Bangalore News: ಬೆಂಗಳೂರಲ್ಲಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಹೆತ್ತ ತಾಯಿ, ಕಾರಣ ಏನು?
ಬಡತನದ ಕಾರಣಕ್ಕೆ ತನ್ನ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ. ಆಕೆ ಈಗ ಜೈಲು ಪಾಲಾಗಿದ್ದಾಳೆ.ವರದಿ: ಎಚ್. ಮಾರುತಿ, ಬೆಂಗಳೂರು

ಬೆಂಗಳೂರು: ಕಿತ್ತು ತಿನ್ನುವ ಬಡತನ ಮತ್ತು ಹಸಿವು ಮನುಷ್ಯನನ್ನು ಎಂತಹ ದುಸ್ಥಿತಿಗೆ ತಳ್ಳುತ್ತದೆ ಎಂದರೆ ಊಹಿಸಿಕೊಳ್ಳಲು ಆತಂಕ ಉಂಟಾಗುತ್ತದೆ. ಇಲ್ಲೊಬ್ಬ ತಾಯಿ ತಾನು ಹಸಿವನ್ನು ಇಂಗಿಸಲಾರೆ ಎಂದು ಹೆತ್ತ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ನಡೆದಿದೆ. ಗಂಗಾದೇವಿ ಎಂಬಾಕೆಯೇ ತನ್ನ ಮಕ್ಕಳನ್ನು ಕೊಲೆ ಮಾಡಿದ ದುರ್ದೈವಿ ತಾಯಿ. 9 ವರ್ಷದ ಲಕ್ಷ್ಮಿ ಮತ್ತು 7 ವರ್ಷದ ಗೌತಮ್ ನನ್ನು ಗಂಗಾದೇವಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಸದ್ಯಕ್ಕೆ ಈಕೆ ಪೊಲೀಸರ ಅತಿಥಿಯಾಗಿದ್ದಾಳೆ.
ಆಂಧ್ರಪ್ರದೇಶದ ಆರೋಪಿ ಗಂಗಾದೇವಿ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಗಂಗಾದೇವಿ ತನ್ನ ಪತಿ ವಿರುದ್ಧ ಕಳೆದ ಮಾರ್ಚ್ ತಿಂಗಳಲ್ಲಿ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು ಗಂಗಾದೇವಿ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಇದೀಗ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾಳೆ. ಮಾಡಲು ಕೆಲಸ ಇಲ್ಲ. ಮಕ್ಕಳನ್ನು ಸಾಕಲು ಆಗುತ್ತಿರಲಿಲ್ಲ. ಆದ್ದರಿಂದ ಕೊಲೆ ಮಾಡಿರುವುದಾಗಿ ಗಂಗಾದೇವಿ ಹೇಳಿದ್ದಾಳೆ.
ಮಕ್ಕಳನ್ನು ಕೊಂದ ನಂತರ ಈಕೆಯೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಹೇಳಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಜಾಲಹಳ್ಳಿ ಪೊಲೀಸ್ ಠಾಣೆ ಪೊಲೀಸರು ಗಂಗಾದೇವಿಯನ್ನು ವಶಕ್ಕೆ ಪಡೆದಿದ್ದಾರೆ.
ಕೆಲ ದಿನಗಳ ಹಿಂದೆ ಆಕೆಯ ಪತಿಯನ್ನು ಪೋಸ್ಕೋ ಪ್ರಕರಣದಡಿ ಪೊಲೀಸರು ಬಂಧಿಸಿದ್ದರು. ಆತ ಈಗ ಜೈಲು ಸೇರಿದ್ದಾನೆ. ಇದಾದ ನಂತರ ಕುಟುಂಬ ನಡೆಸಲು ಕಷ್ಟ ಪಟ್ಟ ಮಹಿಳೆ ಖಿನ್ನತೆಗೆ ಜಾರಿ ಈ ರೀತಿ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಕುರಿತು ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಾಲಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಗೋದಾಮಿಗೆ ಬೆಂಕಿ, ಸುಟ್ಟು ಕರಕಲಾದ ಟ್ರಾಕ್ಟರ್, ಬೈಕ್ ಗಳು
ಬೆಂಗಳೂರಿನ ಹೊರ ವಲಯದ ಪರಪ್ಪನ ಅಗ್ರಹಾರದ ಬಳಿ ಇಂದು ಮುಂಜಾನೆ ತ್ಯಾಜ್ಯ ( ಸ್ಕ್ರಾಪ್) ವಸ್ತುಗಳ ಗೋದಾಮಿಗೆ ಬೆಂಕಿ ಹತ್ತಿಕೊಂಡು ಎರಡು ಟ್ರಾಕ್ಟರ್, ಒಂದು ಟಾಟಾ ಏಸ್ ಮತ್ತು ಬೈಕ್ ಸುಟ್ಟು ಕರಕಲಾಗಿವೆ.
ಸುಮಾರು ಐದು ಎಕರೆ ಪ್ರದೇಶದಲ್ಲಿರುವ ಈ ಗೋದಾಮಿನಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಲಾಗಿತ್ತು.
ಸಿಲಿಂಡರ್ ಸ್ಪೋಟದಿಂದ ಬೆಂಕಿ ಹೊತ್ತುಕೊಂಡಿದೆ ಎಂದು ತಿಳಿದು ಬಂದಿದ್ದು, ದಟ್ಟವಾದ ಹೊಗೆ ಆಕಾಶದೆತ್ತರಕ್ಕೆ ಆವರಿಸಿತ್ತು. ಈ ಗೋದಾಮಿನಲ್ಲಿ ಪ್ಲಾಸ್ಟಿಕ್, ರಬ್ಬರ್, ರಾಸಾಯನಿಕ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು ಹಳೆಯ ವಸ್ತುಗಳು ಸುಟ್ಟು ಇಡೀ ಪ್ರದೇಶದಲ್ಲಿ ಕೆಟ್ಟ ವಾಸನೆ ಆವರಿಸಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಅಗ್ನಿ ಶಾಮಕ ದಳದ ಎಂಟು ವಾಹನಗಳು ಸತತ 10 ಗಂಟೆಗಳ ಕಾಲ ಬೆಂಕಿ ನಂದಿಸಲು ಪ್ರಯತ್ನಿಸಿದವು.
ಈ ಅಕ್ರಮ ಗೋದಾಮಿಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹಲವು ವರ್ಷಗಳಿಂದ ಈ ಗೋದಾಮು ನಡೆಯುತ್ತಿದ್ದರೂ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಈ ಜಾಮೀನು ಕೂಡ್ಲು ಶ್ರೀನಿವಾಸ್ ರೆಡ್ಡಿ ಅವರಿಗೆ ಸೇರಿದ್ದು, ಮೀಜಾನ್ ಎಂಬುವರು ಗೋದಾಮು ನಡೆಸುತ್ತಿದ್ದಾರೆ.
ಇದೇ ಸ್ಥಳದಲ್ಲಿ 100 ಕ್ಕೂ ಹೆಚ್ಚು ಬಾಂಗ್ಲಾ ವಲಸಿಗರು ಅಕ್ರಮವಾಗಿ ವಾಸವಿದ್ದರು. ಎರಡು ವರ್ಷಗಳ ಹಿಂದೆ ಇವರನ್ನೆಲ್ಲಾ ತೆರವು ಗೊಳಿಸಲಾಗಿತ್ತು. ನಂತರ ಇಲ್ಲಿ ಗೋದಾಮು ನಡೆಸಲಾಗುತ್ತಿತ್ತು.
ವರದಿ: ಎಚ್. ಮಾರುತಿ, ಬೆಂಗಳೂರು
