ನಿಮ್ಮ ವಾಹನಗಳಿಗೆ ಎಲ್‌ಇಡಿ ದೀಪ ಹಾಕಿಸಿದ್ದೀರಾ, ದಂಡ ಪಾವತಿಸುವ ಮುನ್ನ ಈ ಸೂಚನೆ ಗಮನಿಸಿ
LED lights ಕರ್ನಾಟಕದಲ್ಲಿ ವಾಹನಗಳಿಗೆ ಎಲ್‌ಇಡಿ ದೀಪ ಅಳವಡಿಸಿದ್ದರೆ ಅದನ್ನು ಬದಲಿಸುವಂತೆ ಕರ್ನಾಟಕ ಪೊಲೀಸರು( Karnataka Police) ಸೂಚಿಸಿದ್ದಾರೆ.

ಬೆಂಗಳೂರು: ನಿಮ್ಮ ದ್ವಿಚಕ್ರ ವಾಹನ, ತ್ರಿಚಕ್ರ ಹಾಗೂ ಕಾರು, ಲಾರಿ ಹಾಗೂ ಬಸ್‌ಗಳಿಗೆ ಎಲ್ಇಡಿ ದೀಪ ಅಳವಡಿಸುವ ಹಾಗಿಲ್ಲ. ಹಾಗೇನಾದರೂ ಹಾಕಿಸಿದ್ದರೆ ಅದನ್ನು ತೆಗೆಸಲೇಬೇಕು. ಇಲ್ಲದೇ ಇದ್ದರೆ ಪೊಲೀಸರು ಇನ್ನು ಮುಂದೆ ದಂಡ ವಿಧಿಸಲಿದ್ದಾರೆ. ದಂಡದ ನಂತರವೂ ಮುಂದುವರೆಸಿದರೆ ಮೊಕದ್ದಮೆ ದಾಖಲಿಸಿ ವಾಹನವನ್ನೂ ಜಪ್ತಿ ಮಾಡಬಹುದು. ರಸ್ತೆಗಳಲ್ಲಿ ಸಂಚರಿಸುವವರಿಗೆ ಎಲ್‌ಒಡಿ ದೀಪದ ವಾಹನಗಳಿಂದ ಕಿರಿಕಿರಿ ಉಂಟಾಗುತ್ತಿದೆ. ಇದರಿಂದಲೂ ಅಪಘಾತಗಳಾಗುತ್ತಿವೆ ಎನ್ನುವ ಮಾಹಿತಿ ಆಧರಿಸಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಇಂತಹದೊಂದು ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಇದು ಜಾರಿಯಾಗಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇಂತಹ ದೀಪದ ವಾಹನಗಳನ್ನು ಗುರುತಿಸಿ ದಂಡ ವಿಧಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್, ಕರ್ನಾಟಕದಲ್ಲಿ ಎಲ್‌ಇಡಿ ದೀಪ ಅಳವಡಿಸಿರುವ ವಾಹನಗಳಿಂದ ಸಂಚಾರಕ್ಕೆ ಅಡಚಣೆಯಾಗಿ ಅಪಘಾತಗಳು ಉಂಟಾದ ಹಲವಾರು ಉದಾಹರಣೆಗಳಿವೆ. ಈ ಬೆಳಕು ಕಣ್ಣಿಗೆ ಕುಕ್ಕುವುದರಿಂದ ಎದುರುಗಡೆ ಬರುವವರಿಗೆ ಖಂಡಿತವಾಗಿಯೂ ತೊಂದರೆಯಾಗಲಿದೆ. ಈ ಕಾರಣದಿಂದ ಎಲ್‌ಎಡಿ ದೀಪಗಳನ್ನು ಬಳಸದಂತೆ ನಿರ್ಬಂಧ ಹೇರಲಾಗಿದೆ. ಇದನ್ನು ಇನ್ನು ಮುಂದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಮೊದಲ ಹಂತದಲ್ಲಿ ಐದು ನೂರು ರೂ.ವರೆಗೂ ದಂಡ ವಿಧಿಸಲಾಗುತ್ತದೆ. ಆನಂತರವೂ ಬಳಸುವುದು ಕಂಡು ಬಂದರೆ ಕಾನೂನು ಕ್ರಮ ಆಗಲಿದೆ. ಈಗಾಗಲೇ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳುತ್ತಾರೆ.
ಪೊಲೀಸರ ಸೂಚನೆ ಏನು
- ಕರ್ನಾಟಕದಲ್ಲಿ ವಾಹನಗಳಿಗೆ ಎಲ್‌ಇಡಿ ದೀಪ ಅಳವಡಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
- ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ಬಲ್ಪ್‌ಗಳನ್ನು ಅಳವಡಿಸಿರುವುದು ಕಾಣಸಿಗುತ್ತಿದೆ. ಇದರಿಂದ ಎದುರು ವಾಹನ ಓಡಿಸಿಕೊಂಡು ಬರುವ ವಾಹನ ಸವಾರ, ಚಾಲಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
- ಇದರಿಂದಾಗಿ ಹಲವು ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಕಂಡುಬಂದಿದೆ.
- ಭಾರೀ ವಾಹನಗಳಾದ ಲಾರಿ, ಟ್ರಕ್, ಬಸ್ ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸಿಕೊಂಡಿದ್ದು, ಇದನ್ನು ಬದಲಿಸಿಕೊಳ್ಳುವಂತೆ ಸೂಚಿಸಲಾಗಿದೆ.
- ವಾಹನ ಮಾಲೀಕರು ಕಡ್ಡಾಯವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ಮಾರ್ಗಸೂಚಿ ಪಾಲನೆ ಮಾಡಲೇಬೇಕು.
ಇದನ್ನೂ ಓದಿರಿ: Personality Test: ತಲೆಬುರುಡೆ, ಆಟವಾಡುವ ಹುಡುಗೀರು, ಇದ್ರಲ್ಲಿ ಮೊದಲು ಕಾಣಿಸಿದ್ದೇನು; ನಿಮ್ಮ ಬಗ್ಗೆ ಹಲವು ವಿಚಾರ ತಿಳಿಸುತ್ತೆ ಈ ಚಿತ್ರ
- ಇಲ್ಲದೇ ಇದ್ದರೆ ಸವಾರ, ಚಾಲಕರ ವಿರುದ್ಧ ಐಎಂವಿ ಕಾಯ್ದೆಯ ಕಲಂ 177ರಡಿ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ.
- ಜುಲೈನಿಂದ ಎಲ್‌ಇಡಿ ಬಲ್ಪ್ ಅಳವಡಿಸಿರುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಜುಲೈ 31ಕ್ಕೆ ವರದಿ ಒಪ್ಪಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ.
- ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ, ಮಂಗಳೂರು, ಕಲಬುರಗಿ, ದಾವಣಗೆರೆ, ಬೆಳಗಾವಿ, ತುಮಕೂರು, ವಿಜಯಪುರ, ಶಿವಮೊಗ್ಗ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲೂ ಎಲ್‌ಇಡಿ ದೀಪ ಅಳವಡಿಕೆ ಮಾಡಿಕೊಂಡಿರುವ ವಾಹನಗಳ ತಪಾಸಣೆ ಚುರುಕುಗೊಳ್ಳಲಿದೆ.
ವಿಭಾಗ