ಕರ್ನಾಟಕ ಬಜೆಟ್ 2024: ಕರ್ನಾಟಕ ಬಜೆಟ್ ಅಧಿವೇಶನ, ರಾಜ್ಯಪಾಲರ ಭಾಷಣದ ಮಹತ್ವವೇನು, ಇಲ್ಲಿದೆ ವಿವರ
ಕರ್ನಾಟಕ ಬಜೆಟ್ 2024: ಬಜೆಟ್ ಅಧಿವೇಶನ, ರಾಜ್ಯಪಾಲರ ಜಂಟಿ ಸದನ ಭಾಷಣದ ಸಂಪ್ರದಾಯ ಹಳೆಯದ್ದು. ಇದರ ಹಿನ್ನೆಲೆ, ಮಹತ್ವದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. (ಸುದ್ದಿ ವಿಶ್ಲೇಷಣೆ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನ (ಕರ್ನಾಟಕ ಬಜೆಟ್ 2024) ಫೆಬ್ರವರಿ 12ರಿಂದ 22 ರವರೆಗೆ ನಡೆಯಲಿದೆ. ಫೆ 12 ರಂದು ರಾಜ್ಯಪಾಲರ ಥಾವರ್ ಚಂದ್ ಗೆಹಲೋತ್ ಅವರು ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ಧೇಶಿಸಿ ಭಾಷಣ ಮಾಡಲಿದ್ದಾರೆ. ಫೆ.14 ಗುರುವಾರದವರೆಗೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ನಡೆಯಲಿದೆ. ಈ ಚರ್ಚೆಗೆ ಗುರುವಾರ ಮುಖ್ಯಮಂತ್ರಿಗಳು ಉತ್ತರ ನೀಡಲಿದ್ದಾರೆ. ಫೆ. 16ರ ಶುಕ್ರವಾರ 2024-25ನೇ ಸಾಲಿನ ಬಜೆಟ್ ಮಂಡನೆಯಾಗಲಿದೆ.
ಹಳೆಯ ಸಂಪ್ರದಾಯ
ಸಾಮಾನ್ಯವಾಗಿ ರಾಜ್ಯಪಾಲರು ಏಕೆ ಭಾಷಣ ಮಾಡುತ್ತಾರೆ ಮತ್ತು ಯಾವಾಗ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆದ ನಂತರ ಆರಂಭವಾಗುವ ಮೊದಲ ಮತ್ತು ಪ್ರತಿ ವರ್ಷದ ಮೊದಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ಸಂಪ್ರದಾಯ. ಜಂಟಿ ಅಧಿವೇಶನ ಎಂದರೆ ರಾಜ್ಯಪಾಲರು ಭಾಷಣ ಮಾಡುವಾಗ ವಿಧಾನಮಂಡಲದ ವಿಧಾನಪರಿಷತ್ ಮತ್ತು ವಿಧಾನಸಭೆಯ ಸದಸ್ಯರು ಒಟ್ಟಿಗೆ ಕೂರುತ್ತಾರೆ. ರಾಜ್ಯಪಾಲರು ಸದನಕ್ಕೆ ಆಗಮಿಸುವ ಮುನ್ನವೇ ಸದಸ್ಯರು ಆಸೀನರಾಗಿರುವುದು ಕಡ್ಡಾಯ.
ಭಾಷಣದ ನಂತರ ಸದನಗಳನ್ನು ಮುಂದೂಡಲಾಗುತ್ತದೆ. ನಂತರ ಮರುದಿನ ಪ್ರತ್ಯೇಕವಾಗಿ ಸದನಗಳ ಕಲಾಪ ನಡೆಯಲಿದ್ದು ಭಾಷನದ ಮೇಲೆ ಚರ್ಚೆ ನಡೆಯಲಿದೆ. ಸಾಮಾನ್ಯವಾಗಿ ರಾಜ್ಯಪಾಲರು ಹೊರ ರಾಜ್ಯದವರಾಗಿದ್ದು, ಇಂಗೀಷ್ ಅಥವಾ ಹಿಂದಿಯಲ್ಲಿ ಭಾಷಣ ಮಾಡುತ್ತಾರೆ. ಒಮ್ಮೊಮ್ಮೆ ಪೂರ್ಣ ಭಾಷಣವನ್ನು ಓದುತ್ತಾರೆ ಇಲ್ಲವೇ ಮೊದಲ ಮತ್ತು ಕೊನೆಯ ಪ್ಯಾರಾ ಓದಿ, ಭಾಷಣವನ್ನು ಓದಿದ್ದೇನೆ ಎಂದು ಪರಿಭಾವಿಸತಕ್ಕದ್ದು ಎಂದು ಭಾಷಣ ಮುಗಿಸುತ್ತಾರೆ.
ಸರಕಾರದ ಸಾಧನೆಗಳ ಪಟ್ಟಿ
ರಾಜ್ಯಪಾಲರ ಭಾಷಣವನ್ನು ಸರ್ಕಾರವೇ ಸಿದ್ದಪಡಿಸುವುದು ಸಂಪ್ರದಾಯವಾಗಿದೆ. ವರ್ಷದ ಮೊದಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡುವ ಭಾಷಣ ಸರ್ಕಾರದ ದಿಕ್ಸೂಚಿ ಎಂದೇ ಹೇಳಬಹುದು. ಹಿಂದಿನ ವರ್ಷದ ಸರ್ಕಾರದ ಸಾಧನೆಗಳು ಮತ್ತು ಪ್ರಸಕ್ತ ವರ್ಷದ ಮುನ್ನೋಟ, ಸರ್ಕಾರ ಕೈಗೊಳ್ಳುವ ನಿರ್ಧಾರಗಳನ್ನು ಕುರಿತು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ ಇರುತ್ತದೆ.
ಆ ಒಂದು ವರ್ಷದಲ್ಲಿ ಸರ್ಕಾರದ ಸಾಧನೆಗಳು, ಕೈಗೊಂಡ ಜನಪರ ಯೋಜನೆಗಳು ಮತ್ತು ಮುಂದಿನ ಆರ್ಥಿಕ ವರ್ಷದಲ್ಲಿ ಸರಕಾರ ಸಾಗುವ ಹಾದಿ ಮತ್ತು ಗೊತ್ತುಗುರಿ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ. ಇನ್ನು ಪ್ರತಿ ಪಕ್ಷಗಳು ಈ ಭಾಷಣವನ್ನು ವಿರೋಧಿಸುತ್ತವೆ. ಗೊತ್ತುಗುರಿ ಇಲ್ಲದ ಭಾಷಣ, ರಾಜ್ಯಪಾರಿಂದ ಸುಳ್ಳು ಹೇಳಿಸಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತವೆ. ಆಡಳಿತ ಪಕ್ಷದ ಸದಸ್ಯರು ಸಹಜವಾಗಿಯೇ ಭಾಷಣವನ್ನು ಹೊಗಳುತ್ತಾರೆ.
ವಿಸ್ತೃತ ಚರ್ಚೆ
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕುರಿತು ಮೂರು ನಾಲ್ಕು ದಿನ ವಿಧಾನಮಂಡಲದ ಎರಡೂ ಸದನಗಳಲ್ಲಿ ಚರ್ಚೆ ನಡೆಯುತ್ತದೆ. ಇಲ್ಲಿಯೂ ಆಡಳಿತ ಪಕ್ಷದ ಸದಸ್ಯರು ಸರ್ಕಾರ ಸ್ಪಷ್ಟ ಹಾದಿಯಲ್ಲಿ ಸಾಗುತ್ತಿದೆ. ಜನಪರ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರೆ ವಿಪಕ್ಷಗಳ ಸದಸ್ಯರು ಟೀಕಾಪ್ರಹಾರವನ್ನೇ ನಡೆಸುತ್ತಾರೆ. ಅಂತಿಮವಾಗಿ ನಿಗದಿಪಡಿಸಿದ ದಿನದಂದು ಮುಖ್ಯಮಂತ್ರಿಗಳು ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡುತ್ತಾರೆ.
ವಾಟಾಳ್ ಇಲ್ಲದ ಸದನ
ಈ ಹಿಂದೆ ರಾಜ್ಯಪಾಲರ ಭಾಷಣಕ್ಕೆ ಸದನದ ಸದಸ್ಯರಾಗಿದ್ದ ಕನ್ನಡ ಹೋರಾಟಗಾರ ವಾಟಾಳ್ನಾ ಗರಾಜ್ ಪ್ರತಿ ಬಾರಿಯೂ ಅಡ್ಡಿಪಡಿಸುತ್ತಿದ್ದರು. ರಾಜ್ಯಪಾಲರು ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಮಾಡುವುದು ಬೇಡ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಕಪ್ಪು ಪಟ್ಟಿ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸುತ್ತಿದ್ದರು. ರಾಜ್ಯಪಾಲರ ಭಾಷಣದ ಜೊತೆಗೆ ಇವರೂ ಭಾಷಣ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದರು. ಅಂತಹ ಸಂದರ್ಭದಲ್ಲಿ ರಾಜ್ಯಪಾಲ ಓದಿರುವುದಾಗಿ ಭಾವಿಸಿ ಎಂದು ಭಾಷಣವನ್ನು ಮೊಟುಕುಗೊಳಿಸುತ್ತಿದ್ದರು. ಈಗ ಅಡ್ಡಿಪಡಿಸುವ ಸದಸ್ಯರು ಇಲ್ಲ.
(ಸುದ್ದಿ ವಿಶ್ಲೇಷಣೆ: ಎಚ್.ಮಾರುತಿ, ಬೆಂಗಳೂರು)