ಏಪ್ರಿಲ್ 26ರ ಶುಕ್ರವಾರ ಲೋಕಸಭೆ ಚುನಾವಣೆ; ಬೆಂಗಳೂರಿಗರು ವೋಟ್ ಮಾಡುತ್ತಾರಾ ಇಲ್ಲ ಟ್ರಿಪ್ ಹೋಗ್ತಾರಾ? ಅಧಿಕಾರಿಗಳಿಗೆ ತಲೆಬಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  ಏಪ್ರಿಲ್ 26ರ ಶುಕ್ರವಾರ ಲೋಕಸಭೆ ಚುನಾವಣೆ; ಬೆಂಗಳೂರಿಗರು ವೋಟ್ ಮಾಡುತ್ತಾರಾ ಇಲ್ಲ ಟ್ರಿಪ್ ಹೋಗ್ತಾರಾ? ಅಧಿಕಾರಿಗಳಿಗೆ ತಲೆಬಿಸಿ

ಏಪ್ರಿಲ್ 26ರ ಶುಕ್ರವಾರ ಲೋಕಸಭೆ ಚುನಾವಣೆ; ಬೆಂಗಳೂರಿಗರು ವೋಟ್ ಮಾಡುತ್ತಾರಾ ಇಲ್ಲ ಟ್ರಿಪ್ ಹೋಗ್ತಾರಾ? ಅಧಿಕಾರಿಗಳಿಗೆ ತಲೆಬಿಸಿ

Lok Sabha Election 2024:

ಏಪ್ರಿಲ್ 26ರ ಶುಕ್ರವಾರ ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಯ ಮತದಾನ ಇರುವುದರಿಂದ ಬೆಂಗಳೂರಿಗರು ಮತದಾನ ಮಾಡುತ್ತಾರಾ ಇಲ್ಲ ಪ್ರವಾಸಕ್ಕೆ ಹೋಗ್ತಾರಾ ಅನ್ನೋ ಚಿಂತೆ ಅಧಿಕಾರಿಗಳದ್ದು.
ಏಪ್ರಿಲ್ 26ರ ಶುಕ್ರವಾರ ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಯ ಮತದಾನ ಇರುವುದರಿಂದ ಬೆಂಗಳೂರಿಗರು ಮತದಾನ ಮಾಡುತ್ತಾರಾ ಇಲ್ಲ ಪ್ರವಾಸಕ್ಕೆ ಹೋಗ್ತಾರಾ ಅನ್ನೋ ಚಿಂತೆ ಅಧಿಕಾರಿಗಳದ್ದು.

ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Elections 2024) ದಿನಾಂಕ ನಿಗದಿಯಾಗಿದೆ. ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಏಪ್ರಿಲ್ 26 ರಂದು ಮತ್ತು ಉತ್ತರ ಕರ್ನಾಟಕದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಇದೇ 16 ರಂದು (ಶನಿವಾರ) ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore Voters) ಪ್ರತಿ ಬಾರಿಯೂ ಕಡಿಮೆ ಮತದಾನ ಪ್ರಮಾಣವನ್ನು ಹೊಂದಿದ್ದು, ಈ ಭಾರಿ ಏಪ್ರಿಲ್ 26 ರ ಶುಕ್ರವಾರ ಉದ್ಯಾನನಗರಿಯಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಅಂದು ಐಟಿ-ಬಿಟಿ, ಕಂಪನಿಗಳು, ಕಾರ್ಖಾನೆಗಳು ಸೇರಿದಂತೆ ಎಲ್ಲಾ ವಲಯಗಳಿಗೂ ರಜೆ ಇರುತ್ತದೆ. ಐಟಿ-ಬಿಟಿಯವರಿಗೆ ಶನಿವಾರ ಮತ್ತು ಭಾನುವಾರ ಸಾಮಾನ್ಯವಾಗಿ ವಾರಂತ್ಯದ ರಜೆ ಇರುತ್ತದೆ. ಆದರೆ ಶುಕ್ರವಾರ ಮತದಾನಕ್ಕಾಗಿ ರಜೆ ಇರುವುದರಿಂದ ಒಟ್ಟು 3 ದಿನ ರಜೆ ಸಿಕ್ಕಂತಾಗುತ್ತದೆ. ಹೀಗಾಗಿ ಮತದಾನ ಮಾಡುವ ಬದಲು ಹಲವರು ಟ್ರಿಪ್ ಪ್ಲಾನ್ ಮಾಡ್ತಾರೆ.

ಬೆಂಗಳೂರಿನಲ್ಲಿ ಶುಕ್ರವಾರದಂದು ಚುನಾವಣೆ ದಿನಾಂಕ ನಿಗದಿ ಪಡಿಸಿರುವುದು ಮತದಾನ ಪ್ರಮಾಣದ ಬಗ್ಗೆ ಆತಂಕ ಮೂಡಲು ಇದು ಪ್ರಮುಖ ಕಾರಣವಾಗಿದೆ. ಸಾಂಕ್ರಾಮಿಕ ರೋಗ ಕೋವಿಡ್-19 ರ ನಂತರ, ಬಹುಪಾಲು ಮಂದಿ, ಅದರಲ್ಲೂ ವಿಶೇಷವಾಗಿ ಟೆಕ್ಕಿಗಳು, ಮಂಗಳವಾರ, ಬುಧವಾರ ಮತ್ತು ಗುರುವಾರದಂದು ಕಚೇರಿಯಿಂದ ಕೆಲಸ ಮಾಡುತ್ತಾರೆ. ಇನ್ನೂ ಅನೇಕರು ತಮ್ಮ ವಾರಾಂತ್ಯದ ರಜೆಗಳನ್ನು ಎಂಜಾಯ್ ಮಾಡಲು ಶುಕ್ರವಾರದಂದೇ ಬೆಂಗಳೂರನ್ನು ಬಿಟ್ಟು ತೆರಳುತ್ತಾರೆ. ಹೀಗಾಗಿ ಆತಂಕ ಮೂಡಲು ಕಾರಣವಾಗಿದೆ.

ಬೆಂಗಳೂರಿಗರು ಮತದಾನದಿಂದ ದೂರ ಉಳಿಯುತ್ತಾರಾ?

ದೀರ್ಘ ವಾರಾಂತ್ಯದ ರಜೆಗಾಗಿ ಬೆಂಗಳೂರಿಗರು ಮತದಾನವನ್ನು ತ್ಯಜಿಸುತ್ತಾರೆಯೇ? ಎಂಬುದು ಚುನಾವಣಾ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ. ಮತದಾನ ಪ್ರಕ್ರಿಯೆಯಂದು ನಾಗರಿಕರು, ವಿಶೇಷವಾಗಿ ಯುವ ಜನತೆ ಮತದಾನ ಕೇಂದ್ರಗಳಿಗೆ ತೆರಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚುನಾವಣಾ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಚಿಂತನೆ ಆರಂಭಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪ್ರತಿ ಬಾರಿ ಚುನಾವಣೆಯಲ್ಲೂ ಬೆಂಗಳೂರಿನ ಅರ್ಧದಷ್ಟು ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೆ ನಿರಾಸಕ್ತಿ ತೋರುತ್ತಿದ್ದಾರೆ. ಈ ಬಾರಿಯೂ ಈ ರೀತಿ ಆಗಬಾರದು ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಸ್ತವವಾಗಿ, ಬೆಂಗಳೂರಿನ ಹಲವಾರು ಮತಗಟ್ಟೆಗಳಲ್ಲಿ ಈ ಹಿಂದೆ ಶೇ. 30-35 ಕ್ಕಿಂತ ಕಡಿಮೆ ಮತದಾನವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ, ಬೆಂಗಳೂರಿನಲ್ಲಿ ಶೇಕಡಾ 54.1 ರಷ್ಟು ಮತದಾನವಾಗಿದೆ. ಇದು 2014ರಲ್ಲಿ ದಾಖಲಾದ ಶೇಕಡಾ 56 ಕ್ಕಿಂತ ಕಡಿಮೆಯಾಗಿದೆ. ಮತದಾನವು ಶೇ.60 ಅನ್ನು ಮೀರಬೇಕು ಅನ್ನೋ ಪ್ರಯತ್ನ ಅಧಿಕಾರಿಗಳದ್ದಾಗಿದೆ.

ಇಸಿಐ ದಾಖಲೆಗಳ ಪ್ರಕಾರ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವು ರಾಜ್ಯದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿದೆ. 31.74 ಲಕ್ಷ, ಬೆಂಗಳೂರು ಗ್ರಾಮಾಂತರದಲ್ಲಿ 27.63 ಲಕ್ಷ, ಬೆಂಗಳೂರು ಸೆಂಟ್ರಲ್‌ನಲ್ಲಿ 23.98 ಲಕ್ಷ ಮತ್ತು ಬೆಂಗಳೂರು ದಕ್ಷಿಣದಲ್ಲಿ 23.17 ಲಕ್ಷ ಮತದಾರರಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ತಿಳಿಸಿದೆ.

ಇನ್ನು ಕುತೂಹಲಕಾರಿ ವಿಷಯವೆಂದರೆ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಸೆಂಟ್ರಲ್ ಮೂರು ಸಂಸದೀಯ ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಸಂಖ್ಯೆ 2019 ರಿಂದ ಈ ಬಾರಿ ಶೇ. 8.5 ರಷ್ಟು ಹೆಚ್ಚಾಗಿದೆ. ಪ್ರತಿ ಮನೆಯೂ ಚುನಾವಣೆಯ ಬಗ್ಗೆ ತಿಳಿದಿರುತ್ತದೆ. ಮತದಾರರ ಗುರುತಿನ ಚೀಟಿಗಳನ್ನು ಹೇಗೆ ಪಡೆಯುವುದು ಎಂದು ತಿಳಿದಿರುವ ಬಗ್ಗೆ ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ನಗರದ ವೈಟ್‌ಫೀಲ್ಡ್, ಸರ್ಜಾಪುರ, ಮಹದೇವಪುರ ಮತ್ತು ಬೆಳ್ಳಂದೂರಿನಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ವಿಶೇಷ ಪ್ರಯತ್ನ ಮಾಡಲಾಗುವುದು. ಎಲ್ಲರೂ ಸಾಧ್ಯವಾದಷ್ಟು ಮತ ಹಾಕುವಂತೆ ಮನವಿ ಮಾಡಲಾಗುವುದು. ಮನೆ-ಮನೆಗೆ ತೆರಳಿ ಮತದಾನದ ಬಗ್ಗೆಯೂ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲೂ ಚಿಂತನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾಗಿ ವರದಿಯಾಗಿದೆ.

Whats_app_banner