ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ, ಪೂರ್ವಮುಂಗಾರಿಗೆ ತುಂಬಿತು ಮಂಚನಬೆಲೆ

Karnataka Reservoirs: ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ, ಪೂರ್ವಮುಂಗಾರಿಗೆ ತುಂಬಿತು ಮಂಚನಬೆಲೆ

ಕೇರಳದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ( Kerala Rains) ಕಬಿನಿ ಜಲಾಶಯಕ್ಕೆ ನೀರು ಬಂದರೆ, ಬೆಂಗಳೂರು ಮಳೆ( Bangalore Rains) ಮಂಚನಬೆಲೆ ಜಲಾಶಯ ತುಂಬುವಂತೆ ಮಾಡಿದೆ.

ಮಾಗಡಿ ತಾಲ್ಲೂಕಿನ ಮಂಚನಬೆಲೆಯಿಂದ ನೀರು ಹೊರ ಬಿಡಲಾಗುತ್ತಿದೆ.
ಮಾಗಡಿ ತಾಲ್ಲೂಕಿನ ಮಂಚನಬೆಲೆಯಿಂದ ನೀರು ಹೊರ ಬಿಡಲಾಗುತ್ತಿದೆ.

ಬೆಂಗಳೂರು: ಕೇರಳದ ವಯನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಒಂದೇ ದಿನದಲ್ಲಿ 4 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್‌ ನೀರು ಒಳ ಬರುತ್ತಿರುವುದರಿಂದ ಒಂದೇ ದಿನದಲ್ಲಿ ಒಂದು ಅಡಿಯಷ್ಟು ಜಲಾಶಯದ ನೀರು ತುಂಬಿ ಹೋಗಿದೆ. ಬೆಂಗಳೂರಿನ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು ಕಾವೇರಿ ನದಿಯ ಉಪನದಿ ಅರ್ಕಾವತಿಯ ಮಂಚನಬೆಲೆ ಜಲಾಶಯವೂ ಪೂರ್ವ ಮುಂಗಾರು ಮಳೆಗೆ ತುಂಬಿ ಹೋಗಿದೆ. ಇದರಿಂದಾಗಿ ಮಂಚನಬೆಲೆ ಜಲಾಶಯದಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದೆ. ನೀರು ಬರುತ್ತಿರುವುದರಿಂದ ಜಲಾಶಯದಿಂದ ಪ್ರತಿದಿನ 10 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಕಬಿನಿಗೆ ಹರಿದ ನೀರು

ಮೈಸೂರು ಜಿಲ್ಲೆಯಲ್ಲಿರುವ ಕಬಿನಿ ಜಲಾಶಯಕ್ಕೆ ಕೇರಳದ ಮಳೆಯೇ ಆಸರೆ. ಅಲ್ಲಿ ಉತ್ತಮ ಮಳೆಯಾದರೆ ಬೆಂಗಳೂರು ಮಾತ್ರವಲ್ಲದೇ ತಮಿಳುನಾಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವ ಕಬಿನಿ ಜಲಾಶಯಕ್ಕೆ ನೀರು ಬರುತ್ತಿದೆ. ಕೇರಳದ ವಯನಾಡು ಭಾಗದಲ್ಲಿ ಮೂರ್ನಲ್ಕು ದಿನದಿಂದ ಮಳೆಯಾಗುತ್ತಿರುವ ಕಾರಣದಿಂದಾಗಿ ಸೊರಗಿದ್ದ ಜಲಾಶಯಕ್ಕೆ ಕಳೆ ಬರುತ್ತಿದೆ. ಒಂದೇ ದಿನ 4356 ಕ್ಯೂಸೆಕ್‌ ನೀರು ಹರಿದು ಬಂದಿದೆ. ಇದರಿಂದ ಜಲಾಶಯದ ನೀರಿನ ಮಟ್ಟವೂ 2258.29 ಅಡಿಗೆ ಏರಿಕೆ ಕಂಡಿದೆ. ದಿನದ ಅಂತರದಲ್ಲೇ ಒಂದು ಅಡಿ ನೀರು ಬಂದಿರುವುದು ಸಮಾಧಾನ ತಂದಿದೆ. ಇನ್ನೂ ನೀರು ಬರುವ ನಿರೀಕ್ಷೆಯಿದೆ.

ಕಳೆದ ಬಾರಿ ಮಳೆ ಕೊರತೆಯಿಂದ ಕಬಿನಿ ಜಲಾಶಯ ಒಂದು ಬಾರಿ ತುಂಬಿತ್ತು.ಆನಂತರ ನೀರು ಹರಿಸಿದ್ದರಿಂದ ಪ್ರಮಾಣ ಕುಸಿದಿತ್ತು. ಲೈವ್‌ ಸ್ಟೋರೇಜ್‌ ನೀರು ಮುಗಿದು ಕೆಳ ಹಂತದ ನೀರನ್ನೂ ಬಳಕೆ ಮಾಡಲಾಗುತ್ತಿತ್ತು.

ಕಬಿನಿ ಜಲಾಶಯ ಬೇಗನೇ ತುಂಬುತ್ತದೆ. ಹೆಚ್ಚು ಸಾಮರ್ಥ್ಯದ ಜಲಾಶಯವೂ ಅಲ್ಲ. ಆದರೆ ಹೆಚ್ಚಿನ ಪ್ರಮಾಣದ ನೀರು ನದಿ ಮೂಲಕ ಹರಿಯುತ್ತದೆ. ಏಕೆಂದರೆ ಬೇಗನೇ ತುಂಬಿದಾಗ ಹೊರಕ್ಕೆ ಹರಿ ಬಿಡಲಾಗುತ್ತದೆ. ಈ ಬಾರಿಯೂ ಮುಂಗಾರು ಹೆಚ್ಚು ಇರುವ ಸೂಚನೆ ಇರುವುದರಿಂದ ಜಲಾಶಯ ಬೇಗನೇ ತುಂಬುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತುಂಬಿದ ಮಂಚನಬೆಲೆ

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಭಾಗದಲ್ಲಿ ಬರುವ ಮಂಚನಬೆಲೆ ಜಲಾಶಯ ಪೂರ್ವ ಮುಂಗಾರು ಮಳೆಗೆ ತುಂಬಿದೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಜಲಾಶಯ ಗುರುವಾರ ತುಂಬಿದೆ. ಜಲಾಶಯದಿಂದ ಅರ್ಕಾವತಿ ನದಿ ಮೂಲಕ 10 ಸಾವಿರ ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ.

ಮಂಚನಬೆಲೆ ಜಲಾಶಯವನ್ನು ನೀರಾವರಿ ಯೋಜನೆಗಳಿಗಾಗಿ ನಿರ್ಮಿಸಲಾಯಿತು. ಇದು ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇದು ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸಿದ್ದು. ಅರ್ಕಾವತಿ ನದಿಯು ಇಲ್ಲಿಂದ ಮುಂದೆ ಹರಿದು ಸಂಗಮದ ಬಳಿ ಕಾವೇರಿ ನದಿಯನ್ನು ಸೇರುತ್ತದೆ.

ಮಂಚನಬೆಲೆ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಕ್ಕೆ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಿತಿ ತಲುಪಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದ ಕೆಳಗಿನ ನದಿ ಪಾತ್ರದ ಅಕ್ಕಪಕ್ಕದ ಗ್ರಾಮಗಳ ಜನರು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಬಿಡುವುದಾಗಲಿ, ನದಿಯನ್ನು ದಾಟುವುದಾಗಲಿ ಮಾಡಬಾರದೆಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ ಎಂದು ಮಂಚನಬೆಲೆ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.

ಮಂಚನಬೆಲೆ ಜಲಾಶಯದಿಂದ ಕಳೆದ ಬಾರಿ ಹೆಚ್ಚಿನ ನೀರು ಹರಿಸಿದಾಗ ಜಲಾಶಯದ ಪಕ್ಕದ ಮುಖ್ಯ ಸೇತುವೆ ಕೊಚ್ಚಿ ಹೋಗಿದೆ. ಈಗ ತಾತ್ಕಾಲಿಕ ಸೇತುವೆಯಲ್ಲಿ ಸಾರ್ವಜನಿಕರ ಸಂಚಾರ ಮುಂದುವರೆದಿದೆ. ಕಾವೇರಿ ನೀರಾವರಿ ನಿಗಮದಿಂದ ಹೊಸದಾಗಿ ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದರೂ ಕೆಲಸ ಶುರುವಾಗಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಿ ಬೇಗನೇ ಸೇತುವೆ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024