HSRP Deadline: ಎಚ್‌ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ 3 ದಿನ ಗಡುವು ಮಾತ್ರ ಬಾಕಿ, ಸೆ. 15 ಕೊನೆಯ ದಿನ; ದಂಡದಿಂದ ಪಾರಾಗಿ
HSRP Updates ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೂರು ದಿನ ಗಡುವು ಮಾತ್ರ ಬಾಕಿ ಇದೆ. ಸೆಪ್ಟಂಬರ್15 ಕೊನೆಯ ದಿನವಾಗಿದ್ದು ನೋಂದಣಿ ಮಾಡಿಲ್ಲವಾದರೆ ಇಂದೇ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಭಾರೀ ದಂಡ ಬೀಳಲಿದೆ. ಈ ಬಾರಿ ಗಡುವು ವಿಸ್ತರಣೆ ಮಾಡೋಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು:ಕರ್ನಾಟದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾಗಿರುವ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್ ಎಸ್ ಆರ್ ಪಿ) ವನ್ನು ಅಳವಡಿಸಿಕೊಳ್ಙಲು ಸೆಪ್ಟಂಬರ್ 15 ಕೊನೆಯ ದಿನವಾಗಿದೆ. ಇದುವರೆಗೂ ಎಚ್ ಎಸ್ ಆರ್ ಪಿ ನೋಂದಣಿ ಫಲಕಕ್ಕೆ ನೋಂದಣಿ ಮಾಡಿಕೊಳ್ಳದ ವಾಹನಗಳ ಮಾಲೀಕರು ಈಗಲೇ ನೋಂದಣಿ ಮಾಡಿಕೊಂಡು ದಂಡ ಪಾವತಿಸುವುದನ್ನು ತಪ್ಪಿಸಿಕೊಳ್ಳುವುದು ಸೂಕ್ತ. ದಂಡದ ಮೊತ್ತ 500 ರೂ. ಈ ದಂಡದ ಮೊತ್ತದಲ್ಲೇ ನೋಂದಣಿ ಫಲಕ ಲಭ್ಯವಾಗಲಿದೆ. ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾಗಿರುವ 2 ಕೋಟಿ ವಾಹನಗಳಲ್ಲಿ ಕೇವಲ 53 ಲಕ್ಷ ವಾಹನಗಳು ಮಾತ್ರ ಎಚ್ ಎಸ್ ಆರ್ ಪಿ ನಾಮ ಫಲಕವನ್ನು ಅಳವಡಿಸಿಕೊಂಡಿವೆ. ಇನ್ನೂ 1.48 ಕೋಟಿ ವಾಹನಗಳು ಎಚ್ ಎಸ್ ಆರ್ ಪಿ ಫಲಕವನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಸರ್ಕಾರ ಈಗಾಗಲೇ ಹಲವು ಬಾರಿ ಗಡುವುಗಳನ್ನು ವಿಸ್ತರಿಸುತ್ತಾ ಬಂದಿದೆ. ಈಗಿನ ಗಡುವು ಸೆಪ್ಟಂಬರ್ 15 ಕ್ಕೆ ಮುಕ್ತಾಯಗೊಳ್ಳಲಿದ್ದು ಮತ್ತೊಮ್ಮೆ ಯಾವುದೇ ಕಾರಣಕ್ಕೂ ಗಡುವನ್ನು ವಿಸ್ತರಿಸುವದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇನ್ನು ಮೂರು ದಿನಗಳ ಅವಕಾಶವಿದ್ದು, ಸೆಪ್ಟಂಬರ್ 15ರೊಳಗೆ ಎಚ್ ಎಸ್ ಆರ್ ಪಿ ಗೆ ನೋಂದಣಿ ಮಾಡಿಕೊಂಡು ಅದರ ರಸೀತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ದಂಡದಿಂದ ಪಾರಾಗಬಹುದು.
ಸಾರಿಗೆ ಇಲಾಖೆ ಸೆಪ್ಟಂಬರ್ 16ರಿಂದ ರಾಜ್ಯಾದ್ಯಂತ ಸಂಚಾರಿ ಪೊಲೀಸರ ಸಹಕಾರದಿಂದ ಎಚ್ ಎಸ್ ಆರ್ ಪಿ ಫಲಕ ಇಲ್ಲದ ವಾಹನಗಳ ತಪಾಸಣೆ ಆರಂಭಿಸಲಿದೆ. ಹೊಸ ನಾಮ ಫಲಕ ಇಲ್ಲದ ವಾಹನಗಳಿಗೆ ಮೊದಲ ಬಾರಿಗೆ 500 ರೂ ದಂಡ ವಿಧಿಸಲಾಗುವುದು. ನಂತರದಲ್ಲಿ ಪ್ರತಿ ಬಾರಿಯೂ 1000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ತಪಾಸಣೆ ಜೊತೆಗೆ ವಿಮೆ(ಇನ್ ಶ್ಯೂರೆನ್ಸ್), ಚಾಲನಾ ಪರವಾನಗಿ(ಡಿಎಲ್), ಸೇರಿದಂತೆ ಎಲ್ಲ ದಾಖಲಾತಿಗಳ ಪರಿಶೀಲನೆಯೂ ನಡೆಯಲಿದೆ.
ಆರಂಭದಲ್ಲಿ 2023 ಆಗಸ್ಟ್ ತಿಂಗಳಲ್ಲಿ ಎಚ್ ಎಸ್ ಆರ್ ಪಿ ನಾಮ ಫಲಕ ಅಳವಡಿಸಿಕೊಳ್ಳುವಂತೆ ಅಧಿಸೂಚನೆ ಹೊರಡಿಸಿ ನವಂಬರ್ 17 ಕ್ಕೆ ಅಂತಿಮ ಗಡುವು ನೀಡಲಾಗಿತ್ತು. ಆದರೆ ನಿರೀಕ್ಷಿತ ಪ್ರತಿಕ್ರಿಯೆ ಬಾರದಿದ್ದರಿಂದ ನಂತರ ಮೂರು ಬಾರಿ ಗಡುವುನ್ನು ವಿಸ್ತರಿಸಲಾಗಿತ್ತು. 2023ರ ನವಂಬರ್ 17, 2024ರ ಫೆಬ್ರವರಿ 17 ಮತ್ತು 2024ರ ಮೇ 17 ಅಂತಿಮ ಗಡುವಾಗಿತ್ತು. ಇದೀಗ 2024ರ ಸೆ.15 ಕಟ್ಟಕಡೆಯ ಗಡುವು ಎಂದೂ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನಗಳ ಮಾಲೀಕರಿಗೂ ತೊಂದರೆಗಳು
ಹಾಗೆಂದು ವಾಹನಗಳ ಮಾಲೀಕರು ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಕೊಳ್ಳುವುದು ಸುಲಭ ಅಲ್ಲ. ಇಂಟರ್‌ನೆಟ್ ಬೆಂಬಲಿಸದ ಕಾರಣಕ್ಕೆ ಮೊಬೈಲ್ ನಲ್ಲಿ ಕಷ್ಟ ಸಾಧ್ಯ. ನಂಬರ್ ಪ್ಲೇಟ್ ಅಳವಡಿಸುವ ಕೇಂದ್ರಗಳಲ್ಲಿ ಸರತಿ ಸಾಲು ಇರುತ್ತದೆ. ಉದ್ಯೋಗಿಗಳಿಗೆ ದಿನಗಟ್ಟಲೆ ಕಾಯುವುದು ಅಸಾಧ್ಯ. ಕೆಲವೊಮ್ಮೆ ತಪ್ಪು ನಂಬರ್ ಪ್ಲೇಟ್ ಬಂದಿದ್ದರೆ ಮತ್ತೊಮ್ಮೆ ರಿಜಿಸ್ಟರ್ ಮಾಡಬೇಕು.
ಇನ್ನೂ ಕೆಲವರಿಗೆ ಇಂತಹ ನಂಬರ್ ಪ್ಲೇಟ್ ಅಳವಡಿಸಬೇಕು ಎಂಬ ಮಾಹಿತಿಯೇ ಇರುವುದಿಲ್ಲ. ಇದ್ದರೂ ಅನಕ್ಷರಸ್ಟರು, ಕಾರ್ಮಿಕರು, ದಿನಗೂಲಿ ನೌಕರರು ಇಂತಹವರಿಗೆ ರಿಜಿಸ್ಟರ್ ಮಾಡಲು ಬರುವುದಿಲ್ಲ. ಒಮ್ಮೊಮ್ಮೆ ವೆಬ್ ಸೈಟ್ ತೆರದುಕೊಳ್ಳುವುದಿಲ್ಲ. ಇಂತಹ ಸಮಸ್ಯೆಗಳೂ ಎದುರಾಗುತ್ತವೆ.
ಇದನ್ನೂ ಓದಿರಿ: Road Humps: ರೋಡ್ ಹಂಪ್ಗೆ ಬಲಿಯಾದ ಅಮೂಲ್ಯ ಜೀವದ ಹೊಣೆ ಹೊರುವವರು ಯಾರು? ಅವೈಜ್ಞಾನಿಕ ವಿಧಾನಕ್ಕೆ ಇನ್ನಾದರೂ ಬೀಳಲಿ ಬ್ರೇಕ್
ಹೆಲ್ಪ್ ಲೈನ್ ಆರಂಭಿಸಲಾಗಿದೆ. ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕುರಿತು ಜಾಗೃತಿ ಮೂಡಿಸಿದ್ದೇವೆ. ಇಲಾಖೆಯ ವೆಬ್ ಸೈಟ್ ನಲ್ಲೂ ಮಾಹಿತಿ ನೀಡುತ್ತಿದ್ದೇವೆ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ.
ವರದಿ: ಎಚ್.ಮಾರುತಿ, ಬೆಂಗಳೂರು