Prajwal Revanna Scandal: ಪ್ರಜ್ವಲ್ ರೇವಣ್ಣಗೆ ಮತ್ತೆ ಲುಕ್‌ಔಟ್ ನೊಟೀಸ್ ಜಾರಿ ಮಾಡಿದ ಎಸ್‌ಐಟಿ, ನೀವು ತಿಳಿಯಬೇಕಾದ 10 ಅಂಶಗಳಿವು
ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅತ್ಯಾಚಾರದ ಆರೋಪ ಹೊತ್ತಿರುವ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಗೆ ಎಸ್‌ಐಟಿ ಮತ್ತೆ ಲುಕ್‌ಔಟ್ ನೋಟಿಸ್ ನೀಡಿದೆ. ಪ್ರಕರಣ ಕುರಿತ 10 ಪ್ರಮುಖ ಅಂಶಗಳು ಇಲ್ಲಿವೆ.
ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಶೋಷಣೆ, ಅತ್ಯಾಚಾರ ಆರೋಪಗಳು ಹಾಗೂ ಅಶ್ಲೀಲ ವಿಡಿಯೊ ಸಂಬಂಧ ಜೆಡಿಎಸ್‌ನಿಂದ (JDS) ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna Sex Scandal Case) ಮತ್ತಷ್ಟು ಸಂಕಷ್ಟ ಎದುರಾಗಿದೆ. ಗನ್ ತೋರಿಸಿ ಸಹಕರಿಸಿದಿದ್ದರೆ ನಿನ್ನನ್ನೂ, ನಿನ್ನ ಪತಿಯನ್ನೂ ಬಿಡೋದಿಲ್ಲ ಎಂದು ಬೆದರಿಸಿ ಅತ್ಯಾಚಾರ ಮಾಡಿರುವ ಆರೋಪ ಪ್ರಜ್ವಲ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಮಹಿಳೆಯೊಬ್ಬರು ಬೆಂಗಳೂರಿನ ಸಿಐಡಿ ಠಾಣೆಗೆ ದೂರು ನೀಡಿದ್ದಾರೆ. ಹಾಸನ ಮೂಲದ ಸ್ಥಳೀಯ ಸಂಸ್ಥೆಗಳ ಮಾಜಿ ಸದ್ಯಸ್ಯೆ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಜ್ವಲ್ ವಿರುದ್ಧ ಎರಡನೇ ಮಹಿಳೆ ನೀಡಿರುವ ದೂರ ಇದಾಗಿದೆ.
ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿರುವ ಎಸ್‌ಐಟಿ ಪ್ರಜ್ವಲ್ ರೇವಣ್ಣಗೆ ಎರಡನೇ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ. ಆರೋಪಿ ಪ್ರಜ್ವಲ್ ಪದೇ ಪದೇ ಫೋನ್ ಕರೆ ಮಾಡಿ ದೇಹವನ್ನು ನಗ್ನವಾಗಿ ತೋರಿಸುವಂತೆ ಒತ್ತಾಯಿಸುತ್ತಿದ್ದ, ಬಟ್ಟೆ ಬಿಚ್ಚುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಅನೇಕ ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಪ್ರಜ್ವಲ್ ಅವರ ತಂದೆ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಅವರಿಗೂ ಸಂಕಷ್ಟ ಎದುರಾಗಿದ್ದು, ಕೆಆರ್ ನಗರದ ಮಹಿಳೆಗೆ ಲೈಂಗಿಕ ಕಿರುಕುಳ, ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಕೋರ್ಟ್ ಬಂಧನದಿಂದ ರಕ್ಷಣೆ ನೀಡಿದರೆ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ಎಚ್‌ಡಿ ರೇವಣ್ಣ ಹೇಳಿರುವುದಾಗಿ ರೇವಣ್ಣ ಪರ ವಕೀಲರು ಮಾಹಿತಿ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ, ಎಚ್ ಡಿ ರೇವಣ್ಣ ಕುರಿತು ತಿಳಿಯಬೇಕಾದ 10 ಅಂಶಗಳು
1 . ಅಶ್ಲೀಲ ವಿಡಿಯೊ ಸಂಬಂಧ ಪ್ರಜ್ವಲ್ ರೇವಣ್ಣಗೆ ಬ್ಲೂ ಕಾರ್ನರ್ ನೋಟಿಸ್ ನೀಡಲು ಅನುಮತಿ ನೀಡುವಂತೆ ಸಿಬಿಐಗೆ ಎಸ್‌ಐಟಿ ಮನವಿ ಮಾಡಿದೆ
2. ಬ್ಲೂ ಕಾರ್ನರ್ ನೋಟಿಸ್ ಮೂಲಕ ಪ್ರಜ್ವಲ್ ರೇವಣ್ಣ ಪ್ರಸ್ತುತ ಇರುವ ದೇಶ, ಸ್ಥಳ ಹಾಗೂ ಚಟುವಟಿಗಳ ಬಗ್ಗೆ ಮಾಹಿತಿ ಕಲೆಹಾಕಲು ನೆರವಾಗುತ್ತೆ
3. ಬಂಧನದಿಂದ ಕೋರ್ಟ್ ರಕ್ಷಣೆ ನೀಡಿದರೆ ಎಸ್‌ಐಟಿ ಮುಂದೆ ಇಂದೇ (ಮೇ 4, ಶನಿವಾರ) ಹಾಜರಾಗುವುದಾಗಿ ಎಚ್‌ಡಿ ರೇವಣ್ಣ ಹೇಳಿದ್ದಾರೆ ಎಂದು ರೇವಣ್ಣ ಪರ ವಕೀಲರ ಹೇಳಿಕೆ
4. ಕೆಆರ್ ನಗರದ ಮಹಿಳೆಗೆ ಲೈಂಗಿಕ ಕಿರುಕುಳ, ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ಎಚ್‌ಡಿ ರೇವಣ್ಣ
5. ಎಚ್‌ಡಿ ರೇವಣ್ಣ ಕೆಆರ್ ನಗರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಎಸ್‌ಐಟಿಯಿಂದ 40 ಕಡೆ ದಾಳಿ
6. ಕೆಆರ್ ನಗರ ಮೂಲದ ಮಹಿಳೆಗೆ ಅಪಹರಣ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಎಚ್‌ಡಿ ರೇವಣ್ಣಗೆ ಎಸ್‌ಐಟಿಯಿಂದ ಲುಕ್‌ಔಟ್ ನೋಟಿಸ್
7. ಪ್ರಜ್ವಲ್ ರೇವಣ್ಣ ವಿಡಿಯೊದಲ್ಲಿದ್ದ ಮಹಿಳೆ ನಾಪತ್ತೆ ಪ್ರಕರಣದಲ್ಲಿ ಭವಾನಿ ರೇವಣ್ಣ ಸಂಬಂಧಿ ಸತೀಶ್ ಬಾಬು ಬಂಧನ
8. ಗನ್ ಇದೆ ಎಂದು ಬೆದರಿಕೆ ಹಾಕಿ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಆರೋಪ. ಪ್ರಜ್ವಲ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು
9. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ನಿಲ್ಲುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ
10. ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್ ರೇವಣ್ಣ ಪ್ರಕರಣ ಹೊರಬಂದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ