Bangalore Crime: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ, ಮಹಿಳಾ ಪಿಜಿಯಲ್ಲೇ ಯುವತಿಯ ಹತ್ಯೆ ಮಾಡಿದ ಪ್ರಿಯಕರ; ಆರೋಪಿ ಪತ್ತೆಗೆ ವಿಶೇಷ ತಂಡ
Murder in Bangalore Pg ಬೆಂಗಳೂರಿನ ಪಿಜಿಯೊಂದರಲ್ಲಿ ಬಿಹಾರ ಮೂಲದ ಯುವತಿಯನ್ನು ಕೊಲೆ ಮಾಡಲಾಗಿದೆ.
ಬೆಂಗಳೂರು: ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ ನಲ್ಲಿ ನಡುರಾತ್ರಿ ಯುವತಿಯೊಬ್ಬರ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನದ ಉಂಗುರ ಮತ್ತು ಮೊಬೈಲ್ ಕಳವು ಮಾಡಿದ್ದ ಪ್ರಕರಣ ಹಸಿರಾಗಿರುವಾಗಲೇ ಕೋರಮಂಗಲದ ಪಿಜಿಯೊಂದರಲ್ಲಿ ಯುವತಿಯೊಬ್ಬರ ಭೀಕರ ಹತ್ಯೆ ನಡೆದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. 24 ವರ್ಷದ ಕೃತಿಕಾ ಕುಮಾರಿ ಹತ್ಯೆಗೀಡಾದ ದುರ್ದೈವಿ. ಇವರು ಬಿಹಾರ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಮಂಗಲದ ವೆಂಕಟರೆಡ್ಡಿ ಲೇ ಔಟ್ ನ ಭಾರ್ಗವಿ ಸ್ಟೇಯಿಂಗ್ ಹೋಮ್ಸ್ ನ ಮೂರನೇ ಮಹಡಿಯ ಕೊಠಡಿಯಲ್ಲಿ ವಾಸವಾಗಿದ್ದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ ಯುವತಿಯ ಪ್ರಿಯಕರನೇ ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕುಮಾರಿ ಅವರು ಮಂಗಳವಾರ ರಾತ್ರಿ 10 ಗಂಟೆಗೆ ಪಿಜಿಯಿಂದ ಹೊರಹೋಗಿ 11 ಗಂಟೆಗೆ ಪ್ರಿಯಕರನೊಂದಿಗೆ ಮರಳಿದ್ದಾರೆ. ಆದರೆ ಪಿಜಿ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಯುವಕನಿಗೆ ಅವಕಾಶ ನೀಡಿಲ್ಲ. ಹೆಣ್ಣು ಮಕ್ಕಳ ಪಿಜಿ ಪ್ರವೇಶಿಸಲು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಕುಮಾರಿ ಅವರು ತಮ್ಮ ಪ್ರಿಯಕರನನ್ನು, ಸಹೋದರ ಎಂದು ನಂಬಿಸಿಬಲವಂತವಾಗಿ ಪಿಜಿ ಕೋಣೆಗೆ ರಾತ್ರಿ 11 ಗಂಟೆಗೆ ಕರೆದುಕೊಂಡು ಹೋಗಿದ್ದಾರೆ. 11.30ರ ವೇಳೆಗೆ ಈ ಹತ್ಯೆ ನಡೆದಿರಬಹುದು ಎಂದೂ ಪೊಲೀಸರು ಶಂಕಿಸಿದ್ದಾರೆ. ಕೋಣೆಯಲ್ಲಿ ಇಬ್ಬರ ನಡುವೆ ಜಟಾಪಟಿ ನಡೆದಿದೆ. ಜಗಳದಲ್ಲಿ ಕೋಪಗೊಂಡ ಆರೋಪಿ ಹಲವಾರು ಬಾರಿ ಕೃತಿಕಾ ಅವರಿಗೆ ಇರಿದಿದ್ದಾನೆ. ನಂತರ ಗಂಟಲನ್ನು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಆತ ಪಿಜಿ ಪ್ರವೇಶಿಸುತ್ತಿರುವುದು ಮತ್ತು ಹೊರ ಹೋಗುತ್ತಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆರೋಪಿಯ ಕುರುಹುಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ. ಜತೆಗೆ ಪಿಜಿಯಲ್ಲಿದ್ದವರಿಂದಲೂ ಹೇಳಿಕೆ ಪಡೆದಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಕುಮಾರಿ ಅವರು ಕೊಠಡಿಯನ್ನು ಬಾಡಿಗೆ ಪಡೆದಿದ್ದರು. ಬಾಡಿಗೆಪಡೆಯುವಾಗ ಖಾಸಗಿ ಕಂಪನಿ ಉದ್ಯೋಗಿ ಎಂದು ಹೇಳಿಕೊಂಡಿದ್ದರು ಎಂದು ಪಿಜಿ ಮಾಲೀಕರು ತಿಳಿಸಿದ್ದಾರೆ. ಕೃತಿಕಾ ಅವರು ಪಿಜಿ ಸೇರಿಕೊಳ್ಳುವಾಗ ಆಕೆಯ ವಸ್ತುಗಳನ್ನು ಸಾಗಿಸಲು ಆರೋಪಿ ಸಹಕರಿಸಿದ್ದ ಎಂದೂ ಗೊತ್ತಾಗಿದೆ.
ಬೆಂಗಳೂರು ಆಗ್ನೇಯ ವಿಭಾಗದ ಉಪ ಆಯುಕ್ತೆ ಸಾರಾ ಫಾತಿಮಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ತಂಡಗಳ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ತಂಡವು ಆರೋಪಿ ಪತ್ತೆಗೆ ಕಾರ್ಯಾಚರಣೆ ಚುರುಕುಗೊಳಿಸಿದೆ.
ಪಿಜಿಯೊಳಗೆ ಪುರುಷನೊಬ್ಬನನ್ನು ಪ್ರವೇಶಿಸಲು ಅನುಮತಿ ನೀಡಿದ ಭದ್ರತಾ ಸಿಬ್ಬಂದಿ ಮತ್ತು ಪಿಜಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಕುಮಾರಿ ಅವರ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲಾಗಿದೆ. ಅವರ ಕುಟುಂಬದವರನ್ನೂ ಸಂಪರ್ಕಿಸಲಾಗಿದೆ.ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ವರದಿ: ಮಾರುತಿ. ಬೆಂಗಳೂರು)