ಪಕ್ಷದ ವೇದಿಕೆಯಲ್ಲಿ, ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.‌13ರಷ್ಟು ಮತ ಹೆಚ್ಚಾಗಿವೆ. ಗ್ಯಾರಂಟಿ ಯೋಜನೆಗಳಿಂದ ಮತ ಹೆಚ್ಚಾಗಿದೆ ಎಂದು ಯಾಕೆ ವಿಶ್ಲೇಷಣೆ ಮಾಡಬಾರದು ಎಂದ ಅವರು, ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ನನ್ನ ಅಭಿಪ್ರಾಯವೊಂದೇ ಮುಖ್ಯವಾಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಹೋದರೆ ಗೊಂದಲ ಉಂಟಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿ ನಿಲ್ಲಲ್ಲ, ದುರ್ಬಳಕೆ ತಡೆಯುತ್ತೇವೆ:ಮಧುಬಂಗಾರಪ್ಪ

ಕರ್ನಾಟಕದಲ್ಲಿ ದೇಶಕ್ಕೆ ಮಾದರಿ ರೀತಿಯಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಬದಲಿಗೆ ಯೋಜನೆಯ ದುರ್ಬಳಕೆ ತಪ್ಪಿಸಲು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.

ಕೆಲವು ಸಚಿವರು ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿರುವುದನ್ನು ಗಮನಿಸಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಹಾಗೆಂದು ಯೋಜನೆ ನಿಲ್ಲಿಸೋಲ್ಲ. ಪರಿಷ್ಕರಣೆ ಮಾಡುವ ಬಗ್ಗೆಯೂ ಮಾಹಿತಿ ಇಲ್ಲ. ಆದರೆ ಯೋಜನೆಯಲ್ಲಿ ಅರ್ಹರ ಜತೆಗೆ ಅನರ್ಹರಿಗೂ ಸೌಲಭ್ಯ ಸಿಗುತ್ತಿದೆ ಎನ್ನುವುದು ಸತ್ಯ. ಈ ಕಾರಣದಿಂದಲೇ ದುರ್ಬಳಕೆ ತಡೆಯಬೇಕು ಎನ್ನುವ ಚರ್ಚೆ ಸರ್ಕಾರದ ಹಂತದಲ್ಲಿದೆ ಎಂದು ತಿಳಿಸಿದರು.

ಶಾಸಕರೇ ಧಿಕ್ಕಾರ ಹಾಕುವ ಸ್ಥಿತಿ ಬರಲಿದೆ: ಆರ್‌.ಅಶೋಕ

ಕಾಂಗ್ರೆಸ್‌ ಸರ್ಕಾರ ಸಂಪನ್ಮೂಲದ ಗ್ಯಾರಂಟಿ ಇಲ್ಲದೆ, ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆಗಳನ್ನು ತಂದಿದೆ. ಕಾಂಗ್ರೆಸ್‌ ಶಾಸಕರೇ ಸರ್ಕಾರಕ್ಕೆ ಧಿಕ್ಕಾರ ಹಾಕುವ ಸ್ಥಿತಿ ಬರಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷದ ಸರ್ಕಾರ ಬಂದರೂ ಸಾಲ ಮಾಡಲೇಬೇಕು. ಇಂತಹ ಸ್ಥಿತಿಯಲ್ಲಿ ಸಂಪನ್ಮೂಲದ ಗ್ಯಾರಂಟಿಯೇ ಇಲ್ಲದೆ, ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆ ತರಲಾಗಿದೆ. ಇದನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬೆಸ್ಕಾಂ ಹಾಗೂ ಇಲಾಖೆಗಳು ನಷ್ಟದಲ್ಲಿವೆ. ಕಾಂಗ್ರೆಸ್‌ ಶಾಸಕರೇ ಸರ್ಕಾರದ ವಿರುದ್ಧ ಧಿಕ್ಕಾರ ಹಾಕುವ ಸ್ಥಿತಿ ಬರಲಿದೆ. ಅದಕ್ಕೂ ಮುಂದೆ ಎಚ್ಚೆತ್ತುಕೊಳ್ಳಲಿ ಎಂದರು.

ಬೆಂಗಳೂರಿಗೆ ನಿಗದಿಯಾದ ಅನುದಾನಗಳನ್ನು ಈ ಹಿಂದೆಯೂ ವಾಪಸ್‌ ಪಡೆಯಲಾಗಿದೆ. ನಗರದಲ್ಲಿ ಪ್ರವಾಹದ ನಿಯಂತ್ರಣಕ್ಕಾಗಿ ಯೋಜನೆ ರೂಪಿಸಲು ಬಿಜೆಪಿ ಸರ್ಕಾರ ಅನುದಾನ ಮೀಸಲಿಟ್ಟಿತ್ತು. ಅದನ್ನು ಗ್ಯಾರಂಟಿಗೆ ನೀಡಲಾಗಿದೆ. ಪಾದಚಾರಿ ಮಾರ್ಗ, ಮೇಲ್ಸೇತುವೆ, ರಾಜಕಾಲುವೆ ಸೇರಿದಂತೆ ಎಲ್ಲ ಅಭಿವೃದ್ಧಿ ಯೋಜನೆಗಳ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಲಾಗಿದೆ. ಬಿಬಿಎಂಪಿ ಅನುದಾನ ಬಿಟ್ಟು, ಬಿಜೆಪಿ ಸರ್ಕಾರ 8-9 ಸಾವಿರ ಕೋಟಿ ರೂ. ನೀಡಿತ್ತು. ಈಗ ಸರ್ಕಾರ ಪಾಪರ್‌ ಆಗಿದೆ ಎಂದರು.