ಕನ್ನಡ ಸುದ್ದಿ  /  Karnataka  /  Bangalore News Karnataka State Police Warned Vehicle Owners To Register For Hsrp Number Plate In Official Website Kub

HSRP Number Plate: ಎಚ್‌ಎಸ್‌ಆರ್‌ ಪಿ ನಂಬರ್‌ ಪ್ಲೇಟ್‌ ಹೆಸರಲ್ಲಿ ವಂಚನೆ, ಕರ್ನಾಟಕ ಪೊಲೀಸರ ಸೂಚನೆ ಏನು

Karnataka Police ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ಪಿ ವಾಹನ ನೋಂದಣಿ ಅವಧಿ ವಿಸ್ತರಿಸಲಾಗಿದೆ. ನಕಲಿ ವೆಬ್‌ಸೈಟ್‌ ಬಳಸಿ ವಂಚಿಸುವವರ ವಿರುದ್ದ ವಾಹನ ಮಾಲೀಕರು ಎಚ್ಚರಿಕೆಯಿಂದ ಇರಬೇಕು ಎಂದು ಕರ್ನಾಟಕ ಪೊಲೀಸರು ಸೂಚನೆ ನೀಡಿದ್ದಾರೆ.

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ವಿಚಾರದಲ್ಲಿ ಎಚ್ಚರ ವಹಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ವಿಚಾರದಲ್ಲಿ ಎಚ್ಚರ ವಹಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆಯ ಸೂಚನೆ ಮೇರೆಗೆ ಕರ್ನಾಟಕದಲ್ಲಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವ ಪ್ರಕ್ರಿಯೆಯೇನೋ ನಡೆದಿದೆ. ಕೆಲವರು ಅಧಿಕೃತ ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಸುತಿದ್ದರೆ, ಇನ್ನು ಕೆಲವರು ವಂಚನೆಗೆ ಒಳಗಾಗುತ್ತಿರುವ ದೂರುಗಳು ಬರುತ್ತಿವೆ. ಈ ಕಾರಣದಿಂದ ಕರ್ನಾಟಕ ಪೊಲೀಸ್‌ ಇಲಾಖೆಯು ವಾಹನ ನೊಂದಣಿ ಮಾಡಿಸುವವರಿಗೆ ಸೂಚನೆಗಳನ್ನು ನೀಡಿದೆ. ಅಲ್ಲದೇ ಯಾವ ಮಾರ್ಗದಲ್ಲಿ ನೋಂದಣಿ ಮಾಡಿಸಬೇಕು ಎನ್ನುವ ಅಂಶವನ್ನೂ ತಿಳಿಸಿದೆ.

ಈಗಾಗಲೇ ಕೆಲವು ತಿಂಗಳಿನಿಂದ ಇಡೀ ಭಾರತದಲ್ಲಿ ಎಲ್ಲಾ ಮಾದರಿಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವ ಪ್ರಕ್ರಿಯೆ ನಡೆದಿದೆ. ಈಗ ಕರ್ನಾಟಕ ಸಾರಿಗೆ ಇಲಾಖೆ ನೋಂದಣಿ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಿದೆ. ಇದರ ನಡುವೆ ಕೆಲವರು ನಕಲಿ ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಸಿ ಮೋಸ ಮಾಡುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ.

ನಿಮ್ಮ ವಾಹನದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟನ್ನು ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾತ್ರವೇ ಬುಕ್ ಮಾಡಿ. ನಕಲಿ ಕ್ಯೂಆರ್‌ ಕೋಡ್‌ ಹಾಗೂ ಲಿಂಕ್‌ಗಳ ಮೂಲಕ ಪ್ರಯತ್ನಿಸಿ ನಿಮ್ಮ ಹಣವನ್ನು ಕಳೆದುಕೊಳ್ಳಬೇಡಿ ಎಂದು ಎಕ್ಸ್‌ ಮೂಲಕ ಕರ್ನಾಟಕ ಪೊಲೀಸ್‌ ಇಲಾಖೆಯಿಂದ ಪೋಸ್ಟ್‌ ಮಾಡಲಾಗಿದೆ.

ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕವೇ ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ transport.karnataka.gov.in ಇಲ್ಲವ siam.in ಮೂಲಕ ನೀವು ನಂಬರ್‌ ಪ್ಲೇಟ್‌ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಸುಪ್ರೀಂಕೋರ್ಟ್‌ ನೀಡಿರುವ ನಿರ್ದೇಶನದಂತೆ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್‌ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್‌ ಪ್ಲೇಟ್‌ ಅಳವಡಿಸಲಾಗುತ್ತಿದೆ.

ಇದನ್ನೇ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ನೋಂದಣಿಗೊಂಡಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಕಡ್ಡಾಯ ಮಾಡಲಾಗಿದೆ.

ಒಂದು ವೇಳೆ ಹೆಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮುಂದೆ ದಂಡವನ್ನೂ ಪಾವತಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳಿಗೆ ಇದು ಅಡ್ಡಿಯಾಗಲಿದೆ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಇದರಿಂದ ಕಡ್ಡಾಯವಾಗಿ ಎಲ್ಲರೂ ಮಾಡಿಸಿಕೊಳ್ಳಲೇಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

IPL_Entry_Point

ವಿಭಾಗ