ಕನ್ನಡ ಸುದ್ದಿ  /  Karnataka  /  Bangalore News Karnataka Minister Krishna Byregowda Dares Fm Nirmala Sitharaman To Come For Debate On Gst Issue Kub

GST: ಕರ್ನಾಟಕಕ್ಕೆ ಜಿಎಸ್‌ಟಿ ಮೋಸ, ಬಹಿರಂಗ ಚರ್ಚೆಗೆ ಸಿದ್ದವಿದ್ದಿರಾ?; ನಿರ್ಮಲಾ ಸೀತಾರಾಮನ್ ಗೆ ಸಚಿವ ಕೃಷ್ಣ ಬೈರೇಗೌಡ ಸವಾಲು

ಜಿಎಸ್‌ಟಿ ವಿಚಾರದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಕರ್ನಾಟಕ ಸರ್ಕಾರದ ನಡುವೆ ಚರ್ಚೆಗಳು ತೀವ್ರ ಸ್ವರೂಪ ಪಡೆದಿದ್ದು, ಚರ್ಚೆಗೆ ಬರುವಂತೆ ನಿರ್ಮಲಾ ಅವರಿಗೆ ಸಚಿವ ಕೃಷ್ಣ ಬೈರೇಗೌಡ ಸವಾಲು ಹಾಕಿದ್ದಾರೆ.

ಜಿಎಸ್‌ಟಿ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್‌ ಹಾಗೂ ಕೃಷ್ಣ ಬೈರೇಗೌಡ ಅವರ ನಡುವೆ ಚರ್ಚೆಗಳು ಜೋರಾಗಿವೆ.
ಜಿಎಸ್‌ಟಿ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್‌ ಹಾಗೂ ಕೃಷ್ಣ ಬೈರೇಗೌಡ ಅವರ ನಡುವೆ ಚರ್ಚೆಗಳು ಜೋರಾಗಿವೆ.

ಬೆಂಗಳೂರು: ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೇ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯವಾಗುತ್ತಿದೆ. ಮಾರ್ಚ್‌ 31ಕ್ಕೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಅವರು ಸಿದ್ದರಿದ್ದಾರ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸವಾಲೆಸೆದಿದ್ದಾರೆ. ರಾಜ್ಯಕ್ಕೆ ಜಿಎಸ್‌ಟಿ ತೆರಿಗೆ ಹಂಚಿಕೆ ಬಾಕಿ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್, “ ಕರ್ನಾಟಕಕ್ಕೆ ನೀಡಬೇಕಿರುವ ತೆರಿಗೆ ಪಾಲಿನಲ್ಲಿ ಯಾವುದೇ ಹಣ ಬಾಕಿ ಇಲ್ಲ” ಎಂದು ಹೇಳಿದ್ದರು. ಇದರ ಬೆನ್ನಿಗೆ ಸೋಮವಾರ ವಿಕಾಸಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ದಾಖಲೆ ಸಮೇತ ಬಿಚ್ಚಿಟ್ಟರು.

ನಮ್ಮ ರಾಜ್ಯದ ಹಕ್ಕನ್ನು ಕೇಳಿದರೆ ಕೇಂದ್ರ ಸರ್ಕಾರ ನಾವು ಸುಳ್ಳು ಹೇಳುತ್ತಿದ್ದೇವೆ ಎಂದು ಆರೋಪ ಹೊರಿಸಿ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದೆ. ಸ್ವತಃ ಕರ್ನಾಟಕದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರು ಹೀಗೆ ರಾಜ್ಯದ ಹಿತದ ವಿಚಾರದಲ್ಲಿ ಸುಳ್ಳು ಹೇಳಿ ಜನರನ್ನು ಗೊಂದಲಕ್ಕೀಡು ಮಾಡುತ್ತಿರುವುದು ಸರಿಯಲ್ಲ. ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮೈಸೂರಿನಲ್ಲಿ ಬಹಿರಂಗ ಚರ್ಚೆಯಾಗಲಿ. ಈ ಚರ್ಚೆಗೆ ನಾವು ಸಿದ್ದ ನಿರ್ಮಲಾ ಸೀತಾರಾಮನ್ ಅವರು ಸಿದ್ದವಿದ್ದಾರ? ಎಂದು ಅವರು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.

ಅನುದಾನ ಕಡಿತ ಏಕೆ

ಯಾವುದೇ ರಾಜ್ಯಕ್ಕೆ 2019- 20ರಲ್ಲಿ ಕೊಟ್ಟಿದ್ದಕ್ಕಿಂತ ಕಡಿಮೆ ಅನುದಾನವನ್ನು ಕೊಡುವಂತಿಲ್ಲ ಎಂದು ಹಣಕಾಸು ಆಯೋಗ ಹೇಳುತ್ತದೆ. ಹಣಕಾಸು ಆಯೋಗದವರು 2019-20ರಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಬಂದ ತೆರಿಗೆ ಪಾಲಿಗಿಂತ 2020-21 ರಲ್ಲಿ ರೂ. 5495 ಕೋಟಿ ಹಣ ಕಡಿಮೆಯಾಗಿತ್ತು. ಈ ಹಣವನ್ನು ರಾಜ್ಯಕ್ಕೆ ತುಂಬಿಕೊಡಬೇಕು ಎಂದು ಸ್ವತಃ ಹಣಕಾಸು ಆಯೋಗ ಶಿಫಾರಸ್ಸು ಮಾಡಿದರೂ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದದ್ದು ಏಕೆ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.

ರಾಜ್ಯದ ಪಾಲಿನ ನ್ಯಾಯಯುತ ತೆರಿಗೆ ಹಂಚಿಕೆ ನಷ್ಟ ಪರಿಹಾರ ಕೇಳಿದರೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2021 ನೇ ವರ್ಷದ ಅಂತಿಮ ವರದಿಯಲ್ಲಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ, ಹಣಕಾಸು ಆಯೋಗದ ಅಂತಿಮ ವರದಿಯ 36ನೇ ಪುಟದಲ್ಲಿ ಕರ್ನಾಟಕಕ್ಕೆ ನಷ್ಟ ತುಂಬಿಕೊಡಬೇಕು ಎಂದು ಬರೆಯಲಾಗಿದೆಯಲ್ಲ ಇದೇನು? ಎಂದು ಅವರು ಕುಟುಕಿದರು.

2019-20ರಲ್ಲಿ ರಾಜ್ಯಕ್ಕೆ ಕೇಂದ್ರದಿಂದ ರೂ. 36675 ಕೋಟಿ ತೆರಿಗೆ ಪಾಲು ಬಂದಿತ್ತು. 2020-21ಕ್ಕೆ ಕೇವಲ ರೂ.31180 ಕೋಟಿಗೆ ಕುಸಿದಿತ್ತು. ಹೀಗಾಗಿ ರಾಜ್ಯಕ್ಕೆ ಆಗಿರುವ ನಷ್ಟ ರೂ. 5495 ಕೋಟಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ. ಆದರೆ, ಈ ಹಣ ಈವರೆಗೆ ರಾಜ್ಯಕ್ಕೆ ಬಂದಿಲ್ಲ. 2021-26ನೇ ಸಾಲಿನಲ್ಲಿ ರೂ.6,000 ಕೋಟಿ ಶಿಫಾರಸು ಮಾಡಲಾಗಿದೆ. ಒಟ್ಟಾರೆ, ರೂ.11495 ಕೋಟಿ ಹಣ ರಾಜ್ಯಕ್ಕೆ ಬರಬೇಕಿದೆ ಎನ್ನುವುದು ಸಚಿವರು ನೀಡಿದ ವಿವರಣೆ.

ಸಿದ್ದರಾಮಯ್ಯ ವಿರುದ್ದವೇ ಸುಳ್ಳು ಆರೋಪ

ಈ ಬಗ್ಗೆ ಪ್ರಶ್ನೆ ಮಾಡಿದರೆ ನಿರ್ಮಲಾ ಸೀತಾರಾಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುತ್ತಿರುವುದು ಸುಳ್ಳು ಎನ್ನುತ್ತಿದ್ದಾರೆ. ಅಸಲಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸೆಪ್ಟೆಂಬರ್ 17 2020ರಲ್ಲಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಕೋರಿದ್ದರು. ಬಸವರಾಜು ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸೀತಾರಾಮನ್ ಅವರಿಗೆ ಪತ್ರ ಬೆರೆದಿದ್ದರು. ಈ ಎಲ್ಲಾ ವಿಚಾರಗಳೂ ದಿನಪತ್ರಿಕೆಗಳಲ್ಲೂ ಸಹ ವರದಿಯಾಗಿತ್ತು. ಹಾಗಾದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರೂ ಸಹ ಸುಳ್ಳು ಹೇಳಿದ್ದರಾ? ಎಂದು ಸಚಿವರು ಮಾತಿನಲ್ಲೇ ತಿವಿದರು.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದೆಡೆ ಹಣಕಾಸು ಆಯೋಗದ ಒಂದೇ ಒಂದು ಶಿಫಾರಸ್ಸನ್ನು ಸಹ ನಾವು ತಿದ್ದಲು ಹೋಗುವುದಿಲ್ಲ ಎನ್ನುತ್ತಾರೆ. ಮತ್ತೊಂದೆಡೆ ರಾಜ್ಯಗಳಿಗೆ ನೀಡುವ ವಿಶೇಷ ಅನುದಾನವನ್ನು ಹಿಂಪಡೆಯುವಂತೆ ಹಣಕಾಸು ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಲೋಕಸಭೆಯಲ್ಲೇ ಉತ್ತರ ನೀಡುತ್ತಾರೆ. ಹಾಗಾದ್ರೆ ರಾಜ್ಯದ ಪಾಲಿನ ಹಣವನ್ನು ತಡೆಹಿಡಿಯಲು ಮಾತ್ರ ಇವರ ಕಾನೂನುಗಳು ಇರುವುದಾ? ಎಂದು ವಿಷಾದಿಸಿದರು.

ಗ್ಯಾರಂಟಿಗೆ ಕೇಂದ್ರದಿಂದ ನಯಾಪೈಸೆಯೂ ಬೇಕಾಗಿಲ್ಲ

ಗ್ಯಾರಂಟಿಗೆ ಕೇಂದ್ರ ಸರ್ಕಾರದ ನಯಾಪೈಸೆಯೂ ಬೇಕಾಗಿಲ್ಲ. ನಮ್ಮ ಗ್ಯಾರಂಟಿಗೆ ಬೇಕಾದ ಹಣವನ್ನು ನಾವೇ ಹೊಂದಿಸಿಕೊಲ್ಲುತ್ತಿದ್ದೇವೆ .ಗ್ಯಾರಂಟಿ ಜೊತೆಗೆ ನಿವೃತ್ತಿ ವೇತನ ರೂ.11200 ಕೋಟಿ ಹಣವನ್ನೂ ಸಹ ರಾಜ್ಯ ಸರ್ಕಾರವೇ ನೀಡುತ್ತಿದೆ. ಈ ಹಣದ ಪೈಕಿ ಕೇಂದ್ರ ಸರ್ಕಾರದ ಪಾಲು ರೂ. 550 ಕೋಟಿ ಮಾತ್ರ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ನಮ್ಮ ಗ್ಯಾರಂಟಿ ಯೋಜನೆಗಳಿಗೆ ಇವರಿಂದ ನಯಾಪೈಸೆಯೂ ಬೇಕಾಗಿಲ್ಲ. ನಮ್ಮ ತೆರಿಗೆಯಿಂದ ನಮ್ಮ ನ್ಯಾಯಯುತ ಪಾಲನ್ನು ಕೊಟ್ಟರೆ ಸಾಕು. ನಮ್ಮ ರಾಜ್ಯಕ್ಕೆ ಬರಬೇಕಾದ ಬರಪರಿಹಾರವನ್ನು ಕೊಡಲಿ. ನಿಮ್ಮ ಉದಾರತನವೇನು ಬೇಕಾಗಿಲ್ಲ. ಕರ್ನಾಟಕದ ಜನ ಇರುವುದು ಕೇವಲ ಓಟು ಒತ್ತೋಕಷ್ಟೇ ಎಂಬ ಭಾವನೆಯಿಂದ ಕೇಂದ್ರ ಸರ್ಕಾರ ಹೊರಬರಲಿ. ನಮ್ಮನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವುದನ್ನು ಬಿಡಲಿ. ನಮ್ಮ ಹಕ್ಕನ್ನು ನಮಗೆ ಕೊಡಲಿ ಎಂದು ಅವರು ಒತ್ತಾಯಿಸಿದರು.