Bagar Hukum App: ಬಗರ್‌ಹುಕುಂ ಭೂಮಿ ಅಕ್ರಮ ತಡೆ ಬಂತು ಆ್ಯಪ್ : ಸರ್ಕಾರಿ ಭೂಮಿ ರಕ್ಷಣೆಗೆ ತಂತ್ರಜ್ಞಾನ ನೆರವು
Bagar Hukum Land issue ಕರ್ನಾಟಕದಲ್ಲಿ ಬಗರ್ ಹುಕುಂ ಭೂಮಿ ಮಾಲೀಕತ್ವದ ಗೊಂದಲ ಬಹಳ ವರ್ಷದಿಂದ ಇದೆ. ಬಡವರ ಹೆಸರಲ್ಲಿ ಸರ್ಕಾರಿ ಭೂಮಿ ಉಳ್ಳವರ ಪಾಲಾಗುತ್ತಿದೆ. ಇದನ್ನು ತಪ್ಪಿಸಲೆಂದೇ ಪ್ರತ್ಯೇಕ ಆ್ಯಪ್ ಅನ್ನು ಕರ್ನಾಟಕ ಕಂದಾಯ ಇಲಾಖೆ ರೂಪಿಸಿದೆ. ಇದು ಮುಂದಿನ ತಿಂಗಳಿನಿಂದ ಬಳಕೆಗೆ ಬರಲಿದೆ.
ಬೆಂಗಳೂರು: ಬಗರ್ ಹುಕುಂ ಹೆಸರಿನಲ್ಲಿ ಉಳ್ಳವರು ಹಾಗೂ ಶ್ರೀಮಂತರು ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಅದೆಲ್ಲದರ ಮೇಲೆ ನಿಗಾ ಇಡಲು ಈಗ ಪ್ರತ್ಯೇಕ ಆ್ಯಪ್ ಅನ್ನು ಕರ್ನಾಟಕ ಸರ್ಕಾರ ಸಿದ್ದಪಡಿಸಿದೆ.
ಭಾರತದಲ್ಲೇ ತಂತ್ರಜ್ಞಾನ ಆಧರಿಸಿ ಭೂಮಿ ಒತ್ತುವರಿ ಇಲ್ಲವೇ ದುರುಪಯೋಗ ತಡೆಗೆ ಇಂತಹದೊಂದು ತಂತ್ರಜ್ಞಾನ ಸ್ನೇಹಿ ಮಾರ್ಗವನ್ನು ರೂಪಿಸುವಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಕೆಲವು ಕಡೆ ಈ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ನವೆಂಬರ್ ತಿಂಗಳಿನಲ್ಲಿ ಇದು ಅಧಿಕೃತವಾಗಿ ಜಾರಿಗೊಳ್ಳಲಿದೆ.
ಕರ್ನಾಟಕದಲ್ಲಿ ಬಗರ್‌ಹುಕುಂ ಯೋಜನೆಯಡಿ ಭೂಮಿ ಸಕ್ರಮಗೊಳಿಸುವಂತೆ ಈವರೆಗೂ 54 ಲಕ್ಷ ಮಂದಿ ಅರ್ಜಿ ಹಾಕಿಕೊಂಡಿದ್ದಾರೆ. ಅದರಲ್ಲೂ ಹಿಂದಿನಿಂದಲೂ ಬಗರ್ ಹುಕುಂ ಅಡಿ ಭೂಮಿ ಬಳಸುತ್ತಿದ್ದವರೂ ಸೇರಿ ನಮೂನೆ 50, 53, 57 ಅಡಿ ಅರ್ಜಿಗಳನ್ನು ಹಾಕಿಕೊಂಡಿದ್ದಾರೆ. ಇದರಲ್ಲಿ ಅವರು ಬಳಕೆ ಮಾಡಿಕೊಳ್ಳುತ್ತಾ ಬಂದಿರುವ ವರ್ಷ ಆಧರಿಸಿ ಅರ್ಜಿ ನಮೂನೆಗಳನ್ನು ಸಲ್ಲಿಸಲಾಗಿದೆ. ಸುಮಾರು ಹತ್ತು ಲಕ್ಷ ಎಕರೆ ಭೂಮಿ ಈ ರೀತಿ ಬಗರ್‌ಹುಕುಂ ಯೋಜನೆಯಡಿ ಬಳಕೆಯಾಗುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಗರ್‌ಹುಕುಂ ಭೂಮಿಯ ಗೊಂದಲವಿದೆ. ಇದನ್ನು ತಪ್ಪಿಸಲೆಂದೇ ಆ್ಯಪ್ ಅನ್ನುರೂಪಿಸಲಾಗಿದೆ.
ಈಗಾಗಲೇ ಅರ್ಜಿ ಹಾಕಿಕೊಂಡವರು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕು. ಅದನ್ನು ಅವರ ಅರ್ಜಿ ಜತೆಗೆ ಅಪ್ಲೋಡ್ ಮಾಡಲಾಗುತ್ತದೆ. ಹೀಗೆ ಅರ್ಜಿ ಹಾಕಿಕೊಂಡವರ ಭೂಮಿಗಳಿಗೆ ಗ್ರಾಮ ಸೇವಕರು ಹಾಗೂ ಕಂದಾಯ ಅಧಿಕಾರಿಗಳು ತೆರಳಿ ಗಡಿ ಗುರುತಿಸುತ್ತಾರೆ. ಜಿಯೋ ಫೆನ್ಸಿಂಗ್ ಎನ್ನುವ ಸಾಫ್ಟ್‌ವೇರ್ ಮೂಲಕ ಸೆಟಲೈಟ್ ಲಿಂಕ್ ಬಳಸಿ ಫೋಟೋ ಪಡೆಯಲಾಗುತ್ತದೆ. ಇದರಿಂದ ಅವರೇ ಸಾಗುವಳಿ ಮಾಡುತ್ತಿದ್ದಾರೋ ಇಲ್ಲವೋ ಎನ್ನುವುದು ಇದರಿಂದ ತಿಳಿಯಲಿದೆ.
ಆ್ಯಪ್ ಅನ್ನು ಬಳಸಿ ಬಗರ್ ಹುಕುಂ ಭೂಮಿ ಸಾಗುವಳಿ ಅಧಿಕೃತಗೊಳಿಸುವ ಚಟುವಟಿಕೆಗೆ ಚಾಲನೆ ನೀಡಲಾಗಿದೆ. ಕೆಲವು ರಾಜಕಾರಣಿಗಳು ತಮ್ಮ ಶಿಷ್ಯರ ಹೆಸರಿನಲ್ಲಿ ಅರ್ಜಿ ಹಾಕಿಸಿ ಭೂಮಿ ಪಡೆದಿರುವ ಸನ್ನಿವೇಶವೂ ಇದೆ. ಕೆಲ ಶಾಸಕರ ವಿರುದ್ದ ಮೊಕದ್ದಮೆಯೂ ದಾಖಲಾಗಿದೆ. ಅಧಿಕಾರಿಗಳೇ ಭೂಮಿ ಪರಾಭಾರೆ ಮಾಡಿರುವ ಪ್ರಕರಣಗಳೂ ಪತ್ತೆಯಾಗಿದೆ. ತಂತ್ರಜ್ಞಾನ ಬಳಕೆಯಿಂದ ಸುಧಾರಣೆಯಾಗಲಿದೆ ಎನ್ನುವುದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ವಿವರಣೆ.
ಈಗಾಗಲೇ ಪ್ರಾಯೋಗಿಕವಾಗಿ ಹಲವೆಡೆ ಬಳಸಲಾಗುತ್ತಿರುವುದರಿಂದ ಈ ಆ್ಯಪ್ ನಲ್ಲಿ ಯಾವುದೇ ಲೋಪದೋಷಗಳು ಇಲ್ಲದಂತೆ ಶೀಘ್ರದಲ್ಲೇ ಅಭಿವೃದ್ಧಿಪಡಿಸಿ ಕಾರ್ಯಯೋಜನೆಗೆ ತರುವಂತೆಯೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅನಧಿಕೃತ ಸಾಗುವಳಿದಾರರು ಕೃಷಿಯಲ್ಲಿ ತೊಡಗಿದರೆ, ಅಕ್ರಮ-ಸಕ್ರಮ ಅಡಿಯಲ್ಲಿ ಸಾಗುವಳಿ ಚೀಟಿ ನೀಡಲು ಇಲಾಖೆ ಬದ್ದವಾಗಿದೆ. ಆದರೆ, ಸಾವಿರಾರು ಎಕರೆ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದೆ. ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ. ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಅಲ್ಲದೆ, ಶೀಘ್ರ ಪ್ರಕ್ರಿಯೆಗೂ ಈ ಆ್ಯಪ್ ಸಹಕಾರಿಯಾಗಲಿದೆ, ಜನರಿಗೂ ಈ ಮೂಲಕ ಸುಲಭ ಆಡಳಿತ ಸಿಗಲಿದೆ ಎನ್ನುತ್ತಾರೆ ಕಂದಾಯ ಸಚಿವ ಕೃಷ್ಣಬೈರೇಗೌಡ.
ರಾಜ್ಯಾದ್ಯಂತ ನಮೂನೆ 50, 53, 57 ಅರ್ಜಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.ನಮೂನೆ 50, 53, 57 ಅರ್ಜಿಗಳ ನ್ಯಾಯಯುತ ವಿಲೇವಾರಿ ಹಾಗೂ ಅನಧಿಕೃತ ಸಾಗುವಳಿ ಭೂಮಿಯನ್ನು ಬಗರ್ ಹುಕುಂ ತಂತ್ರಾಶದ ಮೂಲಕ ಸಕ್ರಮಗೊಳಿಸುವ ಪ್ರಕ್ರಿಯೆಯನ್ನು ಶೀಘ್ರ ಮುಗಿಸಬೇಕು ಎನ್ನುವುದು ಸಚಿವರ ಸೂಚನೆ.
ವಿಭಾಗ