Kharge Land Issue: ಖರ್ಗೆ ಕುಟುಂಬದ ಸಂಸ್ಥೆಗೆ ಮೆರಿಟ್‌ ಆಧಾರದಲ್ಲೇ ಸಿ.ಎ. ನಿವೇಶನ ಮಂಜೂರು, ನಿಯಮ ಉಲ್ಲಂಘಿಸಿಲ್ಲ: ಸಚಿವ ಎಂಬಿ ಪಾಟೀಲ್‌
ಕನ್ನಡ ಸುದ್ದಿ  /  ಕರ್ನಾಟಕ  /  Kharge Land Issue: ಖರ್ಗೆ ಕುಟುಂಬದ ಸಂಸ್ಥೆಗೆ ಮೆರಿಟ್‌ ಆಧಾರದಲ್ಲೇ ಸಿ.ಎ. ನಿವೇಶನ ಮಂಜೂರು, ನಿಯಮ ಉಲ್ಲಂಘಿಸಿಲ್ಲ: ಸಚಿವ ಎಂಬಿ ಪಾಟೀಲ್‌

Kharge Land Issue: ಖರ್ಗೆ ಕುಟುಂಬದ ಸಂಸ್ಥೆಗೆ ಮೆರಿಟ್‌ ಆಧಾರದಲ್ಲೇ ಸಿ.ಎ. ನಿವೇಶನ ಮಂಜೂರು, ನಿಯಮ ಉಲ್ಲಂಘಿಸಿಲ್ಲ: ಸಚಿವ ಎಂಬಿ ಪಾಟೀಲ್‌

Site To Kharge Family ಸಿದ್ದರಾಮಯ್ಯ ಅವರ ನಿವೇಶನ ವಿವಾದ ಇರುವಾಗಲೇ ಖರ್ಗೆ ಅವರ ಪುತ್ರ ರಾಹುಲ್‌ಗೆ ಐದು ಎಕರೆ ಸಿಎ ನಿವೇಶನ ನೀಡಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಬಿಜೆಪಿ ನಾಯಕರ ಆರೋಪಗಳಿಗೆ ಸಚಿವ ಎಂ.ಬಿ.ಪಾಟೀಲ್‌ ನೀಡಿದ ಸ್ಪಷ್ಟನೆ ಹೀಗಿದೆ.

ಖರ್ಗೆ ಪುತ್ರ ರಾಹುಲ್‌ ಕುಟುಂಬಕ್ಕೆ ನಿವೇಶನ ನೀಡಿದ ಕುರಿತು ಎಂಬಿ ಪಾಟೀಲ್‌ ವಿವರಣೆ ನೀಡಿದ್ದಾರೆ.
ಖರ್ಗೆ ಪುತ್ರ ರಾಹುಲ್‌ ಕುಟುಂಬಕ್ಕೆ ನಿವೇಶನ ನೀಡಿದ ಕುರಿತು ಎಂಬಿ ಪಾಟೀಲ್‌ ವಿವರಣೆ ನೀಡಿದ್ದಾರೆ.

ಬೆಂಗಳೂರು: ರಾಹುಲ್ ಖರ್ಗೆ ಅವರು ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಪದವೀಧರರು. ಐಐಎಸ್ ಸಿ ಯಲ್ಲಿ ತರಬೇತಿ ಪಡೆದಿದ್ದಾರೆ. ಯುಪಿಎಸ್ ಸಿ ಪರೀಕ್ಷೆ ಯನ್ನು ಎರಡು ಬಾರಿ ಉತ್ತೀರ್ಣರಾಗಿದ್ದಾರೆ. ಅವರು ಛಲವಾದಿ ನಾರಾಯಣಸ್ವಾಮಿ ರೀತಿಯ ಶೆಡ್ ಗಿರಾಕಿ ಅಲ್ಲ. ಖರ್ಗೆಯವರ ಟ್ರಸ್ಟಿಗೆ ನಾವು ಸಿ.ಎ. ನಿವೇಶನವನ್ನು ಮೆರಿಟ್ ಮತ್ತು ನಿಯಮಗಳಿಗೆ ಅನುಸಾರವಾಗಿಯೇ ಕೊಟ್ಟಿದ್ದೇವೆ. ಇದರಲ್ಲಿ ನಿಯಮವೇನೂ ಉಲ್ಲಂಘನೆ ಆಗಿಲ್ಲ. ಜೊತೆಗೆ, ಈ ನಿವೇಶನದ ಬೆಲೆಯಲ್ಲಿ ಅವರಿಗೆ ಯಾವ ರಿಯಾಯಿತಿಯನ್ನೂ ಕೊಟ್ಟಿಲ್ಲ. ಇವೆಲ್ಲವೂ ಸಂಪೂರ್ಣ ಪಾರದರ್ಶಕವಾಗಿಯೇ ನಡೆದಿದೆ. ಆದರೆ ಬಿಜೆಪಿಯ ಲೆಹರ್‌ ಸಿಂಗ್‌ ಹಾಗೂ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಟೀಕೆ ಹಿಂದೆ ಇರುವುದು ತರ್ಕವಿಲ್ಲದ ವಾದ. ಇದರಲ್ಲಿ ಸರ್ಕಾರದ ಹಾಗೂ ನಮ್ಮ ಯಾರ ಹಿತಾಸಕ್ತಿಯೂ ಇಲ್ಲ

ಹೀಗೆ ಸುಧೀರ್ಘ ಸ್ಪಷ್ಟನೆ ನೀಡಿದವರು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌. ಗುರುವಾರ ಸುದ್ದಿಗೋಷ್ಟಿ ನಡೆಸಿ ಸಿಎ ಭೂಮಿ ಹಂಚಿಕೆ ವಿಚಾರದಲ್ಲಿ ವಿವರಣೆ ನೀಡಿದರು.

ಕಳೆದ ಕೆಲವು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಕ್ರಿಯರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ದೇವನಹಳ್ಳಿ ಸಮೀಪದ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆಯಷ್ಟು ಸಿ.ಎ. ನಿವೇಶನ ಕೊಟ್ಟಿರುವುದು ವಿನಾ ಕಾರಣ ಸುದ್ದಿಯಾಗುತ್ತಿದೆ. ಮೂಲತಃ ರಾಹುಲ್ ಖರ್ಗೆಯವರು ಎಂಜಿನಿಯರಿಂಗ್ ಪದವೀಧರರು, ಐಐಎಸ್ಸಿ ಯಲ್ಲಿ ತರಬೇತಿ ಪಡೆದಿದ್ದಾರೆ. ಅವರಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಹಲವು ವರ್ಷಗಳಿಂದಲೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ನಾವು ಇದನ್ನು ಎಸ್ಸಿ-ಎಸ್ಟಿ ಅಂತೆಲ್ಲ ನೋಡುವುದು ಬೇಡ. ಖರ್ಗೆ ಅವರ ಕುಟುಂಬವು ಇದನ್ನೆಲ್ಲ ಮೀರಿದೆ. ಈ ಟ್ರಸ್ಟ್ ಪರವಾಗಿ ಖರ್ಗೆಯವರು ಉತ್ಕೃಷ್ಟತಾ ಕೇಂದ್ರ, ತರಬೇತಿ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಈ ಮೂರನ್ನೂ ಮಾಡುವುದಾಗಿ ಹೇಳಿ, ಏರೋಸ್ಪೇಸ್ ಪಾರ್ಕಿನಲ್ಲಿ ಸಿ.ಎ. ನಿವೇಶನಕ್ಕೆ ನಿಯಮಾನುಸಾರವೇ ಅರ್ಜಿ ಹಾಕಿದ್ದು ನಿಜ. ಇದರಲ್ಲಿ ತಪ್ಪೇನೂ ಇಲ್ಲ. ಎಂದು ಸ್ಪಷ್ಟಪಡಿಸಿದರು.

ಈ ನಿವೇಶನಕ್ಕಾಗಿ ಒಟ್ಟು 6 ಅರ್ಜಿ ಬಂದಿದ್ದವು. ಇದರಲ್ಲಿ 3 ಅರ್ಜಿಗಳು ವಸತಿ ಸಮುಚ್ಚಯ ನಿರ್ಮಾಣಕ್ಕೆ ಅನುಮತಿ ಕೋರಿದ್ದವು. ಆದರೆ ಇಲ್ಲಿ ಈಗಾಗಲೇ ವಸತಿ ಯೋಜನೆಗೆ ಅನುಮತಿ ನೀಡಿದ್ದರಿಂದ ಈ ಅರ್ಜಿಗಳನ್ನು ನಾವು ಪುರಸ್ಕರಿಸಲಿಲ್ಲ. ಇನ್ನೊಂದು ಅರ್ಜಿಯಲ್ಲಿ ಆಸ್ಪತ್ರೆ ನಿರ್ಮಿಸುವ ಉದ್ದೇಶವನ್ನು ತಿಳಿಸಲಾಗಿತ್ತು. ಆದರೆ ಅಗತ್ಯ ದಾಖಲೆಗಳನ್ನು ಲಗತ್ತಿಸಿರಲಿಲ್ಲ. 5ನೆಯ ಅರ್ಜಿಯಲ್ಲಿ ಕೇವಲ `ಸಂಶೋಧನೆ’ ಅಂತ ತಮ್ಮ ಉದ್ದೇಶ ನಮೂದಿಸಲಾಗಿತ್ತು. ಹೀಗಾಗಿ ಈ ಅರ್ಜಿಗಳೂ ತಿರಸ್ಕೃತವಾದವು. ಆಗ ಕೊನೆಗೆ ಉಳಿದಿದ್ದು ರಾಹುಲ್ ಖರ್ಗೆ ಅವರ ಅರ್ಜಿ ಮಾತ್ರ. ಇವರು ಸಂಶೋಧನೆ, ತರಬೇತಿ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವುದಾಗಿ ಸ್ಪಷ್ಟವಾಗಿ ನಮೂದಿಸಿದ್ದರು. ವಸ್ತುಸ್ಥಿತಿ ಹೀಗಿದ್ದಾಗ ನಾವು ಮೆರಿಟ್ ಆಧರಿಸಿಯೇ ರಾಹುಲ್ ಖರ್ಗೆ ಅವರ ಟ್ರಸ್ಟಿಗೆ ಸಿ.ಎ. ನಿವೇಶನ ಕೊಟ್ಟಿದ್ದೇವೆ. ಇದನ್ನು ಗಮನಿಸದೆ ಬಿಜೆಪಿಯವರು ಇಲ್ಲಿ ರಾಜಕೀಯ ಮಾಡುವ ಆತುರದಲ್ಲಿದ್ದಾರೆ. ನಾವೂ ಸಹ ಅವರಂತೆಯೇ ಬಿಜೆಪಿ ನಾಯಕರ ಜಾತಕ ತೆಗೆದರೆ, ಇವರೆಲ್ಲರ ಬಣ್ಣ ಬಯಲಾಗುತ್ತದೆ ಎಂದು ಕಿಚಾಯಿಸಿದರು.

ಕೈಗಾರಿಕಾ ಪ್ರದೇಶಗಳ ಸಿ.ಎ. ಮತ್ತು ಕೈಗಾರಿಕಾ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ನಿಯಮಗಳ ಪ್ರಕಾರ, ಸಿ.ಎ. ನಿವೇಶನಗಳ ಹರಾಜಿಗೆ ಅವಕಾಶವಿಲ್ಲ. ಈ ಅವಕಾಶವಿರುವುದು ಕಮರ್ಷಿಯಲ್ ಪ್ಲಾಟ್ ಗಳಿಗೆ ಮಾತ್ರ. ಇದು 12-1-2023ರಂದು ಕೆಐಎಡಿಬಿ ಬೋರ್ಡ್ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನ. ಆಗ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಅಧಿಕಾರದಲ್ಲಿತ್ತು ತಾನೇ? ಲೆಹರ್ ಸಿಂಗ್ ಮತ್ತು ನಾರಾಯಣಸ್ವಾಮಿ ಇಬ್ಬರೂ ಯಾವ ಕನ್ನಡಕ ಹಾಕಿಕೊಂಡಿದ್ದಾರೋ ಗೊತ್ತಿಲ್ಲ, ನಾರಾಯಣಸ್ವಾಮಿ ಅವರು ಒಂದು ಸಲ ದಲಿತರಿಗೆ ಕೊಡುವ ಸಿ.ಎ. ನಿವೇಶನಗಳಿಗೆ ಏಕೆ ಶೇ 75ರಷ್ಟು ರಿಯಾಯಿತಿ ಕೊಡಲಿಲ್ಲ ಎನ್ನುತ್ತಾರೆ. ಇನ್ನೊಂದು ಸಲ ಖರ್ಗೆಯವರಿಗೆ ಏಕೆ ಕೊಟ್ಟಿದ್ದು ಅಂತಲೂ ಕೇಳುತ್ತಾರೆ. ಮತ್ತೊಮ್ಮೆ `ಈ ನಿವೇಶನಗಳನ್ನೇಕೆ ಹರಾಜು ಹಾಕಲಿಲ್ಲ?’ ಎನ್ನುತ್ತಾರೆ.ನಂತರ 500 ಕೋಟಿ ನಷ್ಟ ಆಗಿದೆ ಅಂತಾರೆ. ಇಂತಹ ಹಾಸ್ಯಾಸ್ಪದ ಮಾತುಗಾರಿಕೆಯನ್ನಂತೂ ನಾನು ಇದುವರೆಗೂ ನೋಡಿಲ್ಲ ಎಂದು ಟೀಕಿಸಿದರು.

ಮೊದಲನೆಯದಾಗಿ, ನಿಯಮಗಳ ಪ್ರಕಾರ ಸಿ.ಎ. ನಿವೇಶನಗಳ ಬೆಲೆಯಲ್ಲಿ ರಿಯಾಯಿತಿ ನೀಡಲು ಅವಕಾಶವಿಲ್ಲ. ನಾವು ಇದಕ್ಕೆ ತಕ್ಕಂತೆ ನಡೆದುಕೊಂಡಿದ್ದೇವೆ. ಎರಡನೆಯದಾಗಿ, ಕೈಗಾರಿಕಾ ನಿವೇಶನಗಳಲ್ಲಿ ದಲಿತರಿಗೆ ಶೇಕಡ 75ರಷ್ಟು ಸಬ್ಸಿಡಿಯೊಂದಿಗೆ, ಶೇಕಡ 24.10ರಷ್ಟು ಮೀಸಲಾತಿಯನ್ನು ನಮ್ಮ ಸರಕಾರ ಬಂದ ಮೇಲೆ ಕಡ್ಡಾಯಗೊಳಿಸಿದೆ. ಈ ಸಂಬಂಧದ ಆದೇಶವನ್ನು ನಾವು 5-2-2024ರಂದು ಹೊರಡಿಸಿದ್ದೇವೆ. ದೊಡ್ಡ ಗಂಟಲಿನಲ್ಲಿ ಮಾತನಾಡುತ್ತಿರುವ ನಾರಾಯಣಸ್ವಾಮಿಗೆ ಈ ಸರಳ ಸತ್ಯದ ಅರಿವು ಇರಬೇಕಾಗಿತ್ತು.

ಖರ್ಗೆ ಕುಟುಂಬದ ವಿರುದ್ಧ ಚೀರಾಡುತ್ತಿರುವ ಛಲವಾದಿ ನಾರಾಯಣಸ್ವಾಮಿ ಕೂಡ 19-7-2006ರಂದು ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ (ಇದು ವಾಸ್ತವವಾಗಿ ಮಂಡ್ಯ ಜಿಲ್ಲೆಯಲ್ಲಿ ಬರುತ್ತೆ- ಕೆ.ಆರ್. ರಸ್ತೆ) ನಿವೇಶನ ಸಂಖ್ಯೆ 57-ಪಿ1 ಇಲ್ಲಿ ಎರಡು ಎಕರೆ (8,029 ಚದರ ಮೀಟರ್) ಜಮೀನನ್ನು ಪಡೆದುಕೊಂಡಿದ್ದಾರೆ. ಮೊದಲು ಅವರು ಇಲ್ಲಿ `ಬೃಂದಾವನ ಸಾಫ್ಟ್ವೇರ್ ಟೆಕ್ನಾಲಜೀಸ್’ ಎನ್ನುವ ಹೆಸರಿನ ಉದ್ಯಮ ಸ್ಥಾಪಿಸುತ್ತೇವೆ ಎಂದು ಹೇಳಿದ್ದರು. ಆದರೆ ಅಂತಹ ಕಂಪನಿ ಏನಾಯ್ತೋ ನಾರಾಯಣಸ್ವಾಮಿಯೇ ಹೇಳಬೇಕು ಎಂದು ಕಾಲೆಳೆದರು ಎಂಬಿ ಪಾಟೀಲ್‌.

ಇದಾದ ಬಳಿಕ ಅಲ್ಲಿ ರೆಡಿಮೇಡ್ ಗಾರ್ಮೆಂಟ್ಸ್ ಘಟಕ ಶುರು ಮಾಡುತ್ತೇವೆ ಎಂದರು. ಈ ಸಂಬಂಧದ ಭೂಮಿ ಹಂಚಿಕೆ 21-07-2006ರಂದು ನಡೆದಿದ್ದು, 22-2-2008ರಂದು ಅವರಿಗೆ ಸ್ವಾಧೀನ ಪತ್ರ ನೀಡಲಾಗಿದೆ. 13-12-2010ರಲ್ಲಿ ಈ ಸಂಬಂಧ ಗುತ್ತಿಗೆ ಕರಾರನ್ನೂ ನೆರವೇರಿಸಲಾಗಿದೆ. ನಾರಾಯಣಸ್ವಾಮಿ ಇದನ್ನು ಪಡೆದುಕೊಂಡಾಗ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇತ್ತಲ್ಲವೇ? ವಿಚಿತ್ರವೆಂದರೆ, ಅವರು ಗಾರ್ಮೆಂಟ್ಸ್ ಕೂಡ ಶುರು ಮಾಡಲಿಲ್ಲ. ಆಮೇಲೆ, ನಾರಾಯಣಸ್ವಾಮಿಯವರಿಗೆ ಉಗ್ರಾಣವನ್ನು ಶುರು ಮಾಡುವ ಕನಸು ಬೀಳತೊಡಗಿತು. ಇದಕ್ಕೆ 26-7-2014ರಂದು ಅನುಮೋದನೆಯನ್ನು ಕೂಡ ಕೊಡಲಾಗಿದೆ. ಆದರೆ ಇದು ಕೂಡ ದಡ ಹತ್ತಲಿಲ್ಲ.2006ರಲ್ಲಿ ಪಡೆದುಕೊಂಡ ಜಮೀನಿನಲ್ಲಿ ನಾರಾಯಣಸ್ವಾಮಿಯವರು 2016ರವರೆಗೂ ಯಾವ ಕೈಗಾರಿಕಾ ಚಟುವಟಿಕೆಯನ್ನೂ ಆರಂಭಿಸಲಿಲ್ಲ. ಹೀಗಾಗಿ, ನಿಯಮಾವಳಿಯ ಪ್ರಕಾರ ಸರಕಾರವು 11-11-2016ರಂದು ಈ ಜಮೀನನ್ನು ವಾಪಸ್ ಪಡೆದುಕೊಳ್ಳಲು ಆದೇಶಿಸಿತು. ಈಗ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿರುವ ನಾರಾಯಣಸ್ವಾಮಿ ಆಗ ಇದರ ವಿರುದ್ಧ ಹೈಕೋರ್ಟಿನ ಮೆಟ್ಟಿಲೇರಿದರು. ಇವರ ರಿಟ್ ಅರ್ಜಿ ಪುರಸ್ಕರಿಸಿದ ಘನ ನ್ಯಾಯಾಲಯವು 29-8-2017ರಂದು ತಡೆಯಾಜ್ಞೆ ನೀಡಿತು. ಆಮೇಲೆ 7-7-2022ರಂದು ನ್ಯಾಯಾಲಯವು ಈ ಪ್ರಕರಣದ ವಿಲೇವಾರಿ ಮಾಡಿದೆ. ಇದಾದ ಮೇಲೂ ನಾರಾಯಣಸ್ವಾಮಿಯವರಿಗೆ ಕೈಗಾರಿಕಾ ಚಟುವಟಿಕೆ ಆರಂಭಿಸಲು 7-11-2022ರಿಂದ 6-5-2023ರವರೆಗೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ನಾರಾಯಣಸ್ವಾಮಿಯವರು ರಾಜಕಾರಣದಲ್ಲಿ ಮುಳುಗಿದ್ದರಿಂದ ಈ ಕಡೆ ಗಮನ ಹರಿಸುವಷ್ಟು ಕಾಲಾವಕಾಶ ಅವರಿಗೆ ಇನ್ನೂ ಸಿಕ್ಕಿಲ್ಲ ಎಂದು ಆಪಾದಿಸಿದರು.

Whats_app_banner