Vasant Nadiger Death: ಹಿರಿಯ ಪತ್ರಕರ್ತ, ಸಂಪಾದಕ ವಸಂತ ನಾಡಿಗೇರ ಹೃದಯಘಾತದಿಂದ ನಿಧನ, ಸಿಎಂ ಸೇರಿದಂತೆ ಗಣ್ಯರ ಸಂತಾಪ-bangalore news karnataka senior journalist vasant nadiger passed away in bangalore for massive heart attack kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Vasant Nadiger Death: ಹಿರಿಯ ಪತ್ರಕರ್ತ, ಸಂಪಾದಕ ವಸಂತ ನಾಡಿಗೇರ ಹೃದಯಘಾತದಿಂದ ನಿಧನ, ಸಿಎಂ ಸೇರಿದಂತೆ ಗಣ್ಯರ ಸಂತಾಪ

Vasant Nadiger Death: ಹಿರಿಯ ಪತ್ರಕರ್ತ, ಸಂಪಾದಕ ವಸಂತ ನಾಡಿಗೇರ ಹೃದಯಘಾತದಿಂದ ನಿಧನ, ಸಿಎಂ ಸೇರಿದಂತೆ ಗಣ್ಯರ ಸಂತಾಪ

Senior Journalist Vasant Nadiger Death: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವಸಂತ ನಾಡಿಗೇರ ಅವರು ಸೋಮವಾರ (ಸೆಪ್ಟೆಂಬರ್‌ 09) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಹಿರಿಯ ಪತ್ರಕರ್ತ, ಸಂಪಾದಕ ವಸಂತ್‌ ನಾಡಿಗೇರ್‌ ನಿಧನ
ಹಿರಿಯ ಪತ್ರಕರ್ತ, ಸಂಪಾದಕ ವಸಂತ್‌ ನಾಡಿಗೇರ್‌ ನಿಧನ

ಬೆಂಗಳೂರು: ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಸಂತ ನಾಡಿಗೇರ(59) ಬೆಂಗಳೂರಿನಲ್ಲಿ ಸೋಮವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾದರು. ಮೂರೂವರೆ ದಶಕದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ವಸಂತ ನಾಡಿಗೇರ ಅವರು ತಮ್ಮ ವಿಶಿಷ್ಟ ಮಾತಿನ ಶೈಲಿ ಹಾಗೂ ಪನ್‌ ಹೆಡ್ಡಿಂಗ್‌ಗಳ ಮೂಲಕವೇ ಸುದ್ದಿ ಮನೆಗಳಲ್ಲಿ ಜನಪ್ರಿಯರಾಗಿದ್ದರು. ಸರಳ, ಸಜ್ಜನಿಕೆಯ ವಸಂತ ನಾಡಿಗೇರ ಅವರು ಕನ್ನಡ ಪ್ರಭ, ವಿಜಯಕರ್ನಾಟಕ. ವಿಶ್ವವಾಣಿ ನಂತರ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.

ಪತ್ರಿಕಾ ವಲಯದಲ್ಲಿ ವಸಂತ ಸರ್‌ ಎಂದೇ ಹೆಸರಾದ ವಸಂತ ನಾಡಿಗೇರ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಪಡೆದು ಧಾರವಾಡದಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದವರು. ರಸಾಯನ ಶಾಸ್ತ್ರ ಪದವೀಧರರಾದ ವಸಂತ ನಾಡಿಗೇರ ಅವರು ಪತ್ರಿಕೋದ್ಯಮದ ಸೆಳೆತಕ್ಕೆ ಒಳಗಾಗಿ ಎಂಬತ್ತರ ದಶಕದಲ್ಲಿ ಸಂಯುಕ್ತ ಕರ್ನಾಟದಿಂದ ವೃತ್ತಿ ಜೀವನ ಆರಂಭಿಸಿದವರು. ಆನಂತರ ಕನ್ನಡ ಪ್ರಭ ಸೇರಿ ಅಲ್ಲಿ ಒಂದೂವರೆ ದಶಕ ಕಾಲ ಕೆಲಸ ಮಾಡಿದರು. ಬಳಿಕ ವಿಜಯಕರ್ನಾಟಕ ಪತ್ರಿಕೆಯ ಆರಂಭದಿಂದಲೂ ಮುಖ್ಯ ಉಪಸಂಪಾದಕರಾಗಿ ಸೇರಿ ಅಲ್ಲಿಯೇ ಬಹುಕಾಲ ಸುದ್ದಿಸಂಪಾದಕರಾಗಿದ್ದರು. ಬಳಿಕ ಸಂಪಾದಕರೂ ಆದರು. ವಿಶ್ವವಾಣಿ ಪತ್ರಿಕೆಯ ಸಂಪಾದಕರಾಗಿ ಸದ್ಯ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಪತ್ರಿಕಾ ಕಚೇರಿಯಲ್ಲಿ ವಸಂತ್‌ ಅವರಿದ್ದಾರೆ ಎಂದರೆ ಲವಲವಿಕೆ ಅಲ್ಲಿ ಇರುತ್ತಿತ್ತು. ಕೆಲಸ ಮಾಡುವ ಉಮೇದನ್ನು ಅವರು ತುಂಬುತ್ತಿದ್ದರು. ಸಾಕಷ್ಟು ಯುವ ಪತ್ರಕರ್ತರನ್ನೂ ಬೆಳೆಸಿದ್ದರು.

ಮೆದು ಮಾತಿನ, ಹಾಸ್ಯಲಹರಿಯ ಮೂಲಕ ಪತ್ರಿಕಾ ಕಚೇರಿಯಲ್ಲಿ ಸದಾ ನಗುವಿನ ವಾತಾವರಣ ಸೃಷ್ಟಿಸುತ್ತಿದ್ದ ವಸಂತ ನಾಡಿಗೇರ ಅವರು ಭಾಷೆಯ ಮೇಲೆ ಹಿಡಿತವಿತ್ತು. ಎಂತಹ ವರದಿಗೂ ಜನ ಮೆಚ್ಚುವಂತ ಶೀರ್ಷಿಕೆ ನೀಡುತ್ತಿದ್ದರು. ವಿಜಯಕರ್ನಾಟಕ ಪತ್ರಿಕೆಯಲ್ಲಿ ಅವರು ನೀಡಿದ ಶೀರ್ಷಿಕೆಗಳು ಮನೆ ಮಾತಾಗಿದ್ದವು. ಉತ್ತಮ ಬರಹಗಾರರೂ ಆಗಿದ್ದ ವಸಂತ ನಾಡಿಗೇರ ಅವರು ಕನ್ನಡ ಪ್ರಭದಲ್ಲಿ ಆರ್ಥಿಕ ವಿಶ್ಲೇಷಣೆ ಬರೆಯುತ್ತಿದ್ದರು. ಸಿನೆಮಾದಲ್ಲೂ ಆಸಕ್ತಿಇತ್ತು. ಲತಾ ಮಂಗೇಶ್ಕರ್‌ ಕುರಿತಾದ ಕೃತಿಯನ್ನು ಕನ್ನಡಕ್ಕೆ ತಂದಿದ್ದರು. ವಿಜಯಕರ್ನಾಟಕದಲ್ಲಿದ್ದಾಗ ಅವರ ಬಡಿಗೇರ್‌ ಹಾಗೂ ನಾಡಿಗೇರ್‌ ಎನ್ನುವ ಹಾಸ್ಯ ಅಂಕಣವೂ ಜನಪ್ರಿಯವಾಗಿತ್ತು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಖಾದ್ರಿ ಶಾಮಣ್ಣ ಪ್ರಶಸ್ತಿಯೂ ಅವರಿಗೆ ಲಭಿಸಿತ್ತು. ವಸಂತ ನಾಡಿಗೇರ ಅವರ ವೃತ್ತಿ ಜೀವನದ ಹಿರಿತನದ ಸೇವೆ ಗುರುತಿಸಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಮೈಸೂರಿನಲ್ಲಿ ನಡೆದ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಿತ್ತು. ಜೊತೆಗೆ ನಾಡಿಗೇರ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಸಿಎಂ ಸಂತಾಪ

ಹಿರಿಯ ಪತ್ರಕರ್ತರಾದ ವಸಂತ ನಾಡಿಗೇರ ಅವರ ನಿಧನವಾರ್ತೆ ನೋವುಂಟುಮಾಡಿದೆ. ವಿಜಯ ಕರ್ನಾಟಕದಲ್ಲಿ ಹಿರಿಯ ಸಹಾಯಕ ಸಂಪಾದಕರಾಗಿ, ಸಂಯುಕ್ತ ಕರ್ನಾಟಕದಲ್ಲಿ ಸಂಪಾದಕರಾಗಿ, ಹೀಗೆ ಹಲವು ದಶಕಗಳಿಂದ ಪತ್ರಿಕಾರಂಗದಲ್ಲಿ ಸೇವೆಸಲ್ಲಿಸುತ್ತಿದ್ದ ವಸಂತ ನಾಡಿಗೇರ ಅವರ ಅಗಲಿಕೆಯಿಂದ ಪತ್ರಿಕಾರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಕೆಯುಡಬ್ಲೂಜೆ ಸಂತಾಪ

ಹಿರಿಯ ಪತ್ರಕರ್ತರಾದ ವಸಂತ ನಾಡಿಗೇರ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ ಸಂತಾಪ

“ಹಿರಿಯ ಪತ್ರಕರ್ತರು, ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕರೂ ಆಗಿದ್ದ ಶ್ರೀ ವಸಂತ್ ನಾಡಿಗೇರ್ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ಪ್ರತಿಭಾನ್ವಿತರು ಮತ್ತು ಪ್ರಯೋಗಶೀಲರಾಗಿದ್ದ ಶ್ರೀಯುತರು ಕನ್ನಡಪ್ರಭ, ವಿಜಯ ಕರ್ನಾಟಕ, ವಿಶ್ವವಾಣಿ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರು ಮಾಧ್ಯಮ ಮೌಲ್ಯಗಳ ಪ್ರತೀಕವಾಗಿದ್ದರು. ವಸಂತ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಎಚ್‌ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

ಹಲವರ ನೆನಪು

ವಸಂತ್ ನಾಡಿಗೇರ್ ದಶಕಗಳ ಆತ್ಮೀಯ ಗೆಳೆಯರಾಗಿದ್ದರು. ಕನ್ನಡಪ್ರಭದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವು. ಈ. ರಾಘವನ್ ಅವರ ನಿಧನದ ನಂತರ ಕೆಲವು ತಿಂಗಳ ಕಾಲ ವಿಜಯ ಕರ್ನಾಟಕದಲ್ಲಿ ನಮಗೆ ಸಂಪಾದಕರೂ ಆಗಿದ್ದರು. ಸಜ್ಜನರು. ಪ್ರತಿಭಾವಂತರು. ವೃತ್ತಿಪರರು. ಹೆಡ್ ಲೈನ್ ದಾದಾ ಎಂದೇ ಕೆಲವರು ಅವರನ್ನು ಕರೆಯುತ್ತಿದ್ದರು. ಅವರ ಅಕಾಲಿಕ ನೋವು ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜ ಸಂತಾಪ ಸೂಚಿಸಿದ್ದಾರೆ.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ 1999 ರಿಂದ 2015 ರವರೆಗೆ ಸುದ್ದಿ ಸಂಪಾದಕರಾಗಿದ್ದ ವಸಂತ್, ನಾನೂ ಸೇರಿದಂತೆ ನೂರಾರು ಪತ್ರಕರ್ತರ‌ ಕಾಪಿಗಳನ್ನು ತಿದ್ದಿದವರು. ಹೇಗೆ ಬರೆಯಬೇಕು ಎಂದು ಹೇಳಿಕೊಟ್ಟವರು. ಎಲ್ಲಕ್ಕಿಂತ ಮಿಗಿಲಾಗಿ, ಪ್ರಾಮಾಣಿಕತೆಯೇ ದೇವರು ಎಂದು ನಂಬಿ ಬದುಕಿದವರು.

ಶಿಕ್ಷಕರ ದಿನದ ನೆಪದಲ್ಲಿ ಮೊನ್ನೆಯಷ್ಟೇ ಮೆಸೇಜ್ ಮಾಡಿ ಧನ್ಯವಾದಗಳನ್ನು ಹೇಳಿದಾಗ- ನಿಮ್ಮ ಸೌಜನ್ಯಕ್ಕೆ ಥ್ಯಾಂಕ್ಸ್ ಎಂದಿದ್ದರು. ಈಗ ನೋಡಿದರೆ ಅವರಿಲ್ಲ ಎಂಬ ಸುದ್ದಿ ಬಂದಿದೆ. ಇದನ್ನು ಹೇಗೆ ಅರಗಿಸಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ ಎಂದು ಹಿರಿಯ ಪತ್ರಕರ್ತ, ಬರಹಗಾರ ಎ.ಆರ್‌.ಮಣಿಕಾಂತ್‌ ಕಂಬನಿ ಮಿಡಿದಿದ್ದಾರೆ.

ಸಂತಾಪ ಸೂಚಿಸಿದ ಬಿಎಸ್‌ ಯಡಿಯೂರಪ್ಪ

ಹಿರಿಯ ಪತ್ರಕರ್ತ ಶ್ರೀ ವಸಂತ ನಾಡಿಗೇರ ಅವರು ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನು ಉಂಟುಮಾಡಿದೆ. ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಅವರು ಅಪಾರ ಸೇವೆ ಸಲ್ಲಿಸಿದ್ದರು. ಅಗಲಿದ ಅವರ ಚೇತನಕ್ಕೆ ಚಿರಶಾಂತಿ ಪ್ರಾರ್ಥಿಸುತ್ತಾ ಅವರ ಕುಟುಂಬದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ ಎಂದು ಬಿಜೆಪಿ ಹಿರಿಯ ಮುಖಂಡ ಬಿಎಸ್‌ ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

 

mysore-dasara_Entry_Point