IPS Transfers: ಆಡಳಿತಕ್ಕೆ ಮೇಜರ್ ಸರ್ಜರಿ, ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಗಳ ಭಾರೀ ವರ್ಗಾವಣೆ, ಮೈಸೂರಿಗೆ ಮೊದಲ ಪೊಲೀಸ್ ಆಯುಕ್ತೆ !
IPS Posting ಕರ್ನಾಟಕದಲ್ಲಿ ಒಂದೇ ದಿನ ಇಬ್ಬರು ಐಜಿಗಳು, ಇಬ್ಬರು ಪೊಲೀಸ್ ಆಯುಕ್ತರು ಹಾಗೂ ಹತ್ತಕ್ಕೂ ಹೆಚ್ಚು ಎಸ್ಪಿಗಳನ್ನು ವರ್ಗ ಮಾಡಲಾಗಿದೆ.
ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ಆಡಳಿತಕ್ಕೆ ಭಾರೀ ಸರ್ಜರಿಯನ್ನೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ. ಒಂದೇ ದಿನದಲ್ಲಿ ಒಟ್ಟು 25 ಐಪಿಎಸ್ ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ. ಇಬ್ಬರು ಪೊಲೀಸ್ ಆಯುಕ್ತರನ್ನು ಬದಲಾವಣೆ ಮಾಡಲಾಗಿದ್ದು. ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ ಸಹಿತ 10 ಜಿಲ್ಲೆಗಳ ಎಸ್ಪಿಗಳನ್ನೂ ಎತ್ತಂಗಡಿ ಮಾಡಲಾಗಿದೆ. ಮೈಸೂರು ನಗರ ಪೊಲೀಸ್ ಆಯುಕ್ತರನ್ನಾಗಿ ಸೀಮಾ ಲಾಟ್ಕರ್ ಅವರನ್ನು ನೇಮಿಸಲಾಗಿದ್ದು, ಈ ಹುದ್ದೆ ಅಲಂಕರಿಸುವ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಲ್ಲದೇ ಎರಡು ಕೊಲೆ ಪ್ರಕರಣದ ವಿವಾದದ ಕಾರಣದಿಂದ ದೇಶಾದ್ಯಂತ ಸದ್ದು ಮಾಡಿದ್ದ ಹುಬ್ಬಳ್ಳಿಧಾರವಾಡ ನಗರ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದ್ದು, ಈ ಹಿಂದೆ ಮಂಗಳೂರು ನಗರ ಆಯುಕ್ತರಾಗದ್ದ ಎನ್.ಶಶಿಕುಮಾರ್ ಅವರನ್ನು ನಿಯೋಜಿಸಲಾಗಿದೆ.
ಬೆಂಗಳೂರು ಕೇಂದ್ರ ಐಜಿಪಿಯಾಗಿದ್ದ ರವಿಕಾಂತೇಗೌಡ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಹಿರಿಯ ಅಧಿಕಾರಿ ಲಾಬೂರಾಮ್ ಅವರನ್ನು ನೇಮಿಸಲಾಗದೆ. ರವಿಕಾಂತೇಗೌಡಾ ಅವರನ್ನು ಬೆಂಗಳೂರು ಹೆಡ್ ಕ್ವಾರ್ಟರ್ ಐಜಿಯಾಗಿ ನಿಯೋಜಿಸಲಾಗಿದೆ. ದಾವಣಗೆರೆ ಕೇಂದ್ರ ವಲಯದ ಐಜಿಯಾಗಿದ್ದ ಡಾ.ಕೆ.ತ್ಯಾಗರಾಜನ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ಐಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ.
ಹುಬ್ಬಳ್ಳಿ ಮತ್ತು ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ಯುವಜನ ಮತ್ತು ಸೇವಾ ಇಲಾಖೆ ಆಯುಕ್ತರಾಗಿದ್ದ ಎನ್.ಶಶಿಕುಮಾರ್ ಅವರನ್ನು ನೇಮಿಸಲಾಗಿದೆ. ಅವರು ಈ ಹಿಂದೆ ಮಂಗಳೂರು ನಗರ ಪೊಲೀಸ್ ಆಯುಕ್ತರೂ ಆಗಿದ್ದರು. ವಿವಾದ ಹಾಗೂ ವೈಫಲ್ಯಗಳ ಆರೋಪದ ಕಾರಣದಿಂದ ಸುದ್ದಿಯಾಗಿದ್ದ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ವರ್ಗಗೊಂಡಿದ್ದು, ಅವರನ್ನು ಬೆಂಗಳೂರಿನ ಅಪರಾಧ ವಿಭಾಗದ ಎಐಜಿಪಿಯಾಗಿ ನೇಮಿಸಲಾಗಿದೆ.
ಮೈಸೂರು ಪೊಲೀಸ್ ಆಯುಕ್ತರಾಗಿದ್ದ ಬಿ. ರಮೇಶ್ ಅವರನ್ನು ದಾವಣಗೆರೆ ಕೇಂದ್ರ ವಲಯ ಐಜಿಪಿಯಾಗಿ ನೇಮಿಸಲಾಗಿದೆ. ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಮೈಸೂರು ಜಿಲ್ಲಾ ಎಸ್ಪಿಯಾಗಿದ್ದ ಸೀಮಾ ಲಾಟ್ಕರ್ ಅವರನ್ನು ನೇಮಿಸಲಾಗಿದೆ.
ಬೆಂಗಳೂರು ಡಿಸಿಪಿಯಾಗಿದ್ದ ಸಿ.ಕೆ.ಬಾಬಾ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ,. ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿದ್ದ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಮಂಡ್ಯ ಎಸ್ಪಿ. ಉತ್ತರ ಕನ್ನಡ ಎಸ್ಪಿಯಾಗಿದ್ದ ಎನ್.ವಿಷ್ಣುವರ್ಧನ್ ಅವರನ್ನು ಮೈಸೂರು ಎಸ್ಪಿ, ಉತ್ತರ ಕನ್ನಡ ಎಸ್ಪಿಯಾಗಿ ಎಂ.ನಾರಾಯಣ, ಮಂಡ್ಯ ಎಸ್ಪಿಯಾಗಿದ್ದ ಎನ್.ಯತೀಶ್ ದಕ್ಷಿಣ ಕನ್ನಡ ಎಸ್ಪಿ, ದಕ್ಷಿಣ ಕನ್ನಡ ಎಸ್ಪಿಯಾಗಿದ್ದ ಸಿ,ಬಿ.ರಿಷ್ಯಂತ್ ಅವರನ್ನು ಬೆಂಗಳೂರು ವೈರ್‌ಲೆಸ್ ಎಸ್ಪಿ. ಬೀದರ್ ಎಸ್ಪಿ ಚನ್ನಬಸವಣ್ಣ ಲಂಗೋಟಿ ವರನ್ನು ಬೆಂಗಳೂರು ಎಐಜಿಪಿ, ಬೀದರ್ ಎಸ್ಪಿಯಾಗಿ ಪ್ರದೀಪ್ ಗುಂಟಿ ಅವರನ್ನು ನೇಮಿಸಲಾಗಿದೆ.
ಬೆಂಗಳೂರು ನೈರುತ್ಯ ವಲಯದ ಡಿಸಿಪಿಯಾಗಿ ಸಾರಾ ಫಾತಿಮಾ, ಚಾಮರಾಜನಗರ ಎಸ್ಪಿಯಾಗಿದ್ದ ಪದ್ಮಿನಿ ಸಾಹೂ ಅವರನ್ನು ಬೆಂಗಳೂರು ಡಿಸಿಪಿ ಆಡಳಿತ, ಚಾಮರಾಜನಗರ ಎಸ್ಪಿಯಾಗಿ ಬಿ.ಟಿ.ಕವಿತಾ, ಬಳ್ಳಾರಿ ಎಸ್ಪಿಯಾಗಿ ಡಾ.ವಿ.ಜಿ.ಶೋಭಾರಾಣಿ, ಚಿಕ್ಕಬಳ್ಳಾಪುರ ಎಸ್ಪಿಯಾಗಿ ಕುಶಾಲ್ ಚೌಸ್ಕಿ, ಚಿಕ್ಕಬಳ್ಳಾಪುರ ಎಸ್ಪಿ ಆಗಿದ್ದ ಡಿ.ಎಲ್.ನಾಗೇಶ್ ಅವರನ್ನು ಬೆಂಗಳೂರು ಸಿಎಆರ್ ಡಿಸಿಪಿ,. ರಾಯಚೂರು ಎಸ್ಪಿಯಾಗಿದ್ದ ಬಿ.ನಿಖಿಲ್ ಅವರನ್ನು ಕೋಲಾರ ಎಸ್ಪಿಯಾಗಿ ನೇಮಕ ಮಾಡಲಾಗಿದೆ.
ಐಪಿಎಸ್ ಅಧಿಕಾರಿ ಡಾ.ಸುಮನಾ ಪನ್ನೇಕರ್ ಅವರನ್ನು ಬೆಂಗಳೂರು ಮೆಟ್ರೋಪಾಲಿಟಿನ್ ಟಾಸ್ಕ್ ಫೋರ್ಸ್ ಎಸ್ಪಿ, ಡಿಸಿಪಿ ಅರುಣಾಂಗ್ಶು ಗಿರಿ ಅವರನ್ನು ಸಿಐಡಿ ಎಸ್ಪಿ, ಹುಬ್ಬಳ್ಳಿ ಧಾರವಾಡ ಉಪ ಪೊಲೀಸ್ ಆಯುಕ್ತರಾಗಿ ಮಹಾನಿಂಗ್ ನಂದಗಾಂವಿ ನಿಯೋಜನೆಗೊಂಡಿದ್ದಾರೆ.
ಮೈಸೂರು ವಿಶೇಷ
ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಈವರೆಗೂ ಯಾವುದೇ ಮಹಿಳಾ ನೇಮಕಗೊಂಡಿರಲಿಲ್ಲ. ಇಪ್ಪತ್ತಕ್ಕೂ ಹೆಚ್ಚು ಆಯುಕ್ತರು ಮೈಸೂರಿನಲ್ಲಿ ಸೇವೆ ಸಲ್ಲಿಸಿದ್ದು, ಸೀಮಾ ಲಾಟ್ಕರ್ ಅವರು ಮೊದಲ ಮಹಿಳಾ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಮೈಸೂರು ಎಸ್ಪಿಯಾಗಿದ್ದ ಕೆಂಪಯ್ಯ, ಸುನೀಲ್ ಅಗರವಾಲ್ ಸಹಿತ ಹಲವರು ಪೊಲೀಸ್ ಆಯುಕ್ತರಾಗಿದ್ದು. ಅವರ ಸಾಲಿಗೆ ಸೀಮಾ ಲಾಟ್ಕರ್ ಸೇರ್ಪಡೆಗೊಂಡಿದ್ದಾರೆ.