KSRTC Bus Fare: ಸಾರಿಗೆ ಬಸ್‌ ಪ್ರಯಾಣ ದರ ಶೇ. 20 ರಷ್ಟು ಏರಿಕೆ ಸಾಧ್ಯತೆ, ಸುಳಿವು ನೀಡಿದ ನಿಗಮದ ಅಧ್ಯಕ್ಷ
ಕನ್ನಡ ಸುದ್ದಿ  /  ಕರ್ನಾಟಕ  /  Ksrtc Bus Fare: ಸಾರಿಗೆ ಬಸ್‌ ಪ್ರಯಾಣ ದರ ಶೇ. 20 ರಷ್ಟು ಏರಿಕೆ ಸಾಧ್ಯತೆ, ಸುಳಿವು ನೀಡಿದ ನಿಗಮದ ಅಧ್ಯಕ್ಷ

KSRTC Bus Fare: ಸಾರಿಗೆ ಬಸ್‌ ಪ್ರಯಾಣ ದರ ಶೇ. 20 ರಷ್ಟು ಏರಿಕೆ ಸಾಧ್ಯತೆ, ಸುಳಿವು ನೀಡಿದ ನಿಗಮದ ಅಧ್ಯಕ್ಷ

Bus fare hike ಕರ್ನಾಟಕದ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಶೇ. 20ರಷ್ಟು ಏರಿಕೆ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಸರ್ಕಾರದ ತೀರ್ಮಾನ ಬಾಕಿಯಿದೆ.

ಕರ್ನಾಟಕದಲ್ಲಿ ಸಾರಿಗೆ ಪ್ರಯಾಣ ಸದ್ಯವೇ ಏರಿಕೆಯಾಗಬಹುದು
ಕರ್ನಾಟಕದಲ್ಲಿ ಸಾರಿಗೆ ಪ್ರಯಾಣ ಸದ್ಯವೇ ಏರಿಕೆಯಾಗಬಹುದು

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ನಾಲ್ಕು ನಿಗಮಗಳೂ ಏಕಕಾಲಕ್ಕೆ ಬಸ್‌ ಪ್ರಯಾಣ ದರ ಏರಿಕೆಗೆ ಮುಂದಾಗಿದೆ. ಹಲವಾರು ವರ್ಷಗಳಿಂದ ಬಸ್‌ ಪ್ರಯಾಣ ದರವನ್ನು ಕೆಲವು ನಿಗಮಗಳು ಏರಿಸಿಲ್ಲ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಡೀಸೆಲ್‌ ದರವನ್ನೂ ಏರಿಸಲಾಗಿದೆ. ನಾನಾ ತೆರಿಗೆಗಳ ಏರಿಕೆಯಿಂದ ದರ ದುಬಾರಿಯಾಗಿರುವುದರಿಂದ ಅದನ್ನು ಸರಿದೂಗಿಸಲು ಸಾರಿಗೆ ಸಂಸ್ಥೆಗಳು ಪ್ರಯಾಣ ದರ ಏರಿಸುವ ಪ್ರಸ್ತಾವನೆಯನ್ನು ಸಲ್ಲಿಸಿವೆ. ಶಕ್ತಿ ಯೋಜನೆ ಜಾರಿಯಾಗಿ ಹದಿನಾಲ್ಕು ತಿಂಗಳ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಹೊರೆಯೂ ಆಗಿದೆ. ಇವೆಲ್ಲವನ್ನು ಸರಿದೂಗಿಸಲು ದರ ಏರಿಕೆಯಾಗುವ ಸಾಧ್ಯತೆಯಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ( ksrtc)ದ ಅಧ್ಯಕ್ಷರೂ ಆಗಿರುವ ಗುಬ್ಬಿ ಶಾಸಕ ಶ್ರೀನಿವಾಸ್‌, ತೈಲ ಬೆಲೆ ಆಗಿರುವುದರಿಂದ ನಿಗಮಕ್ಕೆ ಭಾರೀ ಹೊಡೆತ ಬೀಳುತ್ತಿದೆ. ನೌಕರರಿಗೆ ಸಂಬಳ, ಇತರೆ ಸೌಲಭ್ಯ ನೀಡಲು ಹೆಣಗಾಡುವ ಸನ್ನಿವೇಶ ಎದುರಾಗಿದೆ. ಇದರಿಂದ ಸಾರಿಗೆ ಪ್ರಯಾಣ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ. ಈ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿ ಪ್ರಯಾಣ ದರ ಏರಿಸಿ ಐದು ವರ್ಷವಾಗಿದೆ. ಕೋವಿಡ್‌ಗೂ ಮೊದಲು ಸ್ವಲ್ಪ ಪ್ರಮಾಣದಲ್ಲಿ ದರ ಏರಿಕೆ ಮಾಡಿತ್ತು. ಈಗಾಗಲೇ ಶೇ. 20ರಷ್ಟು ಬೆಲೆ ಏರಿಕೆ ಮಾಡುವಂತೆ ಪ್ರಸ್ತಾವನೆಯೂ ಸಲ್ಲಿಕೆಯಾಗುವುದರಿಂದ ಸದ್ಯದಲ್ಲೇ ಇದು ಜಾರಿಯಾಗುವ ಸಾಧ್ಯತೆಯಿದೆ ಎನ್ನುವುದು ಅವರ ವಿವರಣೆ.

ಮೂರು ತಿಂಗಳ ಅವಧಿಯಲ್ಲಿಯೇ ಕೆಎಸ್‌ಆರ್‌ಟಿಸಿ ನಷ್ಟದ ಪ್ರಮಾಣ ಭಾರೀ ಏರಿಕೆಯಾಗಿದೆ. ಇದು 295 ಕೋಟಿ ರೂ. ತಲುಪಿದೆ. ಕೆಎಸ್‌ಆರ್‌ಟಿಸಿ ನೌಕರರ ವೇತನವನ್ನೂ ಪರಿಷ್ಕರಣೆ ಮಾಡಿಯೇ ಇಲ್ಲ. ಈ ಎಲ್ಲಾ ಕಾರಣಗಳನ್ನೂ ಉಲ್ಲೇಖಿಸಲಾಗಿದೆ ಎಂದು ಗುಬ್ಬಿ ಶ್ರೀನಿವಾಸ್‌ ಹೇಳಿದ್ದಾರೆ.

ಮೂಲಗಳ ಪ್ರಕಾರ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ, ಈಶಾನ್ಯ ಕರ್ನಾಟಕ ಸಾರಿಗೆ ಸೇರಿ ಎಲ್ಲಾ ನಿಗಮಗಳ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಇದ್ದು. ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು ದರ ಪರಿಷ್ಕರಣೆ ಕುರಿತು ಸಾರಿಗೆ ಸಚಿವರಾದ ಆರ್.ರಾಮಲಿಂಗಾರೆಡ್ಡಿ ಅವರು ಪ್ರಸ್ತಾವ ಮಾಡಿದ್ದರು. ಆಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಹೇಳಿದ್ದರು. ಜನರಿಗೆ ಹೊರೆಯಾಗದ ರೀತಿ ಪ್ರಯಾಣ ದರ ಏರಿಕೆ ಮಾಡುತ್ತೇವೆ. ಬಿಎಂಟಿಸಿ, ವಾಯುವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಗಳು ಪ್ರಯಾಣ ದರ ಏರಿಸಿ ಹತ್ತು ವರ್ಷವೇ ಆಗಿದೆ. ಶಕ್ತಿ ಯೋಜನೆ ಜಾರಿಗೊಂಡ ನಂತರ ಹೊರೆಯೂ ಆಗಿದೆ. 20 ಲಕ್ಷ ಪ್ರಯಾಣಿಕರ ಸಂಖ್ಯೆ ಶಕ್ತಿ ಯೋಜನೆಯಿಂದ ಹೆಚ್ಚಿದೆ. ಇದರಿಂದ ಟ್ರಿಪ್‌ಗಳನ್ನು ಅಧಿಕಗೊಳಿಸಿದ್ದರಿಂದ ವೆಚ್ಚವೂ ಹೆಚ್ಚಿದೆ. ನೌಕರರ ವೇತನ ಪರಿಷ್ಕರಣೆಯೂ ಆಗಿಲ್ಲ. ಹೊಸ ಬಸ್‌ ಖರೀದಿಗೂ ಒತ್ತು ನೀಡಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಚಿವರು ಹೇಳಿದ್ದರು.

ಕೆಎಸ್‌ಆರ್‌ಟಿಸಿ ನಿತ್ಯ 6.2 ಲಕ್ಷ ಲೀಟರ್‌ ಡೀಸೆಲ್‌ ಅನ್ನು ಬಸ್‌ಗಳಿಗೆ ಬಳಕೆ ಮಾಡುತ್ತಿದೆ. ಇದು ಮಾಸಿಕವಾಗಿ 5.4 ಕೋಟಿ ಹಾಗೂ ವಾರ್ಷಿಕವಾಗಿ 65 ಕೋಟಿ ರೂ.ವರೆಗೂ ಆಗಲಿದೆ. ತೆರಿಗೆ ಮೊತ್ತ ಏರಿಕೆಯಿಂದ ಡೀಸೆ ದರ್ಲ್ಲೊಯೇ ಏರಿಕೆ ಕಂಡು ಬಂದಿದೆ. ಇದು ಸಂಸ್ಥೆಯ ನಿರ್ವಹಣೆಗೆ ಹೊಡೆತ ನೀಡುತ್ತಿದೆ. ಪ್ರಯಾಣ ದರ ಏರಿಕೆಯಿಂದ ಇದೆನ್ನೆಲ್ಲ ಸ್ವಲ್ಪ ಮಟ್ಟಿಗಾದರೂ ತಗ್ಗಿಸಬಹುದು ಎನ್ನುವುದು ಅಧಿಕಾರಿಗಳ ವಿವರಣೆ.

Whats_app_banner