Namma Metro: ಆಗಸ್ಟ್ 15ರಿಂದ 4 ದಿನ ನಿಶ್ಚಿಂತೆಯಿಂದ ಲಾಲ್‌ಬಾಗ್‌ಗೆ ಪ್ರಯಾಣಿಸಬಹುದು, ನಮ್ಮ ಮೆಟ್ರೋ ರಿಟರ್ನ್ ಜರ್ನಿ ಟಿಕೆಟ್ ಲಭ್ಯ
Bangalore News ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಸ್ವಾತಂತ್ರ್ಯೋತ್ಸವದಿಂದ ನಾಲ್ಕು ದಿನ ರಿಟರ್ನ್ ಜರ್ನಿ ಟಿಕೆಟ್ ಅನ್ನು ವಿತರಣೆ ಮಾಡುತ್ತಿದೆ.
ಬೆಂಗಳೂರು: 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಹೋಗುವ ಪ್ರಯಾಣಿಕರ ತ್ವರಿತ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟ್ರೋ ನಿಗಮ ಬಿಎಂಆರ್ ಸಿಎಲ್ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ನೀಡಲಿದೆ. ಇದರಿಂದಾಗಿ ಸ್ವಾತಂತ್ರ್ಯೋತ್ಸವ ದಿನದಂದು ಸೇರಿ ವಾರಾಂತ್ಯದಂದು ಬೆಂಗಳೂರಿನಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 15, 17 ಮತ್ತು 18 ರಂದು ಲಾಲ್ ಬಾಗ್ ಗೆ ಬೇಟಿ ನೀಡುವ ಪ್ರಯಾಣಿಕರಿಗೆ ನಮ್ಮ ಮೆಟ್ರೋ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ವಿತರಿಸಲಿದೆ.ಈ ಮೂರೂ ದಿನಗಳಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಟೋಕನ್ ಗಳ ಬದಲಿಗೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ರೂ. 30 ಪಾವತಿಸಿ ಖರೀದಿಸಬಹುದಾಗಿದೆ. ಈ ಟಿಕೆಟ್ ಗಳು ಖರೀದಿಸಿದ ದಿನಕ್ಕೆ ಮಾತ್ರ ಮಾನ್ಯತೆ ಹೊಂದಿರುತ್ತವೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಪೇಪರ್ ಟಿಕೆಟ್ ಗಳನ್ನು ಖರೀದಿಸಬಹುದಾಗಿದೆ.
ಸಾರ್ವಜನಿಕರು ಎಂದಿನಂತೆ ಟೋಕನ್, ಸ್ಮಾರ್ಟ್ ಕಾರ್ಡ್, ಎನ್ ಸಿಎಂಸಿ ಕಾರ್ಡ್, ಕ್ಯೂ ಆರ್ ಟಿಕೆಟ್ ಗಳ ಮೂಲಕವೂ ಲಾಲ್ ಬಾಗ್ ಗೆ ಪ್ರಯಾಣಿಸಬಹುದು. ಆದರೆ ಲಾಲ್ ಬಾಗ್ ಮೆಟ್ರೋ ನಿಲ್ದಾಣದಿಂದ ಹಿಂತಿರುಗಲು ಟೋಕನ್ ಗಳ ಬದಲಿಗೆ ಪೇಪರ್ ಟಿಕೆಟ್, ಸ್ಮಾರ್ಟ್ ಕಾರ್ಡ್, ಕ್ಯೂ ಆರ್ ಟಿಕೆಟ್ ಗಳ ಮೂಲಕ ಮಾತ್ರ ಪ್ರಯಾಣಿಸಬಹುದು.
ಈ ಮೂರೂ ದಿನಗಳಂದು ಲಾಲ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟೋಕನ್ ಗಳನ್ನು ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಕೆಟ್ ಗಳನ್ನು ಖರೀದಿಸಲು ಕಾಯುವ ಸಮಯವನ್ನು ತಪ್ಪಿಸಲು ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುಂಚಿತವಾಗಿ ಕ್ಯೂ ಆರ್ ಟಿಕೆಟ್ ಗಳನ್ನು ಖರೀದಿಸಲು ಮೆಟ್ರೋ ಮನವಿ ಮಾಡಿಕೊಂಡಿದೆ.
ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಪ್ರದೇಶಗಳಲ್ಲಿ ಸಿಗ್ನಲ್ ಪರೀಕ್ಷೆಗಳನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 13ರಿಂದ 15ರವರೆಗೆ ಪೀಣ್ಯ ಕೈಗಾರಿಕಾ ಪ್ರದೇಶಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣದ ನಡುವೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಆಗಸ್ಟ್ 13 ಮತ್ತು 14ರಂದು ರಾತ್ರಿ ನಾಗಸಂದ್ರಿದಂದ ರಾತ್ರಿ 11.5 ರ ಬದಲಿಗೆ 10 ಗಂಟೆಗೆ ಕೊನೆಯ ರೈಲು ಹೊರಡಲಿದೆ. ಮೆಜೆಸ್ಟಿಕ್ ನಿಂದ ನಾಗಸಂದ್ರಕ್ಕೆ ರಾತ್ರಿ 9.34ಕ್ಕೆ ಕೊನೆಯ ರೈಲು ಪ್ರಯಾಣಿಸಲಿದೆ. ಆಗಸ್ಟ್ 14 ಮತ್ತು 15ರಂದು ಬೆಳಗ್ಗೆ 5 ಗಂಟೆಗೆ ಬದಲಾಗಿ 6 ಗಂಟೆಗೆ ನಾಗಸಂದ್ರ-ರೇಷ್ಮೆ ಸಂಸ್ಥೆ ರೈಲು ಪ್ರಯಾಣಿಸಲಿದೆ. ರೇಷ್ಮೆ ಸಂಸ್ಥೆ – ಪೀಣ್ಯ ಇಂಡಸ್ಟ್ರಿ ನಡುವೆ ರೈಲು ಸಂಚಾರದಲ್ಲಿ ಯಾವುದೇ ಅಡಚಣೆ ಇರುವುದಿಲ್ಲ. ನೇರಳೆ ಮಾರ್ಗದಲ್ಲಿಯೂ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ನಮ್ಮಮೆಟ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.