ಕನ್ನಡ ಸುದ್ದಿ  /  ಕರ್ನಾಟಕ  /  Hsrp Number Plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಅವಧಿ ಮತ್ತೆ ವಿಸ್ತರಣೆ, 3 ತಿಂಗಳ ಕಾಲಾವಕಾಶ

HSRP Number plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಅವಧಿ ಮತ್ತೆ ವಿಸ್ತರಣೆ, 3 ತಿಂಗಳ ಕಾಲಾವಕಾಶ

Transport department ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ ಪಿ ನಂಬರ್‌ ಪ್ಲೇಟ್‌( HSRP Number Plate) ಅಳವಡಿಕೆಗೆ ಇದ್ದ ಅವಧಿಯನ್ನು ವಿಸ್ತರಿಸಲಾಗಿದೆ.

ಎಚ್‌ಎಸ್‌ಆರ್‌ ಪಿ ನಂಬರ್‌ ಪ್ಲೇಟ್‌ ನೋಂದಣಿ ಅವಧಿ ವಿಸ್ತರಣೆಗೊಂಡಿದೆ.
ಎಚ್‌ಎಸ್‌ಆರ್‌ ಪಿ ನಂಬರ್‌ ಪ್ಲೇಟ್‌ ನೋಂದಣಿ ಅವಧಿ ವಿಸ್ತರಣೆಗೊಂಡಿದೆ.

ಬೆಂಗಳೂರು: ರ್ನಾಟಕ ಸಾರಿಗೆ ಇಲಾಖೆಯು ವಾಹನಗಳ ಸುರಕ್ಷತೆ ದೃಷ್ಟಿಯಿಂದ ಅಳವಡಿಸುತ್ತಿರುವ ಅತಿ ಸುರಕ್ಷಿತ ನೋಂದಣಿ ಫಲಕ( HSRP) ಅಳವಡಿಕೆಗೆ ದಿನಾಂಕವನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. 2024 ರ ಮೇ 31ರವರೆಗೆ ಇದ್ದ ನೋಂದಣಿ ಅವಧಿಯನ್ನು 2024 ರಸೆಪ್ಟೆಂಬರ್ 15ರವರೆಗೆ ವಿಸ್ತರಣೆ ಮಾಡಿ ಕರ್ನಾಟಕ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ತಮ್ಮ ವಾಹನಗಳಿಗೆ ಎಚ್ಎಚ್‌ಆರ್‌ ಪಿ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳದೇ ಇದ್ದವರಿಗೆ ಇನ್ನೂ ಮೂರು ತಿಂಗಳ ಕಾಲಾವಕಾಶ ಸಿಕ್ಕಂತೆ ಆಗಿದೆ. ಈ ಅವಧಿಯಲ್ಲಿ ಯಾವುದೇ ದಂಡ ಇರುವುದಿಲ್ಲ. ಬದಲಿಗೆ ನೋಂದಣಿಯನ್ನು ಕಡ್ಡಾಯವಾಗಿ ವಾಹನಗಳಿಗೆ ಮಾಡಿಸಿಕೊಂಡು ಮುಂದೆ ದಂಡ ಹಾಕುವುದನ್ನು ತಪ್ಪಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

2019ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಆಳವಡಿಸಲು ಅವಕಾಶ ನೀಡಲಾಗಿದೆ. 2019ರ ಏಪ್ರಿಲ್ ನಂತರದ ವಾಹನಗಳ ನೋಂದಣಿ ಮಾಡಿಕೊಳ್ಳುವಾಗಲೇ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿರುತ್ತದೆ. ಈವರೆಗೂ ನಿರೀಕ್ಷಿತ ಮಟ್ಟದಲ್ಲಿ ನೋಂದಣಿಯಾಗಿಲ್ಲ. ಈ ಕಾರಣದಿಂದ ಜನರಿಗೆ ತೊಂದರೆಯಾಗದಿರಲಿ ಎನ್ನುವ ಕಾರಣ ನೀಡಿ ಅವಧಿ ವಿಸ್ತರಣೆ ಮಾಡಲಾಗಿದೆ.

ಈವರೆಗೂ ನಾಲ್ಕೈದು ಬಾರಿ ಅವಧಿ ವಿಸ್ತರಣೆ ಮಾಡಲಾಗಿದೆ. ಕರ್ನಾಟಕದ ವಾಹನ ಮಾಲೀಕರಿಂದ ಸೂಕ್ತ ಸ್ಪಂದನೆ ದೊರಕದಿರುವ ಕಾರಣಕ್ಕೆ ಹಳೆಯ ವಾಹನಗಳಿಗೆ ಎಚ್‌ಎಸ್ಆರ್‌ಪಿ ಆಳವಡಿಸುವ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಟ್ರೆಂಡಿಂಗ್​ ಸುದ್ದಿ

ಎಷ್ಟು ನೋಂದಣಿ ಆಗಿದೆ

ಕರ್ನಾಟಕದಲ್ಲಿ ಅಂದಾಜು 2 ಕೋಟಿ ವಾಹನಗಳಿವೆ. ಇದರಲ್ಲಿ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಆರು ಚಕ್ರದ ವಾಹನಗಳೂ ಇವೆ. ಇವುಗಳಲ್ಲಿ ದ್ವಿಚಕ್ರ ವಾಹನದ ಪ್ರಮಾಣವೇ ಅಧಿಕ. ಕಾರು, ಆಟೋ ರಿಕ್ಷಾ, ಬಸ್‌ಗಳು ಕೂಡ ಇವೆ. ಈ ಎಲ್ಲಾ ವಾಹನಗಳ ಸುರಕ್ಷತೆ ಕಾರಣಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅನ್ನು ಕಡ್ಡಾಯಗೊಳಿಸಲಾಗಿದೆ. ಈವರೆಗೂ ಸಾರಿಗೆ ಇಲಾಖೆಯಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ 45 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಚ್‌ಎಸ್ಆರ್‌ಪಿ ಪ್ಲೇಟ್‌ ಅಳವಡಿಕೆಯಾಗಿದೆ. ಅಂದರೆ ಶೇ.22 ರಷ್ಟು ಮಾತ್ರ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ 1.50 ಕೋಟಿ ವಾಹನಗಳಿಗೆ ಈ ಪ್ರಕ್ರಿಯೆ ಬಾಕಿಯಿದೆ. ಸೆಪ್ಟಂಬರ್‌ ಅಂತ್ಯದೊಳಗೆ ಇನ್ನಷ್ಟು ವಾಹನ ನೋಂದಣಿಯಾದರೂ ಅದು ಶೇ. 30 ರಷ್ಟನ್ನು ಮಾತ್ರ ತಲುಪಬಹುದು ಎನ್ನುವ ಅಂದಾಜಿದೆ.

ಸೆಪ್ಟೆಂಬರ್ 15ರ ನಂತರ ಸಾರಿಗೆ ಇಲಾಖೆಯಿಂದಲೇ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸದ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಶುರುವಾಗಲಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದವರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಆನಂತರ ಸಿಕ್ಕಿ ಬಿದ್ದರೆ 1000 ರೂ. ದಂಡ ಪಾವತಿಸಬೇಕಾಗುತ್ತದೆ. ಆನಂತರ ಪ್ರತೀ ಬಾರಿಯೂ 1000 ರೂ.ದಂಡ ತೆರುವುದು ಅನಿವಾರ್ಯವಾಗುತ್ತದೆ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ವಿವರಣೆ.

ಸಹಾಯವಾಣಿ ವೆಬ್‌ಸೈಟ್‌

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಆನ್‌ಲೈನ್‌ನಲ್ಲಿ ನೋಂದಣಿ ವೇಳೆ ಸಮಸ್ಯೆ ಉಂಟಾದರೆ ನೆರವಾಗಲು ಸಾರಿಗೆ ಇಲಾಖೆಯ ಸಹಾಯವಾಣಿಯೂ ಈಗಾಗಲೇ ಕೆಲಸ ಮಾಡುತ್ತಿದೆ.ಸಾರ್ವಜನಿಕರು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಸಹಾಯವಾಣಿ 9449863429/26 ಸಂಪರ್ಕಿಸಿ ಗೊಂದಗಳಿದ್ದರೆ ಬಗೆಹರಿಸಿಕೊಳ್ಳಬಹುದು. ಕೆಲವೊಮ್ಮೆ ನಿಧಾನವಾದ ದೂರುಗಳೂ ಬಂದಿದ್ದು, ಸಹಾಯವಾಣಿಗೆ ಸಂಪರ್ಕಿಸಿದರೆ ಸೂಕ್ತ ಮಾರ್ಗದರ್ಶನವೂ ಸಿಗಲಿದೆ.

ಇದಲ್ಲದೇ http://transport.karnataka.gov.in ಅಥವಾ www.siam.inಗೆ ಭೇಟಿ ನೀಡಿ ವಾಹನಗಳಿಗೆ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಲು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಫಲಕ ಅಳವಡಿಸುವ ದಿನಾಂಕ, ವಾಹನ ಮಾರಾಟ ಕೇಂದ್ರದ ಹೆಸರು ಮತ್ತು ವಿಳಾಸವನ್ನು ವೆಬ್‌ಸೈಟ್‌ ಮೂಲಕವೇ ಖಚಿತಪಡಿಸಿಕೊಳ್ಳಬೇಕು. ಈ ವೆಬ್‌ಸೈಟ್‌ಗಳ ಮೂಲಕ ನೋಂದಣಿ ಮಾಡಿ ಅಳವಡಿಸಿದ ಎಚ್‌ಎಸ್‌ಆರ್‌ಪಿಗಳು ಮಾತ್ರ ಮಾನ್ಯತೆ ಹೊಂದಿರಲಿವೆ. ಇತರ ವೆಬ್‌ ಪೋರ್ಟಲ್‌ ಬಳಸುವ ಮುನ್ನ ಎಚ್ಚರಿಕೆ ವಹಿಸಿಕೊಳ್ಳುವುದು ಸೂಕ್ತ ಎನ್ನುವುದು ಸಾರಿಗೆ ಅಧಿಕಾರಿಗಳು ನೀಡುವ ಸೂಚನೆ.