ಕನ್ನಡ ಸುದ್ದಿ  /  ಕರ್ನಾಟಕ  /  Suraj Revanna: ಸೂರಜ್‌ ರೇವಣ್ಣ ಕೂಡ ಜೈಲುಪಾಲು,ಜುಲೈ 18ರವರೆಗೆ ನ್ಯಾಯಾಂಗ, ನಾಳೆ ಜಾಮೀನು ಅರ್ಜಿ ವಿಚಾರಣೆ

Suraj Revanna: ಸೂರಜ್‌ ರೇವಣ್ಣ ಕೂಡ ಜೈಲುಪಾಲು,ಜುಲೈ 18ರವರೆಗೆ ನ್ಯಾಯಾಂಗ, ನಾಳೆ ಜಾಮೀನು ಅರ್ಜಿ ವಿಚಾರಣೆ

Suraj Revanna ಲೈಂಗಿಕ ಪ್ರಕರಣವೊಂದರಲ್ಲಿ ಸಿಲುಕಿ ಬಂಧನಕ್ಕೆ ಒಳಗಾಗಿರುವ ವಿಧಾನಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನ್ಯಾಯಾಂಗ ಬಂಧನಕ್ಕೆ ಒಳಗಾದ ಎಂಎಲ್ಸಿ ಸೂರಜ್‌ ರೇವಣ್ಣ
ನ್ಯಾಯಾಂಗ ಬಂಧನಕ್ಕೆ ಒಳಗಾದ ಎಂಎಲ್ಸಿ ಸೂರಜ್‌ ರೇವಣ್ಣ

ಬೆಂಗಳೂರ‍್ವ: ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಹಾಸನದ ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪುತ್ರ ಡಾ.ಸೂರಜ್‌ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರೂ ಕೂಡ ಹದಿನಾಲ್ಕು ದಿನಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ವಾಸಿಯಾಗಿ ಇರಲಿದ್ದಾರೆ. ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಹೋದರ ಪ್ರಜ್ವಲ್‌ ರೇವಣ್ಣ ಅವರಂತೆಯೇ ಸೂರಜ್‌ ಕೂಡ ಜೈಲು ವಾಸ ಅನುಭವಿಸಲಿದ್ದಾರೆ. ಪೊಲೀಸ್‌ ಕಸ್ಟಡಿಯಲ್ಲಿದ್ದ ಸೂರಜ್‌ ರೇವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿ ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಕುರಿತು ಸ್ಥಳೀಯ ನ್ಯಾಯಾಲಯವು ಸೂರಜ್‌ ರೇವಣ್ಣ ನ್ಯಾಯಾಂಗ ಬಂಧನ ಆದೇಶ ಜಾರಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2024ರ ಜೂನ್‌ 22 ರಂದು ಡಾ.ಸೂರಜ್‌ ರೇವಣ್ಣ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯುವಕನೊಬ್ಬ ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದ. ಈ ಕುರಿತು ವಿಚಾರಣೆ ನಡೆಸಿದ್ದ ಪೊಲೀಸರು ಸೂರಜ್‌ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದರು. ಆನಂತರ ಬಂಧಿಸಲಾಗಿತ್ತು. ಈ ಪ್ರಕರಣವನ್ನು ಸಿಐಡಿಗೆ ವಹಿಸಿ ಪೊಲೀಸ್‌ ಇಲಾಖೆ ಆದೇಶಿಸಿತ್ತು. ಇದಾದ ನಂತರ ಸಿಐಡಿ ಪೊಲೀಸರು ಸೂರಜ್‌ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದರು. ತೀವ್ರವಾಗಿ ವಿಚಾರಣೆ ನಡೆಸಿದ್ದರು. ಯುವಕನೊಬ್ಬನು ನೀಡಿದ ದೂರಿನಂತೆ, ಸೂರಜ್‌ ರೇವಣ್ಣ ತನ್ನ ವಿರುದ್ದ ಅಸಹಜ ಲೈಂಗಿಕತೆಗೆ ಪ್ರಚೋದಿಸಿದ್ದರು. ನನ್ನನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಎಂದು ದೂರು ನೀಡಿದ್ದರಿಂದ ಈ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಹೊಳೆನರಸೀಪುರ ಸಹಿತ ಹಲವು ಕಡೆಗಳಲ್ಲಿ ಸೂರಜ್‌ ಅವರನ್ನು ಕರೆದೊಯ್ದಿದ್ದರು.

ಬೆಂಗಳೂರು ಅಪರಾಧ ಸುದ್ದಿ; ಇಬ್ಬರು ವಿದೇಶಿಯರು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್‌ ಗಳ ಬಂಧನ; 18 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರಿನಲ್ಲಿಯೂ ವಿಚಾರಣೆಗೆ ಒಳಪಡಿಸಿ ಎರಡು ದಿನದ ಹಿಂದೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಐದು ದಿನ ಪೊಲೀಸ್‌ ಕಸ್ಟಡಿಗೆ ಕೇಳಿದ್ದರೂ ನ್ಯಾಯಾಲಯ ಎರಡು ದಿನ ಮಾತ್ರ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಎರಡು ದಿನದಿಂದ ಸಿಐಡಿ ಪೊಲೀಸರು ಸೂರಜ್‌ ರೇವಣ್ಣ ಅವರನ್ನು ಇನ್ನಷ್ಟು ವಿಚಾರಣೆ ನಡೆಸಿದ್ದರು.

ಪೊಲೀಸ್‌ ಕಸ್ಟಡಿ ಅವಧೀ ಮುಗಿದಿದ್ದರಿಂದ ಅವರನ್ನು ಬೆಂಗಳೂರಿನ 42 ಎಸಿಎಂಎಂ ನ್ಯಾಯಾಲಯದ ಮುಂದೆ ಸಿಐಡಿ ಪೊಲೀಸರು ಹಾಜರುಪಡಿಸಿದರು. ವಿಚಾರಣೆ ಮುಗಿದಿರುವುದರಿಂದ ಸೂರಜ್‌ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ತೀರ್ಪು ನೀಡಿದರು. ಜುಲೈ 18ರವರೆಗೆ ಸೂರಜ್‌ ರೇವಣ್ಣ ಅವರು ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.

ಈ ನಡುವೆ ಜಾಮೀನು ಕೋರಿ ಸೂರಜ್‌ ರೇವಣ್ಣ ಅವರ ವಕೀಲರು ನ್ಯಾಯಾಲಯಕ್ಕೆ ಇದೇ ವೇಳೆ ಅರ್ಜಿ ಸಲ್ಲಿಸಿದರು. ಸಿಐಡಿ ಪೊಲೀಸರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ನ್ಯಾಯಾಧೀಶರು ಗುರುವಾರಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದರು. ಗುರುವಾರದಂದು ಸೂರಜ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.