ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ; ನವೆಂಬರ್ 20 ರವರೆಗೆ ಉಂಟು ಅವಕಾಶ
ಕರ್ನಾಟಕದಲ್ಲಿ ವಾಹನಗಳಿಗೆ ಅಳವಡಿಸುವ ಎಚ್‌ಎಸ್‌ಆರ್ ಪಿ ನಂಬರ್ ಪ್ಲೇಟ್ ನೋಂದಣಿ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು ಮುಂದಿನ ನವೆಂಬರ್ 20ರವರೆಗೂ ಗಡುವು ವಿಸ್ತರಣೆಯಾಗಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ ಪ್ಲೇಟ್ ) ಅಳವಡಿಸುವ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ನವೆಂಬರ್ 20ರವರೆಗೂ ಗಡುವು ವಿಸ್ತರಣೆ ಮಾಡಲಾಗಿದೆ. ಇನ್ನೂ ಮೂರು ತಿಂಗಳ ಕಾಲ ಗಡುವು ವಿಸ್ತರಣೆಯಾಗಿದ್ದರೂ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದೆ. ಕರ್ನಾಟಕ ಹೈಕೋರ್ಟ್ ನೀಡಿದ ಸೂಚನೆ ಆಧರಿಸಿ ಕರ್ನಾಟಕ ಸಾರಿಗೆ ಇಲಾಖೆ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಈಗಾಗಲೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೂರು ಬಾರಿ ಗಡುವು ವಿಸ್ತರಣೆ ಮಾಡಿದ್ದು. ಈಗ ನಾಲ್ಕನೇ ಬಾರಿಯೂ ಗಡುವು ಮುಂದುವರಿದಿದೆ.
ನಂಬರ್ ಪ್ಲೇಟ್ ಅಳವಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ವಿಚಾರಣೆಯೂ ಇತ್ತು. ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ಕೋರಿ ಹಿರಿಯ ವಕೀಲ ದೇವದತ್ ಕಾಮತ್ ಅವರು ಹೈಕೋರ್ಟ್ ಈ ಹಿಂದೆಯೇ ಮನವಿ ಸಲ್ಲಿಸಿದ್ದರು.
ಈ ಕುರಿತ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠ ಗಡುವನ್ನು ವಿಸ್ತರಿಸಿತು.
ಕರ್ನಾಟಕ ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ವಿಚಾರದಲ್ಲಿ ಅವಸರ ಮಾಡುತ್ತಿದೆ. ಸರಿಯಾದ ಮಾಹಿತಿ ಇಲ್ಲದೇ ಜನ ನೊಂದಣಿ ಮಾಡಿಸಲು ಆಗುತ್ತಿಲ್ಲ. ಈಗ ದಂಡ ವಿಧಿಸಲು ಶುರು ಮಾಡಿದರೆ ಸಾಮಾನ್ಯರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಗಡುವನ್ನು ಮುಂದಕ್ಕೆ ಹಾಕಬೇಕು. ಅಲ್ಲದೇ ಸಾರಿಗೆ ಇಲಾಖೆಗೆ ಜಾಗೃತಿ ಮೂಡಿಸಲು ಸೂಚಿಸಬೇಕು ಎಂದು ವಕೀಲರು ಕೋರಿದರು. ಸರ್ಕಾರ ಪರವಾದ ವಕೀಲರು ಹಾಗೂ ಸಾರಿಗೆ ಇಲಾಖೆಯ ವಕೀಲರು ಆದೇಶವನ್ನು ಸಮರ್ಥಿಸಿಕೊಂಡರು.
ವಾದ ಆಲಿಸಿದ ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್ ಮತ್ತು ಕೆ ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠವು, ಸಾರಿಗೆ ಇಲಾಖೆಯು ಈಗಾಗಲೇ ಮೂರು ಬಾರಿ ಗಡುವು ನೀಡಿದೆ. ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿದ್ದು, ನವೆಂಬರ್ 20ಕ್ಕೆ ಮುಂದಿನ ವಿಚಾರಣೆ ಮುಂದುವರಿಸಲಿದೆ. ಅಲ್ಲಿಯವರೆಗೂ ಗಡುವು ವಿಸ್ತರಣೆ ಮಾಡಬೇಕು ಎಂದು ಸೂಚನೆ ನೀಡಿತು.
ಕೇಂದ್ರ ಸರ್ಕಾರ ಭದ್ರತೆ ದೃಷ್ಟಿಯಿಂದ ಏಕರೂಪದ ನಂಬರ್ ಪ್ಲೇಟ್ ಅಳವಡಿಕೆಗೆ ಅದೇಶಿಸಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕರ್ನಾಟಕದಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಒಂದೂವರೆ ವರ್ಷದ ಹಿಂದೆಯೇ ಇದು ಜಾರಿಯಾಗಿದೆ. ಕರ್ನಾಟಕದಲ್ಲಿ ಬಸ್, ಲಾರಿ, ಕಾರು, ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ವಾಹನಗಳು ಕಡ್ಡಾಯವಾಗಿ ಎಚ್‌ಎಸ್‌ಆರ್ ಪಿ ಪ್ಲೇಟ್ ಅಳವಡಿಸಿಕೊಳ್ಳಬೇಕು. ಈಗಾಗಲೇ ಮೂರು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಈ ಕುರಿತಾದ ಪ್ರಕರಣ ನ್ಯಾಯಾಲಯದಲ್ಲೂ ಇರುವುದರಿಂದ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಈಗ ನ್ಯಾಯಾಲಯವೇ ಗಡುವು ವಿಸ್ತರಣೆ ಮಾಡಲು ಸೂಚಿಸಿದೆ. ಅದರಂತೆ ನವೆಂಬರ್ 20 ರವರೆಗೆ ವಿಸ್ತರಣೆ ಮಾಡಲಾಗಿದೆ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ವಿವರಣೆ.
ಕರ್ನಾಟಕದಲ್ಲಿ ಎರಡು ಕೋಟಿ ವಾಹನಗಳಿದ್ದು, ಈವರೆಗೂ ಶೇ 25ರಷ್ಟು ಮಾತ್ರ ನೋಂದಣಿ ಆಗಿದೆ. ಅಂದರೆ 52 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ. ಮುಂದಿನ ಮೂರು ತಿಂಗಳು ಗಡುವು ವಿಸ್ತರಣೆಯಾಗಿದ್ದರೂ ನೋಂದಣಿ ಇರಲಿದೆ ಎಂದು ಹೇಳುತ್ತಾರೆ.