ಕನ್ನಡ ಸುದ್ದಿ  /  ಕರ್ನಾಟಕ  /  Srinivas Prasad: ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರ, ಬೆಂಗಳೂರಲ್ಲಿ ಚಿಕಿತ್ಸೆ

Srinivas Prasad: ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರ, ಬೆಂಗಳೂರಲ್ಲಿ ಚಿಕಿತ್ಸೆ

ಕರ್ನಾಟಕದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್‌
ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್‌

ಬೆಂಗಳೂರು: ಕರ್ನಾಟಕದ ಹಿರಿಯ ನಾಯಕ, ಚಾಮರಾಜನಗರ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಆರು ದಿನದಿಂದ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ಕಳೆದ ವಾರ ಆರೋಗ್ಯದಲ್ಲಿ ಏರು ಪೇರು ಆಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ದಿದ್ದರು. ಚೇತರಿಕೆ ಕಂಡರೂ ಮತ್ತೆ ಆರೋಗ್ಯದಲ್ಲಿ ಏರು ಪೇರು ಆಗಿದ್ದರಿಂದ ಅವರನ್ನು ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಬೆಂಗಳೂರು ಮಣಿಪಾಲ ಆಸ್ಪತ್ರೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಸಾದ್‌ ರಾಜಕೀಯ ಹಾದಿ

ಮೈಸೂರಿನವರಾದ ಶ್ರೀನಿವಾಸಪ್ರಸಾದ್‌ ಅವರು ಹೆಚ್ಚು ರಾಜಕೀಯವಾಗಿ ಹಾಗೂ ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡಿರುವುದು ಚಾಮರಾಜನಗರದಲ್ಲಿಯೆ. 75 ವರ್ಷದ ಶ್ರೀನಿವಾಸ್‌ ಪ್ರಸಾದ್‌ ಅವರ ಆರೋಗ್ಯ ಒಂದು ದಶಕದಿಂದ ಈಚೆಗೆ ಚೆನ್ನಾಗಿಲ್ಲ. ಆದರೂ ಚಿಕಿತ್ಸೆ ನಡುವೆಯೂ ಅವರು ರಾಜಕೀಯ ಜೀವನ ಮುಂದುವರೆಸಿದ್ದರು. ಏಳೆಂಟು ವರ್ಷದ ಹಿಂದೆಯೇ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದಾಗ ಹೊರ ದೇಶದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಅವರು ಚೇತರಿಸಿಕೊಂಡಿದ್ದರು. ಇದಾದ ಬಳಿಕ ಆಗಾಗ ಅವರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳು ಆಗುತ್ತಲೇ ಬರುತ್ತಿವೆ. ಅದರ ನಡುವೆಯೇ ಬಿಜೆಪಿ ಸೇರಿ ಚಾಮರಾಜನಗರಿಂದ ಸಂಸದರೂ ಆಗಿದ್ದರು.

ನಿವೃತ್ತಿ ಘೋಷಣೆ

ಅವರು ಕಳೆದ ತಿಂಗಳೇ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುತ್ತಿರುವುದಾಗಿ ಮೈಸೂರಿನಲ್ಲಿ ಘೋಷಿಸಿದ್ದರು. ಈ ಬಾರಿ ಅವರ ಅಳಿಯ ಡಾ.ಮೋಹನ್‌ ಅವರಿಗೆ ಚಾಮರಾಜನಗರದಿಂದ ಟಿಕೆಟ್‌ ಕೊಡಿಸುವ ಇರಾದೆಯನ್ನು ಪ್ರಸಾದ್‌ ಅವರು ಹೊಂದಿದ್ದರು. ಆದರೆ ಪಕ್ಷ ಡಾ.ಪ್ರಸಾದ್‌ ಅವರ ಬದಲು ಬಾಲರಾಜು ಅವರಿಗೆ ಚಾಮರಾಜನಗರದಲ್ಲಿ ಟಿಕೆಟ್‌ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಅವರು ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಭೇಟಿಯಾದಾಗ ಕಾಂಗ್ರೆಸ್‌ ಸ್ಥಿತಿ ಇದೆ ಎನ್ನುವ ಮೂಲಕ ಚಾಮರಾಜನಗರದಲ್ಲಿ ಆ ಪಕ್ಷಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು. ಮರು ದಿನವೇ ಬಿ.ಎಸ್.ಯಡಿಯೂರಪ್ಪ ಅವರು ಆಗಮಿಸಿದಾಗ ಮೋದಿ ಸಮಾವೇಶದಲ್ಲಿ ಭಾಗಿಯಾಗುವುದಿಲ್ಲ ಎನ್ನುವ ಸಂದೇಶವನ್ನು ಪ್ರಸಾದ್‌ ರವಾನಿಸಿದ್ದರು. ಕಾಲಿಗೆ ಗಾಯವಾಗಿದೆ. ನನಗೆ ಹೊರಗೆ ಬರಲು ಆಗುವುದಿಲ್ಲ ಎನ್ನುವ ಮಾತುಗಳನ್ನು ಪ್ರಸಾದ್‌ ಅವರು ಅಂದು ಆಡಿದ್ದರು.

ಇದಾದ ನಂತರ ಅವರ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಯವಾಗಿ ಈಗ ಚಿಕಿತ್ಸೆಗೆ ದಾಖಲಿಸಲಾಗಿದೆ.

ಹಲವಾರು ವರ್ಷಗಳಿಂದ ಪ್ರಸಾದ್‌ ಅವರು ನಮ್ಮಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂತ್ರಕೋಶದಲ್ಲಿ ಉಂಟಾದ ಸೋಂಕಿನಿಂದ ಹಿಂದಿನಿಂದಲೂ ಚಿಕಿತ್ಸೆ ಪಡೆಯುತ್ತಿದ್ದು. ಈ ಬಾರಿಯೂ ದಾಖಲಾಗಿದ್ದಾರೆ. ಅವರಿಗೆ ಕ್ರಿಟಿಕಲ್‌ ಕೇರ್‌ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಣಿಪಾಲ್‌ ಆಸ್ಪತ್ರೆ ವೈದ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

( To read more like this please logon to kannada.hindustantimes.com)

IPL_Entry_Point