ಕನ್ನಡ ಸುದ್ದಿ  /  Karnataka  /  Bangalore News Karnataka Lokayukta Raid On Corrupt Officials Get More Than 20 Crore Rupees Assets From Pdo Mrt

Lokayukta Raid: ಲೋಕಾಯುಕ್ತ ಪೊಲೀಸರ ಬೃಹತ್ ಕಾರ್ಯಾಚರಣೆ; ಪಿಡಿಒ ಆಸ್ತಿಯೆ 20 ಕೋಟಿ ರೂ. ಗೂ ಅಧಿಕ !

ಕರ್ನಾಟಕದ ಹಲವು ಕಡೆಗಳಲ್ಲಿ ಏಕಾಏಕಿ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳಿಂದ ಹಣ, ಆಸ್ತಿ ಪತ್ರ ವಶಪಡಿಸಿಕೊಂಡಿದ್ದಾರೆ.ವರದಿ: ಎಚ್.ಮಾರುತಿ. ಬೆಂಗಳೂರು

ಲೋಕಾಯುಕ್ತರು ವಶಪಡಿಸಿಕೊಂಡ ಹಣ, ಆಭರಣಗಳು
ಲೋಕಾಯುಕ್ತರು ವಶಪಡಿಸಿಕೊಂಡ ಹಣ, ಆಭರಣಗಳು

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ 13 ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಾದ್ಯಂತ 60 ಸ್ಥಳಗಳ ಮೇಲೆ ಇಂದು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು, ಮೈಸೂರು, ಉತ್ತರ ಕನ್ನಡ, ಬೀದರ್ ಮತ್ತು ರಾಮನಗರ ಜಿಲ್ಲೆಯ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಪ್ರತಿ ಅಧಿಕಾರಿಗಳ ಬಳಿ ಇದ್ದ ಆಸ್ತಿ, ನಗ, ನಗದು ಕಂಡು ಲೋಕಾಯುಕ್ತ ಅಧಿಕಾರಿಗಳೇ ಬೆರಗಾಗಿದ್ದಾರೆ. ಸಂಜೆಯಾದರೂ ಕೆಲವರ ಮನೆಯಲ್ಲಿ ವಶಪಡಿಸಿಕೊಂಡ ಆಸ್ತಿ ದಾಖಲೆಗಳ ಪತ್ರಗಳು, ಆಭರಣಗಳು, ಉಡುಗೊರೆಗಳು, ಹಣದ ಎಣಿಕೆ ಮುಗಿದಿರಲಿಲ್ಲ. ಅದರಲ್ಲೂ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆಸ್ತಿಯೇ 20 ಕೋಟಿ ರೂ.ಗೂ ಅಧಿಕವಾಗಿರುವುದು ಕಂಡು ಬಂದಿದೆ.

ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಯತೀಶ್ ಚಂದ್ರ ಹಾಗೂ ಚನ್ನಪಟ್ಟಣ ಮೈಲನಾಯಕನಹಳ್ಳಿ ಪಿಡಿಒ ಶಿಬಾ ನಿಖಾತ್ ಅವರ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದರು.

ಯತೀಶ್ ಚನ್ನಪಟ್ಟಣ ಮತ್ತು ಮೈಸೂರಿನಲ್ಲಿ ಅಪಾರ ಆಸ್ತಿ ಹೊಂದಿದ್ದು ಇವರ ಆಸ್ತಿ ಮೌಲ್ಯ ರೂ.20 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇವರು ಹೊಸದಾಗಿ ಪತ್ನಿ ಹೆಸರಿನಲ್ಲಿ ಮೈಸೂರಿನಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಪಿಡಿಒ ಆಗಿರುವ ಇವರು ಈಗಲ್ಟನ್ ರೆಸಾರ್ಟ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಅಲ್ಲಿಂದಲೇ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ತೆರಿಗೆ ವಸೂಲಿ ಮಾಡುವ ಪಂಚಾಯಿತಿ ಎಂದು ಮಂಚನಾಯಕನಹಳ್ಳಿ ಖ್ಯಾತಿ ಪಡೆದಿದೆ.

ಶಿಬಾ ಅವರ ಮೇಲೂ ಭ್ರಷ್ಟಾಚಾರದ ಅರೋಪಗಳಿದ್ದು, ಒಂದು ತಿಂಗಳಿಂದ ಕಚೇರಿಗೆ ಬರುತ್ತಿಲ್ಲ.

ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಎಂಜಿನಿಯರ್‌ ಎಸ್‌.ಪಿ.ರಂಗನಾಥ್‌, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜಯಣ್ಣ ಬಿ.ವಿ. ಅಬಕಾರಿ ಇಲಾಖೆ ಉಡುಪಿ ಉಪ ಆಯುಕ್ತೆ ರೂಪಾ ಅವರ ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ.

ಬೀದರ್ ಜಿಲ್ಲೆಯ ಭಾಲ್ಕಿ ಕಾರಂಜಾ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಕುಮಾರ್ ಸ್ವಾಮಿ ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿರುವ ಮನೆ ಮತ್ತು ಕಚೇರಿ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಆರ್. ರೇವಣಕರ್ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡದ ವಲಯ ಅರಣ್ಯ ಅಧಿಕಾರಿ ಮಹೇಶ್‌ ಚಂದ್ರಯ್ಯ ಹಿರೇಮಠ, ಮೈಸೂರಿನ ಸಹಾಯಕ ಎಂಜಿನಿಯರ್‌ ಫಯಾಝ್‌ ಅಹಮದ್‌, ಕೋಲಾರದ ಸಹಾಯಕ ನಿರ್ದೇಶಕ ನಾಗರಾಜಪ್ಪ, ವಿಜಯಪುರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ, ಚಿಕ್ಕಬಳ್ಳಾಪುರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸದಾಶಿವಯ್ಯ, ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

13 ಎಸ್‌ಪಿಗಳು, 12 ಡಿವೈಎಸ್‌ಪಿಗಳು, 25 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 130 ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದ ತಂಡ ದಾಳಿ ನಡೆಸಿವೆ. ಎಲ್ಲ ಕಡೆಯಿಂದ ಮಾಹಿತಿ ಲಭಿಸಿದ್ದು, ವಶಪಡಿಸಿಕೊಂಡಿರುವ ಹಣ, ದಾಖಲೆಗಳ ವಿವರ ಸದ್ಯವೇ ತಿಳಿಯಲಿದೆ ಎನ್ನುವುದು ಲೋಕಾಯುಕ್ತದ ಹಿರಿಯ ಅಧಿಕಾರಿಯೊಬ್ಬರ ವಿವರಣೆ.

(ವರದಿ: ಎಚ್. ಮಾರುತಿ, ಬೆಂಗಳೂರು)

ವಿಭಾಗ