Karave Narayanagowda Profile: ಗಾರ್ಮೆಂಟ್ಸ್ ನೌಕರನಿಂದ ಕರವೇ ಅಧ್ಯಕ್ಷ ಸ್ಥಾನದವರೆಗೆ; ಟಿಎ ನಾರಾಯಣಗೌಡರ ಬದುಕು ಸಾಗಿಬಂದ ಹಾದಿ ಇದು
Karave Narayanagowda ಎರಡು ದಶಕಕ್ಕೂ ಮಿಗಿಲಾಗಿ ಕನ್ನಡ ಪರ ಹೋರಾಟಗಳಲ್ಲಿ ಭಾಗಿಯಾಗುತ್ತಾ ಬಂದಿರುವ ಟಿ.ಎ.ನಾರಾಯಣಗೌಡರು ಯಾರು, ಅವರ ಹಿನ್ನೆಲೆಯ ವಿವರ ಇಲ್ಲಿದೆ.
ಬೆಂಗಳೂರು: ಬೆಂಗಳೂರು ಸೇರಿ ಕರ್ನಾಟಕದಲ್ಲಿ ವಾಣಿಜ್ಯ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟದ ಕಾವು ಜೋರಾಗಿಯೇ ಇದೆ. ಈ ಹೋರಾಟದ ನೇತೃತ್ವ ವಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಯಾರು? ಅವರ ಹಿನ್ನೆಲೆ ಏನು ಎನ್ನುವ ಕುತೂಹಲವಂತೂ ಇದ್ದೇ ಇದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆಡಳಿತ, ನಾಮಫಲಕ ಸಹಿತ ಎಲ್ಲೆಡೆ ಕನ್ನಡಕ್ಕೆ ಮೊದಲ ಆದ್ಯತೆ, ಕನ್ನಡವೇ ಜಾತಿ,. ಕನ್ನಡವೇ ಧರ್ಮ ಹಾಘೂ ಕನ್ನಡವೇ ದೇವರು ಎನ್ನುವ ಹಿನ್ನೆಲೆ ಹಾಗೂ ಧೇಯವಾಕ್ಯ ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ ಬಣ ಹೋರಾಟ ತೀವ್ರಗೊಳಿಸಿದೆ. ಬೆಂಗಳೂರಿನಲ್ಲಿ ಫಲಕಗಳ ಮೇಲೆ ಕಲ್ಲು ಎಸೆದು, ಮಸಿ ಬೆಳೆದು ಗದ್ದಲ ಎಬ್ಬಿಸಿದ್ದರಿಂದ ಪ್ರಕರಣವನ್ನೂ ದಾಖಲಿಸಲಾಯಿತು. ಈ ಪ್ರಕರಣದಲ್ಲಿ ನಾರಾಯಣಗೌಡ ಸಹಿತ ಹಲವರನ್ನು ಪೊಲೀಸರು ಬಂಧಿಸಿ ಕೆಲವರನ್ನು ಬಿಡುಗಡೆ ಮಾಡಿದ್ದಾರೆ.
ನಾಡು, ನುಡಿ ಹೋರಾಟದ ವಿಚಾರ ಮುಂದಾಗ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಮುಂಚೂಣಿಯಲ್ಲಿರುವ ನಾರಾಯಣಗೌಡ ಅವರು ಕನ್ನಡದ ಹೋರಾಟಗಾರರು ನಿಜ. ಆದರೆ ಅವರ ಪುತ್ರಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಕುರಿತು ಚರ್ಚೆಗಳು ಸಾಮಾಜಿಕ ಮಾಧ್ಯಮದಲ್ಲಿ ನಡೆದಿವೆ. ಕನ್ನಡ ಹೋರಾಟಗಾರರ ಮಕ್ಕಳು ಕರ್ನಾಟಕದಲ್ಲಿಯೇ ಓದಬೇಕು. ಅವರನ್ನೇಕೆ ವಿದೇಶಕ್ಕೆ ವ್ಯಾಸಂಗಕ್ಕೆಂದು ಕಳುಹಿಸಬೇಕು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಟಿ.ಎ.ನಾರಾಯಣಗೌಡ ಅವರ ಹಿನ್ನೆಲೆಯ ನೋಟ ಇಲ್ಲಿದೆ
- ನಾರಾಯಣಗೌಡ ಅವರು ಮೂಲತಃ ಹಾಸನ ಜಿಲ್ಲೆ ಅರಸಿಕೆರೆಯವರು. ಅವರಿಗೀಗ 56 ವರ್ಷ.
- ಅರಸಿಕೆರೆ ತಾಲ್ಲೂಕಿನ ಮಾಲೇಕಲ್ ಬೆಟ್ಟದಲ್ಲಿ ಮೈಕ್ ಸೆಟ್ ಅಳವಡಿಸುವ ವಿಚಾರದಲ್ಲಿ ಪ್ರತಿಭಟನೆ ನಡೆಸಿ 15 ವರ್ಷದ ಬಾಲಕನಿದ್ದಾಗಲೇ ಗಮನ ಸೆಳೆದಿದ್ದರು ನಾರಾಯಣಗೌಡ
- ತಂದೆಯೊಂದಿಗೆ ಜಗಳವಾಡಿಕೊಂಡು ಆಗಲೇ ಮುಂಬೈಗೆ ಉದ್ಯೋಗ ಅರಸಿ ಹೋಗಿದ್ದರು. ಕೆಲ ವರ್ಷ ಮುಂಬೈನಲ್ಲಿಯೇ ಕೆಲಸ ಮಾಡಿದ್ದರು.
- ಆನಂತರ ತವರಿಗೆ ವಾಪಾಸಾಗಿ ಹಾಸನ ಜಿಲ್ಲೆಯಲ್ಲಿಯೇ ಗಾರ್ಮೆಂಟ್ ನೌಕರರಾಗಿ ಕೆಲಸ ಆರಂಭಿಸಿದರು. ಬಳಿಕ ಆ ಗಾರ್ಮೆಂಟ್ ಫ್ಯಾಕ್ಟರಿಯ ಮಾಲೀಕತ್ವವನ್ನೂ ತಾವು ವಹಿಸಿಕೊಂಡಿದ್ದರು.
- ಇದಾದ ಬಳಿಕ ಬೆಂಗಳೂರಿಗೆ ಬಂದು ಇಲ್ಲಿ ಹೋರಾಟಗಳಲ್ಲಿ ಭಾಗಿಯಾಗುತ್ತಾ ಕರ್ನಾಟಕ ರಕ್ಷಣಾ ವೇದಿಕೆ ಸ್ಥಾಪಿಸಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
- ನಾರಾಯಣಗೌಡ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ. ಆ ನಂತರ ಹಲವು ಬಣಗಳು ರಚನೆಯಾದರೂ ನಾರಾಯಣಗೌಡರ ಬಣ ಗಟ್ಟಿಯಾಗಿಯೇ ಉಳಿದುಕೊಂಡು ಬಂದಿದೆ.
- ನಾರಾಯಣ ಗೌಡ ಅವರ ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ವಿವಾದದ ವಿಚಾರದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು, ಗಮನ ಸೆಳಯುತ್ತಾ ಬಂದಿದೆ.
- ಬೆಳಗಾವಿ ನಗರ ಪಾಲಿಕೆಯಲ್ಲಿ ಮಹಾರಾಷ್ಟ್ರದ ಪರವಾಗಿ ನಿರ್ಣಯ ಕೈಗೊಂಡು ಕನ್ನಡ ವಿರೋಧಿ ನೀತಿ ತಳೆದಿದ್ದ ಬೆಳಗಾವಿ ಮೇಯರ್ ವಿಜಯ್ ಮೋರೆ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣವೇ ಮುಂಚೂಣಿಯಲ್ಲಿತ್ತು.
- ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ನಾರಾಯಣಗೌಡ ಅವರು ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ಗಮನ ಸೆಳೆದಿದ್ದರು.
- ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಕಳೆದ ಬಾರಿಗೆ ನಾರಾಯಣಗೌಡ ಅವರು ಬಿಜೆಪಿಯಿಂದ ಸ್ಪರ್ಧಿಸುವರು ಎನ್ನುವ ವಿಷಯ ಮುನ್ನಲೆಗೆ ಬಂದಿತ್ತು. ಆನಂತರ ಅಲ್ಲಿ ಡಿ.ವಿ.ಸದಾನಂದಗೌಡ ಸ್ಪರ್ಧೆ ಮಾಡಿದ್ದರು.
- ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ ಪ್ರಕರಣದಲ್ಲಿ ಅವರ ಪರವಾಗಿ ನಾರಾಯಣಗೌಡ ಪ್ರತಿಭಟನೆ ನಡೆಸಿದ್ದರು. ಡಿಕೆಶಿ ಅವರೊಂದಿಗೆ ಈಗಲೂ ಉತ್ತಮವಾದ ಸಂಬಂಧವನ್ನು ನಾರಾಯಣಗೌಡ ಹೊಂದಿರುವ ಮಾತುಗಳಿವೆ.
- ನಾರಾಯಣಗೌಡ ಅವರ ಸಂಘಟನೆ ವಿರುದ್ದ ಕೆಲವು ಪ್ರಕರಣಗಳಲ್ಲಿ ಹಣ ಸುಲಿಗೆ ಮಾಡಿದ ಆರೋಪಗಳೂ ಕೇಳಿ ಬಂದಿದ್ದವು.
- ಈಗ ಕನ್ನಡ ನಾಮಫಲಕದ ಹೋರಾಟ ತೀವ್ರಗೊಂಡಿರುವಾಗ ನಾರಾಯಣಗೌಡ ಅವರ ಪುತ್ರಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಚರ್ಚೆಗಳು ತೀವ್ರವಾಗಿವೆ.
=========