MSIL Expansion: ಹೊಸ ವರ್ಷಕ್ಕೆ ಎಂಎಸ್ಎಲ್ಐ ಮದ್ಯ ದಾಖಲೆ ಬಿಕರಿ: ಬರಲಿದೆ ಎಂಎಸ್ಐಎಲ್ ಬ್ರಾಂಡ್ ಮೆಗಾ ಮೆಡಿಕಲ್ ಶಾಪ್
MSIL Expansion ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಸಂಸ್ಥೆಯು ಹೊಸ ವರ್ಷದ ವೇಳೆ ತನ್ನ ವಹಿವಾಟು ವೃದ್ದಿಸಿಕೊಂಡಿದೆ. ಇನ್ನಷ್ಟು ವಹಿವಾಟು ವಿಸ್ತರಿಸಲು ಮುಂದಾಗಿದೆ.
ಬೆಂಗಳೂರು: ರಾಜ್ಯದಲ್ಲಿರುವ 1031 ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಕಾರ್ಪೋರೇಷನ್ ಲಿಮಿಟೆಡ್ (ಎಂಎಸ್ಐಎಲ್) ಮದ್ಯ ಮಾರಾಟ ಮಳಿಗೆಗಳಲ್ಲಿ 2023ರ ಕೊನೆಯ ದಿನವಾದ ಭಾನುವಾರ ₹18.85 ಕೋಟಿ ಮೊತ್ತದ ದಾಖಲೆಯ ಮದ್ಯ ಮಾರಾಟವಾಗಿದೆ. ಇದೇ ಉತ್ಸಾಹದ ನಡುವೆ ಎಂಎಸ್ಐಎಲ್ ಇನ್ನಷ್ಟು ಸೇವೆ ವಿಸ್ತರಿಸಲು ಮುಂದಾಗಿದೆ.\
ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಇದು ಸುಮಾರು 4.34 ಕೋಟಿ ರೂ. ಹೆಚ್ಚಳವಾಗಿದೆ. 2022ರ ಡಿ. 31ರಂದು 14.51 ಕೋಟಿ ರೂ. ಮೊತ್ತದ ಮದ್ಯ ಮಾರಾಟವಾಗಿತ್ತು. ಉಳಿದ ದಿನಗಳಂದು ರಾಜ್ಯದ ಎಲ್ಲಾ ಎಂಎಸ್ಐಎಲ್ ಮಳಿಗೆಗಳಿಂದ ಆಗುವ ಮದ್ಯ ಮಾರಾಟದ ವಹಿವಾಟು 8 ಕೋಟಿ ರೂ.ನಷ್ಟಿರುತ್ತದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಇದು ರೂ 18.8 ಕೋಟಿಗೆ ಏರಿಕೆಯಾಗಿದೆ ಎಂದು ಎಂ ಎಸ್ ಐ ಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ.
ರಾಯಚೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಅತ್ಯಂತ ಹೆಚ್ಚು, ಅಂದರೆ 11.66 ಲಕ್ಷ ರೂ. ಮದ್ಯ ಮಾರಾಟವಾಗಿದ್ದರೆ, ಅದೇ ನಗರದ ಗಂಝ್ ರಸ್ತೆಯ ಮಳಿಗೆಯಲ್ಲಿ 9.96 ಲಕ್ಷ ರೂ. ಮದ್ಯ ಬಿಕರಿಯಾಗಿ ಎರಡನೇ ಸ್ಥಾನದಲ್ಲಿದೆ.
ಜಿಲ್ಲಾವಾರು ಮಾರಾಟದಲ್ಲಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ, ಅಂದರೆ 1.82 ಕೋಟಿ ರೂ. ಮದ್ಯ ಮಾರಾಟ ಕಂಡಿದೆ. ಕಳೆದ ವರ್ಷದ ಇದೇ ದಿನ ಈ ಜಿಲ್ಲೆಯಲ್ಲಿ ರೂ 1.35 ಕೋಟಿಯ ಮದ್ಯ ಮಾರಾಟವಾಗಿತ್ತು.
ಉನ್ನತ ದರ್ಜೆಗೇರಿಸಿ ಜ.1ರಂದು ಉದ್ಘಾಟನೆಗೊಂಡ ಬೆಂಗಳೂರು ಬಸವೇಶ್ವರನಗರದ ಎಂ ಎಸ್ ಐ ಎಲ್ ಬೋಟಿಕ್ ನಲ್ಲಿ ಭಾನುವಾರ ಆದ ಮದ್ಯ ಮಾರಾಟದ ಮೊತ್ತ ರೂ 3.5 ಲಕ್ಷ. ಇಲ್ಲಿ ಕಳೆದ ವರ್ಷದ ಇದೇ ದಿವಸ ಈ ಮಳಿಗೆಯಲ್ಲಿ ರೂ. 2.59 ಲಕ್ಷದ ಮದ್ಯ ಮಾರಾಟವಾಗಿತ್ತು ಎಂದು ಮನೋಜ್ ಹೇಳಿದ್ದಾರೆ.
ನೂತನ ಬೋಟಿಕ್ ಉದ್ಘಾಟನೆ
ಸರಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿ ಹೊಸದಾಗಿ ಆರಂಭಿಸಿರುವ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಉದ್ಘಾಟಿಸಿದರು.
ಎಂಎಸ್ಐಎಲ್ ರಾಜ್ಯದಲ್ಲಿರುವ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂತಹ ತಲಾ 2 ಬೋಟಿಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಇಂತಹ ಬೋಟಿಕ್ ತೆರೆಯಲಿದೆ. ಇವೆಲ್ಲವೂ ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ಹಂತಹಂತವಾಗಿ ಆರಂಭವಾಗಲಿವೆ. ಮದ್ಯಪ್ರಿಯರು ಯಾವುದೇ ತೊಂದರೆ ಇಲ್ಲದೆ, ತಮಗೆ ಬೇಕಾದ ದರ್ಜೆಯ ಮದ್ಯದ ಉತ್ಪನ್ನಗಳನ್ನು ಇಲ್ಲಿ ಖರೀದಿಸಬಹುದು ಎನ್ನುವುದು ಮನೋಜ್ ವಿವರಣೆ.
ಎಂಎಸ್ಐಎಲ್ ರಾಜ್ಯದಲ್ಲಿ ಒಟ್ಟು 1029 ಮದ್ಯ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ. ಈ ಪೈಕಿ 200 ಮಳಿಗೆಗಳನ್ನು ಬೋಟಿಕ್ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದರಲ್ಲಿ 20ಮಳಿಗೆಗಳು ಬೆಂಗಳೂರಿನಲ್ಲೇ ಇರಲಿವೆ. ಇನ್ನು ಕೆಲವೇ ದಿನಗಳಲ್ಲಿ ಡಾ.ರಾಜಕುಮಾರ್ ರಸ್ತೆ, ಆರ್ಪಿಸಿ ಬಡಾವಣೆ ಮತ್ತು ವಿಜಯನಗರದಲ್ಲಿ ಇಂತಹ ಬೋಟಿಕ್ ಮದ್ಯಪ್ರಿಯರಿಗೆ ಮುಕ್ತವಾಗಲಿವೆ ಶಿವಾನಂದ ವೃತ್ತ, ವರ್ತೂರು, ಕೆಂಗೇರಿ ಉಪನಗರ, ಮಾರುತಿ ಸೇವಾ ನಗರ, ಹನುಮಂತ ನಗರ ಮತ್ತು ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಕನ್ನಹಳ್ಳಿಯಲ್ಲಿ ಇರುವ ಎಂಎಸ್ಐಎಲ್ ಮಳಿಗೆಗಳನ್ನು ಬೋಟಿಕ್ಗಳಾಗಿ ರೂಪಾಂತರಿಸುವ ಕೆಲಸ ಪ್ರಗತಿಯಲ್ಲಿದೆ. ಈ ಎಲ್ಲ ಮಳಿಗೆಗಳಲ್ಲೂ ಚಿಲ್ಲರೆ ಮಾರಾಟ ದರದಲ್ಲಿ ಅತ್ಯುತ್ಕೃಷ್ಟ ಮದ್ಯಗಳು ಲಭ್ಯವಾಗಲಿವೆ ಎಂದು ತಿಳಿಸಿದರು.
ಇಂತಹ ಬೋಟಿಕ್ಗಳಿಂದ ಸಂಸ್ಥೆಯ ವಹಿವಾಟು ಶೇ. 30ರಿಂದ 40ರಷ್ಟು ಏರಿಕೆಯಾಗಲಿದೆ. ಇಲ್ಲಿ ಸಿಗುವ ಬ್ರಾಂಡೆಡ್ ಮದ್ಯದ ಬಗೆಗಳಿಗೆ ಗುಣಮಟ್ಟದ ಖಾತ್ರಿ ಇರಲಿದೆ. ಮಧ್ಯಮ ವರ್ಗದಿಂದ ಹಿಡಿದು ಸಮಾಜದ ಪ್ರತಿಯೊಂದು ವರ್ಗದ ಗ್ರಾಹಕರನ್ನೂ ಸೆಳೆಯುವುದು ಎಂಎಸ್ಐಎಲ್ ನ ಗುರಿಯಾಗಿದೆ. ಇದರಂತೆ, ಹೊಸ ರೂಪ ಪಡೆದಿರುವ ಈ ಬೋಟಿಕ್ ನಲ್ಲಿ ಸಾಮಾನ್ಯ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಉತ್ಪನ್ನಗಳು ಸುಲಭವಾಗಿ ಸಿಗಲಿದೆ. ಚಿತ್ತಾಕರ್ಷಕ ಒಳಾಂಗಣ ವಿನ್ಯಾಸ ಮತ್ತು ಗ್ರಾಹಕರಿಗೆ ಹಿತಕರ ಅನುಭವ ಸಿಗುವಂತೆ ಮಾಡಲು ಇಲ್ಲಿ ಆದ್ಯತೆ ಕೊಡಲಾಗಿದ್ದು, ಜಾಗತಿಕ ಗುಣಮಟ್ಟದ ಮಾಲ್ ರೀತಿಯಲ್ಲಿ ಈ ಪ್ರೀಮಿಯಂ ಬೋಟಿಕ್ ಇದೆ ಎಂದರು.
ಸೇವೆಗಳ ವಿಸ್ತರಣೆ ಗುರಿ
ಎಂಎಸ್ಐಎಲ್ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಲಹೆ ಮೇರೆಗೆ ಹಾಲಿ ಇರುವ ಮದ್ಯ ಮಾರಾಟ ಮಳಿಗೆಗಳನ್ನು ಹೈಟೆಕ್ ರೀತಿಯಲ್ಲಿ ವಿನ್ಯಾಸ ಮಾಡಲು ಆರಂಭಿಸಿದ್ದು ಹಂತಹಂತವಾಗಿ ಎಲ್ಲವನ್ನೂ ಬದಲಿಸಲಾಗುವುದು. ಸಂಸ್ಥೆಯು ವಹಿವಾಟನ್ನು 4 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ವಾರ್ಷಿಕ 10 ಸಾವಿರ ಕೋಟಿ ರೂ. ಮೊತ್ತದ ಚಿಟ್ ಫಂಡ್ ವ್ಯವಹಾರ, ಲೇಖನ ಸಾಮಗ್ರಿಗಳ ಮಾರಾಟಕ್ಕೆ ಫ್ರಾಂಚೈಸಿಗಳ ಆರಂಭ, 10 ಮೆಗಾ ಮೆಡಿಕಲ್ ಶಾಪ್ ಆರಂಭ ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಿದೆ. ಜೊತೆಗೆ ಪ್ರತಿಯೊಂದು ವಹಿವಾಟಿನಲ್ಲೂ ಕಾರ್ಪೊರೇಟ್ ಸ್ಪರ್ಶ ನೀಡಲಾಗುವುದು ಎನ್ನುವುದು ಮನೋಜ್ ಕುಮಾರ್ ಅವರ ವಿವರಣೆ.
===========