Hassan Scandal: ದಶಕದಲ್ಲಿ ದೇಶ ಬಿಟ್ಟು ಓಡಿ ಹೋದವರ ಪಟ್ಟಿಯಲ್ಲಿ ಯಾರಿದ್ದಾರೆ?, ಪ್ರಜ್ವಲ್‌ ಪರಾರಿ ಪ್ರಕರಣ ಏನಾಗಬಹುದು?
ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ದಶಕದಲ್ಲಿ ದೇಶ ಬಿಟ್ಟು ಓಡಿ ಹೋದವರ ಪಟ್ಟಿಯಲ್ಲಿ ಯಾರಿದ್ದಾರೆ?, ಪ್ರಜ್ವಲ್‌ ಪರಾರಿ ಪ್ರಕರಣ ಏನಾಗಬಹುದು?

Hassan Scandal: ದಶಕದಲ್ಲಿ ದೇಶ ಬಿಟ್ಟು ಓಡಿ ಹೋದವರ ಪಟ್ಟಿಯಲ್ಲಿ ಯಾರಿದ್ದಾರೆ?, ಪ್ರಜ್ವಲ್‌ ಪರಾರಿ ಪ್ರಕರಣ ಏನಾಗಬಹುದು?

ಅಪರಾಧ ಪ್ರಕರಣದಲ್ಲಿ ಸಿಲುಕುವವರು ಬಂಧನದ ಕಾರಣಕ್ಕೆ ತಪ್ಪಿಸಿಕೊಳ್ಳುವುದು ಸಹಜ. ಕೆಲವರು ದೇಶ ಬಿಟ್ಟು ಹೋಗುವುದೂ ಇದೆ.ಆರ್ಥಿಕ ಅಪರಾಧಗಳ ಪ್ರಕರಣದಲ್ಲಿ ಇದು ಹೆಚ್ಚು. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸನ್ನಿವೇಶ ಹೇಗಿದೆ ಎನ್ನುವ ವಿವರ ಇಲ್ಲಿದೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಪ್ರಜ್ವಲ್‌ ರೇವಣ್ಣ ದೇಶ ಬಿಟ್ಟು ಹೋಗಿರುವುದರಿಂದ ಏನಾಗಲಿದೆ.
ಪ್ರಜ್ವಲ್‌ ರೇವಣ್ಣ ದೇಶ ಬಿಟ್ಟು ಹೋಗಿರುವುದರಿಂದ ಏನಾಗಲಿದೆ.

ಬೆಂಗಳೂರು: ಲೈಂಗಿಕ ಹಗರಣದ ಪೆನ್ ಡ್ರೈವ್ ಗಳು ಕಡಲೆಪುರಿಯಂತೆ ಹರಿದಾಡುತ್ತಿದ್ದಂತೆ ಮತದಾನ ಮುಗಿದ ಮರು ದಿನವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ. ಇತ್ತ ರಾಜ್ಯ ಸರಕಾರ ಈ ಪ್ರಕರಣದ ತನಿಖೆಗೆ ಎಸ್ ಐಟಿ ರಚಿಸಿದ್ದು, ಈಗಾಗಲೇ ಎಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ಇಬ್ಬರಿಗೂ ನೋಟಿಸ್ ಜಾರಿಗೊಳಿಸಿದೆ. ಹಿಂದಿನ ಲೈಂಗಿಕ ಮತ್ತು ಭ್ರಷ್ಟಾಚಾರದ ಪ್ರಕರಣಗಳ ತನಿಖೆಯ ಆಧಾರದಲ್ಲಿ ಹೇಳುವುದಾದರೆ ಈ ಪ್ರಕರಣವೂ ಹಳ್ಳ ಹಿಡಿಯಲಿದೆಯೇ ಎನ್ನುವ ಚರ್ಚೆಗಳೂ ನಡೆದಿವೆ. ಇದರ ನಡುವೆಯೇ ಅಕಸ್ಮಾತ್ ಒಂದು ವೇಳೆ ಈ ಹಗರಣ ಕುರಿತು ಗಂಭೀರವಾಗಿ ತನಿಖೆ ನಡೆದರೆ ಪ್ರಜ್ವಲ್ ಭಾರತಕ್ಕೆ ಮರಳುವರೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಲೈಂಗಿಕ ಅಪರಾಧ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕದ ಆರೋಪಿಯೊಬ್ಬ ದೇಶ ಬಿಟ್ಟು ಹೋದ ಪ್ರಕರಣ ಇದೇ ಮೊದಲನೆಯದಾದರೂ ಆರ್ಥಿಕ ಅಪರಾಧಗಳ ಹಿನ್ನೆಲೆಯಲ್ಲಿ ದೇಶದಿಂದ ಪಲಾಯನ ಮಾಡಿರುವವರ ಪಟ್ಟಿ ದೊಡ್ಡದಿದೆ. ದಶಕಗಳ ಹಿಂದಿನ ಹರ್ಷದ್ ಮೆಹ್ತಾನಿಂದ ಹಿಡಿದು ವಿಜಯ್ ಮಲ್ಯ ನೀರವ್ ಮೋದಿವರೆಗೆ ಸಾವಿರಾರು ಕೋಟಿ ರೂ.ಗಳ ಆರ್ಥಿಕ ಅಪರಾಧ ಎಸಗಿ ವಿದೇಶಗಳಲ್ಲಿ ಆಶ್ರಯ ಪಡೆದಿರುವವರ ಪಟ್ಟಿ ಬೆಳೆಯುತ್ತಲೇ ಇದೆ.

ದಶಕದಲ್ಲಿ ಹಲವರು

2015, ಜನವರಿ, 1ರಿಂದ ಹಿಡಿದು ಡಿಸೆಂಬರ್ 12, 2019ರವರೆಗೆ 38 ಭಾರತೀಯರು ದೇಶದ ನೆಲದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಈಗಾಗಲೇ ಪಲಾಯನ ಮಾಡಿದ್ದಾರೆ. ಇವರಲ್ಲಿ ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಸೇರಿದಂತೆ 38 ಅಪರಾಧಿಗಳು ಬ್ಯಾಂಕ್ ಗಳಿಗೆ ವಂಚನೆ ಎಸಗಿ ದೇಶ ತೊರೆದಿದ್ದಾರೆ. ಇವರಲ್ಲಿ 20 ಮಂದಿಗೆ ಕೇಂದ್ರ ಸರ್ಕಾರ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. 14 ಅಪರಾಧಿಗಳನ್ನು ಹಸ್ತಾಂತರಿಸುವಂತೆ ವಿವಿಧ ದೇಶಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.

ಇವರಲ್ಲಿ ಪ್ರಮುಖರೆಂದರೆ ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ಪುಷ್ಪೇಶ್ ಬೈದ್, ಆಶಿಸ್ ಜೊಬಾನ್ ಪುತ್ರ, ಸನ್ನಿ ಕಾಲ್ರಾ, ಸುದೀರ್ ಕುಮಾರ್ ಕಾಲ್ರಾ, ಆರತಿ ಕಾಲ್ರಾ, ವರ್ಷಾ ಕಾಲ್ರಾ, ಜತಿನ್ ಮೆಹ್ತಾ, ಉಮೇಶ್ ಪರೇಖ್, ಏಕಲವ್ಯ ಗಾರ್ಗ್, ವಿನಯ್ ರಾಜೀವ್ ಗೋಯಲ್, ನಿತಿನ್ ಜಯಂತಿ ಲಾಲ್ ಸಂದೇಸರಾ, ರಿತಿನ್ ಜೈನ್, ನರೇಂದ್ರ ಭಾಯಿ ಪಟೇಲ್, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇತ್ತೀಚಿನ ಪ್ರಕರಣ ಎಂದರೆ ಗ್ಯಾಂಗ್ ಸ್ಟರ್ ಇಕ್ಬಾಲ್ ಮಿರ್ಚಿ ಪತ್ನಿ ಹಜ್ರಾ ಮೆನನ್ ಮತ್ತು ಆಕೆಯ ಇಬ್ಬರು ಮಕ್ಕಳು ದೇಶದಿಂದ ಪರಾರಿಯಾಗಿದ್ದು ಯಾವ ದೇಶದಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯೇ ಇಲ್ಲ. ಭಾರತಕ್ಕೆ ಐಪಿಎಲ್ ಪರಿಚಯಿಸಿದ ಲಲಿತ್ ಮೋದಿ ಇಂಗ್ಲೆಂಡ್ ನಲ್ಲಿ ನೆಲೆಸಿರುವ ಮಾಹಿತಿ ಇದೆ. ಗುಜರಾತ್ ಮೂಲದ ಉದ್ಯಮಿ ನಿತಿನ್ ಸಂದೇಸರಾ ಆಂಧ್ರ ಬ್ಯಾಂಕ್ ನಿಂದ 5000 ಕೋಟಿ ಸಾಲ ಪಡೆದು ಪರಾರಿಯಾಗಿದ್ದಾನೆ.

ಪ್ರಮುಖರ ಪರಾರಿ

ಗುಜರಾತ್ ನ ಮತ್ತೊಬ್ಬ ಉದ್ಯಮಿ ಹಿತೇಶ್ ನರೇಂದ್ರ ಭಾಯಿ ಪಟೇಲ್ 8,100 ಕೋಟಿ ರೂ. ಸಾಲ ಪಡೆದು ಆರ್ಥಿಕ ಅಪರಾಧಿಯಾಗಿದ್ದಾನೆ. ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 14,000 ಕೋಟಿ ರೂ ವಂಚಿಸಿ ದೇಶ ಬಿಟ್ಟು ಹೋಗಿದ್ದಾನೆ. ಇದು ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ನೀರವ್ ಮೋದಿಯ ಸಹೋದರ ಮುಕೇಶ್ ಮತ್ತು ಅನಿಲ್ ಅಂಬಾನಿ ಸಹೋದರರ ಸಂಬಂಧಿಯನ್ನು ವಿವಾಹವಾಗಿರುವ ನಿಶಾಲ್ ಮೋದಿಯೂ ದೇಶದಿಂದ ಪರಾರಿಯಾಗಿದ್ದಾನೆ. ಗೀತಾಂಜಲಿ ಗ್ರೂಪ್ ಪ್ರವರ್ತಕ ಮೆಹುಲ್ ಚೋಕ್ಸಿ ಕೂಡಾ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 13,000 ಕೋಟಿ ರೂ. ನಾಮ ಹಾಕಿ ಹೋಗಿದ್ದಾನೆ. ಈತ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಆಶ್ರಯ ಪಡೆದಿರುವ ಮಾಹಿತಿ ಇದೆ. ವಿಜಯ್ ಮಲ್ಯ 9000 ಕೋಟಿ ರೂ. ವಂಚಿಸಿರುವ ಆರೋಪಿಯಾಗಿದ್ದಾನೆ. ಈತನನ್ನು ಭಾರತಕ್ಕೆ ಒಪ್ಪಿಸುವ ಸಂಬಂಧ ಇಂಗ್ಲೆಂಡ್ ನಲ್ಲಿ ಇನ್ನೂ ಕಾನೂನು ಪ್ರಕ್ರಿಯೆಗಳು ನಡೆಯುತ್ತಲೇ ಇವೆ. ಇವರಲ್ಲಿ ಬಹುತೇಕ ಮಂದಿ ಯುಪಿಎ ಅವಧಿಯಲ್ಲಿ ಸಾಲ ಪಡೆದಿದ್ದರೆ ಎನ್ ಡಿಎ ಅವಧಿಯಲ್ಲಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.

ಕಾಯ್ದೆ ಮತ್ತಷ್ಟು ಬಿಗಿ

ಸಂಸತ್‌ನಲ್ಲಿ ಪರಾರಿಯಾದ ಆರ್ಥಿಕ ಅಪರಾಧಿಗಳಿಗೆ ಸಂಬಂಧಿಸಿದ ಮಸೂದೆಯನ್ನು ಅಂಗೀಕರಿಸಿ ಕಾಯ್ದೆಯನ್ನಾಗಿ ಜಾರಿಗೆ ತರಲಾಗಿದೆ. ಹಣ ವಂಚನೆ, ಸಾಲ ಮರುಪಾವತಿ ಮಾಡದೆ ದೇಶದಿಂದ ಪಲಾಯನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ಮಸೂದೆ ಸಂಪೂರ್ಣ ಅಧಿಕಾರ ನೀಡಲಿದೆ. ರೂ.100 ಕೋಟಿಗಿಂತ ಹೆಚ್ಚಿನ ವಂಚನೆ ಆರೋಪ ಪ್ರಕರಣಗಳಿಗೆ ಇದು ಅನ್ವಯವಾಗಲಿದೆ ಎನ್ನುವ ಅಭಿಪ್ರಾಯವನ್ನು ಹಿರಿಯ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ಪ್ರಜ್ವಲ್‌ ಪ್ರಕರಣದಲ್ಲಿ ಹೇಗೆ

ಆದರೆ ಪ್ರಜ್ವಲ್‌ ರೇವಣ್ಣ ಅವರ ವಿರುದ್ದ ದಾಖಲಾಗಿರುವುದು ಲೈಂಗಿಕ ದೌರ್ಜನ್ಯ ಪ್ರಕರಣ. ಇದು ಕೂಡ ಗಂಭೀರವಾದದ್ದೇ. ಇಂತಹ ಪ್ರಕರಣದಲ್ಲಿ ದೇಶ ಬಿಟ್ಟು ಹೋದವರು ಕಡಿಮೆಯೇ. ಕರ್ನಾಟಕದಲ್ಲಿ ಇದು ಮೊದಲ ಪ್ರಕರಣ ಇರಬಹುದು. ಹಿಂದೆ ಇದೇ ರೀತಿ ಮೊಕದ್ದಮೆ ಎದುರಿಸಿದ ಸಚಿವರೂ ಕೂಡ ಇಲ್ಲಿಯೇ ಇದ್ದು ಪ್ರಕರಣ ಎದುರಿಸಿದ್ದವರು. ಎಸ್‌ಐಟಿ ತನಿಖೆಯಂತೆ ನೊಟೀಸ್‌ ನೀಡಲಾಗಿದ್ದು. ಇಷ್ಟು ದಿನಗಳ ಒಳಗೆ ಹಾಜರಾಗಬೇಕು ಎನ್ನುವುದನ್ನು ಉಲ್ಲೇಖಿಸಲಾಗುತ್ತದೆ. ಆ ನಂತರವೂ ಬಾರದೇ ಇದ್ದಾಗ ವಿದೇಶಕ್ಕೆ ತನಿಖಾ ತಂಡ ತೆರಳಿ ಬಂಧಿಸಲು ಮುಂದಾಗಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ.

(ವರದಿ: ಎಚ್.ಮಾರುತಿ, ಬೆಂಗಳೂರು)

Whats_app_banner