Bangalore News: ಕರ್ನಾಟಕದಲ್ಲಿ ಬಿಯರ್‌ಗೆ ಭಾರೀ ಬೇಡಿಕೆ, 11 ದಿನದಲ್ಲಿ 27 ಲಕ್ಷ ಲೀ. ಬಿಯರ್ ಮಾರಾಟ
Beer Sales High ಬೇಸಿಗೆ ವೇಳೆ ಕರ್ನಾಟಕದಲ್ಲಿ ಬಿಯರ್ ಮಾರಾಟ ಹೆಚ್ಚಾಗಿದೆ. ಕೆಲವೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಬಿಯರ್ ಮಾರಾಟವಾಗಿರುವುದು ವಿಶೇಷ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ಕರ್ನಾಟಕದಲ್ಲಿ ಬಿಯರ್ ಮಾರಾಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಡೀ ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿ ಹೆಚ್ಚಳವಾಗಿರುವುದು ಒಂದು ವಿಶೇಷವಾಗಿದ್ದರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಾರಾಟವಾಗಿರುವುದು ಮತ್ತೊಂದು ವಿಶೇಷ. ಧಗೆಯನ್ನು ತಾಳಲಾರದೆ ಮದ್ಯಪ್ರಿಯರು ಹೆಚ್ಚು ಹೆಚ್ಚಾಗಿ ಬಿಯರ್ ಮೊರೆ ಹೋಗುತ್ತಿದ್ದಾರೆ. ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ದಾಖಲೆ ಪ್ರಮಾಣದ 23.5 ಲಕ್ಷ ಕರ್ಟನ್ ಬಾಕ್ಸ್ ಗಳಷ್ಟು ಬಿಯರ್ ಮಾರಾವಾಗಿದೆ. 2023 ರ ಏಪ್ರಿಲ್ ತಿಂಗಳಲ್ಲಿ 38.6 ಲಕ್ಷ ಕರ್ಟನ್ ಬಾಕ್ಸ್ ಗಳಷ್ಟು ಬಿಯರ್ ಮಾರಾಟವಾಗಿದ್ದರೆ ಈ ವರ್ಷದ ಏಪ್ರಿಲ್ ನ ಮೊದಲ ಎಡು ವಾರಗಳಲ್ಲಿ 23.5 ಲಕ್ಷ ಕರ್ಟನ್ ಬಾಕ್ಸ್ ಗಳಷ್ಟು ಬಿಯರ್ ಮಾರಾಟವಾಗಿದೆ. 2023 ರ ಏಪ್ರಿಲ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಈಗಾಗಲೇ ಶೇ. 61 ರಷ್ಟು ಬಿಯರ್.ಮಾರಾಟವಾಗಿದೆ.
ಈ.ವರ್ಷದ ಆರಂಭದ ತಿಂಗಳಲ್ಲಿ ಬಿಯರ್ ಮಾರಾಟ ಕುಸಿತ ಕಂಡಿತ್ತು. ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ.30ರಷ್ಟು ಮಾರಾಟ ಹೆಚ್ಚಳವಾಗಿದೆ. ಅಗತ್ಯ ಇರುವಷ್ಟು.ಬಿಯರ್ ಸಂಗ್ರಹ ಅಬಕಾರಿ ಇಲಾಖೆಯ ಬಳಿ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಎರಡು.ವಾರಗಳಲ್ಲೇ ಕಳೆದ ಮೂರು ವರ್ಷಗಳ ದಾಖಲೆಯನ್ನು ಈ ವರ್ಷ ಮುರಿದಿದೆ. ಅಬಕಾರಿ ಇಲಾಖೆ ಮಾಹಿತಿಗಳ ಪ್ರಕಾರ ಈ ಏಪ್ರಿಲ್ ನ ಮೊದಲ 11 ದಿನಗಳಲ್ಲಿ ವಿವಿಧ ಬ್ರಾಂಡ್ ಗಳ 27 ಲಕ್ಷಕ್ಕೂ ಹೆಚ್ಚು ಬಿಯರ್ ಬಾಟಲ್ ಗಳ ಮಾರಾಟವಾಗಿದೆ. ಅಂದರೆ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. 2021 ರಲ್ಲಿ 8.83 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದರೆ 2022ರಲ್ಲಿ 9.20 ಲಕ್ಷ ಲೀ. ಬಿಯರ್ ಮತ್ತು 2023 ರಲ್ಲಿ 4.52 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
ಬಿಸಿಲಿನ ಝಳದಿಂದ ಹೊರಬರಲು ಹಾಟ್ ಡ್ರಿಂಕ್ಸ್ ಗಳಿಗಿಂತ ಬೇಸಿಗೆಯಲ್ಲಿ ಬಿಯರ್ ಹೆಚ್ಚು ಕುಡಿಯುತ್ತಾರೆ. ಜೊತೆಗೆ ಈ ವರ್ಷ ಮಾರಾಟ ಹೆಚ್ಚಳವಾಗಲು ಚುನಾವಣೆಯ ಕೊಡುಗೆಯೂ ಇದೆ ಎಂದು ಹೇಳಲಾಗುತ್ತಿದೆ. ಬಿಯರ್ ಕುಡಿದರೆ ಬಿಸಿಲ ಧಗೆಯಿಂದ ಹೊರಬರಬಹುದು ಎಂದು ನಂಬಲಾಗಿದ್ದು, ಬಿಯರ್ ಬಳಕೆ ಹೆಚ್ಚಳವಾಗಲು ಕಾರಣವಾಗಿದೆ.
ಸಧ್ಯಕ್ಕೆ ಮಳೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಜೊತೆಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಮದ್ಯ ಮಾರಾಟ ಹೆಚ್ಚು. ಹಾಗಾಗಿ ಬಹುತೇಕ ಬಾರ್ ಗಳು ಮತ್ತು ಎಂ ಆರ್ ಪಿ ಔಟ್ ಲೆಟ್ ಗಳು ಗರಿಷ್ಠ ಪ್ರಮಾಣದಲ್ಲಿ ಬಿಯರ್ ಸಂಗ್ರಹಿಸಿಕೊಂಡಿವೆ. ಸದ್ಯಕ್ಕೆ
ನಮ್ಮಲ್ಲಿ ಇರುವ ಸ್ಟಾಕ್ ಒಂದೆರಡು ದಿನಗಳಿಗೆ ಸಾಕಾಗುತ್ತದೆ. ಹೊಸ ಖರೀದಿಗೆ ಸಾಕಷ್ಟು ಮುಂಚಿತವಾಗಿಯೇ ಇಂಡೆಂಟ್ ಸಲ್ಲಿಸಬೇಕಾಗಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಮೊದಲೇ ಮುಂಗಡ ಬೇಡಿಕೆ ಸಲ್ಲಿಸುತ್ತಿದ್ದೇವೆ. ಬೇಡಿಕೆಯಂತೆ ಬಿಯರ್ ಸರಬರಾಜು ಆಗುತ್ತಿದೆ ಎಂದು ಮದ್ಯ ವ್ಯಾಪಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.
ಈ ವರ್ಷದ ಬಜೆಟ್ ನಲ್ಲಿ ಮದ್ಯದ ಬೆಲೆ ಹೆಚ್ಚಳ ಮಾಡಲಾಗಿದೆ. ಬಿಯರ್ ಬೆಲೆ ಪ್ರತಿ ಬಾಟಲ್ ಗೆ 10 ರಿಂದ 15 ರೂ. ಹೆಚ್ಚಳವಾಗಿದೆ. ಕಳೆದ 7 ತಿಂಗಳಲ್ಲಿ ಮೂರು ಬಾರಿ ಬಿಯರ್ ಬೆಲೆ 40 ರೂ. ಹೆಚ್ಚಾಗಿದೆ. ಮದ್ಯ ಮಾರಾಟದಿಂದ ಈ ವರ್ಷ ರಾಜ್ಯ ಸರಕಾರ 36 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿದೆ. ಆರಂಭದಲ್ಲಿಯೇ ಉತ್ತಮ ಮಾರಾಟ ಕಂಡು ಬಂದಿರುವುದರಿಂದ ಆದಾಯ ಹೆಚ್ಚುವ ನಿರೀಕ್ಷೆಯಂತೂ ಇದೆ ಎನ್ನಲಾಗುತ್ತಿದೆ.
(ವರದಿ: ಎಚ್.ಮಾರುತಿ, ಬೆಂಗಳೂರು)
