ಕನ್ನಡ ಸುದ್ದಿ  /  ಕರ್ನಾಟಕ  /  Mysuru Muda Scam: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಆಯುಕ್ತ, ಕಾರ್ಯದರ್ಶಿ, ತುಮಕೂರು ನಗರಪಾಲಿಕೆಗೂ ಹೊಸ ಆಯುಕ್ತ

Mysuru Muda Scam: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಆಯುಕ್ತ, ಕಾರ್ಯದರ್ಶಿ, ತುಮಕೂರು ನಗರಪಾಲಿಕೆಗೂ ಹೊಸ ಆಯುಕ್ತ

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಹಗರಣದ ಸದ್ದಿನ ನಡುವೆ ಹೊಸ ಆಯುಕ್ತರು ಹಾಗೂ ಕಾರ್ಯದರ್ಶಿ ನೇಮಕವಾಗಿದೆ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಅಧಿಕಾರಿಗಳನ್ನು ನೇಮಿಸಲಾಗಿದೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಅಧಿಕಾರಿಗಳನ್ನು ನೇಮಿಸಲಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿವೇಶನ ನೀಡುವ ವಿಚಾರದಲ್ಲಿ ಭಾರೀ ಹಗರಣ ನಡೆದಿರುವ ಸದ್ದು ಕೇಳಿ ಬಂದ ನಡುವೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರನ್ನು ವರ್ಗ ಮಾಡಲಾಗಿದ್ದು. ಹೊಸ ಆಯುಕ್ತರನ್ನು ನೇಮಿಸಲಾಗಿದೆ. ಅಲ್ಲದೇ ಕಾರ್ಯದರ್ಶಿ ಅವರನ್ನು ಬದಲು ಮಾಡಿ ಅಲ್ಲಿಗೂ ಹೊಸ ಅಧಿಕಾರಿ ನಿಯೋಜಿಸಲಾಗಿದೆ. ಹಗರಣದ ಕುರಿತು ತೀವ್ರ ಸದ್ದು ಆಗುತ್ತಿರುವ ನಡುವೆಯೇ ವರ್ಗಾವಣೆ ಆದೇಶ ಹೊರ ಬಿದ್ದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಹಿರಿಯ ಕೆಎಎಸ್‌ ಅಧಿಕಾರಿ ಎ.ಎನ್‌.ರಘುನಂದನ್‌ ಅವರನ್ನು ನೇಮಕ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಮತ್ತೊಬ್ಬ ಕೆ.ಎ.ಎಸ್. ಅಧಿಕಾರಿ ವಿ.ಕೆ.ಪ್ರಸನ್ನಕುಮಾರ್‌ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.

ಎರಡು ವರ್ಷದ ಹಿಂದೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶಕುಮಾರ್‌ ನೇಮಕಗೊಂಡಿದ್ದರು. ಬಿಜೆಪಿ ಸರ್ಕಾರದ ಕಾಲದಲ್ಲಿಯೇ ನೇಮಕಗೊಂಡರೂ ನಂತರ ಬಂದ ಕಾಂಗ್ರೆಸ್‌ ಸರ್ಕಾರವೂ ಅವರನ್ನು ಮುಂದುವರೆಸಿತ್ತು. ಇದರ ನಡುವೆ ಕೆಲ ದಿನಗಳಿಂದ ನಿವೇಶನ ಹಂಚಿಕೆ ಹಗರಣದ ಸದ್ದು ಜೋರಾಗಿಯೇ ಕೇಳಿ ಬಂದಿತ್ತು. ಇದು ವಿವಾದದ ಸ್ವರೂಪ ಪಡೆಯುತ್ತಲೇ ಜಿ.ಟಿ.ದಿನೇಶ್‌ ಕುಮಾರ್‌ ಹಾಗೂ ಕಾರ್ಯದರ್ಶಿ ಶೇಖರ್‌ ಅವರನ್ನು ವರ್ಗ ಮಾಡಿರುವಾಗಿ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್‌ ಹೇಳಿದ್ದರು.
ಈ ಹೇಳಿಕೆ ಮರು ದಿನವೇ ಹೊಸ ಆಯುಕ್ತರು ಹಾಗೂ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ರಘುನಂದನ್‌ ಅವರು ಬೆಂಗಳೂರಿನ ನಗರಾಭಿವೃದ್ದಿ ಇಲಾಖೆಯ ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದರು. ವಿ.ಕೆ.ಪ್ರಸನ್ನಕುಮಾರ್‌ ಅವರು ಬಿಬಿಎಂಪಿ ಚುನಾವಣೆ ಶಾಖೆಯಲ್ಲಿದ್ದರು ನಂತರ ಕರ್ನಾಟಕ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದರು. ವರ್ಗಗೊಂಡ ದಿನೇಶ್‌ ಕುಮಾರ್‌ ಹಾಗೂ ಶೇಖರ್‌ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಭಾರೀ ಹಗರಣ ನಡೆದಿದ್ದು. ಇದರ ಹಿಂದೆ ಆಯುಕ್ತರ ಪಾತ್ರವೂ ಇದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿ ಬದಲಿ ನಿವೇಶನಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. \

ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಸ್ಪಷ್ಟನೆ ನೀಡಿದ್ದರು. ಇದರ ನಡುವೆ ಬಿಜೆಪಿ ಇದೊಂದು ಗಂಭೀರ ಪ್ರಕರಣ ಆಗಿರುವುದರಿಂದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ದಿನೇಶ್‌ ಕುಮಾರ್‌ ಹಾಗೂ ಕಾರ್ಯದರ್ಶಿ ಶೇಖರ್‌ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿತ್ತು. ಈ ಪ್ರಕರಣದ ಕುರಿತು ವಿಚಾರಣೆಗೆ ಈಗಾಗಲೇ ಐಎಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಲಾಗಿದ್ದು, ಅವರೂ ಕೂಡ ವಿಚಾರಣೆ ನಡೆಸಿದ್ದಾರೆ.

ಇದಲ್ಲದೇ ಸ್ಥಳ ನಿರೀಕ್ಷಣೆಯಲ್ಲಿದ್ದ ಹಿರಿಯ ಕೆಎಎಸ್‌ ಅಧಿಕಾರಿ ಡಾ.ಜಗದೀಶ್‌ ನಾಯಕ್‌ ಅವರನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಮತ್ತೊಬ್ಬ ಕೆಎಎಸ್‌ ಅಧಿಕಾರಿ ಹುಲುಮನಿ ತಿಮ್ಮಣ್ಣ ಅವರನ್ನು ದಾವಣಗೆರೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.