Bangalore News:ತೊಡೆ ಮೇಲೆ ಲ್ಯಾಪ್ ಟಾಪ್, ಆನ್ ಲೈ ಮೀಟಿಂಗ್ ನಲ್ಲಿ ಭಾಗಿ; ವ್ಯಕ್ತಿಯ ಸ್ಕೂಟರ್ ಸವಾರಿ ಕಂಡು ನಿಬ್ಬೆರಗಾದ ಬೆಂಗಳೂರು ಜನ
ಬೆಂಗಳೂರಿನ ಸಂಚಾರ ದಟ್ಟಣೆ ಒಂದು ಕಡೆಯಾದರೆ ಕೆಲಸದ ಒತ್ತಡ ಹೇಗಿದೆ ಎಂದರೆ ರಸ್ತೆ ಮೇಲೆ ಸಂಚರಿಸುತ್ತಲೇ ಆನ್ ಲೈನ್ ಮೀಟಿಂಗ್ ಮಾಡುವುದು. ಇಂತಹ ವಿಡಿಯೋವೊಂದು ವೈರಲ್ ಆಗಿದೆ.ವರದಿ: ಪ್ರಿಯಾಂಕ ಗೌಡ, ಬೆಂಗಳೂರು

ಬೆಂಗಳೂರು: ಕೊರೋನಾ ಲಾಕ್ ಡೌನ್ ಬಳಿಕ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ನೀಡಿದ್ದವು. ಇದೀಗ ಬಹುತೇಕ ಕಂಪನಿಗಳು ಕಚೇರಿಗೆ ಬರುವಂತೆ ತನ್ನ ಉದ್ಯೋಗಿಗಳಿಗೆ ತಿಳಿಸಿದ್ದರೂ, ಕೆಲವು ಕಂಪನಿಗಳು ಈಗಲೂ ವರ್ಕ್ ಫ್ರಮ್ ಹೋಮ್ ಮುಂದುವರೆಸಿಕೊಂಡು ಹೋಗುತ್ತಿವೆ. ಇನ್ನೂ ಕಚೇರಿಗೆ ತೆರಳುವವರು ಕೆಲವೊಮ್ಮೆ ಮನೆಯಿಂದಲೂ ಕೆಲಸ ಮಾಡಬಹುದಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ಕುತೂಹಲಕಾರಿಯಾದ, ನಗು ತರಿಸುವ ವಿಡಿಯೋವೊಂದು ಹರಿದಾಡುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಗೆ ಅಪಖ್ಯಾತಿ ಪಡೆದಿರುವ ವಿಚಾರ ಎಲ್ಲರಿಗೂ ತಿಳಿದಿದ್ದೇ. ಇದೀಗ ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಾ ಲ್ಯಾಪ್ ಟಾಪ್ ಮುಂದೆ ಮೀಟಿಂಗ್ ಗೂ ಹಾಜರಾಗಿರುವ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಈ ಬೆಂಗಳೂರು ಆರಂಭಿಕರಿಗಾಗಿ ಅಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೀಕ್ ಬೆಂಗಳೂರು ಪುಟದಲ್ಲಿ ಬರೆಯಲಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ, ಸ್ಕೂಟರ್ ಸವಾರಿ ಮಾಡುತ್ತಾ, ಲ್ಯಾಪ್ ಟಾಪ್ ಅನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡಿದ್ದಾನೆ. ಈ ವೇಳೆ ಆತ ಆನ್ಲೈನ್ ಮೀಟಿಂಗ್ ನಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ಈ ವಿಡಿಯೋವನ್ನು ಮಾರ್ಚ್ 23 ರಂದು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪೋಸ್ಟ್ ಮಾಡಿದ ನಂತರ, ಇದು 88,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಪೋಸ್ಟ್ 1,200 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದ್ದು, ನೆಟ್ಟಿಗರು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಳಕೆದಾರಲ್ಲೊಬ್ಬರು ಪ್ರತಿಕ್ರಿಯಿಸುತ್ತಾ, ಬಹುಶಃ ಆ ವ್ಯಕ್ತಿಯು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರಬೇಕು. ಏಕೆಂದರೆ ಅವರಿಗೆ ವಾರಕ್ಕೆ 70 ಗಂಟೆಗಳು ಸಾಕಾಗಲಿಕ್ಕಿಲ್ಲ ಎಂದು ಬರೆದಿದ್ದರೆ, ಮತ್ತೊಬ್ಬರು, ನೀವು ಬೈಕ್‌ನಲ್ಲಿ ಹೋಗುತ್ತಿರುವಾಗ ವಿಡಿಯೋ ಮೀಟಿಂಗ್ ನಲ್ಲಿ ಭಾಗವಹಿಸುವುದು ಮೂರ್ಖತನ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗೆ ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಕೆಲವರು ಮೂದಲಿಸಿದ್ದಾರೆ.
ಇನ್ನು, ವರ್ಕ್ ಫ್ರಮ್ ಹೋಮ್ ನಲ್ಲಿ ಕೆಲವು ಉದ್ಯೋಗಿಗಳು ಆನ್ಲೈನ್ ಮೀಟಿಂಗ್ ಗೆ ಭಾಗವಹಿಸುವ ಕೆಲವೊಂದು ದೃಶ್ಯಗಳು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆನ್ಲೈನ್ ಮೀಟಿಂಗ್ ನಲ್ಲಿ ಎಲ್ಲರೂ ಭಾಗವಹಿಸಿರಬೇಕಾದ್ರೆ, ವ್ಯಕ್ತಿಯೊಬ್ಬ ಕ್ಯಾಮರಾದಲ್ಲಿ ತನ್ನ ವಿಡಿಯೋವನ್ನು ತೆರೆದಿಟ್ಟು, ತಾನು ಬೇರೆ ಕೆಲಸದಲ್ಲಿ ನಿರತನಾಗಿರುವ ದೃಶ್ಯದ ವಿಡಿಯೋ ವೈರಲ್ ಆಗಿತ್ತು. ಇದು ಜನರನ್ನು ಬಹಳ ನಗಿಸಿತ್ತು. ಇಂಥ ಕಾರಣಗಳಿಂದಲೇ ಕಂಪನಿಗಳು ಮತ್ತೆ ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆದಿರಲು ಕಾರಣ ಅಂತೆಲ್ಲಾ ಹಲವು ಮಂದಿ ತಮಾಷೆಯ ಮಾತುಗಳನ್ನಾಡುತ್ತಾರೆ.
ಬೆಂಗಳೂರಂತೂ ದಿನಂಪ್ರತಿ ಏನಾದರೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಇಲ್ಲಿನ ನೀರಿನ ಸಮಸ್ಯೆಯಂತೂ ಜಗಜ್ಜಾಹೀರಾಗಿದೆ. ಟ್ರಾಫಿಕ್ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಪೀಕ್ ಸಮಯದಲ್ಲಿ ನಗರಕ್ಕೆ ಕಾಲಿಡಲು ಭಯಪಡುವಂತಾಗಿದೆ. ಇತ್ತೀಚೆಗಷ್ಟೇ ಕಂಪನಿಯ ಬಾಸ್ ಹಾಗೂ ಉದ್ಯೋಗಿ ಇಬ್ಬರೂ ಒಟ್ಟಿಗೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಫೋಟೋ ವೈರಲ್ ಆಗಿತ್ತು. ಆಗಲೂ ಇದನ್ನು ಗಮನಿಸಿದವರೂ ಲಘು ದಾಟಿಯಲ್ಲಿಯೇ ಪ್ರತಿಕ್ರಿಯೆಗಳನ್ನು ನೀಡಿದ್ದರು. ಇದೂ ಕೂಡ ಭಾರೀ ವೈರಲ್ ಆಗಿತ್ತು.
ಟ್ರಾಫಿಕ್ ನಲ್ಲಿ ಸಿಲುಕಿದ್ದ ಬಾಸ್ ಹಾಗೂ ಉದ್ಯೋಗಿ ಇಬ್ಬರೂ ಮಾತುಕತೆಯಲ್ಲಿ ತಲ್ಲೀಣರಾಗಿದ್ದರು. ನಂತರ ಕಚೇರಿಗೆ ಇಬ್ಬರೂ ತಡವಾಗಿ ತಲುಪಿದ್ದರು. ಇದು ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇದೀಗ ವ್ಯಕ್ತಿಯೊಬ್ಬ ಸ್ಕೂಟರ್ ನಲ್ಲಿ ತೆರಳುತ್ತಾ ಆನ್ಲೈನ್ ಮೀಟಿಂಗ್ ಗೆ ಭಾಗವಹಿಸಿದ್ದು, ಜನರ ಗಮನ ಸೆಳೆದಿದೆ.
(ವರದಿ: ಪ್ರಿಯಾಂಕ ಗೌಡ, ಬೆಂಗಳೂರು)
