CET 2024: ಸಿಇಟಿ ಪರೀಕ್ಷೆ ನೋಂದಣಿಗೆ 2 ದಿನ ಅವಧಿ ವಿಸ್ತರಣೆ, ಮಾರ್ಚ್ 20ರ ಸಂಜೆವರೆಗೆ ಅವಕಾಶ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆ ನೋಂದಣಿಗೆ ಎರಡು ದಿನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಡೆಸಲಿರುವ ಸಿಇಟಿ 2024ರ ನೋಂದಣಿಗೆ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಸಿಇಟಿ ಪರೀಕ್ಷೆ ಬರೆಯಲು ಅಣಿಯಾಗುತ್ತಿರುವ ಹಲವಾರು ಅಭ್ಯರ್ಥಿಗಳು ದಿನಾಂಕ ವಿಸ್ತರಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್.ರಮ್ಯಾ ತಿಳಿಸಿದ್ದಾರೆ.
ಯುಜಿ ಸಿಇಟಿ 2024ಕ್ಕೆ ಮಾರ್ಚ್ 18 ರ ಸಂಜೆ 6ರಿಂದ ಮಾರ್ಚ್ 20 ರವರೆಗೆ ರಾತ್ರಿ 11.59ರವರೆಗೆ ಅವಕಾಶವಿದೆ. ಈ ಅವಧಿಯೊಳಗೆ ನೋಂದಣಿ ಮಾಡಿಸಿಕೊಂಡವರು ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಮಾರ್ಚ್ 21ರ ಸಂಜೆ 5.30ರವರೆಗೆ ಸಮಯ ನಿಗದಿ ಮಾಡಲಾಗಿದೆ.ಆದರೆ ಈ ದಿನಗಳಂದು ನೋಂದಣಿ ಮಾಡಿಕೊಳ್ಳುವವರು ಬೆಂಗಳೂರಿನಲ್ಲಿ ಮಾತ್ರ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.
ವೃತ್ತಿಪರ ಕೋರ್ಸುಗಳಿಗೆ ನೋಂದಣಿ,. ಆನ್‌ಲೈನ್ ಅರ್ಜಿ ಸಲ್ಲಿಸುವುದು, ಅರ್ಹತಾ ಷರತ್ತುಗಳು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅರ್ಜಿ ಸಲ್ಲಿಕೆ ಹಾಗೂ ಪರಿಶೀಲನೆಗೆ ಮಾಹಿತಿ ಪುಸ್ತಕ ಹಾಗೂ 2024ರ ಜನವರಿ 9ರಂದು ಹೊರಡಿಸಿರುವ ಅಧಿಸೂಚನೆಯನ್ನು ಓದಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ವೃತ್ತಿಪರ ಕೋರ್ಸ್‌ಗಳಿಗೆ ಏಪ್ರಿಲ್ 18 ಹಾಗೂ 19ರಂದು ಪ್ರವೇಶ ಪರೀಕ್ಷೆಯು ನಡೆಯಲಿದೆ. ಈ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
