Valmiki Corporation Scam: ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ, ಎಸ್‌ಐಟಿ ತಂಡದಿಂದ ಇಬ್ಬರು ಅಧಿಕಾರಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Valmiki Corporation Scam: ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ, ಎಸ್‌ಐಟಿ ತಂಡದಿಂದ ಇಬ್ಬರು ಅಧಿಕಾರಿಗಳ ಬಂಧನ

Valmiki Corporation Scam: ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ, ಎಸ್‌ಐಟಿ ತಂಡದಿಂದ ಇಬ್ಬರು ಅಧಿಕಾರಿಗಳ ಬಂಧನ

ವಾಲ್ಮೀಕಿ ಅಭಿವೃದ್ದಿ ನಿಗಮದ ಇಬ್ಬರು ಅಧಿಕಾರಿಗಳನ್ನು ಬಹುಕೋಟ ವಂಚನೆ ಹಗರಣದಲ್ಲಿ ಎಸ್‌ಐಟಿ ತಂಡ ಬಂಧಿಸಿದೆ.

ಎಸ್‌ ಐಟಿ ತಂಡ ಈಗಾಗಲೇ ವಾಲ್ಮೀಕಿ ಅಭಿವೃದ್ದಿ ನಿಗಮದ ಪ್ರಕರಣ ತನಿಖೆ ಆರಂಭಿಸಿದೆ.
ಎಸ್‌ ಐಟಿ ತಂಡ ಈಗಾಗಲೇ ವಾಲ್ಮೀಕಿ ಅಭಿವೃದ್ದಿ ನಿಗಮದ ಪ್ರಕರಣ ತನಿಖೆ ಆರಂಭಿಸಿದೆ.

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಪ್ರಕರಣದ ತನಿಖೆಯನ್ನು ಶನಿವಾರದಿಂದಲೇ ಆರಂಭಿಸಿರುವ ವಿಶೇಷ ತನಿಖಾ ತಂಡ ಪ್ರಕರಣದ ಪ್ರಮುಖ ಆರೋಪಿಗಳಾದ ನಿಗಮದ ಮಾಜಿ ಎಂಡಿ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರುಶರಾಮ ದುರ್ಗಣ್ಣನವರ್‌ ಅವರನ್ನು ಬಂಧಿಸಿದೆ. ಎಡಿಪಿಜಿ ಮನೀಷ್‌ ಖರ್ಬೀಕರ್‌ ನೇತೃತ್ವದ ತಂಡ ಈ ಇಬ್ಬರನ್ನು ಬೆಂಗಳೂರಿನಲ್ಲಿಯೇ ಬಂಧಿಸಿದೆ. ಈ ಇಬ್ಬರು ಈಗಾಗಲೇ ಮೂರು ದಿನದಿಂದಲೂ ತಲೆ ಮರೆಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಬ್ಯಾಂಕ್‌ ಅಧಿಕಾರಿಗಳು ಸೇರಿದಂತೆ ಹಲವರನ್ನು ಬಂಧಿಸುವ ಸಾಧ್ಯತೆಯಿದೆ. ಸಚಿವ ಬಿ.ನಾಗೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ದಟ್ಟವಾಗಿವೆ.

ಎಸ್ಐಟಿ ತಂಡವು ತಲೆ ಮರೆಸಿಕೊಂಡಿದ್ದ ನಿಗಮದ ಹಿಂದಿನ ಎಂಡಿ ಜೆ.ಜಿ.ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರುಶರಾಮ ದುರ್ಗಣ್ಣ ಅವರ ಪತ್ತೆ ಶುರು ಮಾಡಿತ್ತು. ಮಧ್ಯಾಹ್ನದ ಹೊತ್ತಿಗೆ ಇಬ್ಬರನ್ನೂ ಪತ್ತೆ ಮಾಡಿ ಬಂಧಿಸಲಾಯಿತು. ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿರುವ ನಿಗಮದ ಶಿವಮೊಗ್ಗ ಕಚೇರಿ ವ್ಯವಸ್ಥಾಪಕ ಚಂದ್ರಶೇಖರನ್‌ ಅವರು ಪತ್ರ ಬರೆದು ಈ ಇಬ್ಬರ ಹೆಸರನ್ನು ಡೆತ್‌ ನೋಟ್‌ ನಲ್ಲಿ ಉಲ್ಲೇಖಿಸಿದ್ದರು. ಹಣ ವರ್ಗಾವಣೆಗೆ ಈ ಇಬ್ಬರೇ ಒತ್ತಡ ಹೇರಿದ್ದರು. ಇದಕ್ಕೆ ಸಚಿವ ನಾಗೇಂದ್ರ ಅವರ ಮೌಖಿತ ಆದೇಶವಿತ್ತು ಎನ್ನುವ ಉಲ್ಲೇಖವನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಸೇರಿದಂತೆ ಹಲವರ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿತ್ತು. ಬೆಂಗಳೂರಿನಲ್ಲಿ ಹಣ ವರ್ಗಾವಣೆ ಪ್ರಕರಣ ಹಾಗೂ ಶಿವಮೊಗ್ಗದಲ್ಲಿ ಆತ್ಮಹತ್ಯೆಗೆ ಕಾರಣವಾದ ಕುರಿತಾಗಿ ಮೊಕದ್ದಮೆ ದಾಖಲಾಗಿ ತನಿಖೆ ಶುರುವಾಗಿದ್ದವು. ಈಗಾಗಲೇ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಆದರೆ ಇಬ್ಬರು ತಲೆ ಮರೆಸಿಕೊಂಡಿದ್ದರು. ಸರ್ಕಾರ ಈ ಪ್ರಕರಣದ ಆರ್ಥಿಕ ಲೋಪಗಳ ಕುರಿತು ತನಿಖೆಗೆ ಎಸ್‌ಐಟಿ ರಚಿಸಿರುವುದರಿಂದ ಪ್ರಮುಖ ಆರೋಪಿಗಳಾದ ಇಬ್ಬರನ್ನು ಬಂಧಿಸಿದೆ.

ಇದೇ ಪ್ರಕರಣದಲ್ಲಿ ಚಂದ್ರಶೇಖರನ್‌ ಅವರು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಹಿಳಾ ಅಧಿಕಾರಿಯೊಬ್ಬರ ಹೆಸರನ್ನು ಉಲ್ಲೇಖಿಸಿದ್ದಾರೆ. ಅವರ ವಿರುದ್ದವೂ ಕ್ರಿಮಿನಲ್‌ಮೊಕದ್ದಮೆ ದಾಖಲಾಗಿದ್ದು. ಅವರನ್ನೂ ಶೀಘ್ರವೇ ಬಂಧಿಸುವ ಸಾಧ್ಯತೆಯಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯೂನಿಯನ್‌ ಬ್ಯಾಂಕ್‌ ಕೂಡ ಆರು ಅಧಿಕಾರಿಗಳ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಅಮಾನತುಗೊಳಿಸಿದೆ. ಅವರೆಲ್ಲರನ್ನೂ ಎಸ್‌ಐಟಿ ವಿಚಾರಣೆಗೆ ಒಳಪಡಿಸಲಿದೆ.

ನಿಗಮದ ಹಣವನ್ನೂ ಯೂನಿಯನ್‌ ಬ್ಯಾಂಕ್‌ ಖಾತೆಗಳಲ್ಲಿ ಇರಿಸಲಾಗಿತ್ತು. ಆ ಹಣವನ್ನು ಹೈದ್ರಾಬಾದ್‌ನ ಕೆಲವು ಕಂಪೆನಿಗಳ ಖಾತೆಗಳಿಗೆ ವರ್ಗ ಮಾಡಲಾಗಿದೆ. ಅದರಲ್ಲಿ 15ಕ್ಕೂ ಹೆಚ್ಚು ಸಂಸ್ಥೆಗಳಿರುವುದು ಗೊತ್ತಾಗಿದೆ. ಹಣ ವರ್ಗ ಮಾಡಿದವರು ಯಾರು, ಯಾರು ಅನುಮತಿ ನೀಡಿದರು. ಹಣ ವರ್ಗ ಮಾಡಿದ ಉದ್ದೇಶವೇನು, ಸರ್ಕಾರಿ ನಿಗಮದ ಹಣವನ್ನು ಹಾಗೆ ಖಾಸಗಿ ಕಂಪೆನಿ ಖಾತೆ ವರ್ಗ ಮಾಡಲು ಕಾನೂನಿನಲ್ಲಿ ಯಾವ ಅವಕಾಶವಿದೆ. ಈ ರೀತಿ ಎಷ್ಟು ವರ್ಷದಿಂದ ನಡೆದುಕೊಂಡು ಬಂದಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವ ಎಲ್ಲಾನಿಟ್ಟಿನಲ್ಲೂ ಎಸ್‌ಐಟಿ ತನಿಖೆ ನಡೆಸಲಿದೆ. ನಿಗಮದ ಅಧಿಕಾರಿಗಳು ಹಾಗೂ ಬ್ಯಾಂಕ್‌ ಪ್ರಮುಖರಿಗೆ ನೊಟೀಸ್‌ ನೀಡಿ ಹೇಳಿಕೆ ದಾಖಲಿಸಲಾಗುತ್ತದೆ.

ಇದರೊಟ್ಟಿಗೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಸಚಿವ ಬಿ.ನಾಗೇಂದ್ರ ಅವರಿಗೂ ನೊಟೀಸ್‌ ಜಾರಿ ಮಾಡಿ ವಿಚಾರಣೆಗೆ ಒಳಪಡಿಸುವ ಕುರಿತು ಎಸ್‌ ಐಟಿ ತಯಾರಿ ನಡೆಸುತ್ತಿದೆ. ಅಲ್ಲದೇ ಸದ್ಯವೇ ತಂಡ ಶಿವಮೊಗ್ಗಕ್ಕೂ ತೆರಳಿ ಚಂದ್ರಶೇಖರನ್‌ ಅವರ ಕುಟುಂಬ, ಶಿವಮೊಗ್ಗ ಕಚೇರಿ ಸಿಬ್ಬಂದಿ, ಆತ್ಮಹತ್ಯೆ ಹಿನ್ನೆಲೆಯ ವಿವರಗಳನ್ನು ಸಂಗ್ರಹಿಸಲಿದೆ ಎನ್ನಲಾಗುತ್ತಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner