ಕನ್ನಡ ಸುದ್ದಿ  /  ಕರ್ನಾಟಕ  /  Breaking News: ರೇವಣ್ಣ ಪುತ್ರರಿಗೆ ತಪ್ಪದ ಸಂಕಷ್ಟ, ಡಾ.ಸೂರಜ್‌ ಪೊಲೀಸ್‌ ಸುಪರ್ದಿ, ಪ್ರಜ್ವಲ್‌ಗೆ ಇನ್ನೂ ಜೈಲು ವಾಸ

Breaking News: ರೇವಣ್ಣ ಪುತ್ರರಿಗೆ ತಪ್ಪದ ಸಂಕಷ್ಟ, ಡಾ.ಸೂರಜ್‌ ಪೊಲೀಸ್‌ ಸುಪರ್ದಿ, ಪ್ರಜ್ವಲ್‌ಗೆ ಇನ್ನೂ ಜೈಲು ವಾಸ

ಹಾಸನದ ಡಾ.ಸೂರಜ್‌ ರೇವಣ್ಣ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಿದರೆ, ಪ್ರಜ್ವಲ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಾ.ಸೂರಜ್‌ ಹಾಗೂ ಪ್ರಜ್ವಲ್‌ ರೇವಣ್ಣ
ಡಾ.ಸೂರಜ್‌ ಹಾಗೂ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಲೈಂಗಿಕ ದೌರ್ಜನ್ಯದ ಪ್ರತ್ಯೇಕ ಪ್ರಕಣಗಳಲ್ಲಿ ಸಿಲುಕಿರುವ ಮಾಜಿ ಸಚಿವ ಹಾಗೂ ಜೆಡಿಎಸ್‌ನಾಯಕ ಎಚ್‌.ಡಿ.ರೇವಣ್ಣ ಅವರ ಪುತ್ರಿಗೆ ಕಾನೂನು ಸಂಕಷ್ಟ ಗಟ್ಟಿಯಾಗುತ್ತಿದೆ. ಈಗಾಗಲೇ ಮೂರು ವಾರಗಳಿಂದಲೂ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಇನ್ನೂ ಎರಡು ವಾರಗ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅದೇ ರೀತಿ ಅಸಹಜ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧನಕ್ಕೆ ಒಳಗಾರಿವು ವಿಧಾನಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ ಅವರನ್ನು ಎಂಟು ದಿನಗಳ ಕಾಲ ವಿಚಾರಣೆಗೆಂದು ಸಿಐಡಿ ಪೊಲೀಸರ ಕಸ್ಟಡಿಗೆ ನೀಡಲು ಸ್ಥಳೀಯ ನ್ಯಾಯಾಲಯ ಆದೇಶ ನೀಡಿದೆ.

ಸೂರಜ್‌ ವಿಚಾರಣೆ ಶುರು

ಲೈಂಗಿಕ ದೌರ್ಜನ್ಯ ಕೇಸ್ ಸಂಬಂಧ ಬಂಧನಕ್ಕೆ ಒಳಗಾಗಿರುವ ಆರೋಪಿ ಎಂಎಲ್ಸಿ ಸೂರಜ್ ರೇವಣ್ಣನನ್ನು 8 ದಿನಗಳಕಾಲ ಸಿಐಡಿ ಕಸ್ಟಡಿಗೆ ನೀಡಿ ಸೋಮವಾರ ಬೆಂಗಳೂರಿನ ನ್ಯಾಯಾಲಯ ಆದೇಶಿಸಿತು. ಸೂರಜ್ ಸಲ್ಲಿಸಿದ್ದು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಬಗ್ಗೆ ಆದೇಶ ನೀಡಿದೆ. ಜುಲೈ 1 ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ವಿಚಾರಣೆಗೆ ಒಳಗಾಗಲಿದ್ದಾರೆ. ಡಾ. ಸೂರಜ್ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪ ಪ್ರಕರಣದ ತನಿಖೆ ಸದ್ಯವೇ ಮತ್ತಷ್ಟು ಚುರುಕುಗೊಳ್ಳಲಿದೆ. ಸೂರಜ್‌ ಅವರನ್ನು ಸ್ಥಳಕ್ಕೆ ಕರೆದೊಯ್ದು ಸಾಕ್ಷ್ಯ ಸಂಗ್ರಹಿಸುವ ಸಾಧ್ಯತೆಯಿದೆ. ಯುವಕನಿಗೆ ಸೂರಜ್​​ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಆಪಾದನೆ ಕೇಳಿಬಂದಿದ್ದು, ಈ ಪ್ರಕರಣವನ್ನು ಸಿಐಡಿ ತನಿಖೆಗೂ ರಾಜ್ಯ ಸರ್ಕಾರ ವಹಿಸಿತ್ತು. ಹಾಸನ ಪೊಲೀಸರು ಬಂಧಿಸಿ ಸೂರಜ್‌ ಅವರನ್ನು ಸಿಐಡಿಗೆ ಹಸ್ತಾಂತರಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಜೆಡಿಎಸ್ ಕಾರ್ಯಕರ್ತನ ಮೇಲೆ ಸೂರಜ್ ರೇವಣ್ಣ ಅಹಸಜವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕಳೆದ ಶನಿವಾರ ಪ್ರಕರಣ ದಾಖಲಾಗಿತ್ತು. ‘ಅಸ್ವಾಭಾವಿಕ ಅಪರಾಧಗಳು’ ಸೇರಿದಂತೆ ಸಂತ್ರಸ್ತಗೆ ಬೆದರಿಕೆ, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೂರಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇದು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಪ್ರಜ್ವಲ್‌ಗೆ ಇನ್ನಷ್ಟು ದಿನ ಜೈಲು

ಹಾಸನ ಹಾಗೂ ಹೊಳೆ ನರಸೀಪುರದ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಅಶ್ಲೀಲ ವಿಡಿಯೋ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ವಾರದಿಂದ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಸೋಮವಾರ ಆದೇಶ ನೀಡಿದೆ.ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆನಂತರ ವಿಚಾರಣೆಗೆ ಪಡೆಯಲಾಗಿತ್ತು. ಎರಡು ಬಾರಿ ಪ್ರಜ್ವಲ್‌ ಅವರನ್ನು ಹಾಸನಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು.

ಈಗ ಮೂರನೇ ಪ್ರಕರಣದ ಹಿನ್ನೆಲೆಯಲ್ಲಿ ಪ್ರಜ್ವಲ್ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಲಿದ್ದಾರೆ. ಪ್ರಜ್ವಲ್‌ ಅವರ ನ್ಯಾಯಾಂಗ ಬಂಧನ ಅವಧಿ ಸೋಮವಾರಕ್ಕೆ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಭಾರೀ ಭದ್ರತೆ ನಡುವೆ ಹಾಜರುಪಡಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್, ಪ್ರಜ್ವಲ್ ರೇವಣ್ಣಜುಲೈ 8ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ಪ್ರಕಟಿಸಿದರು. ಆನಂತರ ಅವರನ್ನು ಜೈಲಿಗೆ ಕರೆದೊಯ್ಯಲಾಯಿತು.