Namma Metro: ಬೆಂಗಳೂರು ಐಟಿ ಕಂಪನಿಗಳಲ್ಲಿ ವರ್ಕ್‌ ಫ್ರಂ ಹೋಂ ರದ್ದು, ನಮ್ಮಮೆಟ್ರೋ ನೇರಳೆ ಮಾರ್ಗದಲ್ಲಿ 8 ಲಕ್ಷ ದಾಟಿದ ಪ್ರಯಾಣಿಕರ ಸಂಖ್ಯೆ
ಕನ್ನಡ ಸುದ್ದಿ  /  ಕರ್ನಾಟಕ  /  Namma Metro: ಬೆಂಗಳೂರು ಐಟಿ ಕಂಪನಿಗಳಲ್ಲಿ ವರ್ಕ್‌ ಫ್ರಂ ಹೋಂ ರದ್ದು, ನಮ್ಮಮೆಟ್ರೋ ನೇರಳೆ ಮಾರ್ಗದಲ್ಲಿ 8 ಲಕ್ಷ ದಾಟಿದ ಪ್ರಯಾಣಿಕರ ಸಂಖ್ಯೆ

Namma Metro: ಬೆಂಗಳೂರು ಐಟಿ ಕಂಪನಿಗಳಲ್ಲಿ ವರ್ಕ್‌ ಫ್ರಂ ಹೋಂ ರದ್ದು, ನಮ್ಮಮೆಟ್ರೋ ನೇರಳೆ ಮಾರ್ಗದಲ್ಲಿ 8 ಲಕ್ಷ ದಾಟಿದ ಪ್ರಯಾಣಿಕರ ಸಂಖ್ಯೆ

Bangalore News ಐಟಿ ಕಂಪೆನಿಗಳಲ್ಲಿ ಮನೆಯಿಂದಲೇ ಕೆಲಸ( WFH) ಮಾಡುವ ಪದ್ದತಿ ರದ್ದು ಮಾಡಿ ಕಚೇರಿಗೆ ಬರುವಂತೆ ತಿಳಿಸುತ್ತಿರುವುದರಿಂದ ನಮ್ಮ ಮೆಟ್ರೋ( Namma Metro) ಪ್ರಯಾಣ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಬೆಂಗಳೂರು ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಬೆಂಗಳೂರು ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.

ಬೆಂಗಳೂರು: ಕೋವಿಡ್-19 ನಂತರ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಆರಂಭವಾಗಿ ಅದೇ ಅಭ್ಯಾಸವಾಗಿತ್ತು. ಇದರಿಂದ ಕಂಪನಿಗಳಿಗೂ ಹಲವಾರು ರೀತಿಯ ಲಾಭಗಳಾಗುತ್ತಿದ್ದವು. ಆದರೆ ಇದೀಗ ಬಹುತೇಕ ಐಟಿ ಕಂಪನಿಗಳು ವರ್ಕ್‌ ಫ್ರಂ ಹೋಮ್‌ ಪದ್ದತಿಯನ್ನು ರದ್ದುಗೊಳಿಸಿ ಕಚೇರಿಗೆ ಆಗಮಿಸಿ ಕೆಲಸ ಮಾಡಬೇಕೆಂದು ಕಡ್ಡಾಯಗೊಳಿಸಿವೆ. ಇದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರನೆ ಹೆಚ್ಚಳವಾಗಿದೆ. ವರ್ಷದ ಹಿಂದೆ ಬೆಂಗಳೂರಿನ ಪಶ್ಚಿಮ ಬಾಗದ ಚಲ್ಲಘಟ್ಟ ಮತ್ತು ಪೂರ್ವ ಭಾಗದ ಕಾಡುಗೋಡಿ ಮಾರ್ಗದ ನೇರಳೆ ಬಣ್ಣದ ಮೆಟ್ರೋ ರೈಲುಗಳಲ್ಲಿ( Metro purple Line) ಪ್ರಯಾಣಿಕರಿಲ್ಲದೆ ನೀರಸ ಪ್ರತಿಕ್ರಿಯೆ ಉಂಟಾಗಿತ್ತು. ಆದರೆ ಇದೀಗ ನೇರಳೆ ಮಾರ್ಗದ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ರೈಲಿನಲ್ಲೂ ಎಲ್ಲ ಬೋಗಿಗಳೂ ತುಂಬಿ ತುಳುಕುತ್ತಿವೆ.

ಒಮ್ಮೊಮ್ಮೆ ಬಾಗಿಲು ತೆರೆದು ಮುಚ್ಚುವುದಕ್ಕೂ ಕಷ್ಟ ಸಾಧ್ಯವಾಗುತ್ತಿದೆ. ಮೆಟ್ರೋ ನಿಗಮ ಐಟಿ ಕಂಪನಿಗಳಿಗೆ ಧನ್ಯವಾದ ಹೇಳಲೇಬೇಕು. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ದಿನವೊಂದಕ್ಕೆ 8 ಲಕ್ಷ ದಾಟಿದೆ.

ಐಟಿ ಕಂಪನಿಗಳಲ್ಲಿ ಉದ್ಯೋಗಿಗಳು ಕಚೇರಿಗೆ ಆಗಮಿಸಿ ಕೆಲಸ ನಿರ್ವಹಿಸಬೇಕು ಎಂದು ಕಡ್ಡಾಯಗೊಳಿಸಿರುವುರಿಂದ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳುತ್ತಿದ್ದಾರೆ.

ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್‌ ಇಂಟರ್ ಚೇಂಜ್‌ ನಿಲ್ದಾಣದಿಂದ ವೈಟ್‌ ಫೀಲ್ಡ್‌ ಕಡೆ ಸಾಗುವ ಮೆಟ್ರೋ ನಿಲ್ದಾಣದ ಕಡೆಗೆ ಲೂಪ್ ಸೇವೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ಬೋಗಿಗಳಲ್ಲಿ ಜನಸಂದಣಿ ಇರುವುದು ನಿಜ. ಮುಂದಿನ ವರ್ಷ ಮತ್ತಷ್ಟು ರೈಲುಗಳ ಸೇರ್ಪಡೆಯಿಂದ ಜನಸಂದಣಿ ಕಡಿಮೆಯಾಗಲಿದ್ದು ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದಾಗಿದೆ ಎಂದೂ ಭರವಸೆ ನೀಡುತ್ತಾರೆ.

ಬಿಎಂಆರ್‌ ಸಿಎಲ್‌ ದಾಖಲೆಗಳ ಪ್ರಕಾರ ಮೆಜೆಸ್ಟಿಕ್‌ ಇಂಟರ್‌ ಚೆಂಜ್‌ ನಿಲ್ದಾಣ, ಇಂದಿರಾನಗರ, ಬೆಣ್ಣಿಗಾನಹಳ್ಳಿ, ಸಂಪಿಗೆ ರಸ್ತೆ ಮತ್ತು ಕೆ.ಆರ್.ಪುರ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ಚಲ್ಲಘಟ್ಟ- ವೈಟ್‌ ಫೀಲ್ಡ್‌ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗ ಕಾರ್ಯಾಚರಣೆ ಮಾಡುವ ಸಿಲ್ಕ್‌ ಇನ್‌ ಸ್ಟಿಟ್ಯೂಟ್‌ - ನಾಗಸಂದ್ರ ಮಾರ್ಗಕ್ಕೆ ಇನ್ನೂ ಹೆಚ್ಚಿನ ಬೋಗಿಗಳನ್ನು ಸೇರ್ಪಡೆ ಮಾಡಲು ಬಿಎಂಆರ್‌ ಸಿಎಲ್ ನಿರ್ಧರಿಸಿದೆ. ಆದರೆ ಬೋಗಿಗಳನ್ನು ಸರಬರಾಜು ಮಾಡಬೇಕಿರುವ ಚೀನಾದ ಸಿ ಆರ್‌ ಸಿಸಿ ಕಂಪನಿ ಇನ್ನೂ ಬೋಗಿಗಳನ್ನು ಒದಗಿಸದಿರುವುದರಿಂದ ತಡವಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಕಚೇರಿ ಸಮಯದಲ್ಲಿ ಬೋಗಿಯ ಒಳಗೆ ಕಾಲಿಡಲೂ ಜಾಗವಿರುವುದಿಲ್ಲ. ಪ್ರತಿ 3 ನಿಮಿಷಕ್ಕೊಂದು ರೈಲು ಸೇವೆಯನ್ನು ಒದಗಿಸುತ್ತಿದ್ದರೂಬೋಗಿಗಳು ತುಂಬಿ ತುಳುಕುತ್ತಿವೆ.

ಕೆಲವು ತಿಂಗಳ ಹಿಂದೆ ವಾರದಲ್ಲಿ ಮೂರು ದಿನ ಮಾತ್ರ ಕಚೇರಿಗೆ ಆಗಮಿಸಿ ಕೆಲಸ ನಿರ್ವಹಿಸಬೇಕೆಂಬ ನಿಯಮವನ್ನು ಐಟಿ ಕಂಪನಿಗಳು ರೂಪಿಸಿದ್ದವು. ಆದರೆ ಈಗ ವಾರದ ಐದೂ ದಿನ ಕಚೇರಿಗೆ ಆಗಮಿಸಿಯೇ ಕೆಲಸ ಮಾಡಬೇಕೆಂಬ ನಿಯಮ ರೂಪಿಸಿರುವುದರಿಂದ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ತಜ್ಞರ ಪ್ರಕಾರ ಪ್ರತಿ ಒಂದು ಕಿಮೀಗೊಂದರಂತೆ ರೈಲು ಸಂಚರಿಸಬೇಕು. ಆದರೆ ಈ ಮಾರ್ಗ 73 ಕಿಮೀ ವಿಸ್ತೀರ್ಣವಿದ್ದರೂ ಬಿಎಂಆರ್‌ ಸಿಎಲ್‌ ಕೇವಲ 57 ರೈಲುಗಳನ್ನು ಮಾತ್ರ ಹೊಂದಿದೆ. ರೈಲುಗಳ ಸಂಖ್ಯೆ ಹೆಚ್ಚಿಸಿದರೆ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದಾಗಿದೆ. ರಸ್ತೆಗಳ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ.

ವರದಿ: ಎಚ್.ಮಾರುತಿ, ಬೆಂಗಳೂರು

Whats_app_banner