Bangalore News: ಕೆಎಎಸ್ ಅಧಿಕಾರಿ ಪತ್ನಿ, ಹೈಕೋರ್ಟ್ ವಕೀಲೆ ಆತ್ಮಹತ್ಯೆ, ಕಾರಣವೇನು
ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಯಾಗಿರುವ ಶಿವಕುಮಾರ್ ಅವರ ಪತ್ನಿ ಚೈತ್ರಾಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರು: ಕರ್ನಾಟಕ ಆಡಳಿತ ಸೇವೆಯ( KAS) ಹಿರಿಯ ಅಧಿಕಾರಿಯ ಪತ್ನಿ ಹಾಗೂ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚೈತ್ರಾಗೌಡ(35) ಅವರು ಶನಿವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಸಂಜಯನಗರದ ಅಣ್ಣಯ್ಯ ಲೇಔಟ್‌ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಚೈತ್ರಾಗೌಡ ಶವ ಪತ್ತೆಯಾಗಿದೆ. ಈ ಕುರಿತು ಬೆಂಗಳೂರಿನ ಸಂಜಯನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಘಟನೆಗೆ ಕಾರಣ ಏನು ಎನ್ನುವ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಯಲ್ಲಿರುವ ಕೆಎಎಸ್ ಅಧಿಕಾರಿ ಶಿವಕುಮಾರ್ ಹಾಗೂ ನ್ಯಾಯವಾದಿಯಾಗಿದ್ದ ಚೈತ್ರಾಗೌಡ ಅವರ ವಿವಾಹವು ಎಂಟು ವರ್ಷದಿಂದೇ ಆಗಿತ್ತು.
ಈ ದಂಪತಿಗೆ ಐದು ವರ್ಷದ ಮಗ ಕೂಡ ಇದ್ದಾನೆ. ಹೈಕೋರ್ಟ್ ಜತೆಗೆ ಬೆಂಗಳೂರಿನ ನ್ಯಾಯಾಲಯಗಳಲ್ಲೂ ನ್ಯಾಯವಾದಿಯಾಗಿದ್ದ ಚೈತ್ರಾಗೌಡ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.ಮಾಡೆಲಿಂಗ್ ಹಾಗೂ ಕ್ರೀಡಾ ಚಟುವಟಿಕೆ ಕೂಡ ಅವರ ಆಸಕ್ತಿಗಳಾಗಿದ್ದವು. ನ್ಯಾಯವಾದಿಯಾಗಿಯೂ ಉತ್ತಮ ಹೆಸರು ಇತ್ತು.
ಶಿವಕುಮಾರ್ ಹಾಗೂ ಚೈತ್ರಾಗೌಡ ಅನ್ಯೋನ್ಯವಾಗಿದ್ದರು. ಆದರೆ ಪತಿ ಹೊರಗೆ ಹೋಗಿದ್ದಾಗ ಶನಿವಾರ ಮನೆಯಲ್ಲಿನ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಚೈತ್ರಾ ಶರಣರಾಗಿದ್ದಾರೆ. ಪತಿ ಮನೆಗೆ ವಾಪಸಾದಾಗ ಇದು ಬೆಳಕಿಗೆ ಬಂದಿದೆ. ಕೂಡಲೇ ಸಂಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದು. ಅವರು ಮಹಜರು ನಡೆಸಿದ್ದಾರೆ.
ಮೃತ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಮೃತಳ ಸಹೋದರ ನೀಡಿದ ದೂರಿನ ಮೇರೆಗೆ ಮೊಕದ್ದಮೆ ದಾಖಲಾಗಿದೆ. ಮನೆಯಲ್ಲಿ ಯಾವುದೇ ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ ಎನ್ನುವುದು ಪೊಲೀಸರು ನೀಡಿರುವ ಮಾಹಿತಿ. ಘಟನೆ ಕುರಿತು ತನಿಖೆ ಮುಂದುವರೆದಿದೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.